ಬೆಂಗಳೂರು: ಮಗಳ ಬೆನ್ನುಬಿದ್ದಿದ್ದ ಯುವಕನ ಹತ್ಯೆಗೈದು ರಾಜಕಾಲುವೆಗೆ ಎಸೆದ ಅಪ್ಪ; ನಾಲ್ವರು ಅರೆಸ್ಟ್!

Published : May 04, 2026, 12:51 PM IST
Bengaluru Crime

ಸಾರಾಂಶ

ಪ್ರೀತಿಯ ಹೆಸರಲ್ಲಿ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು, ಆಕೆಯ ತಂದೆ ಮತ್ತು ಸಂಬಂಧಿಕರು ಸೇರಿ ಬೆಂಗಳೂರಿನಲ್ಲಿ ಕೊಲೆ ಮಾಡಿದ್ದಾರೆ. ಮದ್ಯ ಕುಡಿಸಿ, ಹಗ್ಗದಿಂದ ಕತ್ತು ಬಿಗಿದು ಕೊಂದ ನಂತರ ಶವವನ್ನು ರಾಜಕಾಲುವೆಗೆ ಎಸೆದಿದ್ದರು. ಯುವತಿ ತಂದೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಬೆಂಗಳೂರು (ಮೇ 04): ಪ್ರೀತಿ ಹೆಸರಿನಲ್ಲಿ ಅಪ್ರಾಪ್ತ ಮಗಳ ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಗಳ ತಂದೆ ಮತ್ತು ಸಂಬಂಧಿಕರು ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಾಗಲಕೋಟೆ ಮೂಲದ ರಮೇಶ್ ಎಂದು ಗುರುತಿಸಲಾಗಿದ್ದು, ಈ ಸಂಬಂಧ ಯಲಹಂಕ ಪೊಲೀಸರು ಯುವತಿಯ ತಂದೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ ಏನು?

ಕೊಲೆಯಾದ ರಮೇಶ್ ಮತ್ತು ಆರೋಪಿಗಳು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನವರು. ರಮೇಶ್ ಈ ಹಿಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿಂದ ವಾಪಸ್ ಬಂದಿದ್ದ ರಮೇಶ್, ತನ್ನ ಮನೆಯಲ್ಲೇ ಇದ್ದುಕೊಂಡು ಓದುತ್ತಿದ್ದ ಸಂಬಂಧಿಕರ ಹುಡುಗಿಯ ಮೇಲೆ ಕಣ್ಣು ಹಾಕಿದ್ದನು. ಆಕೆಯನ್ನು ಮದುವೆಯಾಗುವುದಾಗಿ ಹಠ ಹಿಡಿದಿದ್ದನು. ಆದರೆ, ಯುವತಿಗೆ ಇನ್ನೂ 18 ವರ್ಷ ತುಂಬಿರಲಿಲ್ಲ. ಈ ಕಾರಣದಿಂದ ಯುವತಿಯ ಪೋಷಕರು ಮದುವೆಗೆ ನಿರಾಕರಿಸಿದ್ದರು.

ಆದರೂ ಮಣಿಯದ ರಮೇಶ್, ಅಪ್ರಾಪ್ತ ಯುವತಿಗೆ ಮದುವೆಯಾಗುವಂತೆ ನಿರಂತರವಾಗಿ ಪೀಡಿಸುತ್ತಿದ್ದನು. ಇದರಿಂದ ಬೇಸತ್ತ ಪೋಷಕರು ಬಾಗಲಕೋಟೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ರಮೇಶ್ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಾಗಿ ಆತ ಜೈಲು ಪಾಲಾಗಿದ್ದನು.

