ಬಿಡಿಎ ವತಿಯಿಂದಲೇ 42 ಕಡೆ ಕೆರೆ ಒತ್ತುವರಿ ಮಾಡಿ ಬಡಾವಣೆ ನಿರ್ಮಾಣ!

By Suvarna NewsFirst Published Sep 18, 2022, 2:16 PM IST
Highlights

ಬಿಡಿಎ ವತಿಯಿಂದಲೇ 42 ಕಡೆ ಕೆರೆ ಒತ್ತುವರಿ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 208 ಕೆರೆ. 19 ಕೆರೆಗಳು ಸಂಪೂರ್ಣ ನಾಶ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ .

ಬೆಂಗಳೂರು (ಸೆ.18): ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ನಿಷ್ಕಿ್ರಯಗೊಂಡ 19 ಕೆರೆಗಳನ್ನು ಸರ್ಕಾರದ ವಿವಿಧ ಇಲಾಖೆ ಹಾಗೂ ಅಂಗ ಸಂಸ್ಥೆಗಳ ಪೈಕಿ ಬಿಡಿಎ ವತಿಯಿಂದ 42 ಕಡೆಗಳಲ್ಲಿ ಒತ್ತುವರಿಯಾಗಿರುವ ಬಗ್ಗೆ ಒಪ್ಪಿಕೊಂಡಿದ್ದು, ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 208 ಕೆರೆಗಳಿದ್ದು, ಈ ಪೈಕಿ 201 ಕೆರೆಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ. ಹಲವು ವರ್ಷಗಳ ಹಿಂದೆಯೇ ವಿವಿಧ ಸರ್ಕಾರಿ ಇಲಾಖೆಗಳು, ಪ್ರಾಧಿಕಾರಿಗಳು, ಖಾಸಗಿ ವ್ಯಕ್ತಿಗಳ ಒತ್ತುವರಿಯಿಂದ 19 ಕೆರೆಗಳು ಸಂಪೂರ್ಣ ನಿಷ್ಕ್ರೀಯಗೊಂಡಿವೆ. ಈ ಬಗ್ಗೆ ಹಲವು ಸಮಿತಿಗಳಿಂದ ವರದಿ ಸಿದ್ಧಪಡಿಸಿ ನೀಡಿವೆ. ಆದರೆ, ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪಾಲಿಕೆಯ ಹಲವು ಕೆರೆಗಳಲ್ಲಿ 42 ಕಡೆ ಒತ್ತುವರಿ ಮಾಡಿಕೊಂಡು ಬಡಾವಣೆಗಳು ಮತ್ತು ಕಟ್ಟಡಗಳ ನಿರ್ಮಾಣ ಮಾಡಿರುವುದಾಗಿ ದಾಖಲೆ ಸಮೇತ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಬಿಡಿಎ ನಿರ್ಮಿತ ಬಡಾವಣೆಗಳಷ್ಟೇ ಅಲ್ಲದೇ ಬಿಡಿಎ ಅನುಮೋದಿತ ಬಡಾವಣೆ ಹಾಗೂ ಖಾಸಗಿ ಬಿಲ್ಡರ್‌ಗಳು, ವ್ಯಕ್ತಿಗಳಿಂದ ಒತ್ತುವರಿ ಮಾಡಿಕೊಂಡಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಿದೆ. 1998, 2000 ಹಾಗೂ 2014ರಲ್ಲಿ ಕೆರೆಗಳ ಒತ್ತುವರಿ ಎಷ್ಟುಆಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದೆ. ಸರ್ಕಾರದೊಂದಿಗೆ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

Lake Encroachment: ಅಧಿವೇಶನದಲ್ಲೇ ಕೆರೆ ನುಂಗಣ್ಣರ ಪಟ್ಟಿ ಬಿಡುಗಡೆ ಮಾಡುವೆ: ಸಚಿವ ಅಶೋಕ್‌

ಭಾಗ್ಮನೆ ಟೆಕ್‌ಪಾರ್ಕ್ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್
ರಾಜಕಾಲುವೆ ಒತ್ತುವರಿ ಮಾಡಿ ಕಾಂಪೌಂಡ್‌ ನಿರ್ಮಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ‘ಭಾಗ್ಮನೆ ಟೆಕ್‌ಪಾರ್ಕ್’ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

Bengaluru: ಆಪರೇಷನ್‌ ಡೆಮಾಲಿಷ್‌ಗೆ ಹೆದರಿ ನಿವಾಸಿಗಳಿಂದಲೇ ಒತ್ತುವರಿ ತೆರವು..!

