ಕಡಲ್ಕೊರೆತ ತಡೆಯಲು ಮಾಡಬೇಕಾಗಿರೋದು ಏನು?. ಸಮುದ್ರಕ್ಕೆ ತಡೆಗೋಡೆ ನಿರ್ಮಾಣ ಮಾಡುವುದೇ ಡೇಂಜರ್ ಅಂತಾರೆ ವಿಜ್ಞಾನಿಗಳು. ಸಮುದ್ರ ಕೊರೆತ ತಡೆಯಲು, ತೀರಗಳಲ್ಲಿ ವಾಸಿಸೋ ಜೀವಿಗಳ ರಕ್ಷಣೆಗೆ ಸಸ್ಯ ಸಂಕುಲವೇ ಉತ್ತಮ ತಡೆಗೋಡೆ!
ವರದಿ: ಭರತ್‌ರಾಜ್ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್
ಕಾರವಾರ (ಸೆ.26): ಮಳೆಗಾಲ ಅಥವಾ ಸಮುದ್ರದಲ್ಲಿ ತೂಫಾನ್, ಚಂಡ ಮಾರುತ ಕಾಣಿಸಿಕೊಂಡರೆ ಸಾಕು ಸಮುದ್ರ ಕೊರೆತದ ಪ್ರಮಾಣ ಹೆಚ್ಚಾಗುತ್ತಲೇ ಇರುತ್ತದೆ. ರಾಜ್ಯದ ಕರಾವಳಿ ಭಾಗಗಳಲ್ಲಿ ಇದು ಪ್ರತೀ ವರ್ಷದ ಸಮಸ್ಯೆಯಾಗಿರೋದ್ರಿಂದ ಜನಪ್ರತಿನಿಧಿಗಳು ಕೂಡಾ ಸರಕಾರದಿಂದ ಕೋಟಿ ಕೋಟಿ ಹಣ ತಂದು ತಡೆಗೋಡೆ ಹೆಸರಿನಲ್ಲಿ ಸಮುದ್ರಕ್ಕೆ ಸುರೀತಾರೆ. ಆದರೆ, ಸಮುದ್ರಕ್ಕೆ ತಡೆಗೋಡೆ ನಿರ್ಮಾಣ ಮಾಡುವುದೇ ಡೇಂಜರ್ ಅಂತಾ ವಿಜ್ಞಾನಿಗಳು ಹೇಳಿದ್ರೆ, ಇದೊಂದು ಹಣ ಹೊಡಿಯೋ ಸ್ಕೀಮ್ ಅಂತಾರೆ ಜನಸಾಮಾನ್ಯರು. ಅಷ್ಟಕ್ಕೂ ಕಡಲ್ಕೊರೆತ ತಡೆಯಲು ಮಾಡಬೇಕಾಗಿರೋದು ಏನು?. ಸಮುದ್ರಕ್ಕೆ ತಡೆಗೋಡೆ ನಿರ್ಮಾಣ ಮಾಡುವುದೇ ಡೇಂಜರ್ ಅಂತಾರೆ ವಿಜ್ಞಾನಿಗಳು. ಸಮುದ್ರ ಕೊರೆತ ತಡೆಯಲು, ತೀರಗಳಲ್ಲಿ ವಾಸಿಸೋ ಜೀವಿಗಳ ರಕ್ಷಣೆಗೆ ಸಸ್ಯ ಸಂಕುಲವೇ ಉತ್ತಮ ತಡೆಗೋಡೆ! ರಾಜ್ಯದ ಕರಾವಳಿ ತೀರ ಸುಮಾರು 320ಕಿ.ಮೀ. ನಷ್ಟು ವ್ಯಾಪಿಸಿಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯ ಈ ತೀರ ಪ್ರದೇಶಗಳು ಪ್ರತೀ ವರ್ಷದಿಂದ ಕಡಲ್ಕೊರೆತದಿಂದ ಬಾಧಿತವಾಗುತ್ತಿರುತ್ತವೆ. ಈ ಸಮಸ್ಯೆಯನ್ನು ತಡೆಗಟ್ಟಲು ಸರಕಾರ ಕೈಗೊಳ್ಳುತ್ತಿರುವ ಕ್ರಮವೆಂದರೆ ಸಮುದ್ರದ ಅಲೆಗಳಿಗೆ ತಡೆಗೋಡೆ ನಿರ್ಮಾಣ. ಇದಕ್ಕಾಗಿ ಟೆಂಡರ್ ಕರೆದು ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡಲಾಗುತ್ತದೆ.
