
ಬೆಂಗಳೂರು (ಜೂ.26): ಈ ವಾರಾಂತ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ಎರಡು ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯಲಿವೆ. ಜೂನ್ 27 ರಂದು ಕೆಂಗೇರಿ ಭಾಗದಲ್ಲಿ 'ಕೆಂಪೇಗೌಡ ಜಯಂತಿ' ಮತ್ತು ಜೂನ್ 28 ರಂದು ಕಂಠೀರವ ಕ್ರೀಡಾಂಗಣದಲ್ಲಿ 'ಮಾದಕ ವ್ಯಸನ ವಿರೋಧಿ ದಿನ' ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕೆಂಗೇರಿ, ಮೈಸೂರು ರಸ್ತೆ ಮತ್ತು ನಗರದ ಮಧ್ಯಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಎ.ಆರ್ ರಸ್ತೆಯ ಉದ್ಘಾಟನೆ ಮತ್ತು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಸುಮಾರು 40 ರಿಂದ 50 ಸಾವಿರ ಜನರು ಸೇರುವ ನಿರೀಕ್ಷೆಯಿದೆ.
ಸಂಚಾರ ನಿರ್ಬಂಧ: ಮೈಸೂರು ರಸ್ತೆಯ ಮಾರಿಗೋಲ್ಡ್ ಶಾಲೆಯ ಜಂಕ್ಷನ್‌ನಿಂದ ಭೀಮನಕುಪ್ಪೆ ಜಂಕ್ಷನ್ ವರೆಗೆ ಮತ್ತು ಕೊಮ್ಮಘಟ್ಟ ಜಂಕ್ಷನ್‌ನಿಂದ ಹೊಸಕೆರೆ ಗ್ರಾಮದ ಜಂಕ್ಷನ್ ವರೆಗೆ ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗ: ಸರಕು ವಾಹನಗಳು ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಮೂಲಕ ನೈಸ್ ರಸ್ತೆಯನ್ನು ಬಳಸಬಹುದು ಅಥವಾ ವಿಶ್ವೇಶ್ವರಯ್ಯ ಲೇಔಟ್ ರಿಂಗ್ ರಸ್ತೆ ಹಾಗೂ ಉಲ್ಲಾಳು ಮೂಲಕ ಮಾಗಡಿ ರಸ್ತೆಗೆ ಸಾಗಬಹುದು.
ನಿಧಾನಗತಿ ಸಂಚಾರ: ಮೈಸೂರು ರಸ್ತೆಯ ಮಧು ಜಂಕ್ಷನ್‌ನಿಂದ ಕುಂಬಳಗೋಡು ವರೆಗೆ ಮತ್ತು ಕೆಂಗೇರಿ ಉಪನಗರದ ರೈನ್‌ಬೋ ಬ್ರಿಡ್ಜ್ ಸುತ್ತಮುತ್ತ ಸಂಚಾರ ನಿಧಾನಗತಿಯಲ್ಲಿರಲಿದೆ.
ಹಲಸೂರು ಗೇಟ್ ಸಂಚಾರ ಠಾಣಾ ವ್ಯಾಪ್ತಿಯ ಕಂಠೀರವ ಕ್ರೀಡಾಂಗಣದಲ್ಲಿ 'ನಶಮುಕ್ತ ಭಾರತ' ಕಾರ್ಯಕ್ರಮ ನಡೆಯಲಿದ್ದು, ಗಣ್ಯ ವ್ಯಕ್ತಿಗಳು ಸೇರಿದಂತೆ 15,000ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ.
ಪಾರ್ಕಿಂಗ್ ನಿಷೇಧಿತ ರಸ್ತೆಗಳು: ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಕೆ.ಜಿ ರಸ್ತೆ, ವಿಠಲ ಮಲ್ಯ ರಸ್ತೆ ಮತ್ತು ಆರ್.ಆರ್.ಎಂ.ಆರ್ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳು: ಕಾರ್ಯಕ್ರಮಕ್ಕೆ ಬರುವವರು ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನ, ಫ್ರೀಡಂ ಪಾರ್ಕ್ ಎಂಎಲ್‌ಸಿಪಿ ಪಾರ್ಕಿಂಗ್ ಅಥವಾ ಬೆಂಗಳೂರು ಅರಮನೆ ಮೈದಾನದ ಗೇಟ್ ನಂ. 4 ರಲ್ಲಿ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ, ಪೊಲೀಸರೊಂದಿಗೆ ಸಹಕರಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕೋರಲಾಗಿದೆ.