ಜಿಲ್ಲೆಯಲ್ಲಿ ಯಾವುದೇ ಕಡತಗಳಾಗಲೀ ಕೇವಲ ನಾಲ್ಕೈದು ದಿನದಲ್ಲಿ ವಿಲೇವಾರಿ ಆಗಬೇಕೆಂದು ಸುತ್ತೋಲೆ ಹೊರಡಿಸಿ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಜಿಪಂ ಸಿಇಓಗೆ ಸೂಚನೆ ನೀಡಿದ್ದಾರೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ
ದಾವಣಗೆರೆ (ಸೆ.27): ಜಿಲ್ಲೆಯಲ್ಲಿ ಯಾವುದೇ ಕಡತಗಳಾಗಲೀ ಕೇವಲ ನಾಲ್ಕೈದು ದಿನದಲ್ಲಿ ವಿಲೇವಾರಿ ಆಗಬೇಕೆಂದು ಸುತ್ತೋಲೆ ಹೊರಡಿಸಿ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಜಿಪಂ ಸಿಇಓಗೆ ಸೂಚನೆ ನೀಡಿದ್ದಾರೆ. ಯಾವುದೇ ಕಡತಗಳು ಬಾಕಿ ಇತರಬಾರದು ಆಗ ಮಾತ್ರ ಕೆಲಸಗಳು ಬೇಗನೆ ಆಗುತ್ತವೆ ಕಾಯುವ ಪರಿಸ್ಥಿತಿ ಯಾರಿಗು ಇರುವುದಿಲ್ಲ ಎಂದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ನಾವು ಕೂಡ ಬಡ ಕುಟುಂಬದಿಂದ ಬಂದಿದ್ದೇನೆ. ನನಗೆ ಎಲ್ಲಾ ಸಮಸ್ಯೆಗಳು ಗೊತ್ತಿವೆ. ಒಂದು ವೇಳೆ ನಾನು ಅನಿರೀಕ್ಷಿತವಾಗಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಅವ್ಯವಸ್ಥೆ ಕಂಡು ಬಂದರೆ, ದೂರುಗಳು ಕೇಳಿ ಬಂದರೆ ನಾನು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.
ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಚತೆ ಆಗುತ್ತಿಲ್ಲ. ಅಲ್ಲದೇ ಇಲ್ಲಿಗೆ ಬರುವ ರೋಗಿಗಳ ಸಮಸ್ಯೆ ಕೇಳುವವರು ಇಲ್ಲ ಎನ್ನುವ ದೂರುಗಳು ಬರುತ್ತಿವೆ. ಬೆಳಿಗ್ಗೆಯಿಂದ ಸಂಜೆವರೆಗೆ ರೋಗಿಗಳು ಇದ್ದರ ಅವರನ್ನು ಕೇಳುವವರೇ ಇಲ್ಲದಂತಾಗಿದೆ. ಇದಕ್ಕಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ ಎಂದು ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ಷಣ್ಮುಖ ಅವರಿಗೆ ಸೂಚಿಸಿದರು. ಜಿಲ್ಲಾಮಟ್ಟದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬಡವರಿಗೆ ತೊಂದರೆ ಆಗುತ್ತಿದೆ. ನಾವು ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವದಿಂದ ಕೆಲಸ ಮಾಡಬೇಡಿ. ಜಿಲ್ಲಾ ಪಂಚಾಯತಿಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದ ಕಾರಣ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ನಿಮ್ಮ ಕೆಲಸ ಮತ್ತೊಬ್ಬರು ಹೇಳಬೇಕಾ ಎಂದು ಕಿಡಿಕಾರಿದರು.
