ಬಿಜೆಪಿಯವರಂತ ಕೊಳಕರು, ಜಾತಿವಾದಿಗಳು ಮತ್ಯಾರಿಲ್ಲ: ಸಿದ್ದು!

Kannadaprabha News   | Asianet News
Published : Nov 09, 2021, 01:09 AM IST
ಬಿಜೆಪಿಯವರಂತ ಕೊಳಕರು, ಜಾತಿವಾದಿಗಳು ಮತ್ಯಾರಿಲ್ಲ: ಸಿದ್ದು!

ಸಾರಾಂಶ

*ನನ್ನ ಹೇಳಿಕೆ ತಿರುಚಿದ್ದಾರೆ, ನನ್ನ ಫ್ಲೆಕ್ಸ್‌ ಸುಟ್ಟತಕ್ಷಣ ನಾನು ಸುಟ್ಟು ಹೋಗಲ್ಲ *ದುಬೈ ಶೇಖ್‌ ಉಡುಪಿನಲ್ಲಿ ಸಿದ್ದು ಮಿಂಚಿಂಗ್‌ : ಮತ್ತೆ ಹೌದೋ ಹುಲಿಯಾ ಹವಾ   


ಮಂಡ್ಯ(ನ. 9): ಬಿಜೆಪಿಯ (BJP) ಅವರಂತಹ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ. ಸಂವಿಧಾನ (Constitution) ಬದಲಾವಣೆ ಮಾಡ್ತೀವಿ ಎಂದು ಹೇಳಿದವರ ಪಕ್ಷಕ್ಕೆ ಸ್ವಾರ್ಥಕ್ಕಾಗಿ ಹಲವರು ಹೋಗುತ್ತಿದ್ದಾರೆ ಎಂದು ಹೇಳಿದ್ದೆ. ಆದರೆ ಬಿಜೆಪಿ ನಾಯಕರು ತಮಗೆ ಬೇಕಾದಂತೆ ಹೇಳಿಕೆ ತಿರುಚಿ, ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಸಮಾಧಾನ ವ್ಯಕ್ತಪಡಿಸಿದರು. ನಗರದ ಕನಕ ಭವನದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವರಸಿದ್ಧಿ ವಿನಾಯಕ ದೇವಸ್ಥಾನ ಲೋಕಾರ್ಪಣೆ ಹಾಗೂ ಅತಿಥಿಗೃಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

'ಬಿಜೆಪಿ ಬಗ್ಗೆ ದಲಿತರು ಎಚ್ಚರದಿಂದಿರಿ'

ಸಿದ್ದರಾಮಯ್ಯ ಜಾತಿ ರಾಜಕಾರಣ (Caste Politics) ಮಾಡುತ್ತಿದ್ದಾರೆ ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಜಾತಿ ಕೊಳಕರೇ ಜಾತಿ ಮಾಡುವವರು. ನಾನು ಮುಖ್ಯಮಂತ್ರಿ ಆಗುತ್ತೇನೆಂಬ ಹೊಟ್ಟೆಉರಿ ಅವರಿಗೆ. ಅದಕ್ಕಾಗಿ ನನ್ನದು ಜಾತಿ ಮನಸ್ಥಿತಿ, ಜಾತಿವಾದಿ ಎಂದೆಲ್ಲಾ ಕೆಟ್ಟದಾಗಿ ಹೇಳಿಕೊಂಡು ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ನೀವು ಅವರ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಸಿದರು.

ನಾನು ಸುಟ್ಟು ಹೋಗೋಲ್ಲ:

ನನ್ನ ಫ್ಲೆಕ್ಸ್‌ ಸುಟ್ಟಿದ ತಕ್ಷಣ ನಾನು ಸುಟ್ಟುಹೋಗಲ್ಲ. ನನ್ನ ಜನ, ನನ್ನ ಪ್ರೀತಿಸುವವರು ಸುಟ್ಟು ಬೂದಿಯಾಗೋಲ್ಲ. ಎಲ್ಲರೂ ಸಮಾನವಾಗಿರಬೇಕು. ಜಾತಿ ವ್ಯವಸ್ಥೆ ಸಮಾಜದಿಂದ ದೂರವಾಗಬೇಕು. ಎಲ್ಲಾ ಜಾತಿಯ ಬಡವರ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.

H Vishwanath ವಿರುದ್ಧ ಗರಂ : ಖಡಕ್ ಎಚ್ಚರಿಕೆ ನೀಡಿದ ಮುಖಂಡರು

ಜಾತಿಗೆ ಸೀಮಿತವಲ್ಲ:

