ಮೇದಿನಿ ಗ್ರಾಮಕ್ಕೆ ಹೆಣ್ಣು ಕೊಡೋಕೂ ಹೆದರ್ತಾರೆ !

By Kannadaprabha News  |  First Published Jan 3, 2020, 12:36 PM IST

ನೋಡಲು ಅತ್ಯಂತ ಸುಂದರವಾದ ಸದಾ ಹಸಿರಿನಿಂದ ಕಂಗೊಳಿಸುವ ಉತ್ತರ ಕನ್ನಡ ಜಿಲ್ಲೆಯ ಈ ಊರಿಗೆ ಹೆಣ್ಣು ಕೊಡಲು ಮೇರೆ ಊರವರು ಹೆದರ್ತಾರೆ. ಕಾರಣ ಈ ಊರಿನಲ್ಲಿರುವ ಸಮಸ್ಯೆ.


ವರದಿ : ಸದಾನಂದ ದೇಶಭಂಡಾರಿ

ಕುಮಟಾ [ಜ.03]:  ಸುತ್ತಲೂ ವನಸಿರಿಯ ರಮಣೀಯ ವಾತಾವರಣ. ಅಲ್ಲಲ್ಲಿ ಹಳ್ಳ ಕೊಳ್ಳಗಳು, ಆಳರಸರು ಆಳಿದ ಅಳಿದುಳಿದ ಕೋಟೆ ಇವು ಬಿಟ್ಟರೆ ‘ಮೇದಿನಿ’ ಕುಗ್ರಾಮದಲ್ಲಿ ಬೇರೇನೂ ಸೌಲಭ್ಯಗಳಿಲ್ಲ.

Tap to resize

Latest Videos

undefined

ಕುಮಟಾ ಹಾಗೂ ಸಿದ್ದಾಪುರ ತಾಲೂಕುಗಳ ಗಡಿಭಾಗದಲ್ಲಿರುವ ಮೇದನಿ ಗ್ರಾಮ ಸೊಪ್ಪಿನಹೊಸಳ್ಳಿ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಕುಮಟಾದಿಂದ ಸಿದ್ದಾಪುರ (ಪಾವಗಡ ಹೆದ್ದಾರಿ) ಮಾರ್ಗವಾಗಿ 38 ಕಿಲೋ ಮೀಟರ್‌ ದೂರ ಸಾಗಿ ರಾಜ್ಯ ಹೆದ್ದಾರಿಯಿಂದ 8 ಕಿಮೀ ಎತ್ತರಕ್ಕೆ ಕ್ರಮಿಸಿದರೆ ಮೇದಿನಿ ಕುಗ್ರಾಮ ತಲುಪಲು ಸಾಧ್ಯ.

ಹೆಣ್ಣು ಕೊಡೋಕು ಹೆದರುವ ಈ ಊರಿಗೆ ಹೋದ್ರು ಜಿಲ್ಲಾಧಿಕಾರಿ...

ಸುತ್ತ ವನಸಿರಿಯ ಮಧ್ಯೆ ಇರುವ 8 ಕಿಮೀ ಮೆಕ್ಕಲು ಮಣ್ಣಿನಿಂದ ಕೂಡಿದ ಕಾಲು ದಾರಿಯೇ ಗ್ರಾಮದ ರಾಜಬೀದಿ. ಮಳೆ ಬಂದರೆ ದೇವರೇ ಗತಿ. ಮಳೆಗಾಲದಲ್ಲಿ ಉಂಬಳ ಕಾಟ ಬೇರೆ. ವಿದ್ಯುತ್‌ ಬಂದಿದ್ದರೂ ಮಳೆಗಾಲದಲ್ಲಿ ಲೆಕ್ಕಕ್ಕುಂಟು ಆಟಕ್ಕಿಲ್ಲ. ಆಸ್ಪತ್ರೆ ಎಂಬುದು ಮರೀಚಿಕೆ. ಪ್ರಾಥಮಿಕ ಶಾಲೆ ಇದ್ದರೂ ಶಿಕ್ಷಣದ ಗುಣಮಟ್ಟಸರಿಯಿಲ್ಲ ಎಂಬ ಆರೋಪ ಜನರದ್ದು. ಈ ಎಲ್ಲ ಸಮಸ್ಯೆಗಳ ನಡುವೆಯೇ ಮೇದಿನಿ ಗ್ರಾಮಸ್ಥರು ಬಾಳುತ್ತಿದ್ದಾರೆ. ಮೇದಿನಿ ಕುಗ್ರಾಮದಲ್ಲಿ ಕರಿವಕ್ಕಲಿಗರು ಹಾಗೂ ಹಸ್ಲರ್‌ ಜನಾಂಗದ 100ಕ್ಕೂ ಅಧಿಕ ಕುಟುಂಬದ 400ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. 225 ಮತದಾರರಿದ್ದಾರೆ.

