Bengaluru: ಕೊರೋನಾ ಇದ್ರೂ ಬಿಬಿಎಂಪಿ ಭರ್ಜರಿ ಆಸ್ತಿ ತೆರಿಗೆ ಸಂಗ್ರಹ

By Kannadaprabha NewsFirst Published Jan 17, 2022, 6:47 AM IST
Highlights

*  ಕೊರೋನಾ ಮಧ್ಯೆಯೂ ಆಸ್ತಿ ತೆರಿಗೆಯಲ್ಲಿ ಬಿಬಿಎಂಪಿ ಪ್ರಗತಿ 
*  ಪ್ರಸಕ್ತ ವರ್ಷ 2,589 ಕೋಟಿ ಸಂಗ್ರಹ
*  ತೆರಿಗೆ ವಸೂಲಿ ಅಭಿಯಾನ, ಸುಸ್ತಿದಾರರಿಗೆ ನೋಟಿಸ್‌ ಜಾರಿಯಿಂದ ಹೆಚ್ಚು ತೆರಿಗೆ ಸಂಗ್ರಹ
 

ಬೆಂಗಳೂರು(ಜ.17):  ಕೊರೋನಾ(Coronavirus) ಎರಡು ಮತ್ತು ಮೂರನೇ ಅಲೆಯ ನಡುವೆಯೂ ನಗರದಲ್ಲಿ(Bengaluru) ಆಸ್ತಿ ತೆರಿಗೆಯಲ್ಲಿ(Property Tax) ಉತ್ತಮ ಸಾಧನೆ ಮಾಡಿರುವ ಬಿಬಿಎಂಪಿ(BBMP), ಪ್ರಸಕ್ತ ಸಾಲಿನ ಕಳೆದ ಒಂಬತ್ತು ತಿಂಗಳಲ್ಲಿ ಬರೊಬ್ಬರಿ 2,589 ಕೋಟಿ ತೆರಿಗೆ ಸಂಗ್ರಹಿಸಿದೆ.

ಬಿಬಿಎಂಪಿಗೆ ಪ್ರಮುಖ ಆದಾಯ ಮೂಲದಲ್ಲಿ ಒಂದಾಗಿರುವ ಆಸ್ತಿ ತೆರಿಗೆಯಲ್ಲಿ ಕೊರೋನಾ ಆರ್ಥಿಕ ನಷ್ಟದ ನಡುವೆಯು ಬಿಬಿಎಂಪಿ ಅಧಿಕಾರಿಗಳು ಉತ್ತಮವಾಗಿ ತೆರಿಗೆ ಸಂಗ್ರಹ ಮಾಡಿದ್ದಾರೆ. ಈ ಕಾರಣದಿಂದ ಒಟ್ಟು ಆನ್‌ಲೈನ್‌ ಹಾಗೂ ಚಲನ್‌ ಮೂಲಕ 2021-22ರಲ್ಲಿ ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯಕ್ಕೆ ಒಟ್ಟು .2,589 ಕೋಟಿ ತೆರಿಗೆ ಸಂಗ್ರಹಿಸಿದ್ದಾರೆ. ಈ ತೆರಿಗೆ ಪೈಕಿ ಏಪ್ರಿಲ್‌ನಲ್ಲೇ ಅಧಿಕ .796 ಕೋಟಿ ಹಾಗೂ ನವೆಂಬರ್‌ನಲ್ಲಿ ಅತೀ ಕಡಿಮೆ .86 ಕೋಟಿ ಪಾವತಿ ಆಗಿದೆ.

Tax Dues : ಬೆಂಗಳೂರಿನ ಪ್ರತಿಷ್ಟಿತ ಮಂತ್ರಿ ಮಾಲ್‌ಗೆ ಬೀಗ

2019-20ರ ಸಾಲಿನಲ್ಲಿ ಬಿಬಿಎಂಪಿ ಒಟ್ಟು .2681 ಕೋಟಿ ಮತ್ತು 2020-21 ವರ್ಷದಲ್ಲಿ .2777 ಕೋಟಿ ತೆರಿಗೆ ಬಿಬಿಎಂಪಿ ಬೊಕ್ಕಸ ಸೇರಿದೆ. ಈ ಎರಡು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷ ಮುಗಿಯುವ ಮೂರು ತಿಂಗಳ ಮುನ್ನವೇ ಡಿಸೆಂಬರ್‌ ಅಂತ್ಯಕ್ಕೆ 2,589 ಕೋಟಿ ತೆರಿಗೆಯನ್ನು ಕಟ್ಟಡಗಳ ಮಾಲಿಕರು ಪಾವತಿಸಿದ್ದಾರೆ. ಒಟ್ಟಾರೆ ಈ ಆರ್ಥಿಕ ವರ್ಷಾಂತ್ಯಕ್ಕೆ ಅಧಿಕ ತೆರಿಗೆ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರತಿ ಬುಧವಾರ ಬಿಬಿಎಂಪಿ ತೆರಿಗೆ ವಸೂಲಾತಿ ಅಭಿಯಾನ ನಡೆಸಿದ್ದಲ್ಲದೇ, ತೆರಿಗೆ ಬಾಕಿ ಉಳಿಸಿಕೊಂಡ ಸುಸ್ತಿದಾರರಿಗೆ ನೋಟಿಸ್‌ ಜಾರಿ ಸೇರಿದಂತೆ ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕ್ರಮ ವಹಿಸಿದೆ. ಕೆಲವು ಆಸ್ತಿ ತೆರಿಗೆ ಪ್ರಕರಣಗಳು ನ್ಯಾಯಾಲಯದಲ್ಲಿವೆ(Court) ಎನ್ನಲಾಗಿದೆ.

