ಭ್ರೂಣಹ*ತ್ಯೆ ತಡೆಗೆ ತಂದ ಭಾಗ್ಯಲಕ್ಷ್ಮಿ ಹೆಣ್ಮಕ್ಕಳ ಭವಿಷ್ಯಕ್ಕೆ ಆಸರೆ: ಸಂಸದ ಬಿ.ವೈ.ರಾಘವೇಂದ್ರ

Published : May 03, 2026, 09:56 PM IST
BY Raghavendra

ಸಾರಾಂಶ

ಹೆಣ್ಣುಮಕ್ಕಳ ಭ್ರೂಣಹ*ತ್ಯೆ ತಡೆಗೆ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಾಮಾಜಿಕ ಕಳಕಳಿ, ಬದ್ಧತೆಗೆ ಸಾಕ್ಷಿಯಾಗಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ದಾವಣಗೆರೆ (ಮೇ.03): ರಾಜ್ಯದಲ್ಲಿ ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಯೋಜನೆ ತಲುಪಿಸಿದ ಕೀರ್ತಿ, ಹೆಣ್ಣುಮಕ್ಕಳ ಭ್ರೂಣಹ*ತ್ಯೆ ತಡೆಗೆ ಮತ್ತು ಆ ಹೆಣ್ಣುಮಕ್ಕಳ ಭವಿಷ್ಯಕ್ಕೆ ಭದ್ರತೆ ನೀಡಲು ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಾಮಾಜಿಕ ಕಳಕಳಿ, ಬದ್ಧತೆಗೆ ಸಾಕ್ಷಿಯಾಗಿವೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಹೆಣ್ಣುಭ್ರೂಣ ಹತ್ಯೆ ತಡೆಗಾಗಿ, ಹೆಣ್ಣುಮಕ್ಕಳ ಭದ್ರತೆಗಾಗಿ ತಂದ ಭಾಗ್ಯಲಕ್ಷ್ಮೀ ಯೋಜನೆಗೆ ಮೊದಲು ₹10 ಸಾವಿರ ಇದ್ದುದನ್ನು ನಂತರ ₹20 ಸಾವಿರಕ್ಕೆ ಹೆಚ್ಚಿಸಿ, ಆ ಮಗು 18 ವರ್ಷಕ್ಕೆ ಬರುವಷ್ಟರಲ್ಲಿ ₹1.20 ಲಕ್ಷ ಸಿಗುವಂತೆ ಮಾಡಿದ ಧೀಮಂತ ನಾಯಕ ಬಿಎಸ್‌ವೈ ಎಂದರು.

ರಾಜ್ಯ ರಾಜಕಾರಣದ ಧೃವತಾರೆ, ನೀರಾವರಿ ಕ್ರಾಂತಿಯ ಹರಿಕಾರ ಯಡಿಯೂರಪ್ಪನವರ 50 ವರ್ಷಗಳ ಸಾರ್ಥಕ ಜನಸೇವೆಯ ಗೌರವಾರ್ಥ ಮೇ 9ಕ್ಕೆ ಚಿತ್ರದುರ್ಗದ ಸಮಾವೇಶ ಒಂದು ಗುಂಪಿನ ಶಕ್ತಿ ಪ್ರದರ್ಶನವಲ್ಲ, ಇಡೀ ಸಂಘಟನೆಯ ಒಗ್ಗಟ್ಟಿನ ಸಂಕೇತವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿ, ಕೋಟ್ಯಂತರ ರು. ಅನುದಾನ ಒದಗಿಸಿದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎಂದು ಅವರು ತಿಳಿಸಿದರು.

ಕನಕ ಜಯಂತಿ, ವಾಲ್ಮೀಕಿ ಜಯಂತಿಯಂತಹ ಸಾಂಸ್ಕೃತಿಕ ಆಚರಣೆಗಳಿಗೆ ಒತ್ತು ನೀಡಿ, ಎಲ್ಲ ಸಮುದಾಯಗಳನ್ನೂ ಒಗ್ಗೂಡಿಸುವ ಕೆಲಸ ಯಡಿಯೂರಪ್ಪ ಮಾಡಿದರು. ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಹಾಲಿನ ಕೊಳಗಕ್ಕೆ ಎಲ್ಲರೂ ನೀರು ಸುರಿದ ನೀತಿ ಪಾಠದ ಕಥೆಯನ್ನು ಉದಾಹರಿಸಿದ ರಾಘವೇಂದ್ರ, ನಾನೊಬ್ಬ ನೀರು ಹಾಕಿದರೆ ಯಾರಿಗೂ ತಿಳಿಯದೆಂದು ಭಾವಿಸಿದರೆ ಕೊನೆಗೆ ಹಾಲಿನ ಬದಲು ನೀರೇ ಉಳಿಯುತ್ತದಷ್ಟೇ ಎಂದು ಮಾರ್ಮಿಕವಾಗಿ ಹೇಳಿದರು.

