ಹುಬ್ಬಳ್ಳಿ: ವೇತನ ಸಹಿತ ಪ್ರಸೂತಿ ರಜೆಗಾಗಿ ಕಿಮ್ಸ್‌ ಗುತ್ತಿಗೆ ನೌಕರರ ಪರದಾಟ..!

By Kannadaprabha NewsFirst Published Sep 21, 2020, 10:25 AM IST
Highlights

ಕಿಮ್ಸ್‌ ಸಿ ಗ್ರೂಪ್‌ ಗುತ್ತಿಗೆ ನೌಕರರಿಗೆ ಇಲ್ಲ ಸೌಲಭ್ಯ| ಖಾಸಗಿ ಆಸ್ಪತ್ರೆಯಲ್ಲಿರುವ ಸೌಲಭ್ಯವೂ ಸರ್ಕಾರಿ ಆಸ್ಪತ್ರೆಯಲ್ಲಿಲ್ಲ| ಹಲವು ಶುಶ್ರೂಷಕಿಯರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದೆ, ಇವರು ದುಡಿಯದೆ ಮನೆ ನಡೆಯುವುದಿಲ್ಲ. ಅಂಥವರು ಹೆರಿಗೆಗೆಂದು ತೆರಳಿ 3-4 ತಿಂಗಳಿನಲ್ಲಿಯೇ ಕರ್ತವ್ಯಕ್ಕೆ ವಾಪಸ್‌| 

ಮಯೂರ ಹೆಗಡೆ

ಹುಬ್ಬಳ್ಳಿ(ಸೆ.21): ಇಲ್ಲಿನ ಕಿಮ್ಸ್‌ನಲ್ಲಿ ಸಿ ಗ್ರೂಪ್‌ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಶುಶ್ರೂಷಕಿಯರು ವೇತನ ಸಹಿತ ಪ್ರಸೂತಿ ರಜೆಯಿಂದ ವಂಚಿತರಾಗಿದ್ದಾರೆ. ರಜೆ ನೀಡುವಾಗ ಒತ್ತಾಯವಾಗಿ ಗೈರುಹಾಜರಿ ಎಂದು ಬರೆಸಿಕೊಳ್ಳಲಾಗುತ್ತಿದೆ. ಇದರಿಂದ ಅಗತ್ಯದಷ್ಟು ದಿನ ರಜೆ ಪಡೆದುಕೊಳ್ಳಲಾಗದೆ, 3-4 ತಿಂಗಳಿಗೆ ಕರ್ತವ್ಯಕ್ಕೆ ವಾಪಸಾಗುವ ಪರಿಸ್ಥಿತಿ ಇದೆ.

ಕಿಮ್ಸ್‌ನಲ್ಲಿ ಸಿ ಗ್ರೂಪ್‌ನಲ್ಲಿ ದಿನಗೂಲಿ ಆಧಾರದಲ್ಲಿ 129 ನರ್ಸ್‌, ಲ್ಯಾಬ್‌ ಟೆಕ್ನೀಶಿಯನ್‌ಗಳಾಗಿ ದಿನಗೂಲಿ ದುಡಿಯುತ್ತಿದ್ದಾರೆ. ಅದರಲ್ಲಿ 70-80 ಮಹಿಳೆಯರೂ ಇದ್ದಾರೆ. ಅವರು ವೇತನಸಹಿತ 180 ದಿನಗಳ ಪ್ರಸೂತಿ ರಜೆಯಿಂದ ವಂಚಿತರಾಗಿದ್ದಾರೆ. ಇವರು ಹೊರಗುತ್ತಿಗೆ ಅಂದರೆ ಯಾವುದೆ ಏಜೆನ್ಸಿ ಮೂಲಕ ನೇಮಕಗೊಂಡ ನೌಕರರಲ್ಲ. ಕಿಮ್ಸ್‌ ಆಡಳಿತ ಮಂಡಳಿಯಿಂದ ನೇಮಕಗೊಂಡ ದಿನಗೂಲಿ ಗುತ್ತಿಗೆ ನೌಕರರು. ಆದರೆ, ಕಾಯಂ ನೌಕರರಿಗೆ ಇರುವ ವೇತನ ಸಹಿತ ಪ್ರಸೂತಿ ರಜೆ ಸೌಲಭ್ಯ ಇವರಿಗಿಲ್ಲ. ಸಾಮಾನ್ಯವಾಗಿ ಹೊರಗುತ್ತಿಗೆ ನೌಕರರಿಗೆ ಇಂತಹ ಸೌಲಭ್ಯ ಇರುವುದಿಲ್ಲ. ಆದರೆ, ಕಿಮ್ಸ್‌ನಲ್ಲಿ ಇವರಿಗೂ ಸೌಲಭ್ಯ ನೀಡಲಾಗುತ್ತಿಲ್ಲ.

