ಬೆಂಗಳೂರು ಜನತೆಗೆ ಆಸ್ತಿ ತೆರಿಗೆ ಬರೆ ಎಳೆದ ಬಿಬಿಎಂಪಿ; ನಗರಾಭಿವೃದ್ಧಿ ಮಂತ್ರಿಗೆ ಚಳಿ ಬಿಡಿಸಿದ ರಾಮಲಿಂಗಾರೆಡ್ಡಿ!

By Sathish Kumar KHFirst Published Jan 10, 2024, 11:50 AM IST
Highlights

ಬಿಬಿಎಂಪಿ ನಿಯಮಬಾಹಿರವಾಗಿ ಆಸ್ತಿ ತೆರಿಗೆ ಪರಿಷ್ಕರಣೆ ಹಾಗೂ 7 ವರ್ಷಗಳ ಹಿಂದಿನಿಂದಲೂ ಪೂರ್ವಾನ್ವಯ ಮಾಡಿರುವುದಕ್ಕೆ ಸಚಿವ ರಾಮಲಿಂಗಾರೆಡ್ಡಿ ಕೆಂಡಾಮಂಡಲ ಆಗಿದ್ದಾರೆ.

ಬೆಂಗಳೂರು (ಜ.10): ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಿ ಕಳೆದ 2016-17ನೇ ಸಾಲಿನಿಂದಲೇ ಪರಿಷ್ಕೃತ ದರವನ್ನು ಪಾವತಿಸುವಂತೆ ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೂಡಲೈ ಈ ಅವೈಜ್ಞಾನಿಕ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ವಾಪಸ್‌ ಪಡೆಯುವಂತೆ ನಿರ್ದೇಶನ ನೀಡಿದ್ದಾರೆ.

ಸ್ವತಃ ಬೆಂಗಳೂರಿನ ನಿವಾಸಿಯಾಗಿರುವ ಹಾಗೂ ಬೆಂಗಳೂರು ನಗರದಲ್ಲಿಯೇ ನಿರಂತರವಾಗಿ ಸ್ಪರ್ಧೆ ಮಾಡಿ ಮಂತ್ರಿಯೂ ಆಗಿರುವ ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಿವಾಸಿಗಳ ಕಷ್ಟ ಕಾರ್ಪಣ್ಯಗಳ ಬಗ್ಗೆ ಮಾಹಿತಿಯಿದೆ. ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನ ಸಿಗುತ್ತದೆ ಎಂಬ ಅಗಾಧ ನಂಬಿಕೆಯಿತ್ತು. ಆದರೆ, ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಆಸ್ತಿ ತೆರಿಗೆ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲವೆಂದು ತಿಳಿದುಕೊಂಡ ಬಿಬಿಎಂಪಿ ಅಧಿಕಾರಿಗಳು ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಿ 7 ವರ್ಷಗಳ ಹಿಂದಿನಿಂದಲೇ ಪೂರ್ವಾನ್ವಯ ಆಗುವಂತೆ ಮಾಡಿದ್ದಾರೆ. ಜೊತೆಗೆ, ಮನೆ ಮಾಲೀಕರಿಗೆ ಈಗ ನೋಟಿಸ್‌ ನೀಡಿ 2016-17ನೇ ಸಾಲಿನಿಂದಲೂ ಪರಿಷ್ಕೃತ ಆಸ್ತಿ ತೆರಿಗೆ ಮೊತ್ತ ಪಾವತಿಗೆ ಸೂಚನೆ ನೀಡಿದ್ದಾರೆ.