ನಾನು ಕೊಟ್ಟಯೋಜನೆಗಳು ಒಂದು ಜಾತಿಗೆ ಸೀಮಿತವಾಗಿಲ್ಲ. ಅವಕಾಶದಿಂದ ವಂಚಿತರಾದವರ ಪರ ನಾನು ಕೆಲಸ ಮಾಡಿದ್ದೇನೆ. ಆದರೂ ಸಿದ್ದರಾಮಯ್ಯ ಜಾತಿ ಮಾಡುತ್ತಾನೆ ಅಂತಾರೆ. ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್‌, ಭಗೀರಥ, ಕೃಷ್ಣ, ಜೈನ ಹೀಗೆ ಎಲ್ಲಾ ಜಾತಿಯ ನಾಯಕರ ಜಯಂತಿ ಮಾಡಿದ್ದು ನಾನು. ಆದರೂ ಸಿದ್ದರಾಮಯ್ಯ ಜಾತಿವಾದಿ, ಜಾತಿ ಮನಸ್ಸಿನವನು ಎಂದು ಟೀಕಿಸುತ್ತಾರೆ. ಕೆಲವು ಜಾತಿ ಮಾಡುವ ಕೊಳಕು ಮನಸ್ಸಿನವರು ನನ್ನ ವಿರುದ್ಧ ಆರೋಪ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.

ಹೊಟ್ಟೆಕಿಚ್ಚಿನಿಂದ ಆರೋಪ:

ಅರಸು ನಂತರ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಾವಧಿ ಆಡಳಿತ ಮಾಡಿದ್ದು ನಾನು. ಹೀಗಾಗಿ ಅವರಿಗೆ ಹೊಟ್ಟೆಕಿಚ್ಚು. ಹೊಟ್ಟೆಕಿಚ್ಚಿಗಾಗಿ ಈ ರೀತಿ ಆರೋಪ ಮಾಡುತ್ತಾರೆ. ಕುರುಬರ ಸಂಘದ ಕಾರ್ಯಕ್ರಮದಲ್ಲಿ ಇತರೆ ಜಾತಿಯವರು ನನ್ನ ಜೊತೆ ಇದ್ದಾರೆ. ಒಕ್ಕಲಿಗರು ಬಹಳಷ್ಟುಜನ ನನ್ನ ಜೊತೆ ಬಂದಿದ್ದಾರೆ. ಆದರೂ ಕೆಲವರು ನನ್ನನ್ನು ಒಕ್ಕಲಿಗರ ವಿರೋಧಿ ಎನ್ನುವರು. ನನ್ನನ್ನು ಟೀಕಿಸುವುದೇ ಬಿಜೆಪಿಯವರ ಗುರಿಯಾಗಿದೆ ಎಂದು ಮೂದಲಿಸಿದರು.

ದುಬೈ ಶೇಖ್‌ ಉಡುಪಿನಲ್ಲಿ ಸಿದ್ದು ಮಿಂಚಿಂಗ್‌

ಸಿದ್ದರಾಮಯ್ಯ ಅವರು ದುಬೈ ಶೇಖ್‌ (Dubai Sheik) ಉಡುಪಿನಲ್ಲಿ ಮಿಂಚಿದ ಪ್ರಸಂಗ ನಗರದ ಕನಕಭವನದ ಅತಿಥಿಗೃಹದಲ್ಲಿ ನಡೆಯಿತು. ಮುಸ್ಲಿಂ ಸಮುದಾಯದ ಮುಖಂಡರು ಪ್ರೀತಿಯಿಂದ ನೀಡಿದ ಉಡುಗೊರೆಯನ್ನು ಸ್ವೀಕರಿಸಿದ ಸಿದ್ದರಾಮಯ್ಯ, ಖುಷಿಯಿಂದಲೇ ಅದನ್ನು ಧರಿಸಿದರು.

ಮತ್ತೆ ಹೌದೋ ಹುಲಿಯಾ ಹವಾ!

ಬೆಳಗಾವಿಯಲ್ಲಿ (Belagavi) ಕೇಳಿಬಂದಿದ್ದ ಹೌದೋ ಹುಲಿಯಾ...ಘೋಷಣೆ ಸೋಮವಾರ ಮಂಡ್ಯದಲ್ಲಿ ಮತ್ತೆ ಕೇಳಿ ಬಂದಿತು. ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರವೇ ಬರುವ ವಾತಾವರಣ ಸೃಷ್ಟಿಯಾಗುತ್ತಿದೆ. ಎಲ್ಲೆಡೆ ಕಾಂಗ್ರೆಸ್‌ (Congress) ಪರವಾದ ಗಾಳಿ ಬೀಸುತ್ತಿದೆ. ಮತ್ತೆ ನಮ್ಮದೇ ಸರ್ಕಾರ ಬರುತ್ತೋ? ಇಲ್ವೋ? ಎಂದು ಜನಸಮೂಹದ ಮುಂದೆ ಸಿದ್ದರಾಮಯ್ಯ ಪ್ರಶ್ನೆ ಇಟ್ಟಾಗ ಪ್ರೇಕ್ಷಕರ ವಲಯದಲ್ಲಿದ್ದ ಅಭಿಮಾನಿಯೊಬ್ಬ ಹೌದೋ ಹುಲಿಯಾ ಎಂದು ಹೇಳಿದಾಗ, ಕಿವಿಗಡಚಿಕ್ಕುವಂತೆ ಚಪ್ಪಾಳೆಗಳು ಪ್ರತಿಧ್ವನಿಸಿತು.

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!