Bengaluru-Mumbai Vande bharat sleeper: ಕೇಂದ್ರದಿಂದ ಕನ್ನಡಿಗರಿಗೆ ರಾಜ್ಯೋತ್ಸವಕ್ಕೆ ಭರ್ಜರಿ ಗಿಫ್ಟ್!

Kannadaprabha News   | Kannada Prabha
Published : Oct 31, 2026, 05:36 AM IST
Bengaluru Mumbai Vande bharat Sleeper train

ಸಾರಾಂಶ

ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರು ಮತ್ತು ಮುಂಬೈ ನಡುವೆ ಸಂಚಾರ ಆರಂಭಿಸಲಿದೆ. ಕಲ್ಯಾಣ ಕರ್ನಾಟಕದ ಮೂಲಕ ಹಾದುಹೋಗುವ ಈ ರೈಲು ಪ್ರಯಾಣದ ಅವಧಿಯನ್ನು 15 ಗಂಟೆಗಳಿಗೆ ಇಳಿಸಲಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

ಶೇಷಮೂರ್ತಿ ಅವಧಾನಿ

ಕಲಬುರಗಿ (ಅ.31): ಬಹುನಿರೀಕ್ಷಿತ ವಂದೇ ಭಾರತ ಸ್ಲೀಪರ್‌ ರೈಲು ಸಂಚಾರಕ್ಕೆ ಕನ್ನಡ ರಾಜ್ಯೋತ್ಸವ ಸಂಭ್ರಮದ ನ. 1 ರ ದಿನ ನಿಗದಿಯಾಗಿದೆ. ಈ ಕುರಿತು ರೇಲ್ವೆ ಬೋರ್ಡ್‌ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಅದಾಗಲೇ ನ.1 ರಂದು ಬೆಂಗಳೂರಿನಿಂದ ಮುಂಬೈಗೆ ಈ ರೈಲು ಸಂಚಾರಕ್ಕೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ.

ದಕ್ಷಿಣ ಭಾರತದಲ್ಲೇ ಚೊಚ್ಚಲ ಸ್ಲೀಪರ್‌ ವಂದೇ ಭಾರತ್ ರೈಲು

ದಕ್ಷಿಣ ಭಾರತದಲ್ಲೇ ಚೊಚ್ಚಲ ಸ್ಲೀಪರ್‌ ವಂದೇ ಭಾರತ ರೈಲಾಗಿರುವ ಈ ರೈಲು ಬೆಂಗಳೂರಿನಿಂದ ಹೊರಟು ಕಲ್ಯಾಣ ಕರ್ನಾಕದ ರಾಯಚೂರು, ಯಾದಗಿರಿ, ವಾಡಿ ಹಾಗೂ ಕಲಬುರಗಿ ಮಾರ್ಗವಾಗಿ ಸೊಲ್ಲಪುರ, ಪುಣೆ ಮುಂಬೈ ಮಧ್ಯೆ ಈ ರೈಲು ಸಂಚಾರ ನಡೆಸಲಿದೆ.

ಬೆಂಗಳೂರು ಹಾಗೂ ಮುಂಬೈ ನಡುವೆ ನ. 1 ರಿಂದ ಹಳಿ ಏರಲಿರುವ ಭಾರತ ಸ್ಲೀಪರ್‌ ರೈಲಿನೊಂದಿಗೆ ಕನ್ನಡಿಗರಿಗೆ, ಅದರಲ್ಲೂ ಕಲ್ಯಾಣ ನಾಡಿನ ಕನ್ನಡಿಗರಿಗೆ ಕೇಂದ್ರದ ರೇಲ್ವೆ ಸಚಿವಾಲಯ ರಾಜ್ಯೋತ್ಸವ ಹಾಗೂ ದೀಪಾವಳಿ ಗಿಫ್ಟ್‌ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಂದೇ ಭಾರತ್ ಸ್ಲೀಪರ್ ರೈಲಿನ ವೇಳಾಪಟ್ಟಿ ಇಲ್ಲಿದೆ