undefined
ಆದರೆ, ಒಂದೆರಡು ವರ್ಷಗಳಲ್ಲಿ ಈ ಎಲ್ಲಾ ಕಲ್ಲುಗಳು ಸಮುದ್ರ ಪಾಲಾಗುತ್ತವೆ. ವಿಜ್ಞಾನಿಗಳು ಮಾತ್ರ ಈ ಪ್ರಕ್ರಿಯೆಯನ್ನು ಅವೈಜ್ಞಾನಿಕ ಎಂದು ಹೇಳಿದಲ್ಲದೇ, ಇದರಿಂದ ಅಪಾಯ ತಪ್ಪಿದ್ದಲ್ಲ ಎಂಬ ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ.
ಕಡಲಿನಲ್ಲಿ ಭರತ ಹಾಗೂ ಇಳಿತದ ಮಧ್ಯ ಇರುವ ಜಾಗವನ್ನು ಇಂಟರ್ ಟೈಡಲ್ ಝೋನ್ ಅಥವಾ ಲಿಟರಲ್ ಝೋನ್ ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ. ಈ ಜಾಗ ಲಕ್ಷಾನುಗಟ್ಟಲೇ ಜೀವಿಗಳ ವಾಸಸ್ಥಾನವಾಗಿದೆ. ಈ ಜಾಗದಲ್ಲಿ ಕಲ್ಲು ಬಂಡೆಗಳನ್ನು ಹಾಕುವುದಿಂದ ಇಲ್ಲಿರುವ ಜೀವ ಸಂಕುಲವನ್ನು ಹಾಳು ಮಾಡಿದಂತಾಗುತ್ತದೆ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವವರು ಇಂತಹ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ. ಕಲ್ಲು ಹಾಕಿದಲ್ಲಿ ನಾಲ್ಕೈದು ವರ್ಷಗಳಲ್ಲಿ ಕೊಚ್ಚಿಹೋಗುತ್ತವೆ.
ಈ ಪ್ರಕ್ರಿಯೆಯಿಂದ ಅಪಾಯಗಳು ಕಾಣಿಸುವುದು ಕೂಡಾ ಅಷ್ಡೇ ನಿಜ. ಕೆಲವು ಕಡೆ ವೈಜ್ಞಾನಿವಾಗಿ ಬ್ರೇಕ್ ವಾಟರ್‌ಗಳನ್ನು ಮಾಡಬಹುದು. ಇವುಗಳನ್ನು ಸಮುದ್ರದ ಒಳಭಾಗದಲ್ಲಿ ಮಾಡಬೇಕೇ ಹೊರತು ತಟಭಾಗದಲ್ಲಲ್ಲ. ನೀರಿಗೆ ಒಂದು ಕಡೆ ತಡೆಯಾದರೆ ಮತ್ತೊಂದು ಕಡೆ ಹೊಕ್ಕುತ್ತದೆ. ಕೋಟಿಗಟ್ಟಲೆ ವೆಚ್ಚ ಮಾಡಿ ಕಲ್ಲುಗಳನ್ನು ಹಾಕುವುದು ವೈಜ್ಞಾನಿಕವಾಗಿದ್ದು, ಇದರಿಂದ ಅಪಾಯವಿದೆ ಅಂತಾರೆ ವಿಜ್ಞಾನಿಗಳು.
ಅಂದಹಾಗೆ, ಸಮುದ್ರ ತೀರಗಳಲ್ಲಿ ಇಕೋ ಫ್ರೆಂಡ್ಲಿ ಕ್ರಮಗಳನ್ನು ಕೈಗೊಂಡರೆ ಅಲ್ಲಿ ನೆಲೆಸುವ ಜೀವಿಗಳೂ ಬದುಕುತ್ತವೆ ಹಾಗೂ ಮೀನುಗಾರಿಕೆಗೆ ತೊಂದರೆಯಾಗಲ್ಲ. ಬೀಚ್‌ಗಳಲ್ಲಿ ಸ್ಯಾಂಡ್ ಬೈಂಡರ್ಸ್ ಅನ್ನೋ ಸ್ಥಾನಿಕ ಸಸ್ಯಗಳನ್ನು ಹೆಚ್ಚಾಗಿ ಬೆಳೆಸಿದಲ್ಲಿ ಸಮುದ್ರ ತೀರವನ್ನು ಸವೆಯಲು ಅವುಗಳು ಬಿಡುವುದಿಲ್ಲ. ಇವುಗಳನ್ನು ಬೆಳೆಸಿದಲ್ಲಿ ಸರಕಾರ ತಡೆಗೋಡೆ ನಿರ್ಮಾಣಕ್ಕೆ ವಿನಿಯೋಗಿಸುವ ಹಣದ ಶೇ.10ರಷ್ಟು ಕೂಡಾ ಖರ್ಚಾಗುವುದಿಲ್ಲ.
