
ಬಂಗಾರಪೇಟೆ (ಅ.07): ಹೈಕಮಾಂಡ್ ನಿರ್ಧಾರ ಮಾಡುವ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುವುದು ಕಾರ್ಯಕರ್ತರ ಹಾಗೂ ಮುಖಂಡರ ಜವಾಬ್ದಾರಿಯಾಗಿದ್ದು, ಈ ಬಾರಿ ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ ಎಂದು ಮಾಜಿ ಶಾಸಕ ಬಿಪಿ ವೆಂಕಟಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ (BJP) ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಂಗಾರಪೇಟೆ ಕ್ಷೇತ್ರಕ್ಕೆ ಬೂದಿಕೋಟೆ ಗ್ರಾಮವು ದೇವಮೂಲೆಯಲ್ಲಿದ್ದು ಪಕ್ಷದಿಂದ ಯಾವುದೇ ಕಾರ್ಯಕ್ರಮವನ್ನು ಆರಂಭಿಸಬೇಕಾದರೆ ಮೊದಲು ಬೂದಿಕೋಟೆ ಗ್ರಾಮದ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ (Temple) ಪೂಜೆ ಮಾಡಿ ಅಧಿಕೃತವಾಗಿ ಕಾರ್ಯಕ್ರಮವನ್ನು ಆರಂಭಿಸುವುದು ಪದ್ಧತಿಯಾಗಿದೆ. 2004ರಲ್ಲಿ ಬೂದಿಕೋಟೆಯಿಂದಲೇ ನಾನು ಪ್ರಚಾರವನ್ನು ಕೈಗೊಂಡು ಶಾಸಕನಾಗಿ (MLA) ಆಯ್ಕೆಯಾಗಿದ್ದೇನೆ. ಅದರಂತೆ ಈ ಬಾರಿಯೂ ಸಹ ವಿಜಯದಶಮಿ ಹಬ್ಬದ ನಂತರದ ದಿನ ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕವನ್ನು ಸಲ್ಲಿಸಿ ತಾಲೂಕಿನಲ್ಲಿ ಪಕ್ಷದ ಸಂಘಟನೆಗೆ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿಯೂ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಂತೆ ಕಾರ್ಯಕರ್ತರಿಗೆ ತಿಳಿಸಲಾಗುತ್ತಿದೆ. 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದ ವರಿಷ್ಟರು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರು. ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಬೇಕಾಗಿದೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ (BJP) ಅಲೆ ಉತ್ತಮ ರೀತಿಯಲ್ಲಿ ಇದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯು ಜಯಶೀಲರಾಗುವುದು ಖಚಿತ. ರಾಜ್ಯದಲ್ಲಿಯೂ ಸಹ ಬಿಜೆಪಿಯು ಬಹುಮತವನ್ನು ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬಂದು ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನಡೆಸುತ್ತದೆ ಎಂದರು.
ಪಕ್ಷದ ತಾಲೂಕು ಅಧ್ಯಕ್ಷ ನಾಗೇಶ್, ಎಸ್.ಸಿ ಮೋರ್ಚಾ ಅಧ್ಯಕ್ಷ ಅಮರೇಶ್, ಜಿಲ್ಲಾ ಉಪಾಧ್ಯಕ್ಷ ಹೊಸರಾಯಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ, ಚೌಡಪ್ಪ, ವಿಎಸ್‌ಎಸ್‌ಎನ್ ಅಧ್ಯಕ್ಷ ಸೀತಾರಾಮಪ್ಪ, ಉಪಾಧ್ಯಕ್ಷ ಮುತ್ತು, ಗ್ರಾ.ಪಂ ಮಾಜಿ ಸದಸ್ಯ ಚಂದ್ರಶೇಖರ್, ಸದಸ್ಯ ಸುರೇಶ್ ಕುಮಾರ್, ಮುಖಂಡರಾದ ಬಿ.ರಮೇಶ್, ಎಸ್.ಎಂ ಗೋಪಾಲ್, ನಾರಾಯಣಶೆಟ್ಟಿಮುಂತಾದವರು ಇದ್ದರು.