*ವೇಳಾ ಪಟ್ಟಿ ಹೀಗಿದೆ: ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ( ಎಸ್ಎಂವಿಟಿ) ನಿಂದ ರಾತ್ರಿ 7:45ಕ್ಕೆ ಹೊರಟು 10.10ಕ್ಕೆ ಧರ್ಮಾವರಂ, 10:30ಕ್ಕೆ ಅನಂತಪುರ, 11.20ಕ್ಕೆ ಗುಂತಕಲ್1.03 ಕ್ಕೆ ರಾಯಚೂರ್, 1.45 ಕ್ಕೆ ಯಾದಗಿರಿ 2.50ಕ್ಕೆ ವಾಡಿ, 3.10 ಕ್ಕೆ ಕಲಬುರಗಿ, 4.20ಕ್ಕೆ ಸೋಲಾಪುರ, 8:00 ಕ್ಕೆ ಪುಣೆ, 10.45 ಕ್ಕೆ ಕಲ್ಯಾಣ್, 11:55 ಕ್ಕೆ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್, ಮುಂಬೈ ( ಸಿ ಎಸ್ ಎಂ ಟಿ ) ತಲುಪಲಿದೆ. ಮುಂಬೈ ಸಿಎಸ್‌ಎಂಟಿಯಿಂದ ರಾತ್ರಿ 8. 10ಕ್ಕೆ ಹೊರಟು 8.50 ಕ್ಕೆ ಕಲ್ಯಾಣ್, 11:45 ಕ್ಕೆ ಪುಣೆ 3.05 ಕ್ಕೆ ಸೋಲಾಪುರ,4. 15 ಕ್ಕೆ ಕಲಬುರಗಿ, 5.05 ಕ್ಕೆ ವಾಡಿ , 5.10 ಕ್ಕೆ ಯಾದಗಿರಿ, 6.05 ಕ್ಕೆ ರಾಯಚೂರ್, 7.35 ಗುಂತಕಲ್, 8.40ಕ್ಕೆ ಅನಂತಪುರ, 9.40ಕ್ಕೆ ಧರ್ಮಾವರಂ, 12 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ವಂದೇ ಭಾರತ್ ಸ್ಲೀಪರ್ ರೈಲು ನಿಲುಗಡೆ ಸ್ಥಳಗಳು

ಅನಂತಪುರ, ಗುಂತಕಲ್, ರಾಯಚೂರ್, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ ಹಾಗೂ ಕಲ್ಯಾಣದಲ್ಲಿ ಮಾತ್ರ ವಂದೇ ಭಾರತ್ ರೈಲು ನಿಲುಗಡೆಯಾಗಲಿದೆ ಬೆಂಗಳೂರಿನಿಂದ ಸೋಮವಾರ ಹಾಗೂ ಮುಂಬೈಯಿಂದ ಮಂಗಳವಾರದಂದು ರೈಲು ಸಂಚಾರ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ರೈಲು ಸೇವೆಯ ಮೂಲಕ ದೇಶದ 2 ಮಹಾ ನಗರಗಳ ನಡುವಿನ ಪ್ರಯಾಣ ಅವಧಿ 15 ಗಂಟೆಗೆ ಇಳಿಯಲಿದೆ.

ವಂದೇ ಭಾರತ್ ಸ್ಲೀಪರ್ ರೈಲು ಸಮಯ ಬದಲಾವಣೆಗೆ ಮನವಿ:

ವಂದೇ ಭಾರತ್ ರೈಲು ರಾತ್ರಿ 8 ಗಂಟೆಗೆ ಬದಲಾಗಿ 10 ಗಂಟೆಗೆ ಬೆಂಗಳೂರಿನಿಂದ ಹೊರಟರೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಪ್ರಯಾಣಿಕರಿಗೂ ಅನುಕೂಲವಾಗಲಿದ್ದು, ಈ ಬಗ್ಗೆ ಈಗಾಗಲೇ ಕಲಬುರಗಿ ಮಾಜಿ ಸಂಸದ ಡಾ. ಉಮೇಶ ಜಾಧವ್‌, ಎಂಎಲ್‌ಸಿ ಶಶಿಲ್‌ ನಮೋಶಿ ರೈಲ್ವೆ ಇಲಾಖೆಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಈ ಮನವಿ ಪತ್ರಕ್ಕೆ ರೇಲ್ವೆ ಇಲಾಖೆ, ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರಕುವ ವಿಶ್ವಾಸವೂ ಮುಖಂಡರಿಂದ ವ್ಯಕ್ತವಾಗಿದೆ.

