ಮನೆ ಹಬ್ಬದಂತೆ ಗಣರಾಜ್ಯೋತ್ಸವ ಆಚರಿಸಿ: ಸಿಇಒ

By Kannadaprabha NewsFirst Published Jan 10, 2023, 5:45 AM IST
Highlights

ಮನೆಯ ಹಬ್ಬದಂತೆ ರಾಷ್ಟ್ರೀಯ ಹಬ್ಬವಾಗಿರುವ ಗಣರಾಜ್ಯೋತ್ಸವವನ್ನು ಶ್ರದ್ಧೆಯಿಂದ ಆಚರಿಸುವಂತೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಕರೆ ನೀಡಿದರು.

 ತುಮಕೂರು (ಜ. 10): ಮನೆಯ ಹಬ್ಬದಂತೆ ರಾಷ್ಟ್ರೀಯ ಹಬ್ಬವಾಗಿರುವ ಗಣರಾಜ್ಯೋತ್ಸವವನ್ನು ಶ್ರದ್ಧೆಯಿಂದ ಆಚರಿಸುವಂತೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಕರೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ತುಮಕೂರಿನ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಜನವರಿ 26ರಂದು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಗಣರಾಜ್ಯೋತ್ಸವದಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು, ಧ್ವಜಾರೋಹಣ ಮಾಡುವ ಸ್ಥಳದ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಗಣರಾಜ್ಯೋತ್ಸವವನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳನ್ನೊಳಗೊಂಡ ಸ್ವಾಗತ, ಪೆರೇಡ್‌, ಕ್ರೀಡಾಂಗಣ ಸಮಿತಿ ಸೇರಿದಂತೆ ಆಯ್ಕೆ ಸಮಿತಿ, ಸಿಹಿತಿಂಡಿ ವಿತರಣೆ ಸಮಿತಿಗಳನ್ನು ರಚಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಕಾರ್ಯೋನ್ಮುಖರಾಗಲು ನಿರ್ದೇಶನ ನೀಡಿದರು.

ಕಾರ್ಯಕ್ರಮದಲ್ಲಿ ಎನ್‌ಸಿಸಿ, ಅಗ್ನಿಶಾಮಕ, ಪೊಲೀಸ್‌ ಇಲಾಖೆ, ಸ್ಕೌಟ್ಸ್‌ ಮತ್ತು ಗೈಡ್‌್ಸ, ಅರಣ್ಯ ಇಲಾಖೆ, ಗೃಹರಕ್ಷಕದಳದವರಿಂದ ಆಕರ್ಷಕ ಕವಾಯತು ಏರ್ಪಡಿಸಬೇಕು. ಕವಾಯತಿಗಾಗಿ ತಾಲೀಮು ನಡೆಸಲು ಅನುವಾಗುವಂತೆ ಧೂಳು ಬಾರದ ರೀತಿಯಲ್ಲಿ ನೀರು ಸಿಂಪಡಿಸಿ ಮೈದಾನವನ್ನು ಅಣಿಗೊಳಿಸಬೇಕು ಎಂದು ತಿಳಿಸಿದರು.

ದೀಪಾಲಂಕಾರ:

ಗಣರಾಜ್ಯೋತ್ಸವದ ಅಂಗವಾಗಿ ಜನವರಿ 25 ಹಾಗೂ 26ರಂದು ನಗರದ ಟೌನ್‌ಹಾಲ್‌ ವೃತ್ತ, ಚಚ್‌ರ್‍ ಸರ್ಕಲ್‌, ಲಕ್ಕಪ್ಪ ಸರ್ಕಲ್‌, ಕೋಟೆ ಶ್ರೀ ಆಂಜನೇಯ ಸರ್ಕಲ್‌, ಎಸ್‌ಬಿಎಂ ಸರ್ಕಲ್‌ ಸೇರಿದಂತೆ ಪ್ರಮುಖ ವೃತ್ತ ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳನ್ನು ವಿದ್ಯುತ್‌ ದೀಪಾಲಂಕಾರ, ತಳಿರು-ತೋರಣಗಳಿಂದ ಅಲಂಕರಿಸಬೇಕು. ದಿನಾಚರಣೆ ಅಂಗವಾಗಿ ತಾಲೀಮು ಹಾಗೂ ಇನ್ನಿತರೆ ಕಾರ್ಯಕ್ರಮಗಳು ನಡೆಯುವುದರಿಂದ ಜ.25 ಹಾಗೂ 26ರಂದು ಆಂಬುಲೆನ್ಸ್‌ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳಿಗೆ ತಲುಪಿಸಬೇಕು. ಯಾವುದೇ ರೀತಿ ಚ್ಯುತಿ ಬಾರದಂತೆ ಅಚ್ಚುಕಟ್ಟಾಗಿ ಗಣರಾಜ್ಯೋತ್ಸವ ಜರುಗುವಂತೆ ಅಧಿಕಾರಿಗಳು ಶ್ರದ್ಧೆಯಿಂದ ನಮ್ಮ ಮನೆಯ ಹಬ್ಬದ ರೀತಿಯಲ್ಲಿ ಆಚರಿಸುವಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಗೈರು ಹಾಜರಾದವರಿಗೆ ಶಿಸ್ತು ಕ್ರಮ:

ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದ ಸಿಇಒ ಅವರು, ರಾಷ್ಟ್ರೀಯ ಹಬ್ಬಕ್ಕೆ ಎಲ್ಲ ಅಧಿಕಾರಿ/ಸಿಬ್ಬಂದಿ ತಪ್ಪದೆ ಹಾಜರಾಗಬೇಕು. ಗೈರು ಹಾಜರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇಲಾಖಾ ಮುಖ್ಯಸ್ಥರು ತಮ್ಮ ಕಚೇರಿಗಳಲ್ಲಿ ನಿಯಮದನ್ವಯ ಧ್ವಜಾರೋಹಣ ನೆರವೇರಿಸಬೇಕು. ಹರಿದ, ಹಳೆಯ ಧ್ವಜಗಳನ್ನು ಹಾರಿಸಬಾರದು ಎಂದು ನಿರ್ದೇಶಿಸಿದರು.

15 ಮಂದಿಗೆ ಸನ್ಮಾನ: ನಂತರ ಸಭೆಯಲ್ಲಿ ಗಣರಾಜ್ಯೋತ್ಸವ ದಿನದಂದು ರಾಷ್ಟ್ರ/ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ 15 ಸಾಧಕರಿಗೆ ಸನ್ಮಾನಿಸಿ ಗೌರವಿಸುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್‌, ಪಾಲಿಕೆ ಆಯುಕ್ತ ಯೋಗಾನಂದ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗೋಪಾಲ್‌ ಜಾದವ್‌, ಕಾರ್ಮಿಕ ಅಧಿಕಾರಿ ಎಚ್‌.ಎನ್‌.ರಮೇಶ್‌, ನಿರ್ಮಿತಿ ಕೇಂದ್ರದ ರಾಜಶೇಖರ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜನಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್‌, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ವೀಣಾ, ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಸರೋಜಮ್ಮ, ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಶಾಂತ್‌ ಕೂಡ್ಲಿಗಿ, ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಜಯಣ್ಣ, ಯುವ ಸಬಲೀಕರಣ ಇಲಾಖೆ ಸಹಾಯಕ ನಿದೇಶಕ ನಾಗರಾಜು, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ‍್ಯಕ್ರಮ ಆಯೋಜಿಸಲು ಸೂಚನೆ

ಕಳೆದ ವರ್ಷದಲ್ಲಿ ಕೋವಿಡ್‌ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಬೆಳಿಗ್ಗೆ ಹಾಗೂ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಂಜೆ 4.30 ರಿಂದ ಸಂಜೆ 6.30 ಗಂಟೆವರೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ ಅವರಿಗೆ ಸಿಇಒ ನಿರ್ದೇಶನ ನೀಡಿದರು. ವೇದಿಕೆ ನಿರ್ಮಾಣ, ಬ್ಯಾರಿಕೇಡ್‌, ಬ್ಯಾಕ್‌ ಡ್ರಾಪ್‌, ಧ್ವಜ ಸ್ತಂಭ ನಿರ್ಮಾಣವನ್ನು ಲೋಕೋಪಯೋಗಿ ಇಲಾಖೆಗೆ ಹಾಗೂ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹಾನಗರಪಾಲಿಕೆಗೆ ನಿರ್ದೇಶನ ನೀಡಿದ ವಿದ್ಯಾಕುಮಾರಿ, ವೇದಿಕೆ ಸುತ್ತಮುತ್ತ ಹೂಕುಂಡಗಳಿಂದ ಅಲಂಕರಿಸಬೇಕೆಂದು ತೋಟಗಾರಿಕೆ ಇಲಾಖೆಗೆ ಹಾಗೂ ನಿರಂತರ ವಿದ್ಯುತ್‌ ಸರಬರಾಜು ಮಾಡಲು ಬೆಸ್ಕಾಂ ಇಲಾಖೆಗೆ ಸೂಚಿಸಿದರು.

click me!