ಮತ್ತೆ ನನ್ನ ಗೆಲ್ಲಿಸಿ ಮಾದರಿ ತಾಲೂಕು ಮಾಡುವೆ :
ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಅಲ್ಪಾವಧಿಯಲ್ಲೇಯೇ ಶಕ್ತಿ ಮೀರಿ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. 2023ರ ವಿಧಾನಸಭಾ ಚುನಾವಣೆಯಲ್ಲೂ ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡಿದರೆ ರಾಜ್ಯದಲ್ಲಿಯೇ ಶಿರಾ ತಾಲೂಕನ್ನು ಮಾದರಿ ತಾಲೂಕನ್ನಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ತಾಲೂಕಿನ ಕರಿದಾಸರಹಳ್ಳಿ ಚಿರತಹಳ್ಳಿ ಗೇಟ್ ಬಳಿ ಅಮರಾಪುರ ಗಡಿಯಿಂದ ಬರಗೂರು ಕ್ರಾಸ್‌ವರೆಗೆ ಸುಮಾರು 23 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಶಾಸಕನಾದಾಗಿನಿಂದಲೂ ವಿಧಾನ ಸೌಧದಲ್ಲಿ ನಡೆಯುವ ಸಭೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲೂ ಸಹ ಕ್ಷೇತ್ರದಲ್ಲಿ ಸುತ್ತಿ ಎಲ್ಲಾ ಗ್ರಾಮಗಳಲ್ಲೂ ಜನಗಳನ್ನು ಸಂಪರ್ಕ ಮಾಡಿದ್ದೇನೆ. ನನಗೆ ಮತ್ತೊಮ್ಮೆ ಅವಕಾಶ ಕೊಡಿ ಈ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುತ್ತೇನೆ ಎಂದರು.
ಪರಿಹಾರ ಪೋರ್ಟಲ್ ಪ್ರಾರಂಭ: ಶಿರಾ (Shira) ತಾಲೂಕಿನಲ್ಲಿ ದೇವರ ಕೃಪೆಯಿಂದ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿದಿವೆ. ಇದರ ಜೊತೆಗೆ ಕೆಲವು ರೈತರ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಅನುಭವಿಸಿದ ರೈತರ (Farmers) ಖಾತೆಗಳಿಗೆ ಸರ್ಕಾರದಿಂದ ನೇರವಾಗಿ ಪರಿಹಾರದ ಹಣ ಪಾವತಿಯಾಗಲಿದೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಳೆ ನಷ್ಟದ ಬಗ್ಗೆ ದಾಖಲು ಮಾಡಲು ಬೆಳೆ ನಷ್ಟಪೋರ್ಟಲ್ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಪರಿಹಾರ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಮತ್ತೊಮ್ಮೆ ಅವಕಾಶ ಕೊಡಲಿದ್ದಾರೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಿ ಎಂದರು.
ಕುಂಚಿಟಿಗ ಸಮುದಾಯ ಶೀಘ್ರ ಓಬಿಸಿ (OBC) ಸೇರ್ಪಡೆ: ಕುಂಚಿಟಿಗ ಸಮುದಾಯವನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವ ವಿಚಾರವಾಗಿ ನಾನು ಎಲ್ಲಾ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಸಂಪುಟದಲ್ಲಿ ಕಡತವು ಅನುಮೋದನೆಗೊಳಿಸಿ ಗೆಜೆಟ್‌ನಲ್ಲಿ ಪ್ರಕಟಗೊಂಡ ನಂತರ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಮಾರುತೀಶ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಂಗಸ್ವಾಮಿ, ನಗರ ಅಧ್ಯಕ್ಷ ವಿಜಯರಾಜ್, ಜಿಪಂ ಮಾಜಿ ಸದಸ್ಯ ಪ್ರಕಾಶ್ ಗೌಡ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.