ವಂದೇ ಭಾರತ್ ಅತ್ಯಾಧುನಿಕ ಸ್ಲೀಪರ್‌ ಕೋಚ್‌

ಬೆಂಗಳೂರಿನಲ್ಲಿ ನಿರ್ಮಾಣಗೊಂಡ ವಂದೇ ಭಾರತ್ ಸ್ಲೀಪರ್ ಕೋಚ್ ಅತ್ಯಾಧುನಿಕ ಸೌಲಭ್ಯ ಹೊಂದಿದ್ದು ಹಿರಿಯ ನಾಗರಿಕರಿಗೂ ಅಪ್ಪರ್ ಸೀಟ್ ನಲ್ಲಿ ಏರಲು ಅನುಕೂಲವಾಗುವಂತೆ ಹಾಗೂ ಕೈಗೆಟಕುವ ದರದಲ್ಲಿ ಪ್ರಯಾಣಿಸಲು ಅನುಕೂಲ ಕಲ್ಪಿಸಲಾಗಿದೆ. ವಂದೇ ಭಾರತ್ ರೈಲು ಪ್ರಯಾಣವು ವಿಮಾನ ಪ್ರಯಾಣದ ಅನುಭವವನ್ನು ನೀಡಲಿದೆ. ಮುಂಬೈ ಮತ್ತು ಬೆಂಗಳೂರಿಗೆ ಉದ್ಯೋಗ, ವ್ಯವಹಾರ ಹಾಗೂ ವಿದೇಶಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಇದು ಅನುಕೂಲಕರವಾಗಲಿದೆ.

ಕಲಬುರಗಿಯಲ್ಲಿ ಸ್ವಾಗತಕ್ಕೆ ಭರದ ಸಿದ್ದತೆ

ನ. 1 ರಂದು ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮಧ್ಯಾಹ್ನ ಉದ್ಘಾಟನೆಯಾಗಿ ಸಂಚಾರ ಶುರುಮಾಡಲಿರುವ ರೈಲು ಮರುದಿನ ಮುಂಬೈ ತಲುಪಲಿದೆ. ಉದ್ಘಾಟನಾ ಸಮಾರಂಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಸಹಿತ ಅನೇಕರು ಪಾಲ್ಗೊಳ್ಳುತ್ತಿದ್ದಾರೆ. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಸೋಲಾಪುರ ವಿಭಾಗದ ರೇಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಶುಕ್ರವಾರ ಸಭೆ ನಡೆಸಿ ವಂದೇ ಭಾರತ್ ಸ್ಲೀಪರ್ ರೈಲು ಆಗಮನದ ವೇಳೆ ಕೈಗೊಳ್ಳುವ ಸ್ವಾಗತ ಸಮಾರಂಭದ ಪೂರ್ವಭಾವಿ ತಯಾರಿ ಕುರಿತು ಚರ್ಚಿಸಿದರು. ನ. 1ರಂದು ಉದ್ಘಾಟನೆಯ ಸಂದರ್ಭ ಮಧ್ಯಾಹ್ನ ಬೆಂಗಳೂರಿಂದ ಹೊರಟು ಸಾಯಂಕಾಲ 6:30ಕ್ಕೆ ಕಲಬುರಗಿಗೆ ಈ ರೈಲು ಆಗಮಿಸಲಿದ್ದು, ಸಾರ್ವಜನಿಕರ ಸಮ್ಮುಖದಲ್ಲಿ ಸಂಭ್ರಮದ ಸ್ವಾಗತ ಸಮಾರಂಭ ಇಟ್ಟುಕೊಳ್ಳಲು ಸೋಲಾಪುರ ವಿಭಾಗೀಯ ರೈಲ್ವೆ ವಲಯ ಸಿದ್ಧತೆ ಮಾಡಿಕೊಂಡಿದೆ .

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಪ್ರಾರಂಭವಾಗುತ್ತಿದ್ದು, ಒಂದನ್ನು ಪ್ರಧಾನಿ ವಾರಣಾಸಿ ಹಾಗೂ ಇನ್ನೊಂದನ್ನು ಬೆಂಗಳೂರಿಂದ ಮುಂಬೈಗೆ ಆರಂಭಿಸಿರುವುದು ರೈಲ್ವೆ ಇತಿಹಾಸದಲ್ಲಿ ದೊಡ್ಡ ಘಟನೆ. ಕರ್ನಾಟಕದ ಜನತೆಗೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಗಿಫ್ಟ್ ಆಗಿ ಪ್ರಧಾನಿ ಹಾಗೂ ರೈಲ್ವೆ ಇಲಾಖೆ ಈ ಕೊಡುಗೆ ನೀಡಿದ್ದಾರೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಅಭಿನಂದಿಸುವೆ ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ್‌ ಹೇಳಿದರು.

PREV
Read more Articles on
click me!

Recommended Stories

ಕನ್ನಡ ಪುಸ್ತಕ ಹಬ್ಬ 2025 ಉದ್ಘಾಟನೆ: ಯುವ ಪೀಳಿಗೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೀಡಿದ ಕಿವಿ ಮಾತು ಏನು?
Online ಪೇಮೆಂಟ್ ರಿಜೆಕ್ಟ್, 1 AMಗೆ ಚಿಲ್ಲರೆಗಾಗಿ ರೈಡರ್ ಕಣ್ಣೀರು; ಮುಂದೆ ಕಂಡಿದ್ದು ನರಕ!