2021-22ರ ತೆರಿಗೆ ಪಟ್ಟಿ: ತಿಂಗಳು ಕೋಟಿಗಳಲ್ಲಿ 

ಏಪ್ರಿಲ್‌ 796
ಮೇ 478
ಜೂನ್‌ 433
ಜುಲೈ 195
ಆಗಸ್ಟ್‌ 151
ಸೆಪ್ಟೆಂಬರ್‌ 213
ಅಕ್ಟೊಬರ್‌ 111
ನವೆಂಬರ್‌ 86
ಡಿಸೆಂಬರ್‌ 126

ಆರೇ ತಿಂಗಳಲ್ಲಿ 2,291 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ

ಕೊರೋನಾ(Coronavirus) ಪರಿಸ್ಥಿತಿಯ ನಡುವೆಯೂ ಪಾಲಿಕೆ(BBMP) ಕಳೆದ ಆರು ತಿಂಗಳಲ್ಲಿ (2021 ರ ಏ.1ರಿಂದ ಸೆ.30ರ ವರೆಗೆ) .2,291 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 239 ಕೋಟಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳವಾಗಿತ್ತು. 

ಬಾಡಿಗೆ ಕಟ್ಟೋದೆ ಕಷ್ಟ ಆಗ್ತಿದೆ : ನಗರವಾಸಿಗಳಿಗೆ ತೆರಿಗೆ ಹೊರೆ

ನಗರದಲ್ಲಿ(Bengaluru) ಕೊರೋನಾ ಸೋಂಕು ತಗ್ಗಿದ್ದು, ನಗರ ನಿಧಾನಕ್ಕೆ ಸಹಜಸ್ಥಿತಿಗೆ ಮರುಳುತ್ತಿದೆ. ಈ ನಡುವೆ ಪಾಲಿಕೆ ಕಂದಾಯ ವಿಭಾಗವು ಆಸ್ತಿ ತೆರಿಗೆ(Property Tax) ಸಂಗ್ರಹದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಕಳೆದ ಆರು ತಿಂಗಳಲ್ಲಿ ಸಂಗ್ರಹವಾಗಿರುವ ಒಟ್ಟು .2,291 ಕೋಟಿ ಆಸ್ತಿ ತೆರಿಗೆ(Tax) ಪೈಕಿ ಆನ್‌ಲೈನ್‌ ಮುಖಾಂತರ .1,230 ಕೋಟಿ ಹಾಗೂ ಬ್ಯಾಂಕ್‌ ಖಾತೆ ಮೂಲಕ .1,061 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಆನ್‌ಲೈನ್‌ ಮೂಲಕವೇ ಹೆಚ್ಚಿನ ತೆರಿಗೆ ಪಾವತಿಯಾಗಿದೆ.

ಪ್ರಸಕ್ತ ಸಾಲಿನಲ್ಲಿ 4 ಸಾವಿರ ಕೋಟಿ ಆಸ್ತಿಗೆ ತೆರಿಗೆ ಸಂಗ್ರಹ ಗುರಿ ನಿಗದಿಪಡಿಸಲಾಗಿದೆ. ಈ ನಿಟ್ಟಿನಲ್ಲಿ ಆರು ತಿಂಗಳಲ್ಲಿ ಶೇ.57ರಷ್ಟು ಗುರಿ ಸಾಧಿಸಿದೆ. ಉಳಿದಿರುವ ಆರು ತಿಂಗಳಲ್ಲಿ ಶೇ.53ರಷ್ಟು ಗುರಿ ಸಾಧಿಸಬೇಕಿದೆ. ಪ್ರಸಕ್ತ ಆರ್ಥಿಕ ವರ್ಷದ ಆರಂಭದಿಂದಲೇ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ಸಂಬಂಧ ಪಾಲಿಕೆಯಿಂದ ಹಲವು ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆಯ ಎಂಟು ವಲಯಗಳಲ್ಲಿ ತೆರಿಗೆ ವಸೂಲಿ ಅಭಿಯಾನ, ಖಾತಾ ಮೇಳ ಸೇರಿದಂತೆ ತೆರಿಗೆ ಸಂಗ್ರಹಕ್ಕೆ ಪೂರಕ ಕ್ರಮ ಜರುಗಿಸಲಾಗಿದೆ.
 

click me!