ಬೆಂಗಳೂರು: ಟೋಲ್‌ ತಪ್ಪಿಸಲು ಹೋಗಿ ರಸ್ತೆ ತಡೆಗೋಡೆಗೆ ಡಿಕ್ಕಿ, ಕ್ಯಾಬ್‌ ಪಲ್ಟಿ

By Kannadaprabha NewsFirst Published Nov 25, 2022, 12:45 PM IST
Highlights

ದೊಡ್ಡ ಅನಾಹುತದಿಂದ ಪಾರಾದ ಕ್ಯಾಬ್‌ ಚಾಲಕ, ಪ್ರಯಾಣಿಕರು; ಸಣ್ಣಪುಟ್ಟ ಗಾಯ

ಬೆಂಗಳೂರು(ನ.25):  ಟೋಲ್‌ ಶುಲ್ಕ ತಪ್ಪಿಸುವ ಉದ್ದೇಶದಿಂದ ಬೇರೆ ರಸ್ತೆಯಲ್ಲಿ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಬ್‌ ರಸ್ತೆ ಬದಿಯ ತಡೆಗೋಡೆಗೆ ಗುದ್ದಿ ಪಲ್ಟಿಯಾಗಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುರುವಾರ ಮುಂಜಾನೆ 4.30ರ ಸುಮಾರಿಗೆ ದೊಡ್ಡಜಾಲದ ಬಳಿ ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಕ್ಯಾಬ್‌ ಚಾಲಕ ಹಾಗೂ ಪ್ರಯಾಣಿಕರು ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಬ್ರಮಣ್ಯನಗರ ನಿವಾಸಿ ಯಮುನಾ ಎಂಬುವವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಓಲಾ ಕ್ಯಾಬ್‌ ಬುಕ್‌ ಮಾಡಿದ್ದರು. ಅದರಂತೆ ಕ್ಯಾಬ್‌ ಚಾಲಕ ಯಮುನಾ ಅವರನ್ನು ಕ್ಯಾಬ್‌ಗೆ ಹತ್ತಿಸಿಕೊಂಡು ವಿಮಾನ ನಿಲ್ದಾಣದ ಕಡೆಗೆ ತೆರಳುತ್ತಿದ್ದ. ಟೋಲ್‌ ಶುಲ್ಕ ತಪ್ಪಿಸುವ ಉದ್ದೇಶದಿಂದ ದೊಡ್ಡಜಾಲ ರಸ್ತೆಯಲ್ಲಿ ಕ್ಯಾಬ್‌ ಚಲಾಯಿಸುವಾಗ ನಿಯಂತ್ರಣದ ತಪ್ಪಿದ ಕ್ಯಾಬ್‌, ರಸ್ತೆಗೆ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚರಂಡಿಗೆ ಬಿದ್ದಿದೆ.
ಈ ವೇಳೆ ಇತರೆ ವಾಹನಗಳ ಚಾಲಕರು ಹಾಗೂ ಪ್ರಯಾಣಿಕರು ಕ್ಯಾಬ್‌ ಚಾಲಕ ಮತ್ತು ಯಮುನಾ ಅವರನ್ನು ಕ್ಯಾಬ್‌ನಿಂದ ಹೊರಗೆ ಕರೆತಂದಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾವುಕ ಕ್ಷಣ ಸೃಷ್ಟಿಸಿದ ಅಪಘಾತ: ಕೇರಳ ಸಾರಿಗೆ ಚಾಲಕನ ಸಮಯಪ್ರಜ್ಞೆಗೆ ಶ್ಲಾಘನೆ

ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅತಿಯಾದ ವೇಗ ಅಥವಾ ನಿದ್ರೆಯ ಮಂಪರಲ್ಲಿ ಚಾಲಕ ಕ್ಯಾಬ್‌ನ ನಿಯಂತ್ರಣ ಕಳೆದುಕೊಂಡಿರುವ ಸಾಧ್ಯತೆಯಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ದೇವರ ದಯೆಯಿಂದ ಬದುಕಿದೆ

ಟೋಲ್‌ ತಪ್ಪಿಸುವ ಉದ್ದೇಶದಿಂದ ಕ್ಯಾಬ್‌ ಚಾಲಕ ಬೇರೆ ರಸ್ತೆಯಲ್ಲಿ ಹೋಗುವಾಗ ಈ ಅಪಘಾತವಾಗಿದೆ. ದೇವರ ದಯೆಯಿಂದ ಬದುಕಿದ್ದೇವೆ. ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆಯೂ ಮುಖ್ಯ. ಹೀಗಾಗಿ ಟೋಲ್‌ ಶುಲ್ಕ ತಪ್ಪಿಸಲು ಸುತ್ತು ಹಾಕಿ ಹೋಗುವುದಕ್ಕಿಂತ ಟೋಲ್‌ ಶುಲ್ಕ ಪಾವತಿಸಿ ನಿಗದಿತ ರಸ್ತೆಯಲ್ಲೇ ಹೋಗುವುದು ಒಳಿತು ಎಂದು ಯುಮುನಾ ಹೇಳಿದ್ದಾರೆ.
 

click me!