Hijab Controversy: ನಗರದ ಶಾಲಾ-ಕಾಲೇಜು ಸುತ್ತ ನಿಷೇಧಾಜ್ಞೆ: ಕಮಲ್‌ ಪಂತ್‌

Kannadaprabha News   | Asianet News
Published : Feb 10, 2022, 04:00 AM IST
Hijab Controversy: ನಗರದ ಶಾಲಾ-ಕಾಲೇಜು ಸುತ್ತ ನಿಷೇಧಾಜ್ಞೆ: ಕಮಲ್‌ ಪಂತ್‌

ಸಾರಾಂಶ

ರಾಜ್ಯದಲ್ಲಿ ಹಿಜಾಬ್‌ ಮತ್ತು ಕೇಸರಿ ಶಾಲು ವಿಚಾರದಲ್ಲಿ ನಡೆಯುತ್ತಿರುವ ಹೋರಾಟಗಳು ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲೇ ಮುನ್ನಚ್ಚರಿಕಾ ಕ್ರಮವಾಗಿ ನಗರದ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳ ಸುತ್ತಲ 200 ಮೀ. ವ್ಯಾಪ್ತಿಯಲ್ಲಿ ಬುಧವಾರದಿಂದಲೇ ಅನ್ವಯವಾಗುವಂತೆ 144 ಸೆಕ್ಷನ್‌ ಜಾರಿಗೊಳಿಸಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಆದೇಶಿಸಿದ್ದಾರೆ.

ಬೆಂಗಳೂರು (ಫೆ.10): ರಾಜ್ಯದಲ್ಲಿ ಹಿಜಾಬ್‌ ಮತ್ತು ಕೇಸರಿ ಶಾಲು ವಿಚಾರದಲ್ಲಿ ನಡೆಯುತ್ತಿರುವ ಹೋರಾಟಗಳು ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲೇ ಮುನ್ನಚ್ಚರಿಕಾ ಕ್ರಮವಾಗಿ ನಗರದ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳ ಸುತ್ತಲ 200 ಮೀ. ವ್ಯಾಪ್ತಿಯಲ್ಲಿ ಬುಧವಾರದಿಂದಲೇ ಅನ್ವಯವಾಗುವಂತೆ 144 ಸೆಕ್ಷನ್‌ ಜಾರಿಗೊಳಿಸಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ (Kamal Pant) ಆದೇಶಿಸಿದ್ದಾರೆ.

ರಾಜ್ಯದ ವಿವಿಧೆಡೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಮತ್ತು ಕೇಸರಿ ಶಾಲು ಧರಿಸುವ ವಿಚಾರವಾಗಿ ಪರ-ವಿರೋಧ ಪ್ರತಿಭಟನೆ ಹಾಗೂ ಧರಣಿಗಳು ನಡೆಯುತ್ತಿವೆ. ಕೆಲ ಕಡೆ ತೀವ್ರ ಸ್ವರೂಪ ಪಡೆದು ಗಲಾಟೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುನ್ನಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳ ಬಳಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಫೆ.22ರ ವರೆಗೆ ಈ ನಿಷೇಧಾಜ್ಞೆ ಜಾರಿಯಿರಲಿದೆ. ಹೀಗಾಗಿ ಶಾಲಾ-ಕಾಲೇಜುಗಳ ಸುತ್ತಲ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ಪ್ರತಿಭಟನೆ, ಧರಣಿ, ಮೆರವಣಿ, ಜಾಥಾ ಮಾಡುವಂತಿಲ್ಲ. ಒಂದು ವೇಳೆ 144 ಸೆಕ್ಷನ್‌ ಉಲ್ಲಂಘಟನೆ ಮಾಡಿದರೆ, ಕಾನೂನು ಕ್ರಮ ಜರುಗಿಸುವುದಾಗಿ ನಗರ ಪೊಲೀಸ್‌ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

Hijab controversy : ಹೈಸ್ಕೂಲು-ಕಾಲೇಜಿಗೆ 3  ದಿನ ರಜೆ ಘೋಷಿಸಿದ ಸಿಎಂ, ಪ್ರಾಥಮಿಕ ಶಾಲೆ ತೆರೆದಿರಲಿದೆ

ಸರ್ಕಾರದ ರಜೆ ಘೋಷಿಸಿದ್ದರೂ ನಗರದ ಕೆಲ ಶಾಲೆಗಳು ಓಪನ್‌: ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಸರ್ಕಾರ ಬುಧವಾರದಿಂದ ಮೂರು ದಿನ ರಾಜ್ಯಾದ್ಯಂತ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಮಾಡಿದ್ದರೂ, ನಗರದ ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಬುಧವಾರ ಎಂದಿನಂತೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ನಡೆಸಿವೆ. ಮತ್ತೊಂದೆಡೆ ಸರ್ಕಾರ ಶಾಲಾ ಮಟ್ಟದಲ್ಲಿ 9 ಮತ್ತು 10ನೇ ತರಗತಿಗಳಿಗೆ ಮಾತ್ರ ರಜೆ ಘೋಷಿಸಿದ್ದರೂ, ಕೆಲವು ಶಾಲೆಗಳು 1ರಿಂದ 8ನೇ ತರಗತಿ ಮಕ್ಕಳಿಗೂ ರಜೆ ನೀಡಿ ಆನ್‌ಲೈನ್‌ನಲ್ಲಿ ತರಗತಿ ನಡೆಸಿವೆ.

