ಬಿಜೆಪಿ ನನಗೆ ಮೋಸ ಮಾಡಿಲ್ಲ: ಶಾಸಕ ರಾಜೂಗೌಡ

By Kannadaprabha News  |  First Published Aug 8, 2021, 12:21 PM IST

* ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಬೇಜಾರಾಗಿಲ್ಲ, ನಾನು ಅತೃಪ್ತ ಶಾಸಕನೂ ಅಲ್ಲ
* ನಾನಿನ್ನೂ ಯುವಕ, ಜೋಶ್ನಲ್ಲಿ ಮಾತಾಡಿದ್ದೇನೆಯಷ್ಟೇ: ರಾಜೂಗೌಡ ಪ್ರತಿಕ್ರಿಯೆ
* ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹೈಕಮಾಂಡ್ ವಿರುದ್ಧ ಕಿಡಿ ಕಾರಿದ್ದ ರಾಜೂಗೌಡ ‘ನರಂ‘ ?
 


ಯಾದಗಿರಿ(ಆ.08): ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆಯಷ್ಟೇ ಹೈಕಮಾಂಡ್ ವಿರುದ್ಧ ತೀವ್ರ ಸಿಡಿಮಿಡಿಗೊಂಡು ‘ಬಂಡಾಯ’ದ ಬಾವುಟ ಹಾರಿಸುತ್ತಾರೇನೋ ಎನ್ನುವಂತಿದ್ದ ಸುರಪುರ ಶಾಸಕ ನರಸಿಂಹ ನಾಯಕ್ (ರಾಜೂಗೌಡ) ಅವರ ಮನವೊಲೈಸುವಲ್ಲಿ ಕಮಲ ಪಾಳೆಯದ ಮುಖಂಡರು ಯಶಸ್ವಿಯಾದಂತಿದೆ.

ಶನಿವಾರ ಯಾದಗಿರಿಗೆ ಸಚಿವ ನಾಗೇಶ್ ಅವರ ಭೇಟಿ ಸಂದರ್ಭದಲ್ಲಿ, ತಮ್ಮನ್ನು ಮಾತನಾಡಿಸಿದ ಮಾಧ್ಯಮಗಳೆದುರು ಪ್ರತಿಕ್ರಿಯಿಸಿದ ರಾಜೂಗೌಡರ ಮಾತಿನ ಶೈಲಿ ಕೊಂಚ ಸಾಫ್ಟ್ ಆದಂತಿತ್ತು, ಬಂಡಾಯ ಬೆಂಡಾದಂತಿತ್ತು. ಅದೃಷ್ಟದ ಕೊರತೆಯಿದೆ, ನಾನು ಅತೃಪ್ತ ಶಾಸಕ ಅಲ್ಲ, ತೃಪ್ತನಾಗಿದ್ದೇನೆ. ನಾನಿನ್ನೂ ಯುವಕ, ಏನೋ ಜೋಶ್ನಲ್ಲಿ ಮಾತನಾಡಿರಬಹುದು ಎಂದು ರಾಜೂಗೌಡ ತಮ್ಮ ಹಿಂದಿನ ಮಾತುಗಳ ಕುರಿತು ಪ್ರತಿಕ್ರಿಯಿಸಿದರು.

