ನಗರ ವ್ಯಾಪ್ತಿಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವತಿಯಿಂದ ಬೇಕಾಬಿಟ್ಟಿ ವಿದ್ಯುತ್ ಕಡಿತ ಮಾಡುತ್ತಿದೆ. ಪರಿಣಾಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರು, ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು, ಆನ್‌ಲೈನ್ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತೀವ್ರ ಪರದಾಡುವಂತಾಗಿದೆ.
ಶ್ರೀಕಾಂತ್ ಎನ್.ಗೌಡಸಂದ್ರ
ಬೆಂಗಳೂರು (ಜ. 17): ನಗರ ವ್ಯಾಪ್ತಿಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (Bescom) ವತಿಯಿಂದ ಬೇಕಾಬಿಟ್ಟಿ ವಿದ್ಯುತ್ ಕಡಿತ ಮಾಡುತ್ತಿದೆ. ಪರಿಣಾಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರು (Corona Patients), ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು (Work From Home), ಆನ್‌ಲೈನ್ ತರಗತಿಗಳಲ್ಲಿ (Online Classes) ಕಲಿಯುತ್ತಿರುವ ವಿದ್ಯಾರ್ಥಿಗಳು ತೀವ್ರ ಪರದಾಡುವಂತಾಗಿದೆ. ಭಾನುವಾರ ಒಂದೇ ದಿನ ನಗರದ ಬರೋಬ್ಬರಿ 146 ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ. ಅಷ್ಟೇ ಅಲ್ಲದೆ ಜ.17ರಂದು ಸೋಮವಾರವೂ 103 ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡುತ್ತಿರುವುದಾಗಿ ಬೆಸ್ಕಾಂ ಹೇಳಿದೆ.
ಇದೇ ರೀತಿ ಜ.31ರವರೆಗೂ ವಿವಿಧ ಕಡೆಗಳಲ್ಲಿ ವಿದ್ಯುತ್ ಕಡಿತ ಮಾಡಲು ಸಿದ್ಧವಾಗಿದೆ. ಶೇಕಡ 90ರಷ್ಟುವಿದ್ಯುತ್ ಕಡಿತವನ್ನು ನೆಲದಡಿ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಾಡಲಾಗುತ್ತಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಸೋಂಕಿತರು, ಉದ್ಯೋಗಿಗಳು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊರೋನಾ 3ನೇ ಅಲೆ ಮುಗಿಯುವವರೆಗೂ ವಿದ್ಯುತ್ ಕಡಿತ ಮಾಡಬಾರದೆಂಬ ಒತ್ತಾಯ ಕೇಳಿ ಬಂದಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು, ಬರೋಬ್ಬರಿ 1.46 ಲಕ್ಷ ಸಕ್ರಿಯ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ. ಈ ಪೈಕಿ 1.36 ಲಕ್ಷ (ಶೇ.93) ರಷ್ಟು ಮನೆಯಲ್ಲೇ ಚಿಕಿತ್ಸೆಯಲ್ಲಿದ್ದಾರೆ.
ಆತಂಕ ಬೇಡ, ವಿದ್ಯುತ್ ಕಡಿತ ಪ್ರಮೇಯವೇ ಬರುವುದಿಲ್ಲ : ಸಿಎಂ
ಪ್ರಸ್ತುತ ಒಮಿಕ್ರೋನ್ ಸೌಮ್ಯ ಲಕ್ಷಣಗಳನ್ನು ಹೊಂದಿರುವುದರಿಂದ ಬಹುತೇಕರಿಗೆ ಉಸಿರಾಟ ಸಮಸ್ಯೆ ವರದಿಯಾಗಿಲ್ಲ. ಆದರೂ, ಅಸ್ತಮಾ, ನ್ಯುಮೋನಿಯಾ, ಶ್ವಾಸಕೋಶ ಸಮಸ್ಯೆ ಹಿನ್ನೆಲೆಯುಳ್ಳ ನೂರಾರು ಸೋಂಕಿತರು ಮನೆಯಲ್ಲೇ ಆಕ್ಸಿಜನ್ ಕಾನ್ಸಂಟ್ರೇಟರ್ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರಮೇಣ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಬೆಸ್ಕಾಂ ವತಿಯಿಂದ ಅನಗತ್ಯವಾಗಿ ವಿದ್ಯುತ್ ಕಡಿತ ಉಂಟು ಮಾಡುತ್ತಿರುವುದರಿಂದ ರೋಗಿಗಳು ಪರದಾಡುವಂತಾಗಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ವರ್ಕ್ ಫ್ರಂ ಹೋಂ ಸಂಕಷ್ಟ: ರಾಜ್ಯದ ಶೇ.90ರಷ್ಟುಕೊರೋನಾ ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗುತ್ತಿವೆ. ಎರಡು ವರ್ಷದ ಬಳಿಕ ಕಳೆದ ಡಿಸೆಂಬರ್‌ನಿಂದ ಕಚೇರಿಯಿಂದ ಕೆಲಸ ಶುರು ಮಾಡಿದ್ದ ಬಹುತೇಕ ಐಟಿ ಕಂಪನಿಗಳು ಮತ್ತೆ ವರ್ಕ್ ಫ್ರಂ ಹೋಂ ಘೋಷಿಸಿವೆ. ಇಷ್ಟೇ ಅಲ್ಲ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿವೆ. ಈ ರೀತಿ ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಅನಿಯಮಿತವಾಗಿ ಉಂಟಾಗುತ್ತಿರುವ ವಿದ್ಯುತ್ ಕಡಿತದಿಂದ ತೀವ್ರ ತೊಂದರೆ ಉಂಟಾಗಿದೆ.
