* ಎರಡೂ ನಗರಗಳ ಸಂಚಾರ 3 ತಾಸಿನಿಂದ 75 ನಿಮಿಷಕ್ಕೆ ಇಳಿಕೆ
* 64 ಅಂಡರ್‌ಪಾಸ್, 8 ಕಿ.ಮೀ. ಫ್ಲೈಓವರ್ ನಿರ್ಮಾಣ: ಗಡ್ಕರಿ
* 8350 ಕೋಟಿ ವೆಚ್ಚದ 10 ಪಥದ ರಸ್ತೆ ಕಾಮಗಾರಿ ಅಂತ್ಯದತ್ತ
ನವದೆಹಲಿ(ಮಾ.29): ಕರ್ನಾಟಕದ(Karnataka) ರಾಜಧಾನಿ ಬೆಂಗಳೂರು(Bengaluru) ಹಾಗೂ ಸಾಂಸ್ಕೃತಿಕ ರಾಜಧಾನಿ ಮೈಸೂರು(Mysuru) ನಡುವಣ 117 ಕಿ.ಮೀ. ಉದ್ದದ 10 ಪಥಗಳ ರಾಷ್ಟ್ರೀಯ ಹೆದ್ದಾರಿ(National Highwway) ನಿರ್ಮಾಣ ಕಾರ್ಯ ಮುಕ್ತಾಯದ ಹಂತಕ್ಕೆ ತಲುಪಿದ್ದು, 2022ರ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಘೋಷಣೆ ಮಾಡಿದ್ದಾರೆ.
ಈ ಹೆದ್ದಾರಿಯಿಂದಾಗಿ ಬೆಂಗಳೂರು ಹಾಗೂ ಮೈಸೂರು ನಡುವಣ ಪ್ರಯಾಣದ ಅವಧಿ ಈಗಿನ 3 ಗಂಟೆಗಳ ಬದಲಾಗಿ ಕೇವಲ 75 ನಿಮಿಷಗಳಿಗೆ ಇಳಿಕೆಯಾಗಲಿದೆ. ಬೆಂಗಳೂರು- ನಿಡಘಟ್ಟ- ಮೈಸೂರು ವಲಯದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ- 275 ಇದಾಗಿದ್ದು, 8350 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಫೋಟೋಗಳನ್ನು ಲಗತ್ತಿಸಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಈ ಹೆದ್ದಾರಿಯಿಂದ ಈ ಭಾಗದ ಪ್ರವಾಸೋದ್ಯಮ ಹಾಗೂ ಆರ್ಥಿಕತೆಗೆ ಭಾರಿ ಅನುಕೂಲವಾಗಲಿದೆ ಎಂದಿದ್ದಾರೆ.
undefined
Toll Booths: ಕರ್ನಾಟಕದಲ್ಲಿ 60 ಕಿ.ಮೀ. ಒಳಗೆ 28 ಟೋಲ್ ಬೂತ್..!
ಈ ಅತ್ಯಾಧುನಿಕ ಹೆದ್ದಾರಿಯು 8 ಕಿ.ಮೀ. ಉದ್ದದ ಒಂದು ಎಲಿವೇಟೆಡ್ ಕಾರಿಡಾರ್, 9 ದೊಡ್ಡ ಸೇತುವೆಗಳು, 42 ಸಣ್ಣ ಸೇತುವೆಗಳು, 64 ಅಂಡರ್‌ಪಾಸ್, 11 ಓವರ್‌ಪಾಸ್, 4 ರೈಲ್ವೆ ಮೇಲ್ಸೇತುವೆ, 5 ಬೈಪಾಸ್‌ಗಳನ್ನು ಹೊಂದಿದ್ದು, ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯವನ್ನು ತಗ್ಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಬಲಿಷ್ಠ ನಾಯಕತ್ವದಡಿ ಹಲವಾರು ಮೂಲಸೌಕರ್ಯಗಳನ್ನು ಗುರುತರ ಹೊಣೆಗಾರಿಕೆಯೊಂದಿಗೆ ಪ್ರಕಟಿಸಲಾಗಿದೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಹಾಗೂ ಕಾಲಮಿತಿಯಲ್ಲಿ ಅವನ್ನು ಪೂರ್ಣಗೊಳಿಸುವುದು ನಮ್ಮ ಬದ್ಧತೆಯಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಪ್ರವಾಹ ಬಂದರೂ ಮುಳುಗದ ರೀತಿ ರಸ್ತೆ: ಬೆಂಗಳೂರು- ಪುಣೆ ನಡುವೆ ಹೊಸ ಹೆದ್ದಾರಿ!
ಕೊಲ್ಲಾಪುರ: ಪುಣೆ(Pune) ಹಾಗೂ ಬೆಂಗಳೂರು ನಡುವೆ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ. ಹಾಲಿ ಪುಣೆ- ಬೆಂಗಳೂರು ರಸ್ತೆ 775 ಕಿ.ಮೀ. ಉದ್ದವಿದ್ದು, ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದೆ. ಯಾವುದೇ ಸಂದರ್ಭದಲ್ಲೂ ಮುಳುಗಡೆಯಾಗದ ರೀತಿಯ ವಿನ್ಯಾಸವನ್ನು ಹೊಸ ಹೆದ್ದಾರಿ ಹೊಂದಿರಲಿದೆ ಎಂದು ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಘೋಷಣೆ ಮಾಡಿದ್ದಾರೆ.
ಮುಂದಿನ 3 ತಿಂಗಳಲ್ಲಿ ಈ ಎಲ್ಲಾ ಟೋಲ್ ಪ್ಲಾಜಾ ಬಂದ್, ಗಡ್ಕರಿ ಮಹತ್ವದ ಘೋಷಣೆ!
ಹೊಸ ಹೆದ್ದಾರಿ 699 ಕಿ.ಮೀ. ಉದ್ದವಿರಲಿದೆ (ಈಗಿರುವ ರಸ್ತೆಗಿಂತ 76 ಕಿ.ಮೀ. ಕಡಿಮೆ). 40 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರಿಗೆ ಸಂಪರ್ಕಿಸಲಿದೆ. ಈಗ ಇರುವ ಸತಾರಾ, ಕೊಲ್ಲಾಪುರ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಮಾರ್ಗದ ಹೆದ್ದಾರಿ ಮೇಲಿನ ಒತ್ತಡವನ್ನು ಹೊಸ ರಸ್ತೆ ತಗ್ಗಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ನೂತನ ಹೆದ್ದಾರಿಯು ಮಹಾರಾಷ್ಟ್ರದ ಬರಪೀಡಿತ ಹಾಗೂ ಅಭಿವೃದ್ಧಿವಂಚಿತ ಪ್ರದೇಶಗಳಾದ ಸತಾರಾ ಜಿಲ್ಲೆಯ ಖಂಡಾಲಾ, ಫಲಠಣ, ಖಟಾವ್, ಸಾಂಗ್ಲಿ ಜಿಲ್ಲೆಯ ಖಾನಾಪುರ, ತಾಸಗಾಂವ್ ಹಾಗೂ ಕವಠೆ ಮಹಾಂಕಾಲ ಮೂಲಕ ಹಾದುಹೋಗಲಿದೆ ಎಂದು ತಿಳಿಸಿದ್ದಾರೆ.
ಹೊಸ ರಸ್ತೆ ಏಕೆ?
ಈಗ ಇರುವ ರಸ್ತೆ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದೆ. ಹೊಸ ರಸ್ತೆಯಲ್ಲಿ ಈ ಸಮಸ್ಯೆ ಇಲ್ಲ. ಅಲ್ಲದೆ 76 ಕಿ.ಮೀ. ಅಂತರವೂ ತಗ್ಗಲಿದೆ. ಈಗಿರುವ ರಸ್ತೆ ಮೇಲಿನ ಒತ್ತಡ ಇಳಿಯಲಿದೆ. ಯಾವ ಮಾರ್ಗದಲ್ಲಿ ಹೆದ್ದಾರಿ: ಹೊಸ ರಸ್ತೆ ಸತಾರಾ, ಸಾಂಗ್ಲಿ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರು ತಲುಪಲಿದೆ. ಈಗಿನ ಹೆದ್ದಾರಿ ಮಾರ್ಗ: ಪುಣೆ, ಕೊಲ್ಲಾಪುರ, ಬೆಳಗಾವಿ- ಹುಬ್ಬಳ್ಳಿ- ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರು ಸಂಪರ್ಕಿಸುತ್ತದೆ
775 ಕಿ.ಮೀ: ಹಾಲಿ ಹೆದ್ದಾರಿ ಉದ್ದ
699 ಕಿ.ಮೀ: ಹೊಸ ಹೆದ್ದಾರಿ ಉದ್ದ