ಬೆಂಗಳೂರಲ್ಲೂ ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆಗೈದ ಹೆಂಡತಿ! ಪತಿ ನಾಪತ್ತೆಯ ದೂರಿನ ಹಿಂದಿತ್ತು ಮಹಾನಾಟಕ!

Published : Jun 04, 2026, 08:58 PM IST
Bengaluru Husband Murder

ಸಾರಾಂಶ

ಬೆಂಗಳೂರಿನಲ್ಲಿ, ಹೆಂಡತಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪ್ರೀತಿಸಿ ಮದುವೆಯಾದ ಗಂಡನನ್ನ ಕೊಲೆ ಮಾಡಿದ್ದಾಳೆ. ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಹತ್ಯೆ ಮಾಡಿ, ನಂತರ ಪತಿ ಕಾಣೆಯಾಗಿದ್ದಾನೆಂದು ನಾಟಕವಾಡಿ ಪೊಲೀಸರಿಗೆ ದೂರು ನೀಡಿದ್ದಳು. ಮುಂದೇನಾಯ್ತು ನೋಡಿ.

ಬೆಂಗಳೂರು (ಜೂ.04): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನೈತಿಕ ಸಂಬಂಧದ ವ್ಯಾಮೋಹಕ್ಕೆ ಬಿದ್ದು, ಮೂರು ವರ್ಷಗಳ ಹಿಂದೆ ತಾನೇ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಹೆಂಡತಿ ಪ್ರಿಯಕರನೊಂದಿಗೆ ಸೇರಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪತಿಯನ್ನು ಕೊಂದು ಕೆರೆಯ ದಂಡೆಯ ಮೇಲೆ ಹೂತುಹಾಕಿ, ಏನೂ ತಿಳಿಯದವಳಂತೆ ಪತಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿ ನಾಟಕವಾಡಿದ್ದ ಕಿರಾತಕ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ರಾಜಾನುಕುಂಟೆ ಪೊಲೀಸರು ಕಡ್ಡಾಯವಾಗಿ ಬಂಧಿಸಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ:

ಕೊಲೆಯಾದ ದುರ್ದೈವಿಯನ್ನು ಪಶ್ಚಿಮ ಬಂಗಾಳ ಮೂಲದ ಅಭಿಜಿತ್ ಪಂಡಿತ್ (25) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಹೆಸರಘಟ್ಟ ಬಳಿಯ ಲಿಂಗನಹಳ್ಳಿಯಲ್ಲಿ ವಾಸವಾಗಿದ್ದ. ಕಳೆದ ಮೂರು ವರ್ಷಗಳ ಹಿಂದೆ ಅಭಿಜಿತ್ ಹಾಗೂ ಅರ್ಚನಾ ಚೌಹಾನ್ (21) ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಅರ್ಚನಾಳಿಗೆ ಪಾರ್ಸೂಲ್ ಪಾಲ್ (26) ಎಂಬಾತನೊಂದಿಗೆ ಅನೈತಿಕ ಸಂಬಂಧ ಬೆಳೆದಿತ್ತು. ಪತ್ನಿಯ ಈ ಅಕ್ರಮ ಸಂಬಂಧದ ವಿಷಯ ತಿಳಿದ ಅಭಿಜಿತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದಂಪತಿಗಳ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು.

ಮದ್ಯ ಕುಡಿಸಿ ಕುತ್ತಿಗೆಗೆ ದಾರ ಬಿಗಿದು ಹತ್ಯೆ:

ತಮ್ಮ ಅನೈತಿಕ ಸಂಬಂಧಕ್ಕೆ ಪತಿ ಅಭಿಜಿತ್ ಅಡ್ಡಿಯಾಗುತ್ತಿದ್ದಾನೆ ಎಂದು ಅರಿತ ಅರ್ಚನಾ ಹಾಗೂ ಪ್ರಿಯಕರ ಪಾರ್ಸೂಲ್, ಆತನನ್ನು ಮುಗಿಸಲು ಸಂಚು ರೂಪಿಸಿದ್ದರು. ಅದರಂತೆ ಮೇ 27 ರಂದು ಪ್ರಿಯಕರ ಪಾರ್ಸೂಲ್ ಹಾಗೂ ಆತನ ಇನ್ನಿಬ್ಬರು ಸ್ನೇಹಿತರು ಸೇರಿ ಅಭಿಜಿತ್‌ನನ್ನು ಲಿಂಗನಹಳ್ಳಿಯ ಕೆರೆಯ ಬಳಿ ಕರೆದೊಯ್ದು ಜೊತೆಯಲ್ಲೇ ಕುಳಿತು ಮದ್ಯ ಕುಡಿಸಿದ್ದಾರೆ. ಅಭಿಜಿತ್ ಪೂರ್ಣವಾಗಿ ಮತ್ತಿನಲ್ಲಿದ್ದಾಗ, ಆರೋಪಿಗಳು ಕುತ್ತಿಗೆಗೆ ದಾರ ಬಿಗಿದು ಉಸಿರುಗಟ್ಟಿಸಿ ಆತನನ್ನು ಹತ್ಯೆ ಮಾಡಿದ್ದಾರೆ. ಪತಿಯನ್ನು ಕೊಲ್ಲುವ ಪ್ಲಾನ್ ಗೊತ್ತಿದ್ದರೂ ಪತ್ನಿ ಅರ್ಚನಾ ಸುಮ್ಮನಿದ್ದು ಕೃತ್ಯಕ್ಕೆ ಪೂರ್ಣ ಕುಮ್ಮಕ್ಕು ನೀಡಿದ್ದಾಳೆ. ಕೊಲೆಯ ನಂತರ ಆರೋಪಿಗಳು ಕೆರೆಯ ಪಕ್ಕದಲ್ಲೇ ಗುಂಡಿ ತೆಗೆದು ಶವವನ್ನು ಹೂತುಹಾಕಿ ಪರಾರಿಯಾಗಿದ್ದರು.

