ಕೋಲಾರದ ಈ ಕೆರೆಗೆ ವರುಣನ ಕೃಷೆ ಇಲ್ಲ, ಇಂದಿಗೂ ನೀರು ಬರಲಿಲ್ಲ!

By Suvarna NewsFirst Published Sep 26, 2022, 8:21 PM IST
Highlights

ಕೋಲಾರ ಜಿಲ್ಲೆಯ ಕ್ಯಾಲನೂರು ಗ್ರಾಮದ‌ ಅಮಾನಿ  ಕೆರೆಗೆ ನೀರು ಬಂದು ಸರಿಸುಮಾರು 35 ವರ್ಷಗಳೇ ಕಳೆದಿವೆ. ಕೋಲಾರ ಕಳೆದೆರೆಡು ವರ್ಷಗಳಿಂದ ಉತ್ತಮ ಮಳೆಯನ್ನು ಕಂಡರೂ ಇಲ್ಲಿಯ ಬರ ಪರಿಸ್ಥಿತಿ ದೂರಾಗಿಲ್ಲ.

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಸೆ.26): ರಾಜ್ಯಾದ್ಯಂತ ಕೆಲ ದಿನಗಳ ಹಿಂದೆ ವರುಣನ ಆರ್ಭಟ.ಕೆರೆ ಕಟ್ಟೆಗಳು ನದಿ‌ ಕಾಲುವೆಗಳು ಅಷ್ಟೇ ಏಕೆ ಬಡಾವಣೆಗಳು ಮನೆಗಳು, ರಸ್ತೆ  ಗಳಲ್ಲೂ ನೀರೇ ನೀರು. ಆದ್ರೆ ಈ ಗ್ರಾಮದ ಬೃಹತ್ ಕೆರೆಗೆ ಇನ್ನೂ ಕೂಡ ಒಂದು ತೊಟ್ಟು ನೀರು ಬರಲಿಲ್ಲ.ಈಗಲೂ ಜನರಿಗೆ ದನಕರುಗಳಿಗೆ ಕೃಷಿಗೆ ಎಲ್ಲದಕ್ಕೂ ನೀರಿನ ತತ್ವಾರ.  ರಾಜ್ಯಾದ್ಯಂತ ಕಳೆದ ಕೆಲ ದಿನಗಳ ಹಿಂದೆ ಬಿದ್ದ ರಣ ಮಳೆಗೆ ಎಲ್ಲೆಲ್ಲೂ ನೀರು ತುಂಬಿ ತುಳುಕುತ್ತಿದೆ. ನೀರು ಕಾಣದ ಊರೇ ಇಲ್ಲ ಎನ್ನವಂತಿದೆ ಪರಿಸ್ಥಿತಿ. ವರುಣ ದೇವರೇ ನಮ್ಮನ್ನು ಕಾಪಾಡು ಎನ್ನುವಂತಹ ದಿನಗಳಲ್ಲಿ ಈ ಗ್ರಾಮಕ್ಕೆ ನೀರಿನ ಹಾಹಾಕಾರ ಬಗೆಹರಿಯಲೇ ಇಲ್ಲ.ಗ್ರಾಮದ 500 ಎಕರೆ ವ್ಯಾಪ್ತಿಯಲ್ಲಿ ಇರುವ ಬೃಹತ್ ಕೆರೆಗಿನ್ನೂ ಕೂಡ ನೀರು ಹರಿದಿಲ್ಲ. ಅಂತರಜಲ ವೃದ್ದಿ ಆಗಲೇ ಇಲ್ಲ.1500 ಅಡಿ ಈಗಲೂ ಸಹ ಕೊರೆಯಬೇಕು ಅದೂ ಕೂಡ ಫ್ಲೋರೈಡ್ ತುಂಬಿದ ನೀರು. ವಿಸ್ತಾರವಾದ ಕೆರೆಯಲ್ಲಿ ಜಾಲಿ ಗಿಡಗಳ ,ಮುಳ್ಳು ಗಿಡಗಳೇ ಬೆಳೆದುಕೊಂಡಿದ್ದು ಒಂದು ತೊಟ್ಟು ನೀರು ಕೂಡ ಇಲ್ಲ.  ಇದು ಕೋಲಾರ ಜಿಲ್ಲೆಯ ಕ್ಯಾಲನೂರು ಗ್ರಾಮದ‌ ಅಮಾನಿ ಕೆರೆ. ಕೆರೆಗೆ ನೀರು ಬಂದು ಸರಿಸುಮಾರು 35 ವರ್ಷಗಳೇ ಕಳೆದಿವೆ.