ಬೆಣ್ಣೆನಗರಿ ದಾವಣಗೆರೆಯಲ್ಲಿ ಅದ್ದೂರಿ ಹಿಂದೂ ಮಹಾ ಗಣಪತಿ ಮೆರವಣಿಗೆ
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಸಚಿವರು: ರಾಜ್ಯಾದ್ಯಂತ 7500 ಸರ್ಕಾರಿ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 213 ಕೊಠಡಿಗಳು ನಿರ್ಮಾಣ ಆಗಬೇಕಿತ್ತು. ಆದರೆ ಸಕಾಲದಲ್ಲಿ ಆಗಿಲ್ಲ. ಖಾಸಗಿ ಶಾಲೆಗಳಿಗೆ ತಕ್ಕಂತೆ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಕಾರಣ ವಿಳಂಬ ಮಾಡದೇ ಅದಷ್ಟು ಜಾಗ್ರತೆ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪ್ರಗತಿ ಪರಿಶೀಲಿಸಿದ ಸಚಿವರು: ಮಾತೃವಂದನೆ ಯೋಜನೆ ಕುರಿತಂತೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಆದರೆ ಬಹಳಷ್ಟು ಅಧಿಕಾರಿಗಳಿಗೆ ಅದರ ಮಾಹಿತಿಯೇ ಇಲ್ಲ. ಇದೇ ರೀತಿಯಾದರೆ ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವೇ. 27 ಇಲಾಖೆಗಳು ಜಿಲ್ಲಾ ಪಂಚಾಯತಿ ಅಡಿಯಲ್ಲಿ ಬರುತ್ತವೆ. ಕಾರಣ ಜಿಪಂ ಸಿಇಓಗಳು ಎಲ್ಲಾ ಇಲಾಖೆಯ ಅಧಿಕಾರಿಗಳಿಂದ ಸರಿಯಾದ ಕೆಲಸ ತೆಗೆದು ಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಯಾವುದೇ ಮಾಹಿತಿ ಕೊರತೆ ಇರದಂತೆ ಸಭೆಗಳಿಗೆ ವಿವಿರ ನೀಡಿ ಎಂದು ಹೇಳಿದರು.
ಜಿಲ್ಲಾ ಡಿಹೆಚ್‍ಓ ವಿರುದ್ದ ಗರಂ ಆದ ಸಚಿವ ಭೈರತಿ: ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಖಾಸಗಿಯಾಗಿ ಔಷಧಿ ತರುವಂತೆ ಚೀಟಿ ಬರೆದುಕೊಡಲಾಗುತ್ತಿದೆ. ವ್ಯವಸ್ಥೆ ಈ ರೀತಿ ಇದ್ದರೂ ಸರಿಯಾಗಿ ಕೆಲಸ ಮಾಡದ ನೀವು ಇರಬೇಕಾ, ನಿಮ್ಮ ಕೈಲಿ ಆಗದಿದ್ದರೆ ಹೇಳಿ, ನಮಗೇನು ಮಾಡಬೇಕೆನ್ನುವುದು ಗೊತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಗರಂ ಆದರು. ಬಡವರು, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೇ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಿದೆ. ಆದರೆ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಡವರಿಗೆ ರೋಗಕ್ಕೆ ತಕ್ಕಂತೆ ಔಷಧಿಗಳನ್ನು ಉಚಿತವಾಗಿ ನೀಡದೇ ಖಾಸಗಿ ತರಲು ಹೇಳುತ್ತಿದ್ದಾರೆ. ಇದರಿಂದಾಗಿ ಬಡವರಿಗೆ ಅನ್ಯಾಯ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಡವರ ಅನುಕೂಲಕ್ಕೆ ಆರೋಗ್ಯ ಇಲಾಖೆ ಕೆಲಸ ಮಾಡುತ್ತಿದೆ. ಕೊಟ್ಯಾಂತರ ಹಣ ಖರ್ಚು ಮಾಡುತ್ತಿದೆ. ಆದರೆ ಇಲ್ಲಿನ ಜಿಲ್ಲಾ ಆರೋಗ್ಯ ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಹೆಚ್‍ಓ ಇತರೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು. ಆದರೆ ನೀವುಗಳು ಸ್ಪಂದಿಸದ ಕಾರಣ ಜನರು ಜನಪ್ರತಿನಿಧಿಗಳಿಗೆ ದೂರು ನೀಡುತ್ತಿದ್ದಾರೆ. ಎಲ್ಲವೂ ಜನಪ್ರತಿನಿಧಿಗಳೇ ಮಾಡುವುದಾದರೆ ಅಧಿಕಾರಿಗಳು ಯಾಕೆ ಬೇಕು ಎಂದು ಕಿಡಿಕಾರಿದರು.
ಗುದ್ದಲಿ ಪೂಜೆ ಮಾಡಿ 2 ವರ್ಷ ಆದ್ರು ಮುಗಿಯದ ಕಾಮಗಾರಿ: ಆಯುಷ್ ಆಸ್ಪತ್ರೆಗೆ ಗುದ್ದಲಿ ಪೂಜೆ ಮಾಡಿ 2 ವರ್ಷ ಸಮೀಪಿಸುತ್ತಿದ್ದರೂ ರಾಷ್ಟ್ರೀಯ ಆಯುಷ್ ಅಭಿಯಾನದ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದ 10 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾಮಗಾರಿ ಮುಗಿಸದೇ ವಿಳಂಬವಾಗಿದೆ. ವಿಳಂಭಕ್ಕೆ ಕೆಆರ್‍ಐಡಿಎಲ್‍ನ ಡಿಡಿ ನೇರ ಕಾರಣವಾಗಿದ್ದು ಕೆಂಡ ಮಂಡಲವಾದ ಜಿಲ್ಲಾ ಉಸ್ತುವಾರಿ ಸಚಿವರು, ನಮಗೆ ಕೆಟ್ಟ ಹೆಸರು ತರಲು ನೀವು ಇದ್ದೀರಾ, ಈ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳಿ ಎಂದು ಜಿಪಂ ಸಿಇಓಗೆ ಅದೇಶ ನೀಡಿದರು.
