ಏಳು ವರ್ಷಗಳ ನಂತರ ಬೆಂಗಳೂರು ಮೆಟ್ರೋ ದರಗಳು ಏರಿಕೆಯಾಗಲಿವೆ, ಕನಿಷ್ಠ ದರ 15 ರೂ.ಗೆ ಮತ್ತು ಗರಿಷ್ಠ ದರ 75 ರೂ.ಗೆ ಏರಿಕೆಯಾಗಲಿದೆ. ಈಗಾಗಲೇ ಅಕ್ಟೋಬರ್ 28 ರವರೆಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ.
ಬೆಂಗಳೂರು (ಅ.06): ಸತತವಾಗಿ 7 ವರ್ಷಗಳಿಂದ ಮೆಟ್ರೋ ಪ್ರಯಾಣ ರದಲ್ಲಿ ಯಾವುದೇ ಏರಿಕೆ ಮಾಡದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಇದೀಗ ಕೇಂದ್ರ ಸರ್ಕಾರದ ದರ ನಿಗದಿ ಸಮಿತಿಯ ಸಲಹೆಯಂತೆ ಮೆಟ್ರೋ ಪ್ರಯಾಣದ ದರ ಪರಿಷ್ಕರಣೆಗೆ ಸಿದ್ಧವಾಗಿದೆ. ಶೀಘ್ರದಲ್ಲೇ, ಮೆಟ್ರೋ ಸವಾರಿಗೆ ಕನಿಷ್ಠ ದರ 15 ರೂ.ಗೆ ಏರಿಕೆಯಾಗಲಿದ್ದು, ಗರಿಷ್ಠ ದರ 75 ರೂ.ಗೆ ಏರಿಕೆಯಾಗಲಿದೆ.
ಬೆಂಗಳೂರು ಮೆಟ್ರೋ ಸೇವೆ ಆರಂಭವಾದ ನಂತರ 2017ರಲ್ಲಿ ಒಮ್ಮೆ ಕೊನೆಯ ದರ ಪರಿಷ್ಕರಣೆ ಮಾಡಲಾಗಿತ್ತು ಇದೀಗ ಎರಡನೇ ಬಾರಿಗೆ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ರಚಿಸಿದ ಸಮಿತಿಯು ಟಿಕೆಟ್ ದರ ಹೆಚ್ಚಳದ ಬಗ್ಗೆ ಪರಿಶೀಲಿಸುತ್ತಿದೆ. ಪ್ರಸ್ತಾವಿತ ದರ ಪರಿಷ್ಕರಣೆಯ ಕುರಿತು ಸಾರ್ವಜನಿಕ ಸಲಹೆಗಳು, ಸೂಚನೆಗಳು ಮತ್ತು ಆಕ್ಷೇಪಣೆಗಳನ್ನು ಅಕ್ಟೋಬರ್ 28ರವರೆಗೆ ಸ್ವೀಕರಿಸಲಾಗಿದೆ
ಈ ದರ ಪರಿಷ್ಕರಣೆಯನ್ನು ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ, ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರವು ರಚಿಸಿದ ಮೊದಲ ದರ ನಿಗದಿ ಸಮಿತಿಯು ನಿರ್ವಹಿಸುತ್ತಿದೆ. ಪ್ರಸ್ತುತ, ದರಗಳು ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಕನಿಷ್ಠ ದರ 10 ರೂ.ಗಳಿಂದ ಗರಿಷ್ಠ ದರ 60 ರೂ.ಗಳವರೆಗೆ ಇದೆ. ಜೊತೆಗೆ, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಬಳಸುವ ಪ್ರಯಾಣಿಕರಿಗೆ ಶೇ.5 ರಿಯಾಯಿತಿ ನೀಡಲಾಗುತ್ತದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್: ಟಿಕೆಟ್ ದರ ಕನಿಷ್ಠ 15ಕ್ಕೆ ಏರಿಕೆ?: ಶೀಘ್ರ ಜಾರಿ ಸಂಭವ
ಮೆಟ್ರೋ ಕಾರ್ಯಾಚರಣೆ ವೆಚ್ಚಗಳು, ನಿರ್ವಹಣೆ ಮತ್ತು ಸಿಬ್ಬಂದಿ ವೇತನಗಳು ಮುಂತಾದ ವಿವಿಧ ವೆಚ್ಚಗಳು ಪ್ರತಿ ವರ್ಷ ಹೆಚ್ಚುತ್ತಿವೆ. ಈ ಹೆಚ್ಚುವರಿ ವೆಚ್ಚಗಳ ಹೊರತಾಗಿಯೂ, ಕಳೆದ 7 ವರ್ಷಗಳಲ್ಲಿ ಯಾವುದೇ ದರ ಏರಿಕೆಯಾಗಿಲ್ಲ. ದರ ಪರಿಷ್ಕರಣೆಯ ವಿಳಂಬದ ಕುರಿತು ಕಳವಳವೂ ವ್ಯಕ್ತವಾಗುತ್ತಿದೆ. ಇನ್ನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ರಾವ್ ಎಂ. ಸಮಿತಿಯು ಇನ್ನೂ ತನ್ನ ಅಂತಿಮ ವರದಿಯನ್ನು ಸಲ್ಲಿಸಿಲ್ಲ. ಸಮಿತಿಯ ಪರಿಶೀಲನೆಯ ನಂತರ ದರ ಏರಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಇನ್ನು ಮೆಟ್ರೋದ ಹಸಿರು ಮಾರ್ಗದಲ್ಲಿ ನಾಗದಂಸ್ರದಿಂದ ಮಾದವಾರದವರೆಗೆ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರದ ಬಗ್ಗೆಯೂ ಪೂರಕ ವಾತಾವಾರಣ ಕಂಡುಬಂದಿದೆ. ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಸಂಸದರು ಮೆಟ್ರೋ ರೈಲಿನ ವಿಸ್ತರಿತ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆಯನ್ನೂ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ತಾಂತ್ರಿಕ ಪರೀಕ್ಷೆಗಳನ್ನು ನಡೆಸುವ ಮೂಲಕ ತುಮಕೂರು ರಸ್ತೆಯಲ್ಲಿರುವ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಮಾರ್ಗವನ್ನು ಶಿಘ್ರ ಸಂಚಾರಕ್ಕೆ ಮುಕ್ತಗೊಳಿಸಲು ಮೆಟ್ರೋ ಸಂಸ್ಥೆ ಮುಂದಾಗಿದೆ. ಇದರಿಂದ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಉಂಟಾಗುತ್ತಿರುವ ಜನಸಂದಣಿ ತಪ್ಪಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು; ರಾಜಕಾರಣಿಗಳಿಗೆ ಕ್ಯಾಕರಿಸಿ ಉಗಿದ ಜನರು!