ರಾಜಕಾಲುವೆ ಒತ್ತುವರಿ ಮಾಡಿದೆ ಎಂದು ಆರೋಪಿಸಿ ಜಾಗ ತೆರವಿಗೆ ಪಾಲಿಕೆ ಗುರುತು ಮಾಡಿರುವದನ್ನು ಪ್ರಶ್ನಿಸಿ ಭಾಗ್ಮನೆ ಟೆಕ್‌ಪಾರ್ಕ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಸರ್ವೆ ಮತ್ತು ಭೂದಾಖಲೆಗಳ ಇಲಾಖೆಯ ವರದಿಗೆ ಬಾಗ್ಮನೆ ಟೆಕ್‌ಪಾರ್ಕ್ನಿಂದ ಪ್ರತಿಕ್ರಿಯೆ ಬರುವವರೆಗೂ ಕ್ರಮಕ್ಕೆ ಮುಂದಾಗಬಾರದು. ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.

ಮಾಲೀಕರಿಂದಲೇ ಸ್ವಯಂ ಒತ್ತುವರಿ ತೆರವು: ದಾಸರಹಳ್ಳಿ ವಲಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ ಕಳೆದ ಗುರುವಾರ 11 ಕಡೆ ಒತ್ತುವರಿ ತೆರವು ಮಾಡಲಾಗಿತ್ತು, ಶುಕ್ರವಾರವೂ ಅದೇ ಸ್ಥಳದಲ್ಲಿ ತೆರವು ಕಾರ್ಯಾಚರಣೆ ನಡೆಸಿ ರಾಜಕಾಲುವೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಯಿತು. ಬಿಬಿಎಂಪಿಯ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳು ಕಟ್ಟಡ ಅಥವಾ ಗೋಡೆ ತೆರವು ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗಲಿದೆ ಎಂಬ ಕಾರಣಕ್ಕೆ ಶುಕ್ರವಾರ ಮಾಲಿಕರೇ ಸರ್ವೇ ಅಧಿಕಾರಿಗಳು ಗುರುತಿಸಿದ ಮಾರ್ಕಿಂಗ್‌ಗೆ ಅನುಗುಣವಾಗಿ ಸ್ವಯಂ ತೆರವು ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಯಲಹಂಕ ವಲಯ ಕುವೆಂಪುನಗರ ವಾರ್ಡ್‌ ಸಿಂಗಾಪುರ ಲೇಔಟ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಲ್ಯಾಂಡ್‌ ಮಾರ್ಕ್ ಅಪಾರ್ಚ್‌ಮೆಂಟ್‌ನಲ್ಲಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ.

ವಾಸಿಸುವ ಕಟ್ಟಡ ಇದ್ದರೆ ನೋಟಿಸ್‌: ಸರ್ವೇ ಕಾರ್ಯ ನಡೆಸುವ ವೇಳೆ ನಿವೇಶನ ಮತ್ತು ಕಾಂಪೌಂಡ್‌ಗಳಿದ್ದರೆ ತಕ್ಷಣ ತೆರವುಗೊಳಿಸಲಾಗುತ್ತದೆ. ಒಂದು ವೇಳೆ ಕಟ್ಟಡವಿದ್ದು, ಅದರಲ್ಲಿ ಜನರು ವಾಸವಿದ್ದರೆ ನೋಟಿಸ್‌ ನೀಡಿ ತೆರವುಗೊಳಿಸಲಾಗುವುದು ಎಂದು ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಬಸವರಾಜ್‌ ಕಬಾಡೆ ಮಾಹಿತಿ ನೀಡಿದ್ದಾರೆ.

click me!