ಕರಾವಳಿಯಲ್ಲಿ ಕಡಲ್ಕೊರೆತ; ಕಡಲಜೀವಶಾಸ್ತ್ರಜ್ಞರಿಂದ ಎಚ್ಚರಿಕೆ
ಇನ್ನು ಕೆಲವು ಪ್ರದೇಶಗಳಲ್ಲಿ ಮ್ಯಾಂಗ್ರೋ ಸಸ್ಯಗಳನ್ನು ಕೂಡಾ ಬೆಳೆಸಬಹುದು. ಇದರಿಂದ ಸಮುದ್ರ ಕೊರೆತ ತಡೆಯಾಗುವುದಲ್ಲದೇ, ಮೀನುಗಾರಿಕೆಗೂ ಇವುಗಳು ಸಹಾಯವಾಗುತ್ತದೆ. ಸರಕಾರ ಈ ದಿಶೆಯಲ್ಲಿ ಚಿಂತಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬಡ ಮೀನುಗಾರರಿಗೆ ಬಹಳಷ್ಟು ಸಮಸ್ಯೆಯಾಗುತ್ತದೆ ಅಂತಾರೆ ತಜ್ಞರು. ಇನ್ನು ಸ್ಥಳೀಯ ಮೀನುಗಾರ ಮುಖಂಡರು ಹೇಳುವಂತೆ, ತಡೆಗೋಡೆ ನಿರ್ಮಾಣಕ್ಕೆ ಹಾಕುವ ಕಲ್ಲುಗಳ ಲೆಕ್ಕ ತೆಗೆಯುವವರು ಯಾರೂ ಇಲ್ಲ. ಮೀಟರ್ ಹಾಗೂ ಕಿ.ಮೀ.ಲೆಕ್ಕದಲ್ಲಿ ಕಲ್ಲು ಹಾಕಿದ್ದಕ್ಕೆ ಕೋಟಿಗಟ್ಟಲೆ ಹಣ ವ್ಯಯ ಮಾಡಲಾಗುತ್ತದೆ. ಇದಕ್ಕಾಗಿ ಇದು ಕಲ್ಲಿನಲ್ಲಿ ಹಣ ಮಾಡೋ ಯೋಜನೆಯೆಂದು ಕುಖ್ಯಾತಿ ಪಡೆದಿದೆ. ಇದರಲ್ಲಿ ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಕೋಟಿಗಟ್ಟಲೆ ಹಣ ನುಂಗುತ್ತಾರೆ. ಸಮುದ್ರವನ್ನು ಅದರಷ್ಟಕ್ಕೇ ಬಿಡಬೇಲ್ಲದೇ, ಅತಿಕ್ರಮಣ ತಡೆದಲ್ಲಿ ಇಂತಹ ಸಮಸ್ಯೆಗಳಾಗುವುದಿಲ್ಲ ಅಂತಾರೆ ಮುಖಂಡರು.
Uttara Kannada: ಹೊನ್ನಾವರದ ತೊಪ್ಪಲಕೆರೆ ನಿವಾಸಿಗಳಿಗೆ ಕಡಲ್ಕೊರೆತದ ಸಂಕಷ್ಟ
ಒಟ್ಟಿನಲ್ಲಿ ಸಮುದ್ರ ಕೊರೆತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕಲ್ಲುಗಳನ್ನು ರಾಶಿ ಹಾಕಿ ಕೋಟಿಗಟ್ಟಲೇ ಹಣ ವ್ಯಯ ಮಾಡಿ ಜನರ ಹಣವನ್ನು ಸಮುದ್ರ ಪಾಲಾಗುವುದನ್ನು ನಿಲ್ಲಿಸಬೇಕಿದೆ. ಬದಲಾಗಿ ತಜ್ಞರಿಂದ ಸಲಹೆ ಪಡೆದು ಸಸ್ಯ ಸಂಪತ್ತಿನ ಮೂಲಕ ಅಥವಾ ಸಮುದ್ರದೊಳಗೆ ವೈಜ್ಞಾನಿಕ ರೀತಿಯಲ್ಲಿ ಬ್ರೇಕ್ ವಾಟರ್‌ಗಳನ್ನು ನಿರ್ಮಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.