Gadag News: ಕೊಚ್ಚಿಹೋದ ಮಣ್ಣು, ಮರುಭೂಮಿಯಂತಾದ ಹೊಲ!

By Kannadaprabha News  |  First Published Sep 18, 2022, 1:34 PM IST

ಕಳೆದ 2 ತಿಂಗಳಿಂದ ನಿರಂತರವಾಗಿ ಸುರಿದ ಮಳೆಗೆ ರೈತರ ಬದುಕು ಅಧೋಗತಿ ತಲುಪಿದೆ. ಬಿತ್ತನೆ ಮಾಡಿದ ಬೆಳೆಗಳೆಲ್ಲ ಕೊಳೆತು ಹೋಗಿ ರೈತರು ಕಣ್ಣೀರು ಹಾಕುವಂತಾಗಿರುವುದು ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಪಟ್ಟಣದ ರೈತ ನಿಜಗುಣೆಪ್ಪ ಗಾಂಜಿ ಅವರು ತಮ್ಮ 2 ಎಕರೆ ಜಮೀನಿನಲ್ಲಿ ಹೂಕೋಸು ಕೊಳೆತು ಹೋಗಿ ರೈತ ಕಣ್ಣೀರು ಹಾಕುತ್ತಿದ್ದಾನೆ.


ಅಶೋಕ ಸೊರಟೂರ

 ಲಕ್ಷ್ಮೇಶ್ವರ (ಸೆ.18) : ತಾಲೂಕಿನಾದ್ಯಂತ ಕಳೆದ 2 ತಿಂಗಳಿಂದ ನಿರಂತರವಾಗಿ ಸುರಿದ ಮಳೆಗೆ ರೈತರ ಬದುಕು ಅಧೋಗತಿ ತಲುಪಿದೆ. ಬಿತ್ತನೆ ಮಾಡಿದ ಬೆಳೆಗಳೆಲ್ಲ ಕೊಳೆತು ಹೋಗಿ ರೈತರು ಕಣ್ಣೀರು ಹಾಕುವಂತಾಗಿರುವುದು ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಪಟ್ಟಣದ ರೈತ ನಿಜಗುಣೆಪ್ಪ ಗಾಂಜಿ ಅವರು ತಮ್ಮ 2 ಎಕರೆ ಜಮೀನಿನಲ್ಲಿ ಹೂಕೋಸು ಬಿತ್ತನೆ ಮಾಡಿದ್ದರು. ಹೂಕೋಸು ಬಲಿತು ಕಾಯಿ ಕಟ್ಟುವ ಹೊತ್ತಿನಲ್ಲಿ ಅತಿಯಾದ ಮಳೆಗೆ ಹೊಲದಲ್ಲಿ ನೀರು ನಿಂತು ಕೈಗೆ ಬಂದ ಬೆಳೆ ಕೊಳೆತು ಹೋಗಿದೆ. 10 ಗ್ರಾಂ ಹೂಕೋಸು ಬೀಜಕ್ಕೆ .300ಗಳಂತೆ ಖರ್ಚು ಮಾಡಿ ಸುಮಾರು 50 ಪ್ಯಾಕೆಟ್‌ ಬೀಜ ತಂದು ಬಿತ್ತನೆ ಮಾಡಿದ್ದರು. ಬಿತ್ತನೆಗಾಗಿ ಸುಮಾರು .70 ಸಾವಿರ ಖರ್ಚು ಮಾಡಿದ್ದರು. ಉತ್ತಮವಾಗಿ ಬೆಳೆದಿದ್ದ ಹೂಕೋಸು ಹೊಲದಲ್ಲಿಯೇ ಕೊಳೆತು ಹೋಗಿದೆ. ಸಾಲ- ಸೋಲ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ನೆಲ ಕಚ್ಚಿದ್ದರಿಂದ ರೈತರು ಬೀದಿಗೆ ಬಂದು ನಿಲ್ಲುವಂತೆ ಮಾಡಿದೆ ಎಂದು ತಮ್ಮ ಅಳಲು ತೋಡಿಕೊಂಡರು.

Tap to resize

Latest Videos

undefined

ಅತಿವೃಷ್ಟಿ ಹಾನಿ: ಸರ್ಕಾರ ಪ್ರತಿ ಹೆಕ್ಟೇರ್‌ಗೆ 50,000 ರೂ. ಪರಿಹಾರ ನೀಡಲಿ

ಲಕ್ಷ್ಮೇಶ್ವರ ತಾಲೂಕಿನಲ್ಲಿ ಮೇ ತಿಂಗಳಲ್ಲಿ 200.6 ಮಿಮೀ, ಜೂನ್‌ನಲ್ಲಿ 78.6 ಮಿಮೀ, ಜುಲೈನಲ್ಲಿ 139.2 ಮಿಮೀ ಹಾಗೂ ಆಗಸ್ಟ್‌ ತಿಂಗಳಲ್ಲಿ 200 ಮಿಮೀಗಿಂತ ಅಧಿಕವಾದ ಮಳೆಯಾಗಿದ್ದು, ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ 2 ತಿಂಗಳಿಂದ ನಿರಂತರವಾಗಿ ಸುರಿದ ಮಳೆಗೆ ಹೊಲಗಳು ಹೊಂಡಮಯವಾಗಿದೆ. ಹೋದಲ್ಲಿ ಕಾಲು ಇಡದಂತಹ ಸ್ಥಿತಿ ತಲುಪಿದೆ. ರೈತರು ಬಿತ್ತನೆ ಮಾಡಿದ್ದ ಬೆಳೆಗಳು ನೀರಿನಲ್ಲಿ ಕರಗಿ ಹೋಗಿದೆ. ತಾಲೂಕಿನ ಬಹುತೇಕ ಕೆರೆಗಳು ಕೋಡಿ ಬಿದ್ದು ರೈತರ ಹೊಲಗಳಿಗೆ ನೀರು ನುಗ್ಗಿದ್ದರಿಂದ ಫಲವತ್ತಾದ ಭೂಮಿಯ ಸಾರ ಕೊಚ್ಚಿ ಹೋಗಿ, ಹಲವು ವರ್ಷಗಳಿಂದ ರೈತರು ಕಾಪಾಡಿಕೊಂಡು ಬಂದಿದ್ದ ಫಲವತ್ತಾದ ಮಣ್ಣು ಹಳ್ಳ ಕೊಳ್ಳ ಸೇರಿ ಹೋಗಿ ಹೊಲಗಳು ಮರುಭೂಮಿಯಂತಾಗಿದೆ.

