ಹಕ್ಕುಪತ್ರವನ್ನು ನೀಡಲು ಒಂದು ವಾರದೊಳಗೆ ಕ್ರಮ ಕೈಗೊಳ್ಳಿ
ಶಿರಸಿಯಲ್ಲಿ ಅರಣ್ಯ ಅತಿಕ್ರಮಣದಾರರ ಹೋರಾಟ
ಶಿರಸಿಯ ಪ್ರಮುಖ ರಸ್ತೆಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ
ವರದಿ- ಭರತ್‌ರಾಜ್ ಕಲ್ಲಡ್ಕ ಏಷ್ಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಜ.07): ಜಿಪಿಎಸ್ ಸರ್ವೆ ಆಧಾರದ ಮೇಲೆ ಜನರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹಿಸಿ ಶಿರಸಿಯಲ್ಲಿ ಅರಣ್ಯ ಅತಿಕ್ರಮಣ ಹೋರಾಟಗಾರರಿಂದ ಭಾರೀ ಪ್ರತಿಭಟನೆ ನಡೆಯಿತು. ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಜನವರಿ 15ರಂದು ಸಿಎಂ ಶಿರಸಿಗೆ ಭೇಟಿ ನೀಡಿದ ವೇಳೆ ಅವರ ಮುಂದೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ..
undefined
ಹೌದು, ಅರಣ್ಯ ಅತಿಕ್ರಮಣದಾರರು ತಮ್ಮ ಹಕ್ಕಿಗಾಗಿ ಮತ್ತೆ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಲ್ಲದೇ, ಅರಣ್ಯ ಇಲಾಖೆಯ ವಿರುದ್ಧ ಕಿಡಿ ಕಾರಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದ ಅರಣ್ಯ ಅತಿಕ್ರಮಣದಾರರು, ಫೈವ್ ರೋಡ್ ಸರ್ಕಲ್ ಮತ್ತು ಹಳೇ ಬಸ್ ನಿಲ್ದಾಣದ ಬಳಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಅಂಚೆ ವೃತ್ತದಲ್ಲಿ ರಸ್ತೆ ಬಂದ್ ನಡೆಸಿ ಪ್ರತಿಭಟನೆ ನಡೆಸಿದರು. ನಗರದ ಅಂಗಡಿ ಮುಂಗಟ್ಟು ಬಂದ್ ಮಾಡಿ ಜನರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ನೂರಾರು ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಅರಣ್ಯ ಇಲಾಖೆ ಕಾನೂನು ನಿಯಮ ಉಲ್ಲಂಘಿಸಿ ಜಿಪಿಎಸ್ ಸರ್ವೆ ಆಧಾರದ ಮೇಲೆ ಜನರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆಸುತ್ತಿದೆ. ಈ ಜಿಪಿಎಸ್ ಮ್ಯಾಪಿಂಗ್ ಸ್ಪಷ್ಟವಾಗಿಲ್ಲ.
Uttarakannada: ದೇವಸ್ಥಾನಕ್ಕೆ ಕೃಷಿ ಜಾಗ ದಾನ ಮಾಡಲು ಒತ್ತಾಯ, ನಿರಾಕರಿಸಿದ ರೈತ ಕುಟುಂಬಕ್ಕೆ ಬಹಿಷ್ಕಾರ!
ಕಪ್ಪು ಬಾವುಟ ಪ್ರದರ್ಶನ: ಇದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಅತಿಕ್ರಮಣದಾರರ ಸಂಬಂಧಿಸಿ ಸುಪ್ರೀಂಕೋರ್ಟ್ ಗೆ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಜಿಲ್ಲಾಧಿಕಾರಿ ಮುಂದಿನ ಒಂದು ವಾರದೊಳಗೆ ಅರಣ್ಯ ಅತಿಕ್ರಮಣದಾರರ ಜತೆ ಸಭೆ ನಡೆಸಿ ನ್ಯಾಯಾಲಯದ ತೀರ್ಪು ಬರೋವರೆಗೆ ಅರಣ್ಯ ಇಲಾಖೆ ಯಾರನ್ನೂ ಒಕ್ಕಲೆಬ್ಬಿಸದಂತೆ ಆದೇಶ ನೀಡಬೇಕು. ಅಲ್ಲದೇ, ಜಿಲ್ಲೆಯ ಅತಿಕ್ರಮಣದಾರರ ನೈಜ ಸಂಖ್ಯೆಯ ಮಾಹಿತಿ ಪಡೆದು ಸುಪ್ರೀಂಕೋರ್ಟ್‌ಗೆ ಅಫಿಡಾವಿಟ್ ಸಲ್ಲಿಸಬೇಕು. ಒಂದು ವೇಳೆ ಸಭೆ ನಡೆಸಿ ಬೇಡಿಕೆ ಪೂರೈಸದಿದ್ದಲ್ಲಿ ಜನವರಿ 15ರಂದು ಮುಖ್ಯಮಂತ್ರಿಗಳು ಶಿರಸಿಗೆ ಆಗಮನದ ವೇಳೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ: ಅಂದಹಾಗೆ, ಶಿರಸಿ ನಗರದಾದ್ಯಂತ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು, ಬಳಿಕ ನೇರವಾಗಿ ತಹಶೀಲ್ದಾರರ ಕಚೇರಿಯತ್ತ ಸಾಗಿ ಮುತ್ತಿಗೆ ಹಾಕಿದರು. ಗೇಟ್ ತೆರೆದು ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಂತೇ ಲಾಠಿ ಹಾಗೂ ಹಗ್ಗವನ್ನು ಹಿಡಿದ ಪೊಲೀಸರು ಅವರನ್ನು ತಡೆದರು. ಇದರಿಂದ ಕೆಲವು ಹೊತ್ತುಗಳ ಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ ಹಾಗೂ ವಾಗ್ವಾದ ನಡೆಯಿತು. ಬಳಿಕ ತಹಶೀಲ್ದಾರ್ ಕಚೇರಿಯಲ್ಲಿ ಮುಂಭಾಗ ಕುಳಿತು ಶಿರಸಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.
Uttara Kannada: ದೇವರೇ ಏನಿದು ಶಿಕ್ಷೆ?: ದೇವಸ್ಥಾನಕ್ಕೆ ಜಮೀನು ನೀಡದ ಕುಟುಂಬಕ್ಕೆ ಬಹಿಷ್ಕಾರ
ಒಂದು ವಾರದಲ್ಲಿ ಸೂಕ್ತ ನಿರ್ಣಯ: ಅಲ್ಲದೇ, ಘೋಷಣೆ ಹಾಕಿ ಪಟ್ಟು ಹಿಡಿದರು. ಕೊನೆಗೂ ಪ್ರತಿಭಟನಾಕಾರರ ಬೇಡಿಕೆಯನ್ನು ಆಲಿಸಲು ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ, ಜನರನ್ನು ಒಕ್ಕಲೆಬ್ಬಿಸದಂತೆ ಈಗಾಗಲೇ ಅರಣ್ಯ ಇಲಾಖೆಯ ಉನ್ನತಾಧಿಕಾರಿಗೆ ಸೂಚನೆ ನೀಡಿದ್ದಲ್ಲದೇ, ಒಂದು ವಾರದಲ್ಲಿ ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆಶ್ವಾಸನೆ ನೀಡಿದ್ದಾರೆ. ಜಿಲ್ಲಾಧಿಕಾರಿಯ ಆಶ್ವಾಸನೆಯ ಬಳಿಕ ಪ್ರತಿಭಟನಾಕಾರರಲ್ಲಿ ಕೊಂಚ ಸಮಾಧಾನ ಮೂಡಿದ್ದು, ಕಳೆದ 32 ವರ್ಷಗಳಿಂದ ಜಿಲ್ಲೆಯಲ್ಲಿ ಉಂಟಾಗಿರುವ ಅತಿಕ್ರಮಣದಾರರ ಸಮಸ್ಯೆ ಶೀಘ್ರದಲ್ಲಿ ಪರಿಹಾರ ಕಾಣಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
80 ಸಾವಿರ ಅರಣ್ಯ ಅತಿಕ್ರಮಣದಾರರು: ಒಟ್ಟಿನಲ್ಲಿ ಹೋರಾಟಗಾರರ ಪ್ರಕಾರ ಜಿಲ್ಲೆಯಲ್ಲಿ ಸುಮಾರು 80 ಸಾವಿರ ಅರಣ್ಯ ಅತಿಕ್ರಮಣದಾರರಿದ್ದು, ಜಿಲ್ಲಾಡಳಿತ ಮಾತ್ರ 2ರಿಂದ 3 ಸಾವಿರ ಅರಣ್ಯ ಅತಿಕ್ರಮಣದಾರರನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ. ಈ ಕಾರಣದಿಂದ ಸುಪ್ರೀಂಕೋರ್ಟ್‌ಗೆ ತಿದ್ದುಪಡಿ ಅರ್ಜಿ ಸಲ್ಲಿಸಲು ಒತ್ತಾಯಿಸುತ್ತಿದೆ. ಆದರೆ, ಜಿಲ್ಲಾಡಳಿತ ಹೋರಾಟಗಾರರ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುತ್ತಾ? ಅಥವಾ ಹೋರಾಟಗಾರರಿಗೆ ಸಿಎಂ ಎದುರು ಕಪ್ಪು ಬಾವುಟ ಹಿಡಿಯುವ ಅನಿವಾರ್ಯತೆ ಎದುರಾಗುತ್ತಾ ಎಂದು ಕಾದು ನೋಡಬೇಕಷ್ಟೇ.