* ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ
* ಮೀಸಲಾತಿ ಹೋರಾಟದಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ
* ಸ್ವಾಮೀಜಿಗೂ ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ
ಗದಗ(ಸೆ.27): ಮಾಜಿ ಸಿಎಂಗಳು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಷಯದಲ್ಲಿ ಭಾರೀ ಅನ್ಯಾಯ ಮಾಡಿದ್ದಾರೆ ಎಂದು ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಅಧ್ಯಕ್ಷ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಹೇಳಿದರು.
ಅವರು ಭಾನುವಾರ ಗದಗ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಗದಗ(Gadag) ಜಿಲ್ಲಾ ಪಂಚಮಸಾಲಿ ಸಮಾಜದ ವತಿಯಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹೆಸರು ಹೇಳದೇ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ(Jagadish Shettar), ಬಿ.ಎಸ್. ಯಡಿಯೂರಪ್ಪ(BS Yediyurappa) ಅವರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ ಮಾಡಿದರು. ಅದಕ್ಕೆ ಅವರು ಏನು ಶಿಕ್ಷೆ ಅನುಭವಿಸಬೇಕು ಅದನ್ನು ಅನುಭವಿಸಿದ್ದಾರೆ. ಇನ್ನು ಕೆಲವರು ಪೀಠ ವನ್ನು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳುವ, ಸಮಾಜಕ್ಕೆ ದ್ರೋಹ ಬಗೆಯುವ ಭ್ರಷ್ಟರಿದ್ದಾರೆ. ಪಂಚಮಸಾಲಿ ಸಮಾಜ ಪೀಠಕ್ಕೆ ಐದು ಎಕರೆ ಜಮೀನು ಕೊಡಿಸಿದ್ದೇನೆ ಎಂದು ಹೇಳಿಕೊಂಡು, ಸಮಾಜದ ಸ್ವಾಮೀಜಿ, ಪೀಠದ ಬಗ್ಗೆ ಕ್ಷುಲ್ಲಕವಾಗಿ ಮಾತುಗಳನ್ನಾಡುತ್ತಾ, ಸಮಾಜ ಒಡೆಯುವ ಕುತಂತ್ರ ಮಾಡುವ ವ್ಯಕ್ತಿಯೊಬ್ಬ ಶನಿವಾರ ರಾತ್ರಿ, ‘ಯತ್ನಾಳ್ ನಮ್ಮ ಅಣ್ಣ ಇದ್ದಂತೆ, ಸಮಾಜ ನಮ್ಮ ತಾಯಿ ಇದ್ದಂತೆ’ ಎಂಬ ಹೇಳಿಕೆ ನೀಡಿದ್ದಾರೆ. ಅದೇ ವ್ಯಕ್ತಿ ಜಮಖಂಡಿಯಲ್ಲಿ ನಡೆಯುವ ಸಮಾಜದ ಪ್ರತಿಜ್ಞಾ ಪಂಚಾಯತ್ ಸಮಾಜಕ್ಕೆ ಬರುವವರಿಗೆ ಕಲ್ಲು ಹೊಡೆಯಿರಿ ಎಂದು ತಮ್ಮ ಸಹೋದರ ಸಂಗಮೇಶ ನಿರಾಣಿ ಅವರ ಮೂಲಕ ಹೇಳಿಕೆ ಕೊಡಿಸುತ್ತಾರೆ. ಈ ನಾಟಕ ಮಾಡುವ ಕೆಲಸ ನಿಲ್ಲಿಸಬೇಕು ಎಂದು ಸಚಿವ ಮುರಗೇಶ್ ನಿರಾಣಿ ಅವರಿಗೆ ತಾಕೀತು ಮಾಡಿದರು.
ಯಡಿಯೂರಪ್ಪ ಕೊಟ್ಟ ಗಡುವು ಅಂತ್ಯ: ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ
ಸಮಾಜದ ಹೆಸರಲ್ಲಿ ಎಂಎಲ್‌ಎ ಟಿಕೆಟ್ ಕೇಳುತ್ತಾರೆ. ಸಮಾಜದ ಕೋಟಾದಡಿ ಸಚಿವ ಸ್ಥಾನ ಕೇಳುತ್ತಾರೆ. ಆದರೆ, ಪಂಚಮಸಾಲಿ 2 ಎ ಮೀಸಲಾತಿ ಹೋರಾಟ ಬೇಕಾಗಿಲ್ಲ. ಮೀಸಲಾತಿ ಹೋರಾಟದಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ. ನನ್ನಲ್ಲಿ ಸಾವಿರ ಕೋಟಿ ಆಸ್ತಿ ಕೊಳೆಯುತ್ತಿದೆ. ವಿಜಯಾನಂದ ಕಾಶಪ್ಪನವರಿಗೂ ಇದರ ಅಗತ್ಯವಿಲ್ಲ. ಸ್ವಾಮೀಜಿಗೂ ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ. ನಮ್ಮೆಲ್ಲರಿಗೂ ಸಮುದಾಯದ ಹಿತವೇ ಮುಖ್ಯ. ಸಮಾಜದ ಮಕ್ಕಳಿಗೆ 2ಎ ಮೀಸಲಾತಿ ನಮ್ಮ ಧ್ಯೇಯ ಎಂದರು.
ಪಂಚಮಸಾಲಿ(Panchamasali)ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಪಡೆಯುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಸರ್ಕಾರದಿಂದ ಘೋಷಣೆ ಮಾಡಿ, ನಮ್ಮ ಮಕ್ಕಳಿಗೆ ಮೀಸಲಾತಿ ಪತ್ರ ಕೈ ಸೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದರು. ಸದನದ ಹೊರಗೆ ಮತ್ತು ಒಳಗೆ ಸಮಾಜದ ಪರವಾಗಿ ಸಮಾಜದ ಏಕೈಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲವಾಗಿ ನಿಂತಿದ್ದಾರೆ ಎಂದರು.
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಮುಂತಾದವರು ಸಮಾಜ ಸಂಘಟನೆ, ಹೋರಾಟದ ಕುರಿತು ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಸಮಾಜದ ಜಿಲ್ಲಾ ರೈತ ಘಟಕದ ಅಧ್ಯಕ್ಷಕಾಶಪ್ಪ ವಿ. ಗದಗಿನ, ಪ್ರಮುಖರಾದ ಅನಿಲಕುಮಾರ ಪಾಟೀಲ, ಅಯ್ಯಪ್ಪ ಅಂಗಡಿ, ಮಲ್ಲಿಕಾರ್ಜುನ ಹೊರೇಕೊಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಶ್ರೀಗಳು ಮಾತನಾಡಿ, ಹೋರಾಟ, ಪಾದಯಾತ್ರೆ ಹೀಗೆ ವಿವಿಧ ಸಮಾಜ ಸಂಘಟನೆ ಕುರಿತು ಮಾತನಾಡಿದರು. ವಿವಿಧ ತಾಲೂ ಕುಗಳಿಂದ ಆಗಮಿಸಿದ್ದ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.