ಜೈಲಿನಿಂದ ಬಂದರೂ ಬದಲಾಗದ ರಮೇಶ್

ಇತ್ತ ಮಗಳ ಸುರಕ್ಷತೆಯ ದೃಷ್ಟಿಯಿಂದ ತಂದೆ ಈರಯ್ಯ ಆಕೆಯನ್ನು ಓದಿಸಲು ಬೆಂಗಳೂರಿನ ಕಾಲೇಜಿಗೆ ಸೇರಿಸಿದ್ದರು. ಆದರೆ, ಜೈಲಿನಿಂದ ಬಿಡುಗಡೆಯಾಗಿ ಬಂದ ರಮೇಶ್ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದನು. ಯುವತಿಯನ್ನು ಹುಡುಕಿಕೊಂಡು ಬೆಂಗಳೂರಿಗೂ ಬಂದಿದ್ದ ಆತ, ಮತ್ತೆ ಮದುವೆಯಾಗುವಂತೆ ಪೀಡಿಸಲು ಶುರು ಮಾಡಿದ್ದನು. ಮಗಳ ಭವಿಷ್ಯ ಹಾಳಾಗುತ್ತಿದೆ ಎಂಬ ಸಿಟ್ಟಿನಿಂದ ಈರಯ್ಯ, ರಮೇಶನ ಕಥೆ ಮುಗಿಸಲು ಸಂಚು ರೂಪಿಸಿದ್ದರು.

ಊಟ ಹಾಕಿಸಿ, ಎಣ್ಣೆ ಕುಡಿಸಿ ಹತ್ಯೆ!

ತನ್ನ ಸಂಬಂಧಿಕರಾದ ಚಿನ್ನಯ್ಯ, ಚೇತನ್ ಮತ್ತು ಚರಣ್ ಎಂಬುವವರ ಜೊತೆಗೂಡಿ ಈರಯ್ಯ ಸ್ಕೆಚ್ ಹಾಕಿದ್ದರು. ಮೊದಲು ಬೆಂಗಳೂರಿನಲ್ಲಿದ್ದ ರಮೇಶನನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಿದ್ದರು. ಹಳೆಯ ದ್ವೇಷ ಮರೆತು ಒಂದಾಗೋಣ ಎಂದು ನಂಬಿಸಿ, ಆತನನ್ನು ಊಟಕ್ಕೆ ಕರೆದೊಯ್ದಿದ್ದರು. ಅಲ್ಲಿ ಎಲ್ಲರೂ ಸೇರಿ ಮದ್ಯಪಾನ ಮಾಡಿದ್ದಾರೆ. ರಮೇಶ್ ಪೂರ್ತಿ ಅಮಲೇರಿದಾಗ, ಆರೋಪಿಗಳು ಹಗ್ಗದಿಂದ ಆತನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ರಾಜಕಾಲುವೆಗೆ ಎಸೆದಿದ್ದರು ಶವ

ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಸಂಚು ರೂಪಿಸಿದ ಆರೋಪಿಗಳು, ರಮೇಶನ ಮೃತದೇಹವನ್ನು ಯಲಹಂಕದ ಅಲ್ಲಾಳಸಂದ್ರ ರಾಜಕಾಲುವೆಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ಅಪರಿಚಿತ ಶವ ಪತ್ತೆಯಾದಾಗ ಯಲಹಂಕ ಪೊಲೀಸರು 'ಅನುಮಾನಾಸ್ಪದ ಸಾವು' ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಪೊಲೀಸರ ಬಲೆಗೆ ಬಿದ್ದ ಆರೋಪಿಗಳು

ತನಿಖೆ ಕೈಗೆತ್ತಿಕೊಂಡ ಯಲಹಂಕ ಪೊಲೀಸರು ತಾಂತ್ರಿಕ ಸಾಕ್ಷ್ಯಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ. ಸದ್ಯ ಯುವತಿಯ ತಂದೆ ಈರಯ್ಯ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಗಳ ಗೌರವ ಉಳಿಸಲು ಹೋಗಿ ತಂದೆ ಈಗ ಜೈಲು ಪಾಲಾಗಿದ್ದಾರೆ.

PREV
Read more Articles on
click me!

Recommended Stories

BSY: ಬಿಎಸ್‌ವೈ ನಮಗೆ ತಂದೆಯಷ್ಟೇ ಅಲ್ಲ, ಆದರ್ಶ ಗುರು - ಸಿಎಂ ಆಗುವ ಕನಸು ಹೊತ್ತು ರಾಜಕಾರಣ ಮಾಡಿದವರಲ್ಲ
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು, ಉಮೇಶ್ ಮೇಟಿ 22 ಸಾವಿರ ಅಂತರದಿಂದ ಗೆಲುವು, ಮುಗಿಲು ಮುಟ್ಟಿದ ಸಂಭ್ರಮ