ನೆರೆ ಸಂತ್ರಸ್ತರ ಖಾತೆಗೆ 169 ಕೋಟಿ ರು. ಅನುದಾನ...

ಒಂದು ಕಾಲದಲ್ಲಿ ಮೇದಿನಿ ಸಂಸ್ಥಾನಿಗರು ಈ ಪ್ರದೇಶವನ್ನು ಆಳಿದ್ದರಂತೆ. ಇಂದಿಗೂ ಇಲ್ಲಿ ಮೇದನಿ ಆಳರಸರ ಕೋಟೆಯನ್ನು ಕಾಣಬಹುದಾಗಿದೆ. ಕೋಟೆಯಲ್ಲಿ ಗಂಡು ಬೀರಪ್ಪ ಹಾಗೂ ಮಹಾಸತಿ ದೇವಿಯ ವಿಗ್ರಹವಿದೆ. ಗ್ರಾಮಸ್ಥರ ಆರಾಧ್ಯದೈವ ಅನಾಥೇಶ್ವರ ಸ್ವಾಮಿಯ ದೇವಾಲಯವಿದ್ದು, ಅದು ಶಿಥಿಲಾವಸ್ಥೆಯಲ್ಲಿದೆ. ಮೇದಿನಿ ಗ್ರಾಮಸ್ಥರ ಮೂಲ ಉದ್ಯೋಗ ಕೃಷಿ. ಇಲ್ಲಿ ಸುವಾಸನೆಯುಕ್ತ ಸಣ್ಣಕ್ಕಿ ಬೆಳೆಯಲಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡುವವರು ಕಡಿಮೆಯಾಗುತ್ತಿದ್ದು ಸಣ್ಣಕ್ಕಿ ಉತ್ಪಾದನೆ ಕುಂಠಿತವಾಗಿದೆ.

ಆರೋಗ್ಯ ಕೆಟ್ಟರೆ ದೇವರೇ ಗತಿ:

ವೈದ್ಯಕೀಯ ಚಿಕಿತ್ಸೆ ಇಲ್ಲಿ ಗಗನಕುಸುಮ. ನಡುರಾತ್ರಿ ಜನತೆಯ ಆರೋಗ್ಯ ಕೆಟ್ಟರೇ ದೇವರೇ ಗತಿ. ಕಾನನದ ಕಾರ್ಗತ್ತಲಲ್ಲೇ ಚೂಳಿ ಅಥವಾ ಕಂಬಳಿಯ ಜೋಕಾಲಿಯಲ್ಲಿ ಅನಾರೋಗ್ಯಪೀಡಿತರನ್ನು ಹೊತ್ತೊಯ್ಯಬೇಕಾದ ಅನಿವಾರ್ಯವಿದೆ. ಹೀಗಾಗಿ ಗರ್ಭಿಣಿಯರು ಪ್ರಸವಕ್ಕೆ ಪೂರ್ವ ಒಂದು ತಿಂಗಳ ಮೊದಲೇ ಕೆಳಗಿನ ಗ್ರಾಮಗಳಿಗೆ ಬಂದು ಉಳಿದುಕೊಳ್ಳುತ್ತಾರೆ. ಸಣ್ಣಪುಟ್ಟಕಾಯಿಲೆಗಳಿಗೆ ಗಿಡಮೂಲಿಕೆಗಳೆ ಆಧಾರ.

ಈರುಳ್ಳಿ ಬೆಲೆ ಎಷ್ಟಾದ್ರೂ ಇವ್ರಿಗೆ ಮಾತ್ರತಲೆ ಬಿಸಿ ಇಲ್ಲ.....

ವಪ್ಲೆ, ಹುಲಿದೇವರ ಕೊಡ್ಲು, ಶಾವಿಮನೆ ಮೇದಿನಿ ಗ್ರಾಮದ ಕೇರಿಗಳು. ಪ್ರಸ್ತುತ ಮೇದನಿ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದ್ದರೂ ಮಳೆಗಾಲದಲ್ಲಿ ವಿದ್ಯುತ್‌ ದೀಪ ಕಾಣುವುದೇ ಅಪರೂಪ. ಹೀಗಾಗಿ ವರ್ಷ ಪೂರ್ತಿ ಚಿಮಣಿ ಬುಡ್ಡಿ ಬಳಸುವುದು ಅನಿವಾರ್ಯ. ಕೆಲವು ಮನೆಗಳಿಗೆ ಸೋಲಾರ್‌ ದೀಪಗಳು ಇವೆಯಾದರೂ ಪೂರ್ಣಪ್ರಮಾಣದ ಉಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ.