ತಮ್ಮ ಬಾಲ್ಯದಲ್ಲಿ ನೀರು ತುಂಬಿದ್ದನ್ನು ಕಂಡವರೀಗೆ ತಮ್ಮ ಯೌನ ದಾಟಿ ವೃದ್ದಾಪ್ಯಕ್ಕೆ ಕಾಲಿಟ್ಟರೂ ಕೂಡ ತಮ್ಮೂರ ಕೆರೆಗೆ‌ನೀರು ಭರ್ತಿಯಾಗಿದ್ದನ್ನು ನೋಡಲು ಆಗಿಲ್ಲ. ಅಷ್ಟಕ್ಕೂ ಕೋಲಾರ ಜಿಲ್ಲೆ ಕಳೆದ 20 ವರ್ಷಗಳಿಂದ ಎದುರಿಸಿ ಭೀಕರ ಬರಗಾಲ ದೂರಾಗಿ ಕಳೆದೆರೆಡು ವರ್ಷಗಳಿಂದ ಉತ್ತಮ ಮಳೆಯನ್ನು‌ ಕಾಣುತ್ತಿದೆ. ಆದ್ರೆ ಕ್ಯಾಲನೂರು ಗ್ರಾಮದ ಈ ಕೆರೆಗೆ ಮಾತ್ರ ನೀರು ಬರಲೇ ಇಲ್ಲ. ಇಲ್ಲಿಯ ಬರ ಪರಿಸ್ಥಿತಿ ದೂರಾಗಿಲ್ಲ.

ವೇಮಗಲ್ ಹೋಬಳಿ ವ್ಯಾಪ್ತಿಯ ಕ್ಯಾಲನೂರು ಗ್ರಾಮ ಕೋಲಾರದಿಂದ ಸಮೀಪದಲ್ಲಿಯೇ ಇರುವ ಗ್ರಾಮವಾಗಿದ್ದು,ಪಂಚಾಯಿತಿ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇದೇ ಕೆರೆಯ ವ್ಯಾಪ್ತಿಯಲ್ಲಿ ಇರುವ ಕೊಳೆವೇ ಬಾವಿಗಳಿಂದ ಬರುವ ಫ್ಲೋರೈಡ್  ನೀರನ್ನು‌ ಇಲ್ಲಿಯ ಜನರು‌ ಬಳಸಬೇಕು. ಈಗಲೂ ಕೂಡ ದನಕರುಗಳಿಗೆ ಕುಡಿಯುವ ನೀರಿಗೆ ತತ್ವಾರ ಇದೆ.ರಾಜ್ಯದಲ್ಲೆಡೆ ಸುರಿದಂತೆ ಇಲ್ಲಿಯೂ ಕೂಡ ಮಳೆ ಭಾರೀ ಪ್ರಮಾಣದಲ್ಲಿ ಬಿದ್ದಿದೆ.ಆದ್ರೆ ಕೆರೆಗೆ ನೀರು ಮಾತ್ರ ಹರಿಯುತ್ತಿಲ್ಲ. ಕಾರಣ ಹುಡುಕುತ್ತಾ ಹೊರಟರೆ ಅದೇ ಹಳೇಯ ಕಾರಣ. ಅದೇ ಕೆರೆಗೆ ನೀರು ಹರಿಯಬೇಕಾದ ರಾಜಕಾಲುವೆಗಳ ಒತ್ತುವರಿ. 