ಆನ್‌ಲೈನ್ ತರಗತಿಗೂ ಸಮಸ್ಯೆ: ಇನ್ನು ಬೆಂಗಳೂರಿನಲ್ಲಿ ಡಿ.28ರಿಂದಲೇ 1ರಿಂದ 9ನೇ ತರಗತಿವರೆಗೆ ಭೌತಿಕ ತರಗತಿಗಳನ್ನು ರದ್ದುಪಡಿಸಿ ಆನ್‌ಲೈನ್ ತರಗತಿ ನಡೆಸುವಂತೆ ಸೂಚಿಸಲಾಗಿದೆ. ಹೀಗಾಗಿ ಬಹುತೇಕ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಶುರು ಮಾಡಿವೆ. ಕಾಲೇಜು ವಿದ್ಯಾರ್ಥಿಗಳಿಗೂ 10ರಿಂದ 12ನೇ ತರಗತಿ, ವೈದ್ಯಕೀಯ ಹಿನ್ನೆಲೆಯ ಕೋರ್ಸ್ ಹೊರತುಪಡಿಸಿ ಬಹುತೇಕರಿಗೆ ಆನ್‌ಲೈನ್ ತರಗತಿಗಳನ್ನೇ ನಡೆಸಲಾಗುತ್ತಿದೆ. ಈ ರೀತಿ ಆನ್‌ಲೈನ್ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
Coal Crisis| ಕಲ್ಲಿದ್ದಲು ಬರ, ರಾಜ್ಯದಲ್ಲಿ ಪವರ್ ಕಟ್ ಆರಂಭ!
103ಕ್ಕೂ ಹೆಚ್ಚು ಪ್ರದೇಶದಲ್ಲಿ ಇಂದು ವಿದ್ಯುತ್ ಕಡಿತ: ಸೋಮವಾರ 103ಕ್ಕೂ ಹೆಚ್ಚು ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲು ಬೆಸ್ಕಾಂ ಉದ್ದೇಶಿಸಿದೆ. ಬೆಂಗಳೂರು ದಕ್ಷಿಣ ಭಾಗದ ಜಯನಗರ ವಿಭಾಗದ ವಿವಿಧ 20 ಪ್ರದೇಶ, ಕೋರಮಂಗಲ ವಿಭಾಗದ 9, ಎಚ್‌ಎಸ್‌ಆರ್ ಬಡಾವಣೆಯ 5 ಸ್ಥಳಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ.
ಬೆಂಗಳೂರು ಪೂರ್ವ ವಿಭಾಗದ ಇಂದಿರಾ ನಗರ ಭಾಗದ 5, ಶಿವಾಜಿ ನಗರದ 5, ವೈಟ್‌ಫೀಲ್ಡ್ ವ್ಯಾಪ್ತಿಯ 2 ಪ್ರದೇಶದಲ್ಲಿ ವಿದ್ಯುತ್ ಕಡಿತ ಉಂಟಾಗಲಿದ್ದು, ಬೆಂಗಳೂರು ಉತ್ತರ ಭಾಗದ ಮಲ್ಲೇಶ್ವರ ವಿಭಾಗದಲ್ಲಿ 4 ಪ್ರದೇಶ, ಜಾಲಹಳ್ಳಿ 5, ಹೆಬ್ಬಾಳ 6, ಪೀಣ್ಯ ಭಾಗದ 5 ಸ್ಥಳದಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ಪಶ್ಚಿಮ ವಿಭಾಗದ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ 8, ಕೆಂಗೇರಿ 9 ಹಾಗೂ ರಾಜಾಜಿ ನಗರ ಭಾಗದ ಬರೋಬ್ಬರಿ 18 ಸ್ಥಳಗಳಲ್ಲಿ ಸೋಮವಾರ ವಿದ್ಯುತ್ ಕಡಿತ ಉಂಟಾಗಲಿದೆ.