ಪ್ರಾಥಮಿಕ ಶಿಕ್ಷಣ ಲಭ್ಯ:

ಗ್ರಾಮದಲ್ಲೊಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಇಲ್ಲಿ 8 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನಾಲ್ಕೂ ವಿದ್ಯಾರ್ಥಿಗಳು ಹಾಗೂ ನಾಲ್ಕು ವಿದ್ಯಾರ್ಥಿನಿಯರು. ಇಬ್ಬರು ಶಿಕ್ಷಕರಿದ್ದಾರೆ. ಅವರಲ್ಲಿ ಓರ್ವ ಶಿಕ್ಷಕರು ಇತ್ತೀಚೆಗೆ ಡೆಪ್ಯೂಟೇಶನ್‌ ಅಡಿಯಲ್ಲಿ ಬೇರೆ ಶಾಲೆಗೆ ತೆರಳಿದ್ದಾರೆ. ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯೊಟ್ಟಿಗೆ ಅಂಗನವಾಡಿ ಕೇಂದ್ರವಿದೆ. ಅಲ್ಲಿ 10 ಪುಟಾಣಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಹೆಣ್ಣು ಕೊಡುತ್ತಿಲ್ಲ:

ಮೇದನಿ ಗ್ರಾಮದ ಸ್ಥಿತಿ ಕಂಡು ಗ್ರಾಮದಲ್ಲಿರುವ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ಹೀಗಾಗಿ ಕರಿವಕ್ಕಲು ಜಾತಿಗೆ ಸೇರಿದ ಶಿರಸಿಯ ಮೂಡ್ನಳ್ಳಿ, ಸಿದ್ದಾಪುರದ ಹೊಕ್ಕಳ್ಳಿ ಕಡೆಯಿಂದ ಕನ್ಯೆಯರನ್ನು ಆಯ್ಕೆ ಮಾಡಬೇಕಾಗಿದೆ. ಆಧುಕತೆಯ ಪರಿಸರದಲ್ಲಿ ಬೆಳೆದ ಕನ್ಯೆಯರು ಕುಗ್ರಾಮ ಮೇದಿನಿಯ ಹುಡುಗರನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಒಟ್ಟೂ50 ಯುವಕರು ಮದುವೆಯಾಗದೇ ಸಂಕಟದಲ್ಲಿದ್ದಾರೆನ್ನಲಾಗುತ್ತಿದೆ.

ಹಳ್ಳ ಹಿಡಿದ ಶೌಚಾಲಯಗಳು

2012-13ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಐದು ಸಾವಿರ, ಸ್ಥಳೀಯ ಗ್ರಾಪಂ ಅನುದಾನದಿಂದ ಐದು ಸಾವಿರ ಹಾಗೂ ಶಾಸಕರ ಅನುದಾನದಿಂದ . 10 ಸಾವಿರ ಹಣ ನೀಡುವ ಭರವಸೆಯೊಂದಿಗೆ ಮೇದಿನಿ ಗ್ರಾಮದಲ್ಲಿ ಒಟ್ಟೂ44 ಶೌಚಾಲಯಗಳ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಿ ಕಾಮಗಾರಿ ಪ್ರಾರಂಭಿಸಲಾಗಿತ್ತು. 2012-13ರಲ್ಲಿ ಶೌಚಾಲಯ ಕಾಮಗಾರಿ ಪ್ರಾರಂಭವಾಗಿದ್ದರೂ, ಈ ವರೆಗೆ ಪೂರ್ಣವಾಗಿಲ್ಲ. ಶೌಚಾಲಯದ ಮೂರು ಬದಿಗೆ ಸಿಮೆಂಟ್‌ ಶೀಟ್‌ ಅಳವಡಿಸಲಾಗಿದೆ. ಕೆಳಗೆ ಬೇಸಿನ್‌ ಅಳವಡಿಸಿ ಹಾಗೆ ತೆರೆದುಕೊಂಡು ಅನಾಥ ಸ್ಥಿತಿಯಲ್ಲಿದೆ. ಮಲ ಸಂಗ್ರಹಕ್ಕೆ ಗುಂಡಿ ತೊಡಲಾಗಿದ್ದರೂ, ಅದೂ ಅಪೂರ್ಣವಾಗಿದೆ.

