
ಬೆಂಗಳೂರು(ಫೆ.10): ನಗರದ ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ ಖಾಸಗಿ ಸಹಭಾಗಿತ್ವದಲ್ಲಿ (DBOT) ಪೆರಿಫೆರಲ್ ರಿಂಗ್ ರಸ್ತೆ(Peripheral Ring Road) ನಿರ್ಮಿಸಿ 50 ವರ್ಷ ಖಾಸಗಿ ಕಂಪನಿಗೆ ಗುತ್ತಿಗೆಗೆ ನೀಡಲು ಸಚಿವ ಸಂಪುಟ ಸಭೆಯಲ್ಲಿ(Cabinet Meeting) ನಿರ್ಧರಿಸಲಾಗಿದೆ.
ರಸ್ತೆ ನಿರ್ಮಾಣಕ್ಕೆ ಹಾಗೂ ಭೂಸ್ವಾಧೀನಕ್ಕೆ(Land Acquisition) ತಗಲುವ ವೆಚ್ಚವನ್ನು ಗುತ್ತಿಗೆ ಪಡೆದ ಖಾಸಗಿ ಕಂಪನಿಯೇ ಭರಿಸಬೇಕು. ಬಳಿಕ 50 ವರ್ಷ ಟೋಲ್(Toll) ಸಂಗ್ರಹದ ಮೂಲಕ ಆದಾಯ ಸಂಗ್ರಹ ಮಾಡಬಹುದು ಎಂಬ ಷರತ್ತುಗಳನ್ನು ವಿಧಿಸಿ ಜಾಗತಿಕ ಟೆಂಡರ್(Global Tender) ಕರೆಯಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy) ತಿಳಿಸಿದ್ದಾರೆ.
Peripheral Ring Road: ಬೆಂಗ್ಳೂರು ಪೆರಿಫೆರಲ್ ರಿಂಗ್ ರೋಡ್‌ಗೆ ಹಸಿರು ನಿಶಾನೆ
ಸಭೆಯ ಬಳಿಕ ಮಾತನಾಡಿದ ಅವರು, ಬೆಂಗಳೂರಿನ(Bengaluru) ಸುತ್ತಲೂ 73 ಕಿ.ಮೀ. ಉದ್ದದ ಪೆರಿಫೆರಲ್ ರಿಂಗ್ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. 100 ಮೀಟರ್ ಅಗಲದ ಎಂಟು ಪಥದ ರಸ್ತೆ ಇದಾಗಿದ್ದು, ಭೂ ಸ್ವಾಧೀನಕ್ಕಾಗಿಯೇ ಸುಮಾರು 5 ಸಾವಿರ ಕೋಟಿ ರುಪಾಯಿ ವೆಚ್ಚವಾಗುತ್ತದೆ. ಜತೆಗೆ ರಸ್ತೆ ನಿರ್ಮಾಣಕ್ಕೂ ಹಣ ವ್ಯಯಿಸಬೇಕು. ಹೀಗಾಗಿ ಖಾಸಗಿ ಕಂಪನಿ ಸಹಯೋಗದಲ್ಲಿ ವಿನ್ಯಾಸ, ನಿರ್ಮಾಣ, ಹೂಡಿಕೆ, ನಿರ್ವಹಣೆ ಮತ್ತು ಹಸ್ತಾಂತರ (ಡಿಬಿಎಫ್‌ಟಿ) ಮಾದರಿಯಲ್ಲಿ ರಸ್ತೆ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ರಾಜ್ಯ ಸರ್ಕಾರದ ಪಾಲಿನ ಹಣ ಹೊಂದಿಸಲು ಅಗತ್ಯವಾದರೆ ಸಾಲ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ತುಮಕೂರು ರಸ್ತೆಯಿಂದ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮೂಲಕ ಹೊಸೂರು ರಸ್ತೆಯನ್ನು ಸಂಪರ್ಕಿಸಲು ನಗರ ಹೊರವಲಯದಲ್ಲಿ 73 ಕಿ.ಮೀ. ಉದ್ದದ ಪೆರಿಫೆರಲ್ ರಿಂಗ್ ರಸ್ತೆಯನ್ನು ನಿರ್ಮಿಸಲು 2007ರಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ರಸ್ತೆಯು ಬೆಂಗಳೂರಿನ ಈಶಾನ್ಯ, ಪೂರ್ವ, ಮತ್ತು ಆಗ್ನೇಯ ಭಾಗಗಳನ್ನು ಸಂಪರ್ಕಿಸಲಿದೆ.
