
ಹುಬ್ಬಳ್ಳಿ(ಆ.08): ಸಚಿವರಾದ ಬಳಿಕ ಮೊದಲ ಬಾರಿಗೆ ಶನಿವಾರ ತವರು ಜಿಲ್ಲೆಗೆ ಆಗಮಿಸಿದ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ದೊರೆಯಿತು.
ಸಚಿವರು ಆರ್‌ಎಸ್‌ಎಸ್, ಬಿಜೆಪಿ ಕಚೇರಿಗೂ ಭೇಟಿ ನೀಡಿದರಲ್ಲದೇ, ಪಕ್ಷದ ಹಿರಿಯರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ತವರು ಜಿಲ್ಲೆಯ ವಿವಿಧ ಮಠ-ಮಂದಿರಗಳಿಗೆ ಭೇಟಿ ನೀಡುವ ಮೂಲಕ ‘ಟೆಂಪಲ್ ರನ್’ ಕೂಡ ನಡೆಸಿದ್ದು ವಿಶೇಷ.
ಬೆಳಗ್ಗೆ 8.30ರ ವೇಳೆಗೆ ವಿಮಾನದ ಮೂಲಕ ನಗರಕ್ಕೆ ಬಂದಿಳಿದ ಸಚಿವರನ್ನು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಬೃಹತ್ ಹೂಮಾಲೆ ಹಾಕುವ ಮೂಲಕ ಸ್ವಾಗತಿಸಿದರೆ, ಮಹಿಳಾ ಕಾರ್ಯಕರ್ತೆಯರು ಆರತಿ ಬೆಳಗಿ ಶುಭ ಕೋರಿದರು. ವಿಮಾನ ನಿಲ್ದಾಣದ ಹೊರಗೆ ತೆರೆದ ವಾಹನದಲ್ಲಿ ಕೆಲ ದೂರದ ವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಸಚಿವರ ಮೇಲೆ ಹೂಮಳೆ ಸುರಿಸಿದ್ದು ವಿಶೇಷ.
ಈ ವೇಳೆ ಮಾತನಾಡಿದ ಸಚಿವರು, ‘ನಾನು ನಿಮ್ಮ ಸೇವಕ, ನಿಮ್ಮ ಆಶೀರ್ವಾದದಿಂದ ಸಚಿವನಾಗಿದ್ದೇನೆ. ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಶ್ರಮಿಸುತ್ತೇನೆ. ಕಳಸಾ- ಬಂಡೂರಿ ಹೋರಾಟದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಕಳಸಾ- ಬಂಡೂರಿ ಯೋಜನೆ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.
ಹೊಸ ಸಚಿವರಿಗೆ ಹಳೆ ಸಮಸ್ಯೆಗಳೇ ಸವಾಲು: ಮುನೇನಕೊಪ್ಪ ಮೇಲೆ ಅಪಾರ ನಿರೀಕ್ಷೆ
ಕೇಶವ ಕುಂಜ, ಬಿಜೆಪಿ ಕಚೇರಿ:
ಬಳಿಕ ಅಲ್ಲಿಂದ ನೇರವಾಗಿ ಆರ್‌ಎಸ್‌ಎಸ್ ಕಚೇರಿ ಕೇಶವ ಕುಂಜಕ್ಕೆ ತೆರಳಿದ ಸಚಿವರು, ಅಲ್ಲಿ ಮುಖಂಡರಾದ ಮಂಗೇಶ ಬೆಂಡೆ ಸೇರಿದಂತೆ ಹಲವರೊಂದಿಗೆ ಸಮಾಲೋಚನೆ ನಡೆಸಿದರು. ಮುಖಂಡರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವ ಸಲ್ಲಿಸಿದರು. ದೇಶಪಾಂಡೆ ನಗರದಲ್ಲಿನ ಬಿಜೆಪಿ ಕಚೇರಿಗೆ ತೆರಳಿದ ಅವರು, ಅಲ್ಲಿ ಕಾರ್ಯಕರ್ತರು, ಮುಖಂಡರೊಂದಿಗೆ ಕುಶಲೋಪರಿ ವಿಚಾರಿಸಿದರು. ಈ ವೇಳೆ ಮುಖಂಡರು, ಸಚಿವರನ್ನು ಗೌರವಿಸಿದರು. ಅಲ್ಲಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮನೆಗೆ ಭೇಟಿ ನೀಡಿದ್ದರು. ಶೆಟ್ಟರ್ ಅವರ ಕಾಲುಮುಟ್ಟಿನಮಸ್ಕರಿಸಿ ಆಶೀರ್ವಾದ ಪಡೆದ ಮುನೇನಕೊಪ್ಪ, ಕೆಲಕಾಲ ಅವರೊಂದಿಗೆ ಚರ್ಚೆ ನಡೆಸಿದರು. ಶೆಟ್ಟರ್ ಅವರು ಮುನೇನಕೊಪ್ಪ ಅವರಿಗೆ ಆತ್ಮೀಯವಾಗಿ ಬರಮಾಡಿಕೊಂಡು, ಶಾಲು ಹೊದಿಸಿ ಸನ್ಮಾನಿಸಿದರು.
ಟೆಂಪಲ್ ರನ್:
ಈ ನಡುವೆ ಸಚಿವರು, ಮಠ-ಮಂದಿರಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದರು. ಮೂರುಸಾವಿರ ಮಠ, ಶ್ರೀ ಸಿದ್ಧಾರೂಢ ಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು. ಎಲ್ಲೆಡೆ ನೂರಾರು ಸಂಖ್ಯೆಯಲ್ಲಿ ಜಮೆಯಾಗಿದ್ದ ಕಾರ್ಯಕರ್ತರ ಕೇಕೆ, ಶಿಳ್ಳೆ, ಜಯಕಾರಗಳು ಮುಗಿಲು ಮುಟ್ಟಿದ್ದವು. ಎಲ್ಲೆಡೆ ಮಹಿಳೆಯರಿಂದ ಆರತಿ ಬೆಳಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಬಳಿಕ ಧಾರವಾಡಕ್ಕೆ ತೆರಳಿ ಕೋವಿಡ್-19 ಹಾಗೂ ನೆರೆ ಪ್ರವಾಹಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಸಚಿವರೊಂದಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು.