
ಬೆಂಗಳೂರು ನಗರ ಪೊಲೀಸರು ಟೆಕ್ನಾಲಜಿಯತ್ತ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಇಲಾಖೆಯ ಆಂತರಿಕ ಸಂವಹನ ಹಾಗೂ ದೈನಂದಿನ ಕಾರ್ಯಾಚರಣೆಗಳನ್ನು ಹೆಚ್ಚು ವೇಗ ಮತ್ತು ಸುರಕ್ಷಿತವಾಗಿ ಮಾಡಿಕೊಳ್ಳುವ ಉದ್ದೇಶದಿಂದ ವಿಶೇಷ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದ್ದು, ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆಧುನಿಕ ನಗರಿಯಾಗಿ ರೂಪುಗೊಳ್ಳುತ್ತಿದೆ. ಈ ಪೈಕಿ, ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜಕಾಲುವೆಗಳಲ್ಲಿ ಹೂಳು ತೆಗೆಯಲು ರೋಬೋ ತಂತ್ರಜ್ಞಾನವನ್ನು ಬಳಕೆ ಮಾಡುವ ಯೋಜನೆಯನ್ನು ತೆಗೆದುಕೊಂಡಿದ್ದರೆ, ನಗರ ಪೊಲೀಸ್ ಇಲಾಖೆ ತನ್ನ ಆಂತರಿಕ ಸಂವಹನ ವ್ಯವಸ್ಥೆಯನ್ನು ಸುಧಾರಿಸಲು ಹೊಸ ಆ್ಯಪ್ ‘ಬಿಸಿಪಿ ಚಾಟ್’ ಅನ್ನು ಅಭಿವೃದ್ಧಿಪಡಿಸಿದೆ.
ಬೆಂಗಳೂರು ನಗರದ ಎಲ್ಲ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಂದ ಹಿಡಿದು ಎಸಿಪಿ, ಡಿಸಿಪಿ, ಜಂಟಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರು ಈ ಆ್ಯಪ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ಆ್ಯಪ್ ಪೊಲೀಸರ ಆಂತರಿಕ ಸಂವಹನಕ್ಕಾಗಿ ಸುರಕ್ಷಿತ, ವೇಗದ ಮತ್ತು ಪರಿಣಾಮಕಾರಿಯಾದ ಪ್ಲಾಟ್‌ಫಾರ್ಮ್ ಆಗಿ ಕಾರ್ಯನಿರ್ವಹಿಸುತ್ತದೆ.
ಆ್ಯಪ್‌ನಲ್ಲಿ ಸಂಗ್ರಹವಾಗುವ ಎಲ್ಲಾ ಮಾಹಿತಿಯನ್ನು ಕರ್ನಾಟಕ ರಾಜ್ಯದ ದತ್ತಾಂಶ ಕೇಂದ್ರದಲ್ಲಿ ಭದ್ರವಾಗಿ ಇಡಲಾಗುತ್ತಿದ್ದು, ಸಂಪೂರ್ಣ ಗೌಪ್ಯತೆ ಕಾಯ್ದಿರಿಸಲಾಗುತ್ತದೆ. ಸರ್ಕಾರದ ಸುತ್ತೋಲೆಗಳು, ಆದೇಶಗಳು, ನೋಟೀಸುಗಳು ಹಾಗೂ ಇತರ ಪ್ರಮುಖ ಮಾಹಿತಿಗಳನ್ನು ಕ್ಷಿಪ್ರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಬಹುದು. ಬಿಸಿಪಿ ಚಾಟ್‌ನಲ್ಲಿ ಕ್ಷಿಪ್ರ ಶೋಧ ವ್ಯವಸ್ಥೆ ಇರುವುದರಿಂದ ಹಳೆಯ ದಾಖಲೆಗಳನ್ನು ಬೇಗನೆ ಹುಡುಕಿ ಪಡೆಯಬಹುದಾಗಿದೆ.
ಬಿಸಿಪಿ ಚಾಟ್ ಅನ್ನು ಅಧಿಕೃತ ಪೊಲೀಸ್ ಅಧಿಕಾರಿಗಳಿಗಷ್ಟೇ ಬಳಕೆಗೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕ ಬಳಕೆಗಾಗಿ ಅಲ್ಲ. ಇದರೊಂದಿಗೆ, ದಿನನಿತ್ಯದ ಕಾರ್ಯವೈಖರಿ ಮತ್ತಷ್ಟು ಸಮರ್ಥವಾಗಿ ನಿರ್ವಹಣೆಯಾಗಲಿದ್ದು, ನಗರದಲ್ಲಿ ಅಪರಾಧ ನಿಯಂತ್ರಣ, ತುರ್ತು ನಿರ್ವಹಣೆ ಮತ್ತು ತುರ್ತು ತಾಣಗಳ ಮೇಲ್ವಿಚಾರಣೆಗೆ ನೆರವಾಗಲಿದೆ. ಟೆಕ್ನಾಲಜಿಯನ್ನು ಅಳವಡಿಸಿಕೊಂಡು ಬದಲಾದ ಬೆಂಗಳೂರು ನಗರ ಪೊಲೀಸ್, ಈಗ ಹೆಚ್ಚು ವೇಗವಾಗಿ, ಸುರಕ್ಷಿತವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಜ್ಜಾಗಿದೆ.