Tap to resize

Latest Videos

undefined

* ಬಿಜೆಪಿಯಿಂದ ನನಗೆ ಮೋಸ ಆಗಿಲ್ಲ : ರಾಜೂಗೌಡ

ನನಗೆ ಮಂತ್ರಿ ಸ್ಥಾನ ಸಿಕ್ಕಿರಲಿಕ್ಕಿಲ್ಲ, ಆದರೆ ನಾನು ಹೇಳಿದ ಮೂವರಿಗೆ ಸ್ಥಾನ ಸಿಕ್ಕಿದೆ. ರಾಜೂಗೌಡರಿಗೆ ಮಂತ್ರಿ ಸ್ಥಾನ ಸಿಗದೆ ಇರೋದ್ರಿಂದ ಬೇರೆ ಪಕ್ಷಕ್ಕೆ ಹೋಗ್ತಾರೆ ಅನ್ನೋದು ಸುಳ್ಳು, ನಾನ್ಯಾಕೆ ಬೇರೆ ಪಕ್ಷಕ್ಕೆ ಹೋಗಲಿ, ನನ್ನ ತಲೆಯಲ್ಲಿ ಅದೇನೂ ಇಲ್ಲ. ಸುಖಾಸುಮ್ಮನೆ ಯಾಕೆ ಈ ಬಗ್ಗೆ ವಂದತಿ ಎಂದು ಪಕ್ಷಾಂತರ ವದಂತಿಯನ್ನು ತಳ್ಳಿ ಹಾಕಿದ ಅವರು, ಬಿಜೆಪಿ ಪಕ್ಷದಿಂದ ನನಗೆ ಮೋಸ ಆಗಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿರ್ತವೆ ಅಷ್ಟೇ ಎಂದರು.

ಭಿಕ್ಷೆ ಬೇಡಿ, ಬಕೆಟ್‌ ಹಿಡಿದು ಮಂತ್ರಿಯಾಗಲ್ಲ: ಹೈಕಮಾಂಡ್ ವಿರುದ್ಧ ರಾಜೂಗೌಡ ಗರಂ..!

ಬಿ. ಸಿ. ನಾಗೇಶ್ ಅವರು ಅಪ್ಲಿಕೇಷನ್ ಹಾಕಿಲ್ಲ, ಆದರೂ ಅವರಿಗೆ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ. ನನಗೂ ಆ ರೀತಿಯಾಗಿ ಸಚಿವ ಸ್ಥಾನ ಬಂದರೂ ಬರಲಿ ಅಂತ ಆ ರೀತಿಯಾಗಿ ಹೇಳಿದ್ದೇನೆ. ಯಾದಗಿರಿ, ರಾಯಚೂರು, ಕಲಬುರಗಿ ಭಾಗಕ್ಕೆ ಸಚಿವ ಸ್ಥಾನ ನೀಡಿ ಅಂತ ಕೇಳಿದ್ದೆಯೇ ಹೊರತು, ನನಗೆ ಕೊಡಬೇಕು ಅಂತ ಕೇಳಿಲ್ಲ. ನಮ್ಮ ಭಾಗಕ್ಕೆ ಹೆಚ್ಚು ಒತ್ತು ಕೊಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರಲ್ಲಿ ಮನವಿ ಮಾಡಿಕೊಂಡಿದ್ದೆ ಎಂದರು.
ರಾಜಭವನದ ಒಳಗಡೆ ಹೋಗುವವರೆಗೂ ನನ್ನ ಹೆಸರಿತ್ತು, ಅದೃಷ್ಟದ ಕೊರತೆ ಇತ್ತೇನೋ, ಅದಕ್ಕೆ ನನಗೆ ಸಚಿವ ಸ್ಥಾನ ಮಿಸ್ ಆಗಿದೆ ಎಂದು ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡಂತಿದ್ದ ರಾಜೂಗೌಡ ಮಾತುಗಳು, ಒಳ್ಳೆಯ ರೀತಿಯಿಂದ ಕೆಲಸ ಮಾಡೋಣ, ಮುಂದೆ ಸ್ಥಾನ ಸಿಕ್ಕರೂ ಸಿಗಬಹುದು. ಈ ಹಿಂದೆ ಯಡಿಯೂರಪ್ಪ ಸಾಹೇಬರು ನೀನು ಮಂತ್ರಿ ಆಗ್ತೀಯಾ, ಫ್ಯಾಮಿಲಿ ಕರೆಯಿಸು ಅಂದಿದ್ದರು. ಆಗಲೂ ಸಚಿವ ಸ್ಥಾನ ಸಿಗಲಿಲ್ಲ, ಇವಾಗಲೂ ಕೂಡ ಸಚಿವ ಸ್ಥಾನ ಸಿಗಲಿಲ್ಲ. ಇದಕ್ಕೆ ನಾನೇನೂ ಕುಗ್ಗುವುದಿಲ್ಲ, ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ರಾಜೂಗೌಡರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುವಂತಹ ಕೆಲಸಗಳನ್ನು ನಾನು ಮಾಡಿ ತೊರಿಸುತ್ತೇನೆ ಎಂದರು.