ಈ ನಡುವೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಲಾ ಐದು ಸಾವಿರ ರು. ನಂತೆ ಒಟ್ಟೂ. 3 ಲಕ್ಷ ಬಿಡುಗಡೆಯಾಗಿದ್ದರೂ, ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ. ಸ್ಥಳೀಯ ಗ್ರಾಪಂ ಅನುದಾನದಿಂದ ಐದು ಸಾವಿರ ಹಣ ಗುತ್ತಿಗೆದಾರರಿಗೆ ಬಿಡುಗಡೆಯಾಗಿದ್ದು, ಶಾಸಕರ ಅನುದಾನ ಸಿಗದಿರುವುದರಿಂದ ಯೋಜನೆ ಅರ್ಧಕ್ಕೆ ನಿಂತಿದೆ ಎನ್ನಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಾಲೂಕಾಡಳಿತ ಮೇದನಿಯಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಿದ್ದು, ಸದ್ಯದಲ್ಲಿ ಗ್ರಾಮಸ್ಥರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದು ತಹಸೀಲ್ದಾರ ಮೇಘರಾಜ ನಾಯ್ಕ ತಿಳಿಸಿದ್ದಾರೆ.

ರಸ್ತೆ ಅಭಿವೃದ್ಧಿ : ಮೇದಿನಿ ಗ್ರಾಮದಲ್ಲಿ ಈಗಾಗಲೇ ಮೊದಲಿದ್ದ ಕಚ್ಚಾ ರಸ್ತೆಯನ್ನು ತಕ್ಕಮಟ್ಟಿಗೆ ಅಭಿವೃದ್ಧಿಪಡಿಸಲಾಗಿದೆ. ಆದರೆ ಇದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸುವುದಾದಲ್ಲಿ ಸ್ಥಳೀಯ ಗ್ರಾಪಂನವರು ಸರ್ಕಾರದಿಂದ ಅನುಮತಿ ಪಡೆದು ರಸ್ತೆ ಸರಿಪಡಿಸಲು ಅರಣ್ಯ ಇಲಾಖೆ ಆಕ್ಷೇಪವಿಲ್ಲ. ದಟ್ಟಅರಣ್ಯವಾಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ನಿರ್ಬಂಧ ವಿಧಿಸಲಾಗಿದೆಯೇ ವಿನಃ ಗ್ರಾಮಸ್ಥರಿಗೆ ತೊಂದರೆ ನೀಡುವುದಿಲ್ಲ.

ಪ್ರವೀಣ ನಾಯಕ ಆರ್‌ಎಫ್‌ಒ, ಕುಮಟಾ

ಶಿಕ್ಷಣಕ್ಕೆ ಆದ್ಯತೆ ನೀಡಿ : ಮೇದಿನಿ ಗ್ರಾಮದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಉತ್ತಮ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ಒದಗಿಸಿ. ಮೂಲ ಸೌಲಭ್ಯ ವಂಚಿತ ನಮ್ಮೂರಿಗೆ ಅವಶ್ಯಕ ಸೌಲಭ್ಯ ಒದಗಿಸಿ. ನಮಗೆ ರಾಜಕಾರಣಿಗಳ ಹಾಗೂ ಸಂಘ, ಸಂಸ್ಥೆಗಳ ಪೊಳ್ಳು ಭರವಸೆಗಳನ್ನು ಕೇಳಿ ಸಾಕಾಗಿದೆ. ಪ್ರಚಾರಕ್ಕಾಗಿ ನಮ್ಮೂರಿಗೆ ಬಂದು ಹೋಗುವುದು ಬೇಡ. ಕನಿಷ್ಠ ಸೌಲಭ್ಯ ಒದಗಿಸಲು ಮುಂದಾಗಿ. ಜ. 4ರಂದು ಜಿಲ್ಲಾಧಿಕಾರಿ ನಮ್ಮ ಕುಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡುತ್ತಿರುವುದು ಸಂತೋಷದ ಸಂಗತಿ. ಜಿಲ್ಲಾಧಿಕಾರಿ ಅವರಿಂದಾದರೂ ನಮ್ಮ ಕಷ್ಟಕಾರ್ಪಣ್ಯಗಳು ದೂರವಾಗಬಹುದೆಂಬ ಆಶಾವಾದ ಹೊಂದಿದ್ದೇವೆ.

ನಾಗರಾಜ ತಿಮ್ಮಗೌಡ ಮೇದಿನಿ

click me!