ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಿ: ಸಚಿವ ತಿಮ್ಮಾಪುರ

By Kannadaprabha NewsFirst Published Mar 9, 2024, 5:13 PM IST
Highlights

ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದೇ ಇರುವ ಅಧಿಕಾರಿಗಳ ವಿರುದ್ಧ ಯಾವ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಖಡಕ್‌ ಎಚ್ಚರಿಕೆ ನೀಡಿದರು. 

ಬಾಗಲಕೋಟೆ (ಮಾ.09): ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದೇ ಇರುವ ಅಧಿಕಾರಿಗಳ ವಿರುದ್ಧ ಯಾವ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಖಡಕ್‌ ಎಚ್ಚರಿಕೆ ನೀಡಿದರು. ಜಿಪಂ ನೂತನ ಸಭಾಂಗಣದಲ್ಲಿ ಗುರುವಾರ ಜರುಗಿದ ಕುಡಿಯುವ ನೀರು ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣ ಅಥವಾ ಗ್ರಾಮೀಣ ಪ್ರದೇಶವಾಗಿರಲಿ. ಯಾವುದೇ ಭಾಗದಿಂದಲೂ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂಬ ದೂರವಾಣಿ ಕರೆಗಳು ಬಂದಲ್ಲಿ, ಮುಂದಿನ 12 ಗಂಟೆಗಳ ಅವಧಿಯೊಳಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಪರ್ಯಾಯ ವ್ಯವಸ್ಥೆ ಮಾಡಬೇಕು. 

ಇದಕ್ಕೆ ಆಯಾ ತಾಲೂಕಿನ ತಹಶೀಲ್ದಾರರು ಹೊಣೆಗಾರರಾಗಿದ್ದು, ಉಪವಿಭಾಗಾಧಿಕಾರಿಗಳ ಸಹಕಾರದೊಂದಿಗೆ ಸನ್ನಿವೇಶವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಮುಧೋಳ ತಾಲೂಕಿಗೆ ಘಟಪ್ರಭಾ ನದಿ ನೀರು ಬರದೇ ಇರುವುದಕ್ಕೆ ಕಾರಣ ತಿಳಿದು, ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಿರಿ ಎಂದು ಸೂಚಿಸಿದರು. ಮುಂದಿನ ಮೂರು ತಿಂಗಳು ಬರ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಜುಲೈ ಮಾಹೆಯವರೆಗೆ ಕುಡಿಯುವ ನೀರಿನ ನಿರ್ವಹಣೆಯನ್ನು ಹೇಗೆ ನಿಭಾಯಿಸುತ್ತಿರಿ ಎಂಬುದರ ಕುರಿತು ಕ್ರಿಯಾ ಯೋಜನೆ ಒಂದನ್ನು ಮಾ.11ರೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಸಿಇಒ ಹಾಗೂ ಜಿಲ್ಲಾಧಿಕಾರಿ ಭೂ ವಿಜ್ಞಾನಿಗಳೊಂದಿಗೆ ಸಮಾಲೋಚಿಸಿ, ಸಮಸ್ಯಾತ್ಮಕ ಪ್ರದೇಶಗಳಿಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗುವುದು ನಿಶ್ಚಿತ: ಸಂಸದ ಅನಂತಕುಮಾರ ಹೆಗಡೆ

ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಪರಿಶೀಲಿಸಿ ಆ ಕುರಿತು ಕೂಡ ವರದಿ ಸಲ್ಲಿಸಿ, ಹಾಸ್ಟೆಲ್‌, ಅಂಗನವಾಡಿ ಮತ್ತು ಶಾಲೆಗಳ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆದ್ಯತೆ ಮೇರೆಗೆ ಪರಿಶೀಲನೆ ಮಾಡಿ, ನೀರಿನ ಟ್ಯಾಂಕ್ ಸ್ವಚ್ಛವಾಗಿರುವ ಬಗ್ಗೆ ಗಮನ ಹರಿಸಬೇಕು. ಬೇಸಿಗೆಯಾಗಿರುವುದರಿಂದ ವಾಂತಿ, ಭೇದಿ ಉಲ್ಬಣಿಸುವ ಸಂಭವ ಇರುತ್ತದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಬೇಜವಾಬ್ದಾರಿ ತೋರುವಂತಿಲ್ಲ ಎಂದು ಹೇಳಿದರು ಸಭೆಯಲ್ಲಿ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ, ಹಟ್ಟಿ ಚಿನ್ನದ ಗಣಿ ನಿಯಮಿತ ಅಧ್ಯಕ್ಷ ಜೆ.ಟಿ.ಪಾಟೀಲ ಹಾಗೂ ಶಾಸಕ ಬಿ.ಬಿ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಸಿಇಒ ಶಶಿಧರ ಕುರೇರ್ ಉಪವಿಭಾಗಾಧಿಕಾರಿಗಳಾದ ಅಶೋಕ ಜಗಲಾಸರ, ಸಂತೋಷ ಕಾಮಗೌಡ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು ಮತ್ತು ಇಒ ಉಪಸ್ಥಿತರಿದ್ದರು.

click me!