
ಕೋಲಾರ (ಜೂ.04): ಕೋಲಾರ ಜಿಲ್ಲೆಯಲ್ಲಿ ಹೆತ್ತ ಕರುಳೇ ಬೆಚ್ಚಿಬೀಳುವಂತಹ ಭೀಕರ ಹಾಗೂ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿಯೊಬ್ಬಳು, ತನ್ನಿಬ್ಬರು ಹಸುಗೂಸುಗಳನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಮಕ್ಕಳನ್ನು ಕೊಂದ ಬಳಿಕ ತಾನೂ ಸಾಯಲು ಯತ್ನಿಸಿದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಚಿಂತಲಹಳ್ಳಿ ಜೋಡಿ ಗ್ರಾಮದಲ್ಲಿ ಈ ಘೋರ ದುರಂತ ಜರುಗಿದೆ.
ಮೂಲತಃ ಆಂಧ್ರಪ್ರದೇಶದ ವಿನಾಯಕಪುರಂ ಎಸ್‌ಟಿ ಕಾಲೋನಿಯ (ಸೋಮುಲ ಗ್ರಾಮ) ನಿವಾಸಿಗಳಾದ ಬಾಬು ಹಾಗೂ ಬುಜ್ಜಮ್ಮ (ಬುಜ್ಜಿ- 22) ದಂಪತಿಗಳು ಬಡತನದ ಹಿನ್ನೆಲೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಒಂದು ವರ್ಷದಿಂದ ಈ ದಂಪತಿ ಮುಳಬಾಗಿಲು ತಾಲೂಕಿನ ಚಿಂತಲಹಳ್ಳಿ ಜೋಡಿ ಗ್ರಾಮದಲ್ಲಿರುವ ಕೃಷ್ಣಗೌಡ ಎಂಬುವರ ಮಾವಿನ ತೋಪಿನಲ್ಲಿ ಕಾವಲುಗಾರರಾಗಿ ಕೆಲಸ ಮಾಡಿಕೊಂಡಿದ್ದರು. ಬದುಕು ಸಾಗುತ್ತಿದ್ದಾಗಲೇ ಕಳೆದ ತಿಂಗಳು ಆಂಧ್ರಪ್ರದೇಶದ ಆವಲಕೊಪ್ಪ ಬಳಿ ನಡೆದ ರಸ್ತೆ ಅಪಘಾತದಲ್ಲಿ ಪತಿ ಬಾಬು ದುರ್ಮರಣಕ್ಕೀಡಾಗಿದ್ದರು. ದಿನ ಬೆಳಗಾದರೆ ಜೊತೆಯಲ್ಲಿದ್ದ ಪತಿ ಕಣ್ಣೆದುರೇ ಇಲ್ಲದಂತಾದುದನ್ನು ಸಹಿಸದ ಬುಜ್ಜಮ್ಮ ತೀವ್ರ ಜೀವನ ಜಿಗುಪ್ಸೆ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಪತಿಯ ಸಾವಿನ ಕೊರಗಿನಲ್ಲೇ ದಿನ ದೂಡುತ್ತಿದ್ದ ಬುಜ್ಜಮ್ಮ, ಕೊನೆಗೆ ತಾನೂ ಬದುಕಿರಬಾರದು ಎಂದು ನಿರ್ಧರಿಸಿದ್ದಳು. ಆದರೆ ತಾನು ಹೋದರೆ ಮಕ್ಕಳ ಗತಿ ಏನು ಎಂಬ ಆಲೋಚನೆಯಲ್ಲಿ, ಇಬ್ಬರು ಮಕ್ಕಳನ್ನೇ ಕೊಲ್ಲಲು ಮುಂದಾಗಿದ್ದಾಳೆ. ಸರಸ್ವತಿ (4 ವರ್ಷ) ಹಾಗೂ ಕೇವಲ 15 ತಿಂಗಳ ಕಂದಮ್ಮ ಹೇಮಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಬುಜ್ಜಮ್ಮ ಅತ್ಯಂತ ಕ್ರೂರವಾಗಿ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ಮಕ್ಕಳಿಬ್ಬರನ್ನು ಕೊಲೆ ಮಾಡಿದ ನಂತರ ಬುಜ್ಜಮ್ಮ ತಾನೂ ಕೂಡ ನೇಣಿಗೆ ಶರಣಾಗಲು ಯತ್ನಿಸಿದ್ದಾಳೆ. ಈ ವೇಳೆ ತೋಟದ ಬಳಿ ಬಂದ ಸ್ಥಳೀಯರು ಇದನ್ನು ಗಮನಿಸಿ ತಕ್ಷಣವೇ ಆಕೆಯನ್ನು ತಡೆದು ಹಿಡಿದು ರಕ್ಷಿಸಿದ್ದಾರೆ. ತೋಟದ ಮನೆಯೊಳಗೆ ಹೋಗಿ ನೋಡಿದಾಗ ಇಬ್ಬರು ಮುಗ್ಧ ಮಕ್ಕಳು ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಇದರಿಂದ ದಿಗ್ಭ್ರಮೆಗೊಂಡ ಗ್ರಾಮಸ್ಥರು ತಕ್ಷಣವೇ ನಂಗಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ತಾಯಿ ಬುಜ್ಜಮ್ಮಳನ್ನು ಬಂಧಿಸಿದ್ದಾರೆ.
ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿಯನ್ನು ಕಳೆದುಕೊಂಡ ಒಂದೇ ತಿಂಗಳಲ್ಲಿ ಇಡೀ ಕುಟುಂಬವೇ ಈ ರೀತಿಯಾಗಿ ಸರ್ವನಾಶವಾಗಿರುವುದು ಇಡೀ ಗ್ರಾಮಸ್ಥರನ್ನು ಕಣ್ಣೀರಲ್ಲಿ ಮುಳುಗಿಸಿದೆ.
ಗಮನಿಸಿ (ಹೆಲ್ಪ್‌ಲೈನ್): ಮಾನಸಿಕ ಖಿನ್ನತೆ ಅಥವಾ ಜೀವನದಲ್ಲಿ ಜಿಗುಪ್ಸೆ ಉಂಟಾದಲ್ಲಿ ಯಾರೂ ಕೂಡ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಸಹಾಯ ಹಾಗೂ ಸಮಾಲೋಚನೆಗಾಗಿ 'ಆರೋಗ್ಯ ಸಹಾಯವಾಣಿ 104' ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.