ಪೋಷಕರೂ ಸಮ್ಮತಿಸಿದ್ರು: ಹಿಜಾಬ್‌ ವಿವಾದ ಬೇರೆ ನಗರದಲ್ಲಿ ನಡೆದರೆ ಸರ್ಕಾರ ಇಡೀ ರಾಜ್ಯಾದ್ಯಂತ ಶಾಲೆ, ಕಾಲೇಜು ಬಂದ್‌ ಮಾಡಿರುವುದು ಸರಿಯಲ್ಲ. ಒಂದೆಡೆ ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದ್ದು ಪರೀಕ್ಷೆಗಳು ಹತ್ತಿರವಾಗುತ್ತಿವೆ. ಕೋವಿಡ್‌ನಿಂದಾಗಿ ಕಳೆದ ವರ್ಷ ಸರಿಯಾಗಿ ತರಗತಿಗಳು ನಡೆದಿಲ್ಲ. ಈ ವರ್ಷವೂ ಭೌತಿಕ ತರಗತಿಗಳು ಆರಂಭವಾಗಿ ಕೆಲ ತಿಂಗಳಷ್ಟೇ ಆಗಿದೆ. ಹಾಗಾಗಿ ಪೋಷಕರು 10ನೇ ತರಗತಿ ಮಕ್ಕಳಿಗೆ ತರಗತಿ ಬೋಧನೆ ಮುಂದುವರೆಸಲು ಒಪ್ಪಿಗೆ ಸೂಚಿಸಿದರು. ಹಾಗಾಗಿ ಬುಧವಾರ ಸರ್ಕಾರ ರಜೆ ಘೋಷಿಸಿದ್ದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಗತಿ ನಡೆಸಬೇಕಾಯಿತು ಎಂಬುದು ಆ ಶಾಲೆಗಳ ಸಮರ್ಥನೆಯಾಗಿದೆ.

ಇನ್ನು, 1 ರಿಂದ 8 ನೇ ತರಗತಿ ಮಕ್ಕಳಿಗೂ ರಜೆ ನೀಡಿರುವ ಬಗ್ಗೆಯೂ ಶಾಲೆಗಳು ಕೂಡ ಪೋಷಕರ ಸೂಚನೆ ಮೇರೆಗೆ ರಜೆ ನೀಡಿದ್ದಾಗಿ ಸಮರ್ಥನೆ ನೀಡುತ್ತಾರೆ. ಇನ್ನು, ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ರಜೆ ವಿಚಾರದಲ್ಲಿ ಯಾವುದೇ ಖಾಸಗಿ ಶಾಲೆಗಳು ಸರ್ಕಾರದ ಆದೇಶ ಉಲ್ಲಂಘಿಸಿರುವ ಬಗ್ಗೆ ದೂರುಗಳು ಬಂದಿಲ್ಲ. ದೂರು ಬಂದಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳುತ್ತಾರೆ.

ಹಿಜಾಬ್ ವಿವಾದ-ಪ್ರೌಢಶಾಲೆ, ಕಾಲೇಜುಗಳಿಗೆ 3 ದಿನ ರಜೆ; ಪರೀಕ್ಷೆಗಳು ಅಬಾಧಿತ: ರಾಜ್ಯದ ನಾನಾ ಭಾಗಗಳ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿರುವ  ಹಿನ್ನೆಲೆಯಲ್ಲಿ ಬುಧವಾರದಿಂದ ಶುಕ್ರವಾರದವರೆಗೆ ರಾಜ್ಯಾದ್ಯಂತ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಿಗೆ ಇದೇ 9ರಿಂದ 11ವರೆಗೆ ರಜೆ ಘೋಷಿಸಲಾಗಿದೆ. ಆದರೆ, ಈಗಾಗಲೇ ನಡೆಯುತ್ತಿರುವ ಎಂಜಿನಿಯರಿಂಗ್, ಸ್ನಾತಕೋತ್ತರ ಮತ್ತಿತರ ಪರೀಕ್ಷೆಗಳು ಎಂದಿನಂತೆ ನಡೆಯುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Hijab Row: ಹಿಜಾಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶವಾಗುವುದು ಖಚಿತ: ಈಶ್ವರಪ್ಪ!

ಅನುದಾನಿತ ಮತ್ತು ಅನುದಾನ ರಹಿತ‌ ಶಾಲಾ ಕಾಲೇಜುಗಳಿಗೂ ರಜೆ ಆದೇಶ ಅನ್ವಯವಾಗಲಿದೆ. ಡಿಪ್ಲೊಮಾ ತರಗತಿಗಳು ಕೂಡ ಇರುವುದಿಲ್ಲ. ಮಂಗಳವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಹಿಜಾಬ್ ವಿವಾದ ಸದ್ಯಕ್ಕೆ ನ್ಯಾಯಾಲಯದ ಮುಂದಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶಾಂತಿಯುತವಾಗಿ ವರ್ತಿಸಬೇಕು' ಎಂದು ಮನವಿ ಮಾಡಿದರು.

ಕಾಲೇಜುಗಳಲ್ಲಿ ಹಿಜಾಬ್ ಗಾಗಲಿ, ಕೇಸರಿ ಶಾಲುವಿಗಾಗಲಿ ಅವಕಾಶವಿಲ್ಲ. ಆದರೆ ಎರಡೂ ಕಡೆಯವರು ಹಠ ಹಿಡಿದಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಅಂತಿಮವಾಗಿ ಎಲ್ಲರೂ ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಅವರು ಮನವಿ ಮಾಡಿದರು.

PREV
Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