* ‘ಬೇರೆ ಪಕ್ಷಕ್ಕೆ ಯಾಕೆ ನಾನ್ಯಾಕೆ ಹೋಗಲಿ‘

ನಾನು ಅತೃಪ್ತ ಶಾಸಕ ಅಲ್ಲ, ತೃಪ್ತ ಶಾಸಕ. ರಮೇಶ್ ಜಾರಕಿಹೊಳಿ ಮನೆಗೆ ಪ್ರತಿದಿನ ಭೇಟಿ ಕೊಡುತ್ತೇನೆ. ಹಾಗಂತ ಬಂಡಾಯ ಎಂತಲ್ಲ. ಬೇಕಿದ್ದರೆ ಸಿಸಿಟಿವಿ ಪರಿಶೀಲನೆ ನಡೆಸಲಿ. ಸಚಿವ ಸ್ಥಾನ ಸಿಕ್ಕಿಲ್ಲ ಅಂತ ನಾನೇನು ಬೇಜಾರು ಮಾಡಿಕೊಂಡಿಲ್ಲ, ನಾನು ಖುಷಿಯಾಗಿದ್ದೇನೆ. ಕ್ಷೇತ್ರದ ಜನರ ಕೆಲಸ ಮಾಡೋದು ನನ್ನ ಜವಾಬ್ದಾರಿ ಅದನ್ನು ನಾನು ನಿಭಾಯಿಸುತ್ತೇನೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ನಾನು ಆಸೆ ಇಟ್ಟುಕೊಂಡು ಕೂತಿಲ್ಲ, ೨೯ ಜನರಲ್ಲಿ ನನಗೆ ಸ್ಥಾನ ಸಿಕ್ಕಿಲ್ಲ ಅಂದ ಮೇಲೆ ಇನ್ನುಳಿದ ನಾಲ್ಕು ಸಿಗುತ್ತೆ ಅನ್ನೋ ಆಸೆ ನನಗಿಲ್ಲ. ಇನ್ನು, ಸಿಎಂ ಬಸವರಾಜ ಬೊಮ್ಮಾಯಿಯವರು ನನಗೆ ಏಕವಚನದಲ್ಲಿ ಮಾತನಾಡುವಷ್ಟು ಆಪ್ತರಿದ್ದಾರೆ. ಅವರ- ನಮ್ಮ ಸಂಬಂಧ ತುಂಬಾ ಹಳೆಯದು. ಇಷ್ಟೆಲ್ಲಾ ಇರಬೇಕಾದರೆ ನಾನು ಬೇರೆ ಪಕ್ಷಕ್ಕೆ ಯಾಕೆ ಹೋಗಲಿ, ಬಿಜೆಪಿಯಲ್ಲಿ ನಾನು ಫ್ರಂಟ್ಲೈನ್ನಲ್ಲಿದ್ದೇನೆ. ಬಿಜೆಪಿ ಪಕ್ಷ ನನಗೇನು ಮೋಸ ಮಾಡಿಲ್ಲ ಎಂದರು.