ಕೆರೆ, ರಾಜಕಾಲುವೆ ಒತ್ತುವರಿ ಬಗ್ಗೆ ನ್ಯಾಯಾಂಗ ತನಿಖೆ: ಸಿಎಂ ಬೊಮ್ಮಾಯಿ

ನೂರಾರು ಎಕರೆ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ. ಪರಿಣಾಮ ನೀರು ಕೆರೆಗೆ ಒಳಹರಿಯಲು  ಸಾದ್ಯವೇ ಇಲ್ಲ. ಇನ್ನೂ ಮಳೆಗಾಲದ ನೀರಷ್ಟೆ ಅಲ್ಲ ಬೆಂಗಳೂರಿನ ಕೆಸಿ ವ್ಯಾಲಿ ನೀರು ಕೂಡ ಇಲ್ಲಿಗೆ ಬರಲಿಲ್ಲ. ಎತ್ತಿನ‌ಹೊಳೆ ನೀರು ಬರುತ್ತದೆ ಎಂಬ ಆಶ್ವಾಸನೆ ಕೇಳಿ ಇಲ್ಲಿಯ ಜನರಿಗೆ ಭ್ರಮ ನಿರಸನವಾಗಿದೆ. ಈಗಲಾದ್ರೂ ನಮ್ಮೂರ ಕೆರೆಗೆ ನೀರು ಬರುವಂತೆ ಮಾಡಿ ಒತ್ತು ವರಿ ಆಗಿರುವ ರಾಜಕಾಲುವೆ ಗಳನ್ನು ತೆರವು ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಲೇ ಇದ್ದಾರೆ. ಹಲವು ಭಾರಿ ಜನಪ್ರತಿನಿಧಿಗಳಿಗೆ ಎಷ್ಟೇ ಹೇಳಿದ್ರೂ ಕೂಡ ಪ್ರಯೋಜನ ಆಗಿಲ್ಲ ಎನ್ನುತಿದ್ದಾರೆ. ಇನ್ನೂ ಪಂಚಾಯಿತಿ ಅಧಿಕಾರಿಗಳೂ ಸಹ ಒತ್ತುವರಿಯನ್ನು ಒಪ್ಪಿಕೊಂಡು ತೆರವು ಮಾಡಿಸಬೇಕಿದೆ ಎಂದು ಸಮಜಾಯಿಷಿ ನೀಡುತಿದ್ದಾರೆ.

ಬೆಂಗಳೂರಲ್ಲಿ ಲೇಔಟ್‌ಗಾಗಿ 42 ಕೆರೆ ಸ್ವಾಹ: ಸದನದಲ್ಲಿ ಪಟ್ಟಿ ತೆರೆದಿಟ್ಟ ಸಚಿವ ಆರ್.ಅಶೋಕ್

ಹೌದು ರಾಜ್ಯದೆಲ್ಲೆಡೆ ಸಾಕು ಸಾಕು ಎನ್ನುವಷ್ಟು ನೀರು ಮಳೆರಾಯ ಕಲ್ಪಿಸಿದ್ದಾನೆ.ಆದ್ರೆ ಈ ಗ್ರಾಮದಲ್ಲಿ ಈ ರೀತಿಯ ವಿಭಿನ್ನ ಪರಿಸ್ಥಿತಿ ನಿಜಕ್ಕು ವಿಪರ್ಯಾವೇ ಸರಿ.ಈಗಲಾದ್ರೂ ಅಧಿಕಾರಿಗಳು,ಜನಪ್ರತಿನಿಧಿಗಳು ಇತ್ತ ಗಮನಹರಿಸಲೇ ಬೇಕಿದೆ.ಇಲ್ಲವಾದಲ್ಲಿ ಜನ ತಿರುಗಿಬೀಳುವ ದಿನಗಳು ದೂರವಿಲ್ಲ..

click me!