ರಾಷ್ಟ್ರೀಯ ಆಯುಷ್ ಅಭಿಯಾನದ ಅಡಿಯಲ್ಲಿ ಜಿಲ್ಲೆಯ ಚನ್ನಗಿರಿ ತಾಲೂಕಿಗೆ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆ ಮಂಜೂರಾಗಿ 2020ರ ನವೆಂಬರ್‌ನಲ್ಲಿ ಗುದ್ದಲಿ ಪೂಜೆ ಮಾಡಲಾಗಿದೆ. ಎಲ್ಲದೇ ಇದಕ್ಕೆ ಬೇಕಾದ ಅನುದಾನ 56.25 ಲಕ್ಷ ರೂ.ಗಳನ್ನು ಇಲಾಖೆ ಮಂಜೂರು ಮಾಡಿದ್ದರೂ ಸಕಾಲದಲ್ಲಿ ಕೆಲಸ ಮಾಡದೇ ನಿರ್ಲಕ್ಷ್ಯ ಮಾಡಿರುವ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳುವಂತೆ, ಅಲ್ಲದೇ ಅದನ್ನು ಸಭಾ ನಡಾವಳಿಯಲ್ಲಿ ದಾಖಲಿಸುವಂತೆ ಜಿಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಪೇ ಸಿಎಂ’ ಮೂಲಕ ಜನತೆಗೆ ಸರ್ಕಾರದ ಭ್ರಷ್ಟಾಚಾರ ಗೊತ್ತಾಗಲಿ: ಯತೀಂದ್ರ
ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ ಚನ್ನಗಿರಿಯಲ್ಲಿ 10 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾರ್ಯ ಯಾಕೆ ಮುಗಿದಿಲ್ಲ ಎಂದು ಡಿಎಓ ಅವರನ್ನು ಪ್ರಶ್ನಿಸಿದರು. ಶಾಸಕರ ಪ್ರಶ್ನೆಗೆ ಮಾಹಿತಿ ನೀಡಿದ ಡಿಎಓ ಡಾ.ಶಂಕರಗೌಡ ಈಗಾಗಲೇ ಆಯುಷ್ ಇಲಾಖೆಯಿಂದ ಕಾಮಗಾರಿಗೆ ಸಂಬಂಧಿಸಿದಂತೆ ಎಲ್ಲಾ ಹಣವನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಯಮಿತಕ್ಕೆ ನೀಡಲಾಗಿದೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ತಿಳಿಸಿದರು.
ಈ ವೇಳೆ ಕೆಆರ್‌ಐಡಿಎಲ್‍ನ ಉಪನಿರ್ದೇಶಕ ಗಣೇಶ್ ಬಾಬು ಅವರನ್ನು ಶಾಸಕರು ಪ್ರಶ್ನಿಸಿ, ಯಾಕೆ ಈವರೆಗೆ ಕಾಮಗಾರಿ ಮುಗಿದಿಲ್ಲ. ಕೆಲಸ ಮಾಡಲು ನಿಮಗೆ ಏನು ತೊಂದರೆ. ಆಡಳಿತಾತ್ಮಕ ಅನುಮೋದನೆ ದೊರೆತ ನಂತರವೂ ವಿಳಂಬವೇ ಎಂದು ಸಿಡಿಮಿಡಿಗೊಂಡರು. ಇದಕ್ಕೆ ಉತ್ತರಿಸಿದ ಕೆಆರ್‍ಐಡಿಎಲ್ ಡಿಡಿ, ಈ ಹಿಂದೆ ಶೇ. 12ರಷ್ಟು ಜಿಎಸ್‍ಟಿ ಇತ್ತು. ಇದೀಗ 18ರಷ್ಟು ಜಿಎಸ್‍ಟಿ ಆಗಿರುವ ಕಾರಣ ಕಟ್ಟಡ ನಿರ್ಮಾಣಕ್ಕೆ ಹಣ ಹೊಂದಾಣಿಕೆ ಆಗುತ್ತಿಲ್ಲ. ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ನಂತರ ಅನುಮೋದನೆ ಕಳಿಸಲಾಗುವುದು ಎಂದು ಹೇಳಿದರು.