ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ವಿರುದ್ಧ ಮಾನಸಿಕವಾಗಿ ಧ್ವನಿಯೆತ್ತಿದಾಗ ಮಾತ್ರ ಮನುಷ್ಯತ್ವ ರಕ್ಷಣೆ ಸಾಧ್ಯ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು: ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ವಿರುದ್ಧ ಮಾನಸಿಕವಾಗಿ ಧ್ವನಿಯೆತ್ತಿದಾಗ ಮಾತ್ರ ಮನುಷ್ಯತ್ವ ರಕ್ಷಣೆ ಸಾಧ್ಯ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ನಗರದ ಪುರಭವನದಲ್ಲಿ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿಯು ಭಾನುವಾರ ಆಯೋಜಿಸಿದ್ದ ಬಸವಣ್ಣ, ಡಾ. ಅಂಬೇಡ್ಕರ್ ಹಾಗೂ ಕುವೆಂಪು ಆಶಯದ ಅಸ್ಪೃಶ್ಯತೆ ಅಳಿಯಲಿ ಮನುಷ್ಯತ್ವ ಉಳಿಯಲಿ ಎಂಬ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
undefined
ಈಗಲೂ ಸಮಾಜವನ್ನು ನಿಯಂತ್ರಿಸುವ ಕೆಲಸವನ್ನು ಪ್ರಬಲಗಳೇ ಮಾಡುತ್ತಿವೆ. ಯಾವುದೇ ಉನ್ನತ ಹುದ್ದೆ, ಉದ್ಯಮಗಳ ಮಾಲೀಕರನ್ನು ಗಮನಿಸಿದರೆ, ಅಲ್ಲೆಲ್ಲಾ ಮೇಲ್ವರ್ಗದ ಜನರನ್ನೇ ಕಾಣಬಹುದು. ಮಾತಿನಲ್ಲಿ ಸಮಾನತೆಯಿದ್ದರೂ ಮಾನಸಿಕವಾಗಿ ಶೋಷಕ ಮನಃಸ್ಥಿತಿ ಹಲವರಲ್ಲಿದೆ. ಈ ರೀತಿಯ ಅಸಮಾನ ವ್ಯವಸ್ಥೆ ಸೃಷ್ಟಿಯಲ್ಲಿ ಶಿಕ್ಷಣ, ಸಂಘಟನೆ ಕೊರತೆ ಕಾರಣ ಎಂದು ಅವರು ಹೇಳಿದರು.
ರಾಜಕೀಯ ಪಕ್ಷಗಳಿಗೆ ತನ್ನದೇ ಆದ ಮಿತಿಯಿದೆ. ಅದನ್ನು ಮೀರಿ ಸಾಮಾಜಿಕ ಪರಿವರ್ತನೆಯಲ್ಲಿ ತೊಡಗುವುದು ಕಷ್ಟ. ಅದರೆ, ಸಾಮಾಜಿಕ ಸಂಘಟನೆಗಳ ವ್ಯಾಪ್ತಿ ದೊಡ್ಡದು. ತಮ್ಮ ಸದಸ್ಯರಲ್ಲಿ ಅರಿವು, ಶಕ್ತಿ ತುಂಬುವ ಮೂಲಕ ಬದಲಾವಣೆ ತರಬಲ್ಲದು. ಸಮಾಜದಲ್ಲಿ ಚಲನೆಯನ್ನೆ ನಿಲ್ಲಿಸಿರುವ ಶ್ರೆಣೀಕೃತ ಜಾತಿ ವ್ಯವಸ್ಥೆ ಹಾಗೂ ಶ್ರೇಷ್ಠತೆಯ ಮನಃಸ್ಥಿತಿ ನಾಶವಾಗಬೇಕು ಎಂದು ಅವರು ತಿಳಿಸಿದರು.
ಹಿಂದೂ ಧರ್ಮ ಎಂದೂ ಅಸ್ಪೃಶ್ಯತೆಯನ್ನು ಬೋಧಿಸಿಲ್ಲ. ಆದರೆ, ಜಾತಿ ವ್ಯವಸ್ಥೆಯನ್ನೇ ಶ್ರೇಷ್ಠ ಎಂದು ಹೇಳುವ ಹಿಂದುತ್ವ ಅಸ್ಪೃಶ್ಯತೆ ಪ್ರತಿಪಾದಿಸುತ್ತದೆ. ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಿದರೆ, ನಮ್ಮನ್ನು ಒಡೆಯಲು ಪ್ರಯತ್ನಿಸುವ ಹಿಂದುತ್ವವಾದಿಗಳನ್ನು ನಿವಾರಿಸಬಹುದು ಎಂದರು.
ಹಿಂದುತ್ವವಾದಿಗಳು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರನ್ನು ಒಂದಾಗಲು ಬಿಡುವುದಿಲ್ಲ ಎಂಬ ಅರಿವು ಬಾಬ ಸಾಹೇಬರಿಗಿತ್ತು. ಹೀಗಾಗಿಯೇ ಶೋಷಿತರಿಗೆ ಮೀಸಲಾತಿ ನೀಡಲು ಪಟ್ಟು ಹಿಡಿದಿದ್ದರು. ಆದರೆ, ಮೇಲ್ವರ್ಗದವರು ಹೋರಾಟವೇ ಇಲ್ಲದೇ ಮೀಸಲಾತಿ ಪಡೆದಿದ್ದಾರೆ. ಈ ವೈರುಧ್ಯದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ದುರ್ಬಲರ ರಕ್ಷಣೆಗೆ ನಿಂತಿದೆ ಎಂದು ಅವರು ಹೇಳಿದರು.
ದಸಂಸ ರಾಜ್ಯ ಸಂಸ್ಥಾಪಕ ಸಂಯೋಜಕ ವಿ. ನಾಗರಾಜು ಮಾತನಾಡಿ, ಸಮಾಜದಲ್ಲಿನ ಅನ್ಯಾಯದ ವಿರುದ್ಧ ತಿರುಗಿ ಬೀಳುವ ಕೆಲಸ ಮಾಡಬೇಕು. ಇದು ಇಷ್ಟರೊಳಗೆ ಆಗಬೇಕಿತ್ತು. ಇನ್ನಾದರೂ ನಾವು ಆಲೋಚಿಸಬೇಕು. ಡಾ. ಅಂಬೇಡ್ಕರ್ ಹೇಳಿದಂತೆ ಸಾಮಾಜಿಕ ವ್ಯವಸ್ಥೆ ಬದಲು ಮಾಡದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಸಂವಿಧಾನ ಇದನ್ನೆ ಧ್ವನಿಸುತ್ತದೆ ಎಂದು ತಿಳಿಸಿದರು.
ಮಾಜಿ ಮೇಯರ್ ಪುರುಷೋತ್ತಮ್, ಚಿಂತಕ ಡಾ.ಎಸ್. ತುಕಾರಾಮ್, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ದಸಂಸ ರಾಜ್ಯ ಸಂಘಟನಾ ಸಂಯೋಜಕ ದೇವಗಳ್ಳಿ ಸೋಮಶೇಖರ್, ಮುಖಂಡರಾದ ದೇವಪ್ಪ ದೇವರಮನಿ, ಮುನಿರಾಜು, ರಾಜಶೇಖರ್, ಕಾರ್ಯ ಬಸವಣ್ಣ ಮೊದಲಾದವರು ಇದ್ದರು.