ಮೊನ್ನೆ ನಾನು ಸಿಎಂ ಬೊಮ್ಮಾಯಿ ವಿರುದ್ಧ ಅಷ್ಟೊಂದು ಸಿಟ್ಟಲ್ಲಿ ಮಾತಾಡಿದರೂ ಕೂಡ ಅವರೇ ನನ್ನನ್ನು ಕರೆದು ಮಾತನಾಡಿಸಿದ್ದಾರೆ. ಅಷ್ಟು ಆಪ್ತರು ನನಗೆ, ನನಗೆ ಸಚಿವ ಸ್ಥಾನ ಯಾಕೆ ತಪ್ಪಿದೆ ಅನ್ನೋದು ನನಗೆ ಗೊತ್ತಿದೆ ಅದನ್ನು ಬಹಿರಂಗ ಪಡಿಸಲು ಆಗಲ್ಲ. ರೆಬಲ್ ಆಗಿ ಬ್ಯ್ಲಾಕ್ಮೇಲ್ ಮಾಡಿ ಅಽಕಾರ ಪಡೆಯೋದನ್ನ ನನ್ನ ತಾಯಿ ನನಗೆ ಕಲಿಸಿಲ್ಲ, ಒಳ್ಳೆಯ ರೀತಿಯಿಂದ ಹೋಗು ಅಂತ ಹೇಳಿದ್ದಾರೆ. ನನಗೆ ಕಷ್ಟ ಬಂದಾಗ ನನ್ನ ಕೈಯಲ್ಲಿರುವ ತಾಯಿ ಹಚ್ಚೆ ನೋಡಿ ಎಲ್ಲವನ್ನು ಮರೆತು ಬಿಡುತ್ತೇನೆ ಎಂದ ರಾಜುಗೌಡರು, ಯಾವುದೆ ಕಾರಣಕ್ಕೂ ರೆಬಲ್ ಆಗಲ್ಲ. ನನ್ನ ಸ್ನೇಹಿತ ಸಿ. ಸಿ. ಪಾಟೀಲ್ಗೆ ತಾಳ್ಮೆಯಿಂದ ಇದ್ದದ್ದಕ್ಕೆ ಒಳ್ಳೆಯ ಖಾತೆ ಕೊಟ್ಟಿದ್ದಾರೆ. ತಾಳ್ಮೆಯಿಂದ ಇದ್ದೋರಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದರು.

ಇನ್ನು, ತಮ್ಮ ಬಳಿ ಯಾವುದೇ ಸೀಡಿ ಇಲ್ಲ ಎಂಬ ರಾಜೂಗೌಡರ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ೪೨ ವರ್ಷದ ಯುವಕ ಎಷ್ಟೇ ತಾಳ್ಮೆಯಿಂದ ಇದ್ದರೂ ಕೂಡ, ಕೆಲವೊಮ್ಮೆ ದುಡುಕಿ ಮಾತಡಬೇಕಾಗುತ್ತದೆ. ಆವೇಶದಲ್ಲಿ ದುಡುಕಿ ಮಾತನಾಡದಿದ್ದರೇ ನಾನು ಇಷ್ಟೊತ್ತಿಗೆ ಮಠ ಸೇರಬೇಕಾಗುತಿತ್ತು ಎಂದರು.

ಮಾಜಿ ಸಚಿವ ಶಂಕರ್‌ ವಿರುದ್ಧ ಕಿಡಿಕಾರಿದ್ದ ರೈತನ ವಿರುದ್ಧ ಕೇಸ್‌..!

* ಏನಾಗಿತ್ತು ?