Latest Videos

ಮನೆ ಖಾಲಿ ಮಾಡಿಸಲು ಕುಡಿವ ನೀರು, ವಿದ್ಯುತ್ ಸಂಪರ್ಕ ಕಡಿತ: ವೃದ್ಧ ದಂಪತಿ ಕತ್ತಲಲ್ಲಿ ಪರದಾಟ

ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಬಿಎಂಪಿ ಸ್ವತ್ತುಗಳ ಆಸ್ತಿ ತೆರಿಗೆ ಪರಿಷ್ಕರಣೆ ವಿಚಾರವಾಗಿ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನ ನಿವಾಸಿಗಳ ಮೇಲೆ ಒತ್ತಡ ತರುವುದು ಸರಿಯಲ್ಲ ಎಂದು ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ 2016-17ನೇ ಸಾಲಿನಿಂದ ಆಸ್ತಿ ತೆರಿಗೆ ಮೊತ್ತವನ್ನು ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ನೋಟಿಸ್ ನೀಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ಬಿಬಿಎಂಪಿ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದೆ 2016-17 ಸಾಲಿನಿಂದ ಏಳು ವರ್ಷಗಳಿಗೆ ಪರಿಷ್ಕರಣೆ ನೋಟಿಸ್ ಜಾರಿ‌ ಮಾಡಿರುವುದು ಕಂಡುಬಂದಿದೆ. ಈ ರೀತಿ ಸಾರ್ವಜನಿಕರ ಮೇಲೆ ಒತ್ತಡ ತರುತ್ತಿರುವುದು ಉತ್ತಮವಲ್ಲ. ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ (ಕೆಎಂಸಿ)-1976 ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಯ್ದೆ-2020 ಅನ್ವಯ ಒಮ್ಮಲೇ 7 ವರ್ಷಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವುದು ನಿಯಮಬಾಹಿರವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ, ಮೇಲ್ಕಂಡ ಈ ಎಲ್ಲಾ ಅಂಶಗಳನ್ನು ಪರಿಶೀಲಿಸಬೇಕು. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬೆಂಗಳೂರು ಉಸ್ತಿವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸಭೆ ನಡೆಸಬೇಕು. ಬಿಬಿಎಂಪಿ ವಿಧಿಸುತ್ತಿರುವ ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು. ಈ ಮೂಲಕ ಬೆಂಗಳೂರಿನ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸಂಬಂಧಿಸಿದವರಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ರಾಮಲಿಂಗರೆಡ್ಡಿ ಒತ್ತಾಯ ಮಾಡಿದ್ದಾರೆ.

ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ಮತ್ತೆ ಬಂದ್: ಸಂಕ್ರಾತಿ ಹಬ್ಬಕ್ಕೆ ಶಾಕ್‌ ಕೊಟ್ಟ ಪೊಲೀಸರು!

ರಾಜ್ಯದ ಬೃಹತ್‌ ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ಬಿಬಿಎಂಪಿಗೆ ಕಳೆದ ನಾಲ್ಕು ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ. ವಾರ್ಷಿಕ 10,000 ಕೋಟಿ ರೂ. ಆದಾಯವಿರುವ ಬಿಬಿಎಂಪಿಯಲ್ಲಿ ಐಎಎಸ್‌ ಅಧಿಕಾರಿಗಳದ್ದೇ ದರ್ಬಾರ್‌ ಆಗಿದೆ. ಕೆಎಂಸಿ ಕಾಯ್ದೆಯಡಿ ಪ್ರತಿ ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಅವಕಾಶವಿತ್ತು. ಆದರೆ, ಈ ಹಿಂದಿನ ಬಿಬಿಎಂಪಿ ಸ್ಥಳೀಯ ಆಡಳಿತ ಸಂಸ್ಥೆಯ ಜನಪ್ರತಿನಿಧಿಗಳು ಹಾಗೂ 2020ರಲ್ಲಿ ಕಂಡುಬಂದ ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ 7 ವರ್ಷಗಳಿಂದ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿರಲಿಲ್ಲ. ಆದರೆ, ಈಗ ಐಎಎಸ್‌ ಅಧಿಕಾರಿಗಳು ಸ್ಥಳೀಯ ಜನರ ಬಗ್ಗೆ ಆಲೋಚನೆ ಮಾಡದೇ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿ 2016-17ನೇ ಸಾಲಿನಿಂದಲೇ ಪೂರ್ವಾನ್ವಯ ಆಗುವಂತೆ ಹೆಚ್ಚಿನ ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡುತ್ತಿದ್ದಾರೆ.

click me!