ಇತ್ತೀಚೆಗೆ ಈ ಬಗ್ಗೆ ಡಿಪಿಆರ್(DPR) ಮಾಡಿರುವ ಸರ್ಕಾರ ರಸ್ತೆ ನಿರ್ಮಾಣ ಹಾಗೂ ಭೂಸ್ವಾಧೀನಕ್ಕೆ ಆಗಲಿರುವ ವೆಚ್ಚವನ್ನು ಅಂದಾಜು ಮಾಡಿತ್ತು. ರಸ್ತೆ ನಿರ್ಮಾಣಕ್ಕೆ ಬಂಡವಾಳ ಹೂಡಿಕೆ ಮಾಡಿದ ಸಂಸ್ಥೆಗೆ 50 ವರ್ಷಗಳ ಅವಧಿಗೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಲು ಪ್ರಸ್ತಾಪಿಸಿತ್ತು. ಗುತ್ತಿಗೆ ಪಡೆದ ಖಾಸಗಿ ಕಂಪನಿಯೇ ರಸ್ತೆ ನಿರ್ಮಾಣಕ್ಕೆ ಭೂಮಿ ಬಿಟ್ಟು ಕೊಡುವ ಮಾಲಿಕರಿಗೆ ಪರಿಹಾರದ(Compensation) ಮೊತ್ತ ಪಾವತಿಸಬೇಕು ಎಂದು ಹೇಳಲಾಗಿದೆ.
ಯೋಜನಾ ವೆಚ್ಚ ಹೆಚ್ಚಳ
ಹೊರವರ್ತುಲ ರಸ್ತೆ(Outer Ring Road) ಭಾಗ-1ರ ನಿರ್ಮಾಣಕ್ಕೆ ಅಗತ್ಯವಿರುವ 1,810.18 ಎಕರೆ ಜಮೀನು ಸ್ವಾಧೀನಕ್ಕೆ 2007ರಲ್ಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಬಳಿಕ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆ ಬಳಿ ನೈಸ್ ರಸ್ತೆಗೆ ಪೆರಿಫೆರಲ್ ವರ್ತುಲ ರಸ್ತೆಯನ್ನು ಜೋಡಿಸುವುದು, ಟೋಲ್ ಪ್ಲಾಜ್ ನಿರ್ಮಾಣ, ಕೋವರ್ ಲೀಫ್, ಪೆಟ್ರೋನೆಟ್, ಸೀಗೆಹಳ್ಳಿ ಮಿಸ್ಸಿಂಗ್ ಲಿಂಕ್ ಸೇರಿದಂತೆ ಹೆಚ್ಚುವರಿ ನಿರ್ಮಾಣಗಳಿಗಾಗಿ 750 ಎಕರೆ ಹೆಚ್ಚುವರಿ ಭೂಸ್ವಾಧೀನಕ್ಕೆ ತೀರ್ಮಾನಿಸಲಾಗಿದೆ. ಇದರಿಂದ ಯೋಜನಾ ವೆಚ್ಚ ಹೆಚ್ಚಳವಾಗಲಿದೆ.
ನೆನೆಗುದಿಗೆ ಬಿದ್ದಿದ್ದ ಪೆರಿಫೆರಲ್ ರಸ್ತೆಗೆ ಮರುಜೀವ!
ಇದರಿಂದ ಹಿಂದಿನ ಪ್ರಸ್ತಾವನೆಯಲ್ಲಿ 33 ಸಾವಿರ ಮರಗಳು ಕಡಿಯಬೇಕಿದ್ದರೆ ಇದೀಗ 5 ಸಾವಿರ ಹೆಚ್ಚುವರಿ ಮರಗಳನ್ನು ತೆರವು ಮಾಡಬೇಕಾಗಿದೆ. 15 ವರ್ಷಗಳ ಹಿಂದೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದಾಗ ಯೋಜನಾ ವೆಚ್ಚ 3 ಸಾವಿರ ಕೋಟಿ ರು. ಇತ್ತು. ಆದರೆ ಸುದೀರ್ಘ ವಿಳಂಬದ ಕಾರಣ ಯೋಜನಾ ವೆಚ್ಚ ಏಳು ಪಟ್ಟು ಹೆಚ್ಚಿದೆ. ಇತ್ತೀಚಿನ ಅಂದಾಜಿನ ಪ್ರಕಾರ, ಭೂಸ್ವಾಧೀನಕ್ಕೆಂದೇ 5,475 ಕೋಟಿ ರು. ವೆಚ್ಚವಾಗಲಿದೆ ಹಾಗೂ ಸಂಪೂರ್ಣ ಯೋಜನೆಗೆ 21 ಸಾವಿರ ಕೋಟಿ ರು. ವೆಚ್ಚವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
* 21,000 ಕೋಟಿ: ಯೋಜನೆಗಾಗಿ ಮಾಡುವ ವೆಚ್ಚ
* 5645 ಕೋಟಿ: ಭೂ ಸ್ವಾಧೀನಕ್ಕೆ ಬೇಕಾಗುವ ಹಣ
* 100 ಮೀಟರ್: ರಸ್ತೆಯ ಅಗಲ, 73 ಕಿ.ಮೀ.: ರಸ್ತೆಯ ಒಟ್ಟು ಉದ್ದ