ದಾವಣಗೆರೆ ಜನ ಮೋಸ ಮಾಡದೇ ಪ್ರಾಮಾಣಿಕವಾಗಿ ಸಹಕರಿಸುತ್ತಾರೆಂಬ ನಂಬಿಕೆ ಇದೆ. ಪ್ರತಿಯೊಬ್ಬರೂ ತಮ್ಮೊಂದಿಗೆ 50ರಿಂದ 100 ಜನರನ್ನು ಕರೆದುಕೊಂಡು ಬಂದು ಸಭೆ ಯಶಸ್ವಿಗೊಳಿಸಬೇಕು. ಕಾರ್ಯಕ್ರಮಕ್ಕೆ ಬರುವಾಗ ಜನರಿಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಬದಲಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್‌ಗಳನ್ನು ಬಳಸಿಕೊಳ್ಳಲು ಆಲೋಚಿಸಿ. ಸುಮಾರು 200ಕ್ಕೂ ಹೆಚ್ಚು ಖಾಸಗಿ ಬಸ್‌, ಸ್ಥಳೀಯ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಿ. ಒಟ್ಟಾರೆ ದಾವಣಗೆರೆ, ಹರಿಹರ, ಶಿವಮೊಗ್ಗ ಮತ್ತು ಚನ್ನಗಿರಿ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭಿಮಾನೋತ್ಸವಕ್ಕೆ ಅಮಿತ್ ಶಾ

ಅಭಿಮಾನೋತ್ಸವಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವರು. ಅಂದು ಮಧ್ಯಾಹ್ನ 12ಕ್ಕೆ ಹೆಲಿಪ್ಯಾಡ್‌ನಲ್ಲಿ ಹೆಲಿಕಾಫ್ಟರ್‌ ಲ್ಯಾಂಡ್ ಆಗಲಿದ್ದು, 12.15ಕ್ಕೆ ವೇದಿಕೆಗೆ ಅಮಿತ್ ಶಾ ಬರಲಿದ್ದಾರೆ. ತರಳಬಾಳು ಶ್ರೀಗಳು, ಪಂಚ ಪೀಠದ ಶ್ರೀಗಳು, ಕನಕ ಪೀಠದ ಶ್ರೀಗಳು ಮತ್ತು ಮಾದಾರ ಚೆನ್ನಯ್ಯ ಶ್ರೀಗಳು, ವಾಲ್ಮೀಕಿ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಲಿದ್ದಾರೆ. ಬೆಳಗ್ಗೆ 9ರಿಂದ ತಿಂಡಿ ಮತ್ತು 12ರಿಂದ ಊಟದ ವ್ಯವಸ್ಥೆ ಸಂಜೆಯವರೆಗೂ ಇರುತ್ತದೆ. ಊಟದ ವ್ಯವಸ್ಥೆ ಅಚ್ಚುಕಟ್ಟಾಗಿರುತ್ತದೆ.

PREV
Read more Articles on
click me!

Recommended Stories

ನಿಷೇಧಾಜ್ಞೆ ಜಾರಿ ಇದ್ದರೂ ಕಾವೇರಿ ನದಿಯಲ್ಲಿ ನಿತ್ಯ ಮಿಂದೇಳುತ್ತಿರುವ ಸಾವಿರಾರು ಪ್ರವಾಸಿಗರು!
ಆಡಂಬರವಿಲ್ಲದೇ ಸಾಧಕರಿಗೆ ಗೌರವ: ಖಾಜಾಬಿ ಮತ್ತು ಭರಮಪ್ಪ ಕುಂಬಾರರಿಗೆ ಕಾಯಕಶೀಲ ಪ್ರಶಸ್ತಿ!