
ಕಲಬುರಗಿ(ಡಿ.13): ಆರೋಗ್ಯ ಇಲಾಖೆ ಮೆದುಳು ಜ್ವರ ತಡೆಗಟ್ಟಲು ಕಳೆದ ವಾರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಜೆಇ ಲಸಿಕೆ ಪಡೆದ ಬಾಲಕನೋರ್ವ ಸಾವನ್ನಪ್ಪಿದ್ದಾನೆಂಬ ಆರೋಪಗಳು ಕೇಳಿ ಬಂದಿವೆ. ಕಲಬುರಗಿ ಹೊರವಲಯ ಹೀರಾಪುರ ನಗರದ ಬಸವೇಶ್ವರ ಶಾಲೆಯ 4ನೇ ತರಗತಿಯ ಆಕಾಶ ಎಂಬುವವನು ಮೃತ ವಿದ್ಯಾರ್ಥಿಯಾಗಿದ್ದಾನೆ.
ಕಳೆದ ಸೋಮವಾರ ಡಿ.5 ರಂದು ಈ ವಿದ್ಯಾರ್ಥಿ ಇಂಜೆಕ್ಷನ್ ಪಡೆದಿದ್ದ. ಈ ಇಂಜಕ್ಷನ್ ಪಡೆದ ದಿನವೇ ಬಾಲಕನಿಕೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಹೆಚ್ಚಾದ ಹಿನ್ನೆಲೆ ಆಕಾಶ್‌ಗೆ ನಗರದ ಸಂಗಮೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಡಿ.9 ರಂದು ಆಸ್ಪತ್ರೆಯಲ್ಲಿ ಬಾಲಕನ ಸಾವು ಸಂಭವಿಸಿದೆ.
Tumakur : ಜೆಇ ಲಸಿಕೆ ಪಡೆದ ಮಕ್ಕಳು ಅಸ್ವಸ್ಥ :
ಆಕಾಶ್‌ಗೆ ಆರೋಗ್ಯವಂತನಾಗಿದ್ದ. ಇಂಜಕ್ಷನ್ ಅಡ್ಡ ಪರಿಣಾಮದಿಂದ ಸಾವನ್ನಪ್ಪಿದ್ದಾನೆ ಎಂದು ಬಡಾವಣೆಯ ನಿವಾಸಿಗಳು, ಆತನ ಪೋಷಕರ ಆರೋಪ ಮಾಡಿದ್ದಾರೆ. ಆಕಾಶ್‌ಗೆ ತಂದೆ ಇಲ್ಲ, ತಾಯಿಯೊಬ್ಬರೇ ಇದ್ದಾರೆ. ಆಕಾಶನ ಸಾವಿಗೆ ಇಂಜೆಕ್ಷನ್ ಅಡ್ಡ ಪರಿಣಾಮವೇ ಕಾರಣವೆಂದು ಆರೋಪಿಸಿ ರಿಪಬ್ಲಿಕ್ ಯೂತ್ ಫೆಡರೇಷನ್ ಸಂಘಟನೆಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಇಂಜಕ್ಷನ್ ನೀಡಿದ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು.
ಇಂಜಕ್ಷನ್ ನೀಡಿದ ವೈದ್ಯರ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದರು. ಈ ಬಗ್ಗೆ ಸೂಕ್ತ ತನಿಖೆ ಮಾಡಿ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಹೋರಾಟಗಾರರು ಆಗ್ರಹಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಸಂತೋಷ ಮೇಲ್ಮನಿ, ಹನುಮಂತ ಇಟಗಿ ಸಂಚಾಲಕತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅನೇಕರು ಪಾಲ್ಗೊಂಡಿದ್ದರು.