ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಗುಂಗಿನಿಂದ ಹೊರಬರುವ ಮುನ್ನವೇ ಮಾಗಡಿ ರಸ್ತೆಯಲ್ಲಿ ಮತ್ತೊಂದು ಸ್ಪೋಟ ಉಂಟಾಗಿದೆ. ಆದರೆ, ಇದು ದುಷ್ಕೃತ್ಯವಲ್ಲ, ಆಕಸ್ಮಿಕವಾಗಿ ಸಿಲಿಂಡರ್ ಸಿಡಿದು ಉಂಟಾಗಿರುವ ಸ್ಪೋಟವಾಗಿದೆ.
ಬೆಂಗಳೂರು (ಮಾ.09): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಸ್ಪೋಟವಾಗಿದೆ. ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಗ್ಯಾರೇಜ್‌ನಲ್ಲಿ ಕಾರಿಗೆ ವೆಲ್ಡಿಂಗ್ ಮಾಡುತ್ತಿರುವಾಗ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದ್ದು, ಸುತ್ತಲಿನ ಮನೆಗಳು ಹಾಗೂ ಕಟ್ಟಡಗಳಲ್ಲಿ ನಡುಕ ಉಂಟಾಗಿದೆ. ಆದರೆ, ಭಾರಿ ಶಬ್ದ ಉಂಟಾಗಿದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಬಸವೇಶ್ವರ ನಗರದ ಪೈ ಶೋರೂಮ್ ಬಳಿ ನಡೆದಿದೆ. ಇಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿಯಿದ್ದ ಕಾರ್ ಗ್ಯಾರೇಜ್‌ನಲ್ಲಿ ದುರಸ್ತಿಗೊಂಡ ಕಾರಿಗೆ ವೆಲ್ಡಿಂಗ್ ಮಾಡಲಾಗುತ್ತಿದೆ. ಈ ವೇಳೆ ಗ್ಯಾಸ್ ಸಿಲಿಂಡರ್ ಬಳಿ ಬೆಂಕಿ ಹೊತ್ತಿಕೊಂಡು ಸ್ಫೋಟ ಉಂಟಾಗಿದೆ. ಸಿಲಿಂಡರ್ ಬಳಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲಿದ್ದವರೆಲ್ಲರೂ ಅಲ್ಲಿಂದ ಓಡಿ ಹೋಗಿದ್ದಾರೆ. ಆದ್ದರಿಂದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಾಮೇಶ್ವರಂ ಕೆಫೆ ಬಾಂಬರ್ ಕ್ಲಿಯರ್ ಪಿಕ್ಚರ್ ಬಿಡುಗಡೆ ಮಾಡಿದ ಎನ್‌ಐಎ!
ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳದಲ್ಲಿ ಸೇರಿದ್ದ ಜನರನ್ನು ಚದುರಿಸಿದ್ದಾರೆ. ಇದರ ಬೆನ್ನಲ್ಲಿಯೇ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಿವೆ. ಆದರೆ, ಸ್ಥಳದಲ್ಲಿದ್ದ ಕಬ್ಬಿಣದ ತಗಡುಗಳು ಹಾಗೂ ಇತರೆ ವಸ್ತುಗಳು ಸಿಲಿಂಡರ್ ಸ್ಫೋಟದಿಂದಾಗಿ ದೂರಕ್ಕೆ ಸಿಡಿದಿವೆ. ಇನ್ನು ಘಟನೆಯ ನಂತರ, ಅಲ್ಲಲ್ಲಿ ಹೊಂತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದಾರೆ.
ಇನ್ನು ಸ್ಥಳಕ್ಕೆ ಸ್ಥಳಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಜನವಸತಿ ಪ್ರದೇಶದಲ್ಲಿ ಗ್ಯಾರೇಜ್ ನಡೆಸಲು ಪರವಾನಗಿ ಪಡೆದಿದ್ದರೇ ಎಂದು ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ, ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಗ್ಗೆಯೂ ಪರಿಶೀಲನೆ ಮಾಡುತ್ತಿದ್ದು, ವೆಲ್ಡಿಂಗ್ ಮಾಡುವವರನ್ನು ವಶಕ್ಕೆ ಪಡೆದು ಮಾಹಿತಿ ಕಲೆಹಾಕುತ್ತಿದ್ದಾರೆ.
ಜಾರ್ಜ್ ಎಂಬುವವರಿಗೆ ಸೇರಿದ ಗ್ಯಾರೇಜ್ ಇದಾಗಿದ್ದು, ಶಿವು ಹಾಗು ಜಾರ್ಜ್ ಕೆಲಸ ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸಂಜೆ 6 ಗಂಟೆ ವೇಳೆಗೆ ಘಟನೆ ನಡೆದಿದೆ. ಗ್ಯಾಸ್ ವೆಲ್ಟಿಂಗ್ ಮಷಿನ್ ಸ್ಪೋಟವಾಗಿದೆ. ಈ ಘಟನೆಯಿಂದ ನಾಲ್ಕು ಜನರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಆದರೂ, ಸ್ಥಳಕ್ಕೆ ಎಫ್ ಎಸ್ ಎಲ್ ತಂಡವು ಆಗಮಿಸಿದೆ. ಈ ಸ್ಫೋಟದಿಂದ ಪಕ್ಕದಲ್ಲಿದ್ದ ಕಲ್ಪವೃಕ್ಷ ಅನ್ನುವ ಮನೆಗೂ ಹಾನಿಯಾಗಿದೆ. ಜೊತೆಗೆ, ಮನೆ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಸ್ವಿಫ್ಟ್ ಡಿಸೈರ್ ಕಾರು, ದ್ವಿಚಕ್ರ ವಾಹನ ಸಂಪೂರ್ಣ ಡ್ಯಾಮೇಜ್ ಆಗಿವೆ. ಇನ್ನು ಹೊರಭಾಗದಲ್ಲಿ ನಿಲ್ಲಿಸಿದ್ದ ಇನೋವಾ ಕಾರ್ ಕೂಡ ಜಖಂ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿಗೆ ಬೇಕಿರೋದು 8 ಟಿಎಂಸಿ, ಕೆಆರ್‌ಎಸ್ ಡ್ಯಾಂನಲ್ಲಿ 34 ಟಿಎಂಸಿ ನೀರಿದೆ: ರಾಮ್ ಪ್ರಸಾತ್ ಮನೋಹರ್
ಸಿಲಿಂಡರ್ ಸ್ಪೋಟಕ್ಕೆ ಬೆಚ್ಚಿಬಿದ್ದ ಜನ:
ಈಗಾಗಲೇ ಮಾ.1ರಂದು ನಗರದ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟದಿಂದ ಬೆಂಗಳೂರಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ, ಯಾವುದೇ ಸ್ಪೋಟ ಸಂಭವಿಸಿದರೂ ಜೀವಭಯ ಪಡುವಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯ ಆರೋಪಿ ಸಿಗುವ ಮುನ್ನವೇ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ರಾಜಾಜಿನಗರ ಜನರು ಬೆಚ್ಚಿ ಬಿದ್ದಿದ್ದಾರೆ. ಇನ್ನು ಸ್ಪೋಟ ಸಂಭವಿಸುತ್ತಿದ್ದಂತೆ ಎದ್ದೆನೋ, ಬಿದ್ದೆನೋ ಎನ್ನುವಂತೆ ಮನೆಯ ಬಳಿ ಬಚ್ಚಿಟ್ಟುಕೊಂಡ ಘಟನೆ ನಡೆದಿದೆ.