ಹಲವು ಶುಶ್ರೂಷಕಿಯರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿ ಇದೆ. ಇವರು ದುಡಿಯದೆ ಮನೆ ನಡೆಯುವುದಿಲ್ಲ. ಅಂಥವರು ಹೆರಿಗೆಗೆಂದು ತೆರಳಿ 3-4 ತಿಂಗಳಿನಲ್ಲಿಯೆ ವಾಪಸಾಗುತ್ತಿದ್ದಾರೆ. ಬಳಿಕವೂ ಹಲವರು ವೇತನಸಹಿತ ರಜೆಗಾಗಿ ಸಲ್ಲಿಸಿದ ಮಂಜೂರಾತಿ ಅರ್ಜಿ ತಿರಸ್ಕಾರಗೊಂಡಿದೆ. ಈ ಕುರಿತು ಕಳೆದ 2015ರಿಂದ ಹೋರಾಟ, ಒತ್ತಾಯಗಳು ನಡೆಯುತ್ತಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಕಿಮ್ಸ್‌ನಲ್ಲಿ ಎಚ್‌ಐವಿ ಪಾಸಿಟಿವ್‌, ಖಾಸಗಿ ಆಸ್ಪತ್ರೆಯಲ್ಲಿ ನೆಗೆಟಿವ್‌: ಅಂಗವಿಕಲ ಮಹಿಳೆಯ ಬದುಕು ಅತಂತ್ರ

ಈ ಕುರಿತು ಮಾತನಾಡಿದ ಕಿಮ್ಸ್‌ ಗುತ್ತಿಗೆ ನೌಕರರ ಸಂಘದ ಮುಖಂಡರು, ರಾಜ್ಯದ ಇತರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳವರು ಕೂಡ ವೇತನಸಹಿತ ರಜೆಯನ್ನು ನೀಡುತ್ತಾರೆ. ಆದರೆ, ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮಾತ್ರ ಈ ಸೌಲಭ್ಯ ನೀಡುತ್ತಿಲ್ಲ. ಈಚೆಗೆ ಹೆರಿಗೆಗೆಂದು ಹೋದವರಿಂದಲೂ ಗೈರುಹಾಜರಿ ಎಂದೆ ಅರ್ಜಿಯನ್ನು ಒತ್ತಾಯವಾಗಿ ಪಡೆದುಕೊಳ್ಳಲಾಗುತ್ತಿದೆ. ಈ ಕುರಿತಂತೆ ವರ್ಷದ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರನ್ನೂ ನೀಡಲಾಗಿದೆ. ಆಗ ಕಿಮ್ಸ್‌ನವರು ವೇತನಸಹಿತ ಪ್ರಸೂತಿ ರಜೆ ನೀಡುವುದಾಗಿ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಆದರೆ, ಈ ವರೆಗೂ ನಿರ್ಧಾರ ಕೈಗೊಂಡಿಲ್ಲ ಎಂದರು.

ಹೆಸರು ಹೇಳಲಿಚ್ಛಿಸಿದ ಶುಶ್ರೂಷಕಿಯೊಬ್ಬರು ಮಾತನಾಡಿ, ವರ್ಷದ ಆರಂಭದಲ್ಲಿ ಹೆರಿಗೆ ಸಹಿತ ರಜೆಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಗೈರುಹಾಜರಿ ಎಂದು ಬರೆದುಕೊಡುವಂತೆ ಮೇಲಧಿಕಾರಿಗಳು ಸೂಚಿಸಿದರು. ಬಳಿಕ ವೇತನಕ್ಕಾಗಿ ಅರ್ಜಿ ಸಲ್ಲಿಸಿದರೂ ಮಂಜೂರಾಗಿಲ್ಲ.

ಕೆಲ ವರ್ಷದಿಂದ ಗುತ್ತಿಗೆ ನೌಕರರಿಂದ ವೇತನ ಸಹಿತ ಪ್ರಸೂತಿ ರಜೆಗೆ ಬೇಡಿಕೆ ಇದೆ. ಕಿಮ್ಸ್‌ನಲ್ಲಿ ಸ್ಟಾಫ್‌ಗಳಿಗೆ ಈ ಸೌಲಭ್ಯ ಇದೆ. ಈ ಕುರಿತಂತೆ ಪರಿಶೀಲಿಸಲಾಗುವುದು ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರು ತಿಳಿಸಿದ್ದಾರೆ. 

2015ರಿಂದ ಈ ಕುರಿತು ಹೋರಾಟ ಮಾಡುತ್ತಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ. ಬೇರೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಈ ಸೌಲಭ್ಯ ಇದೆ. ಆದರೆ, ನಮಗೆ ಮಾತ್ರ ನೀಡುತ್ತಿಲ್ಲ, ಇದರಿಂದ ಅನ್ಯಾಯವಾಗಿದೆ ಎಂದು ಕಿಮ್ಸ್‌ ಶುಶ್ರೂಷಕಿ ಅವರು ತಿಳಿಸಿದ್ದಾರೆ. 
 

click me!