ತಾಲೂಕಿನಲ್ಲಿ ಬೆಳೆದ 10,036 ಹೆಕ್ಟೇರ್‌ ಗೋವಿನಜೋಳ, 2,750 ಹೆಕ್ಟೇರ್‌ ಹೆಸರು, 2,261 ಹೆಕ್ಟೇರ್‌ ಶೇಂಗಾ ಬೆಳೆ, 197 ಹೆಕ್ಟೇರ್‌ ಸೋಯಾಬಿನ್‌, 4,123 ಹೆಕ್ಟೇರ್‌ ಬಿಟಿ ಹತ್ತಿ, 117 ಹೆಕ್ಟೇರ್‌ ಕಬ್ಬು ಒಟ್ಟು 19,484 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿವೆ ಎಂದು ವರದಿ ನೀಡಿದ್ದಾರೆ. ಇದಲ್ಲದೆ ತೋಟಗಾರಿಕೆಯ ಬೆಳೆಗಳಾದ 25 ಹೆಕ್ಟೇರ್‌ ಹೂಕೋಸು, 52 ಹೆಕ್ಟೇರ್‌ ಈರುಳ್ಳಿ, 100 ಹೆಕ್ಟೇರ್‌ ಟೊಮ್ಯಾಟೋ, 100 ಹೆಕ್ಟೇರ್‌ ಚೆಂಡು ಹೂವು ಮತ್ತು ಗಲಾಟಿ ಹೂವು, 62 ಹೆಕ್ಟೇರ್‌ ಬದನೆಕಾಯಿ, 68 ಹೆಕ್ಟೇರ್‌ ಮೆಣಸಿನಕಾಯಿ, 25 ಹೆಕ್ಟೇರ್‌ ಬೊಳ್ಳೊಳ್ಳಿ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿ ಹೋಗಿವೆ ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ, ಇನ್ನೂ ಸಾಕಷ್ಟುಹೊಲಗಳಿಗೆ ಯಾವುದೇ ಅಧಿಕಾರಿ ಭೇಟಿ ನೀಡಿಲ್ಲ, ರೈತರಿಗೆ ನೈಜವಾಗಿ ಆಗಿರುವ ಹಾನಿಯ ಕುರಿತು ಸರ್ಕಾರಕ್ಕೆ ಮಾಹಿತಿ ಸಲ್ಲಿಸಬೇಕು ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.

ಕಾಲುವೆ ಒಡೆದು ಅಪಾರ ಪ್ರಮಾಣ ಜಮೀನುಗಳಿಗೆ ನೀರು

ಕಳೆದ 2 ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರಿಂದ ಬಿತ್ತನೆ ಮಾಡಿದ ಬೆಳೆಗಳು ಕೊಳೆತು ಹೋಗುತ್ತಿವೆ. ಗೋವಿನಜೋಳ, ಶೇಂಗಾ, ಬಿಟಿ ಹತ್ತಿ, ಹೆಸರು, ಕಬ್ಬು, ಬಾಳೆ ಹೀಗೆ ಎಲ್ಲ ಬೆಳೆಗಳಲ್ಲಿ ನೀರು ನಿಂತು ಬೆಳೆಗಳ ಬೆಳವಣಿಗೆ ಸಾಧ್ಯವಾಗದೆ ಸತ್ತು ಹೋಗಿವೆ. ಅಲ್ಲದೆ ಅಧಿಕವಾದ ಮಳೆಗೆ ಹೊಲದ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಹೊಲಗಳು ರಸ್ತೆಗಳಂತಾಗಿವೆ. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಬೆಳೆಸಾಲ ಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು.

- ಚನ್ನಪ್ಪ ಷಣ್ಮುಖಿ, ಭಾರತೀಯ ಕೃಷಿಕ ಸಮಾಜದ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ

ಲಕ್ಷ್ಮೇಶ್ವರ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾಳಾಗಿರುವ ಎಲ್ಲ ಪ್ರದೇಶಗಳ ಸಮೀಕ್ಷೆ ಕಾರ್ಯ ನಡೆಸಲಾಗಿದ್ದು, ತಾಲೂಕಿನಲ್ಲಿ ಒಟ್ಟು 19,484 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳು ಹಾಳಾಗಿವೆ. ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ಕಳುಹಿಸಿಕೊಡಲಾಗಿದೆ.

- ಚಂದ್ರಶೇಖರ ನರಸಮ್ಮನವರ, ತಾಲೂಕು ಕೃಷಿ ಅಧಿಕಾರಿ

click me!