ಗ್ರಾಮೀಣ ಜನತೆಗೆ ಉತ್ತಮ ಚಿಕಿತ್ಸೆಯನ್ನು ಉಚಿತವಾಗಿ ಇಲ್ಲವೇ ಕೈಗೆಟುಕುವ ದರದಲ್ಲಿ ನೀಡುವ ಉದ್ಧೇಶದಿಂದಲೇ ಗ್ರಾಮೀಣ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ (ಆ.22): ಗ್ರಾಮೀಣ ಜನತೆಗೆ ಉತ್ತಮ ಚಿಕಿತ್ಸೆಯನ್ನು ಉಚಿತವಾಗಿ ಇಲ್ಲವೇ ಕೈಗೆಟುಕುವ ದರದಲ್ಲಿ ನೀಡುವ ಉದ್ಧೇಶದಿಂದಲೇ ಗ್ರಾಮೀಣ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು. ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ಧೇಶಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಾದಲಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಆರೋಗ್ಯ ಕೇಂದ್ರದ ಕಟ್ಟಡ ಜಾಗ ಇಳಿಜಾರಿನಿಂದ ಕೂಡಿದ್ದು, ಇದಕ್ಕೆ ಹೆಚ್ಚುವರಿ ಅನುದಾನ ನೀಡಿಯಾದರೂ ರಸ್ತೆ ಮಟ್ಟಕ್ಕೆ ಕಟ್ಟಡ ನಿರ್ಮಾಣ ಮಾಡುವಂತೆ ಸಚಿವರು ಸೂಚಿಸಿದರು.
ಮತ್ತೊಂದು ಆರೋಗ್ಯ ಕೇಂದ್ರ ಸ್ಥಾಪನೆ: ಈಗಾಗಲೇ ಜಂಗಮಕೋಟೆ ಗ್ರಾಮದಲ್ಲಿ 30 ಹಾಸಿಗೆಯ ಮಾದರಿ ಆರೋಗ್ಯಕೇಂದ್ರವನ್ನು ಉದ್ಘಾಟಿಸಲಾಗಿದ್ದು, ಇದು ಜನರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಿದೆ. ಅದೇ ರೀತಿಯಲ್ಲಿ ಶಾಸಕರಾದ ವಿ. ಮುನಿಯಪ್ಪ ಮತ್ತು ಮಾಜಿ ಶಾಸಕ ರಾಜಣ್ಣ ಇಬ್ಬರೂ ಸೇರಿ ಗ್ರಾಮವನ್ನು ಗುರ್ತಿಸಿದಲ್ಲಿ ಮತ್ತೊಂದು ಆರೋಗ್ಯ ಕೇಂದ್ರ ಮಂಜೂರು ಮಾಡುವ ಭರವಸೆಯನ್ನು ಸಚಿವರು ನೀಡಿದರು. ತಾವು ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ, ಐಶ್ವರ್ಯಕ್ಕಿಂತ ಆರೋಗ್ಯವೇ ಮುಖ್ಯ ಎಂಬುದು ಬಹಿರಂಗ ಸತ್ಯ. ಆರೋಗ್ಯ ಇಲ್ಲದ ಯಾವುದೇ ಸ್ಥಾನ ಇದ್ದರೂ ಉಪಯೋಗವಿಲ್ಲ. ಆರೋಗ್ಯಯುಕ್ತ ದೇಹ, ಆರೋಗ್ಯ ಯುಕ್ತ ಮನಸ್ಸಿನಿಂದ ಮಾತ್ರ ಸಹಜ ಸಂತೋಷ ಲಭ್ಯವಾಗಲಿದ್ದು, ಇಂತಹ ಆರೋಗ್ಯ ಗ್ರಾಮೀಣರಿಗೆ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ಪರಿವರ್ತನೆಯ ಹರಿಕಾರ ದೇವರಾಜ ಅರಸು: ಸಚಿವ ಬೈರತಿ ಬಸವರಾಜ್
ಶಿಡ್ಲಘಟ್ಟಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಕ್ಷೇತ್ರದಲ್ಲಿ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಈ ರಸ್ತೆ ಮೂರು ತಾಲೂಕುಗಳ ವ್ಯಾಪ್ತಿಗೆ ಸೇರಿರುವ ಕಾರಣ ಅಭಿವೃದ್ಧಿಯಾಗಿಲ್ಲ ಎಂಬುದು ಅಕಾರಿಗಳಿಂದ ಬಂದ ಮಾಹಿತಿಯಾಗಿದೆ. ಹಾಗಾಗಿ ಕೂಡಲೇ ಮನವಿ ನೀಡಿದರೆ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಉತ್ತಮ ಗುಣಮಟ್ಟದ ರಸ್ತೆಯನ್ನು ಶೀಘ್ರದಲ್ಲಿಯೇ ಮಂಜೂರು ಮಾಡಿಸುವುದಾಗಿ ಅವರು ಭರವಸೆ ನೀಡಿದರು.