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದ ಸದಸ್ಯರ ಆಕಾಂಕ್ಷಿಗಳ ಪಟ್ಟಿಯಲ್ಲಿ ಹೆಸರಿದ್ದೂ, ಕೊನೆ ಕ್ಷಣದಲ್ಲಿ ಸ್ಥಾನ ಕೈತಪ್ಪಿಸಿಕೊಂಡರೆನ್ನಲಾದ ಸುರಪುರ ಶಾಸಕ ನರಸಿಂಹನಾಯಕ್ (ರಾಜೂಗೌಡ) ಬೆಂಬಲಿಗರು ಪ್ರತಿಭಟನೆಗಿಳಿದಿದ್ದರು. ಬಿಎಸ್ವೈ ಸರ್ಕಾರದಲ್ಲೂ ರಾಜೂಗೌಡರಿಗೆ ಸಚಿವ ಸ್ಥಾನ ನೀಡಲಿಲ್ಲ, ಈಗ ಬೊಮ್ಮಾಯಿ ಸಂಪುಟದಲ್ಲೂ ಇಲ್ಲ. ಪಟ್ಟಿಯಲ್ಲಿ ಹೆಸರಿದ್ದೂ ಕೊನೆಗಳಿಗೆಯಲ್ಲಿ ಬದಲಾಯಿಸಲಾಗಿದೆ ಎಂದು ರಾಜೂಗೌಡರ ಸಾವಿರಾರು ಬೆಂಬಲಿಗರು ಪ್ರಮಾಣ ವಚನ ದಿನದಂದು ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು.

ಆಗ, ಬೆಂಬಲಿಗರನ್ನು ಸಮಾಧಾನಪಡಿಸಲೆಂದು ಆಗಮಿಸಿದ ಶಾಸಕ ರಾಜೂಗೌಡ, ಯಾವುದೇ ಗಲಾಟೆ ಮಾಡದಂತೆ ಶಾಂತವಾಗಿ ಊರಿಗೆ ವಾಪಸ್ಸಾಗುವಂತೆ ಕೈಮುಗಿದು ಕೇಳಿದ್ದರು. ಅಭಿಮಾನಿಗಳೆದುರು ಮನದಾಳ ವ್ಯಕ್ತಪಡಿಸಿದ್ದ ರಾಜೂಗೌಡ, ಭಿಕ್ಷೆ ಬೇಡಿ- ಬಕೆಟ್ ಹಿಡಿದು ಮಂತ್ರಿಗಿರಿ ಕೇಳಲ್ಲ, ನನ್ನದು ಯಾವುದೇ ಭ್ರಷ್ಟಾಚಾರವೂ ಇಲ್ಲ-ಸೀಡಿಯೂ ಇಲ್ಲ ಎಂದು ಟಾಂಗ್ ನೀಡಿದಂತಿದ್ದ ರಾಜೂಗೌಡರ ಮಾತುಗಳು, ಬಿಜೆಪಿ ಹೈಕಮಾಂಡಿಗೇ ಸೆಡ್ಡು ಹೊಡೆದಂತಿದ್ದವು. ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ಕೊಡ್ತೀನೆಂದ್ರೂ ಬೇಡ ಎಂದು ಸಿಎಂ ಎದುರು ಹೇಳಿ ಬಂದಿದ್ದೀನಿ, ಎಂಜಲು ಬೇಡ ಎಂದು ಅಭಿಮಾನಿಗಳಲ್ಲಿ ನೋವು ತೋಡಿಕೊಂಡಿದ್ದರು.

ನಾನು ಬಿಜೆಪಿಯಲ್ಲಿದ್ದೇನೆ, ಬಿಜೆಪಿಯಲ್ಲೇ ಇರ್ತೇನೆ. ಮುಂದೆ ಒಳ್ಳೆಯ ಕಾಳ ಬರಲಿದೆ. ಬಿಜೆಪಿಯಲ್ಲಿ ನಾನು ಫ್ರಂಟ್ ಲೈನ್ನಲ್ಲಿರೋವಾಗ ಬೇರೆ ಪಕ್ಷ ಸೇರುವ ಮಾತೇ ಇಲ್ಲ ಎಂದು ಸುರಪುರ ಶಾಸಕ ನರಸಿಂಹ ನಾಯಕ್ (ರಾಜೂಗೌಡ) ತಿಳಿಸಿದ್ದಾರೆ. 
 

click me!