ಪತಿ ಮಿಸ್ಸಿಂಗ್ ಎಂದು ದೂರು ನೀಡಿದ್ದ ಪತ್ನಿ!

ಕೊಲೆ ನಡೆದ ನಂತರ ಯಾರೂ ತನ್ನನ್ನು ಶಂಕಿಸಬಾರದು ಎಂಬ ಕಾರಣಕ್ಕೆ ಪತ್ನಿ ಅರ್ಚನಾ, ವಾರದ ಹಿಂದೆ ರಾಜಾನುಕುಂಟೆ ಪೊಲೀಸ್ ಠಾಣೆಗೆ ತೆರಳಿ 'ನನ್ನ ಪತಿ ನಾಪತ್ತೆಯಾಗಿದ್ದಾರೆ' ಎಂದು ಮಿಸ್ಸಿಂಗ್ ದೂರನ್ನು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಅಭಿಜಿತ್ ಮೊಬೈಲ್ ಕರೆಗಳ ವಿವರ (CDR) ಹಾಗೂ ಅರ್ಚನಾಳ ವರ್ತನೆಯನ್ನು ಗಮನಿಸಿದಾಗ ಸಂಶಯ ಮೂಡಿದೆ. ತಕ್ಷಣವೇ ಪೊಲೀಸರು ಅರ್ಚನಾಳ ಪ್ರಿಯಕರ ಪಾರ್ಸೂಲ್ ಪಾಲ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಬಾಯ್ಬಿಟ್ಟ ಆರೋಪಿಗಳು-ಶವ ಪತ್ತೆ:

ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಿದಾಗ ಅರ್ನಾಳ ಪ್ರಿಯಕರ ಪಾರ್ಸೂಲ್, ತಾವೇ ಅಭಿಜಿತ್‌ನನ್ನು ಕೊಂದು ಕೆರೆಯ ಬಳಿ ಹೂತುಹಾಕಿರುವುದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಆರೋಪಿ ನೀಡಿದ ಮಾಹಿತಿಯ ಮೇರೆಗೆ ತಹಶೀಲ್ದಾರ್ ಸಮ್ಮುಖದಲ್ಲಿ ಕೆರೆಯ ಬಳಿ ಹೂತಿಟ್ಟಿದ್ದ ಜಾಗವನ್ನು ಅಗೆದಾಗ, ಕೊಳೆತ ಸ್ಥಿತಿಯಲ್ಲಿ ಅಭಿಜಿತ್ ಪಂಡಿತ್ ಶವ ಪತ್ತೆಯಾಗಿದೆ. ಸದ್ಯ ರಾಜಾನುಕುಂಟೆ ಪೊಲೀಸರು ಪತ್ನಿ ಅರ್ಚನಾ ಚೌಹಾನ್ ಹಾಗೂ ಪ್ರಿಯಕರ ಪಾರ್ಸೂಲ್ ಪಾಲ್‌ನನ್ನು ಬಂಧಿಸಿದ್ದು, ಕೊಲೆಗೆ ಸಾಥ್ ನೀಡಿ ತಲೆಮರೆಸಿಕೊಂಡಿರುವ ಉಳಿದ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪ್ರೀತಿಯ ಪತಿಯನ್ನೇ ಕೊಂದ ಈ ಘಟನೆ ಹೆಸರಘಟ್ಟ ಭಾಗದಲ್ಲಿ ಭೀತಿ ಮೂಡಿಸಿದೆ.

PREV
Read more Articles on
click me!

Recommended Stories

Bhatkal: ಮುರಿನ್‌ಕಟ್ಟೆ ಧ್ವಂಸ ಪ್ರಕರಣ, ಹಿಂದೂ ಸಂಘಟನೆಗಳಿಂದ ನಾಳೆ ಭಟ್ಕಳ ಬಂದ್‌
ಮನೆಗೆ ಆಸರೆಯಾಗಿದ್ದ ಗಂಡನ ಸಾವಾಗಿ ಒಂದು ತಿಂಗಳು; ಕೂಲಿ ಮಾಡಿ ಸಾಕಲಾಗದೆ ತಾಯಿಯೇ ಎರಡೂ ಕಂದಮ್ಮಗಳನ್ನ ಕೊಂದಳು!