ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ ಅಂತ್ಯ, ₹13.3 ಕೋಟಿ ಆಸ್ತಿ ಜಪ್ತಿ! ಲಂಚದ 'ಡೈರಿ' ಪತ್ತೆ

Published : Jun 25, 2026, 07:18 PM IST
Belagavi ed raid excise officer Manjunath

ಸಾರಾಂಶ

ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ, ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲೆ ನಡೆದ ಇಡಿ ದಾಳಿ ಅಂತ್ಯಗೊಂಡಿದೆ. ಈ ಕಾರ್ಯಾಚರಣೆಯಲ್ಲಿ 13.3 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಸೇರಿದಂತೆ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಲಂಚದ ವಿವರಗಳಿದ್ದ ಡೈರಿಯೊಂದು ತನಿಖೆಯ ದಿಕ್ಕನ್ನೇ ಬದಲಿಸಿದೆ.

ಬೆಳಗಾವಿ (ಜೂ.25): ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ ಹಾಗೂ ಬೆಳಗಾವಿ ವಲಯ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲಿನ ಇಡಿ (ED) ದಾಳಿ ಅಂತ್ಯಗೊಂಡಿದೆ. ಕಾರ್ಯಾಚರಣೆಯ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ದಾಳಿಯ ವೇಳೆ ಪತ್ತೆಯಾದ ಆಸ್ತಿ ಮತ್ತು ನಗದಿನ ವಿವರಗಳನ್ನು ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

13.3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶ:

ಬೆಳಗಾವಿ, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಒಟ್ಟು 14 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಬರೋಬ್ಬರಿ 13.3 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಇದರ ವಿವರ ಹೀಗಿದೆ:

ನಗದು: 5.5 ಕೋಟಿ ರೂಪಾಯಿ.

ಚಿನ್ನಾಭರಣ: 7.8 ಕೋಟಿ ರೂಪಾಯಿ ಮೌಲ್ಯದ ಒಡವೆಗಳು.

ವಿದೇಶಿ ಕರೆನ್ಸಿ: 3.3 ಲಕ್ಷ ರೂಪಾಯಿ ಮೌಲ್ಯದ ಕರೆನ್ಸಿ.

ಇವುಗಳ ಜೊತೆಗೆ ಹೂಡಿಕೆಯ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ಕ್ಯಾಶ್ ಬುಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಹಿರಂಗವಾಯ್ತು ಭ್ರಷ್ಟಾಚಾರದ 'ಡೈರಿ' ರಹಸ್ಯ:

ಈ ದಾಳಿಯಲ್ಲಿ ಅತ್ಯಂತ ಪ್ರಮುಖವಾಗಿ ಸಿಕ್ಕಿರುವುದು ಒಂದು 'ಡೈರಿ'. ಈ ಡೈರಿಯಲ್ಲಿ ವಿವಿಧ ಮದ್ಯದಂಗಡಿಗಳಿಂದ ಪ್ರತಿ ತಿಂಗಳು ಎಷ್ಟು ಲಂಚ ಪಡೆಯಲಾಗುತ್ತಿತ್ತು ಎಂಬ ಬಗ್ಗೆ ಸವಿಸ್ತಾರವಾಗಿ ಉಲ್ಲೇಖಿಸಲಾಗಿದೆ. ಅಬಕಾರಿ ಲೈಸೆನ್ಸ್ ಮಂಜೂರು ಮಾಡುವ ಮತ್ತು ನವೀಕರಿಸುವ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಲಂಚದ ಹಗರಣ ನಡೆದಿದೆ ಎಂದು ಇಡಿ ತಿಳಿಸಿದೆ. ಲಂಚದ ಹಣವನ್ನು ವೈಯಕ್ತಿಕ ಬಳಕೆ, ಐಷಾರಾಮಿ ಆಸ್ತಿ ಖರೀದಿ ಮತ್ತು ಬೆನಾಮಿ ಹೆಸರಿನಲ್ಲಿ ವ್ಯವಹಾರ ಹೂಡಿಕೆಗೆ ಬಳಸಿರುವುದು ಪತ್ತೆಯಾಗಿದೆ.

ಲೋಕಾಯುಕ್ತ ಎಫ್‌ಐಆರ್ ಆಧರಿಸಿ ದಾಳಿ:

ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಜಗದೀಶ್ ನಾಯಕ್, ಕೆ.ಎಂ. ತಮ್ಮಣ್ಣ ಮತ್ತು ವೈ. ಮಂಜುನಾಥ್ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ (FIR) ಆಧಾರದ ಮೇಲೆ ಇಡಿ ಅಧಿಕಾರಿಗಳು 2002ರ ಪಿಎಂಎಲ್‌ಎ (PMLA) ಸೆಕ್ಷನ್ 17ರ ಅಡಿಯಲ್ಲಿ ಈ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇಲಾಖೆಯಲ್ಲಿ ವ್ಯವಸ್ಥಿತವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಧಿಕಾರಿಗಳು ಕುಟುಂಬದ ಸದಸ್ಯರು ಮತ್ತು ಸಹಚರರ ಹೆಸರಿನಲ್ಲಿ ಹಣ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿಕರ ಮೇಲೆಯೇ ಈ ದಾಳಿ ನಡೆದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಸದ್ಯಕ್ಕೆ ತನಿಖೆ ಮುಂದುವರಿದಿದ್ದು, ಈ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಇನ್ನು ಯಾರ್ಯಾರ ಕೈವಾಡವಿದೆ ಎಂಬುದು ಹೊರಬರಬೇಕಿದೆ.

PREV
Read more Articles on
click me!

Recommended Stories

Actress Amulya: ಆರ್.ಆರ್.ನಗರ ಬೆಟ್ಟದ ಮೇಲೆ ಐಷಾರಾಮಿ ಪಬ್ ಕಟ್ಟಿದ ನಟಿ ಅಮೂಲ್ಯ; ಇದು ಸೋಮರಸದ ಸ್ವರ್ಗ!
ವೈಶಾಕ್ ಅಂತಿಮ ದರ್ಶನಕ್ಕೆ ಸ್ಮಶಾನಕ್ಕೆ ಓಡೋಡಿ ಬಂದ ನಟಿ Krishi Thapanda, ಮೃತದೇಹ ನೋಡಲು ಅವಕಾಶ ನೀಡದ ಕುಟುಂಬಸ್ಥರು