ರೈತರ ಹಿತಕ್ಕಾಗಿಯೇ ಚಿಮುಲ್ ಜಿಲ್ಲೆಗೆ ತರಲಾಗಿದೆ, ಡಿಸಿಸಿ ಬ್ಯಾಂಕ್ ತರಲು ತಾಂತ್ರಿಕ ತೊಂದರೆಗಳಿರುವ ಕಾರಣ ವಿಳಂಭವಾಗುತ್ತಿದ್ದು, ಆದಷ್ಟುಶೀಘ್ರದಲ್ಲಿ ಡಿಸಿಸಿ ಬ್ಯಾಂಕ್ ಜಿಲ್ಲೆಗೆ ತರುವ ಪ್ರಯತ್ನ ಮಾಡಲಾಗುವುದು. 1.8 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದು ಶಾಶ್ವತ ಆಸ್ಪತ್ರೆಯಾಗಬೇಕೆಂಬ ಕಾರಣಕ್ಕೆ ಇನ್ನೂ ಅನುದಾನ ನೀಡಿಯಾದರೂ ಗುಣಮಟ್ಟದ ಕಟ್ಟಡ ನಿರ್ಮಾಣವಾಗಬೇಕೆಂದು ಸಚಿವರು ತಾಕೀತು ಮಾಡಿದರು.
ವೈದ್ಯರಿಗೆ ಅಭಿನಂದನೆ: ಈ ಸಂದರ್ಭದಲ್ಲಿ ಶಾಸಕ ವಿ. ಮುನಿಯಪ್ಪ, ಮಾಜಿ ಶಾಸಕ ರಾಜಣ್ಣ, ವೆಂಕಟೇಶಗೌಡ, ಸುಬ್ರಮಣಿ, ಗ್ರಾಪಂ ಅಧ್ಯಕ್ಷ ಆನಂದ, ಅಶ್ವತ್ಥನಾರಾಯಣಸ್ವಾಮಿ, ವೆಂಕಟಾಚಲಪತಿ, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮೊಟ್ಟೆಎಸೆತ ಪ್ರಕರಣಕ್ಕೆ ತೆರೆ ಎಳೆಯಿರಿ: ಮೊಟ್ಟೆಎಸೆತ ಪ್ರಕರಣ ಸಂಬಂಧ ಕಾಂಗ್ರೆಸ್ ಪಕ್ಷದವರು ತೆರೆ ಎಳೆಯದಿದ್ದರೆ ಜನರೇ ತಿರುಗೇಟು ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಮಣ್ಣೆ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮಡಿಕೇರಿಯಲ್ಲಿ ವಿರೋಧಪಕ್ಷದ ನಾಯಕರ ಕಾರಿನ ಮೇಲೆ ನಡೆದ ಮೊಟ್ಟೆದಾಳಿಗೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಈ ಘಟನೆ ಖಂಡಿಸಿದ್ದೇವೆ.
ಗ್ರಾಮಗಳ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿ: ಎಚ್.ಕೆ.ಪಾಟೀಲ್
ಇದಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗಿದೆ, ಹೀಗಿರುವಾಗ ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದರು. ಪ್ರಕರಣವನ್ನ ಇಲ್ಲಿಗೇ ಬಿಟ್ಟರೆ ಅವರಿಗೇ ಒಳ್ಳೆಯದು. ಅದು ಬಿಟ್ಟು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ಮಾಡಿದರೆ ಅವರು ಮುಂದುವರಿಯಲಿ ಎಂದರು. ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ದುರುದ್ಧೇಶ ಇದ್ದರೆ ನಾವೇನು ಮಾಡಲಾಗುತ್ತೆ ಎಂದು ತಿರುಗೇಟು ನೀಡಿದರು.