ಈ ಜಿಲ್ಲೆಯಲ್ಲಿ ಮಳೆಗಾಲದಲ್ಲೇ ಬೇಸಿಗೆಯ ಅನುಭವ: ಬಿಸಿಲಿನ ಝಳಕ್ಕೆ ಜನ, ಪ್ರವಾಸಿಗರು ಕಂಗಾಲು

Published : Oct 11, 2026, 08:24 PM IST
Hampi Weather

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿ ಅಕ್ಟೋಬರ್‌ನಲ್ಲೇ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಹೊಸಪೇಟೆಯಲ್ಲಿ ಒಣಹವೆ ಮುಂದುವರಿದಿದ್ದು, ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಮಳೆಯ ಕೊರತೆಯಿಂದ ರೈತರಲ್ಲೂ ಆತಂಕ ಹೆಚ್ಚಾಗಿದೆ.

ಹೊಸಪೇಟೆ (ಅ.11): ಮಳೆಗಾಲ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಆದರೆ ವಿಜಯನಗರ ಜಿಲ್ಲೆಯಲ್ಲಿ ವಿಪರೀತ ಬಿಸಿಲಿನ ಆರ್ಭಟ ಹೆಚ್ಚಾಗಿದೆ. ಮಳೆಗಾಲದಲ್ಲೇ ಬೇಸಿಗೆಯ ಅನುಭವವಾಗುತ್ತಿದೆ. ಬೆಳಗ್ಗೆಯಿಂದಲೇ ಬಿಸಿಲಿನ ತೀವ್ರತೆ ಕಾಣಿಸಿಕೊಳ್ಳುತ್ತಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ಕಾವು ಮತ್ತಷ್ಟು ಏರಿಕೆಯಾಗುತ್ತಿದೆ. ಬಿಸಿಲಿನ ಝಳಕ್ಕೆ ಕಂಗಾಲಾಗಿದ್ದಾರೆ. ಜಿಲ್ಲೆಯ ಆರು ತಾಲೂಕುಗಳಲ್ಲೂ ಕಳೆದ ಕೆಲ ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಒಣಹವೆ ಮುಂದುವರಿದಿದೆ.

ಬೆಳಗ್ಗೆ ಹಾಗೂ ಸಂಜೆ ತುಸು ತಂಪಾದ ವಾತಾವರಣ ಕಂಡುಬಂದರೂ ಮಧ್ಯಾಹ್ನದ ವೇಳೆಯಲ್ಲಿ ಬಿಸಿಲಿನ ತಾಪ ಜನರನ್ನು ಹೈರಾಣಾಗಿಸಿದೆ. ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಬೆಳಗ್ಗೆಯಿಂದಲೇ ಬಿಸಿಲಿನ ತೀವ್ರತೆ ಕಾಣಿಸಿಕೊಳ್ಳುತ್ತಿದೆ. ನಗರದ ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶ ಹಾಗೂ ಬಸ್ ನಿಲ್ದಾಣದ ಸೇರಿದಂತೆ ನಗರದ ಪ್ರಮುಖ ವೃತ್ತಗಳ ಸುತ್ತಮುತ್ತ ಮಧ್ಯಾಹ್ನದ ವೇಳೆ ಜನಸಂಚಾರ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ಜನ ಸಾಮಾನ್ಯರು, ಪಾದಚಾರಿಗಳು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟೋಪಿ, ಛತ್ರಿ ಹಾಗೂ ನೆರಳಿನ ಮೊರೆ ಹೋಗುತ್ತಿದ್ದಾರೆ.

ವಿಶ್ವವಿಖ್ಯಾತ ಹಂಪಿ ಪ್ರವಾಸಕ್ಕೂ ಬಿಸಿಲಿನ ಪರಿಣಾಮ ಕಂಡುಬರುತ್ತಿದೆ. ಹಂಪಿಯ ಸ್ಮಾರಕಗಳನ್ನು ವೀಕ್ಷಿಸಲು ದೇಶ-ವಿದೇಶದಿಂದ ಆಗಮಿಸುವ ಪ್ರವಾಸಿಗರು ರಜಾ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದರು. ಆದರೆ ಮಳೆಗಾಲದಲ್ಲೇ ವಿಪರೀತ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಭಾನುವಾರ ಹಂಪಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದರು.

ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು

ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕಾಣಿಸಿಕೊಳ್ಳುವಂತಹ ಬಿಸಿಲಿನ ಅನುಭವ ಅಕ್ಟೋಬರ್‌ ತಿಂಗಳಲ್ಲಿ ಕಂಡು ಬರುತ್ತಿರುವುದರಿಂದ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ ಅಕ್ಟೋಬರ್‌ನಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ ಪ್ರವಾಸಿಗರು ಹಂಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರಬೇಕಾಗಿತ್ತು. ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿ ಹಂಪಿಯಲ್ಲಿ ಪ್ರವಾಸಿಗರು ಯಾವಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದರು. ಆದರೆ ಭಾನುವಾರ ವಿಪರೀತ ಬಿಸಿಲಿನ ಕಾರಣ ಹಂಪಿಯಲ್ಲಿ ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದರು.

ಹಂಪಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬಿಸಿಲಿನ ತಾಪ ತಾಳಲಾರದೆ ತೆಲೆಗೆ ಟೋಪಿ ಧರಿಸಿಕೊಂಡು, ಕೆಲವರು ಛತ್ರಿ ಹಿಡಿದು ಸ್ಮಾರಕಗಳನ್ನು ವೀಕ್ಷಿಸಿದರು. ಪ್ರವಾಸಿಗರ ಸಂಖ್ಯೆ ಕಡಿಮೆ ಕಾರಣ ಪ್ರವಾಸಿ ಮಾರ್ಗದರ್ಶಿಗಳು ಸಹ ಖಾಲಿಯಾಗಿ ಸ್ಮಾರಕಗಳ ಬಳಿ ಕುಳಿತುಕೊಂಡಿದ್ದರು. ಮಳೆಗಾಲದ ಅಂತಿಮ ಹಂತದಲ್ಲೂ ಮಳೆಯ ಕೊರತೆ ಎದುರಾಗಿದ್ದು, ರೈತರು ಮಳೆಯನ್ನೇ ನಂಬಿ ಕೃಷಿ ಚಟುವಟಿಕೆಗಳ ಮೇಲೆ ಅವಲಂಭಿತರಾಗಿದ್ದರು.

ಮಳೆ ಬಾರದೇ ವಿಪರೀತ ಬಿಸಿಲು ಇರುವದರಿಂದ ಜನರು ಪರದಾಡುತ್ತಿದ್ದಾರೆ. ಅಕ್ಟೊಬರ್, ನವಂಬರ್ ತಿಂಗಳಲ್ಲಿಯಾದರೂ ಉತ್ತಮ ಮಳೆ ಬರಬಹುದೇ ಎಂದು ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಹಾಗೂ ಹಡಗಲಿ, ಹರಪನಹಳ್ಳಿ ತಾಲೂಕುಗಳಲ್ಲಿ ಬಿಸಿಲಿನ ತೀವ್ರತೆ ಮತ್ತು ಮಳೆಯ ಕೊರತೆಯ ಪರಿಸ್ಥಿತಿ ಹೀಗೇ ಮುಂದುವರಿದರೆ ಕೃಷಿ ಹಾಗೂ ಗ್ರಾಮೀಣ ಜನಜೀವನದ ಮೇಲೂ ಭೀಕರ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

PREV
Read more Articles on
click me!

Recommended Stories

'ಪ್ರೇಮದ ಊರಲಿ' ಸಿನಿಮಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ ಅದೊಂದು ಊರು!
ಮೈಸೂರು ದಸರಾಕ್ಕೆ ಸೆಡ್ಡು ಹೊಡೆಯುವ ಹೇಮಗುಡ್ಡದ ಉತ್ಸವ: ಇಲ್ಲಿದೆ 42 ವರ್ಷಗಳ ವಿಶೇಷತೆ