ಗ್ಯಾರಂಟಿಯಿಲ್ಲದ ತನ್ನ ಸ್ವಂತ ಆದಾಯ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನೇ ಬಹುತೇಕ ನೆಚ್ಚಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಬಾರಿ ದಾಖಲೆಯ 19,927 ಕೋಟಿ ರು.ಮೊತ್ತದ ಬಜೆಟ್ ಮಂಡಿಸಿದೆ.
ಬೆಂಗಳೂರು (ಮಾ.30): ಗ್ಯಾರಂಟಿಯಿಲ್ಲದ ತನ್ನ ಸ್ವಂತ ಆದಾಯ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನೇ ಬಹುತೇಕ ನೆಚ್ಚಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಬಾರಿ ದಾಖಲೆಯ 19,927 ಕೋಟಿ ರು.ಮೊತ್ತದ ಬಜೆಟ್ ಮಂಡಿಸಿದೆ. 2024-25ನೇ ಸಾಲಿಗೆ ಹೋಲಿಸಿದಾಗ ಈ ಬಾರಿಯ ಬಜೆಟ್ ಗಾತ್ರ ಶೇ.60ರಷ್ಟು ಹೆಚ್ಚಳಗೊಂಡಿದೆ. ನಗರದ ಸಂಚಾರ ಸಮಸ್ಯೆಗೆ ಮದ್ದು ನೀಡಲು ಸುರಂಗ ರಸ್ತೆ, ಮೆಟ್ರೋ-ರಸ್ತೆ ಜತೆ ಜತೆಯಾಗಿರುವ ‘ಡಬಲ್ ಡೆಕ್ಕರ್ ಮೇಲ್ಸೆತುವೆ’ಯಂತಹ ಹತ್ತು ಹಲವು ಭಾರಿ ಗಾತ್ರದ ಯೋಜನೆಗಳು ಬಜೆಟ್‌ನಲ್ಲಿ ಸ್ಥಾನ ಪಡೆದಿವೆ.
ಆದರೆ, ಈ ಎಲ್ಲಾ ಯೋಜನೆಗಳು ಪ್ರಸಕ್ತ ಸಾಲಿನಲ್ಲಿ ಸಾಕಾರಗೊಳ್ಳದ, ಭವಿಷ್ಯದ ಬೆಂಗಳೂರನ್ನು ದೃಷ್ಟಿಯಲ್ಲಿಟ್ಟುಕೊಂಡ ಯೋಜನೆಗಳು. ಹೀಗಾಗಿ, ಒಂದು ವರ್ಷದ ಗುರಿ ಹೊಂದಿರಬೇಕಾದ ಬಜೆಟ್, ಹಾದಿ ತಪ್ಪಿ ‘ದೂರ ಭವಿಷ್ಯದ ಬಜೆಟ್’ ಎನಿಸಿಕೊಂಡಿದೆ. ಕಲ್ಯಾಣ ಕಾರ್ಯಕ್ರಮಗಳು, ಆಡಳಿತದಲ್ಲಿನ ಸುಧಾರಣೆ, ಮೂಲಸೌಕರ್ಯ ಕಾರ್ಯಕ್ರಮಗಳಲ್ಲಿ ಕೆಲವೊಂದು ಯೋಜನೆಗಳನ್ನು ಹೊರತುಪಡಿಸಿದರೆ ನಗರದ ಮೂಲ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ಯೋಜನೆಗಳ ಸಂಖ್ಯೆ ನಗಣ್ಯ ಎನಿಸುವಷ್ಟಿದೆ.
ಇಂದು ₹20 ಸಾವಿರ ಕೋಟಿ ಬಿಬಿಎಂಪಿ ಬೃಹತ್ ಬಜೆಟ್: ರಾಜ್ಯ ಸರ್ಕಾರದಿಂದ ಅನುದಾನ ನಿರೀಕ್ಷೆ
ಶೇ. 60ರಷ್ಟು ಹೆಚ್ಚಾದ ಬಜೆಟ್ ಗಾತ್ರ : 2024-25ನೇ ಸಾಲಿನಲ್ಲಿ ಬಿಬಿಎಂಪಿಗೆ 12,369 ಕೋಟಿ ರು.ಮೊತ್ತದ ಬಜೆಟ್ ಮಂಡಿಸಲಾಗಿತ್ತು. ಆದರೆ, ಈ ವರ್ಷ ಆ ಗಾತ್ರವನ್ನು ಭಾರೀ ಪ್ರಮಾಣದಲ್ಲಿ ಹಿಗ್ಗಿಸಲಾಗಿದ್ದು, 19,927 ಕೋಟಿ ರು.ಬಜೆಟ್ ಮಂಡಿಸಲಾಗಿದೆ. ರಾಜ್ಯ ಸರ್ಕಾರ ಪ್ರತಿವರ್ಷ ಬಿಬಿಎಂಪಿಗೆ ವಿಶೇಷ ಅನುದಾನವಾಗಿ 3 ಸಾವಿರ ಕೋಟಿ ರು.ನೀಡುತ್ತಿತ್ತು. ಆದರೆ, 2025-26ನೇ ಸಾಲಿಗೆ ಒಟ್ಟಾರೆ 7 ಸಾವಿರ ಕೋಟಿ ರು.ನೀಡುವುದಾಗಿ ತಿಳಿಸಿದೆ. ಅಂದರೆ, 4 ಸಾವಿರ ಕೋಟಿ ರು. ಹೆಚ್ಚಿನ ಅನುದಾನ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಬಜೆಟ್ ಗಾತ್ರವನ್ನು 8 ಸಾವಿರ ಕೋಟಿ ರು.ಹೆಚ್ಚಿಸಲಾಗಿದೆ.
ಗ್ಯಾರಂಟಿಯಿಲ್ಲದ ಆದಾಯಗಳ ಮೇಲೆ ಒಲವು: ರಾಜ್ಯ ಸರ್ಕಾರದಿಂದ ಬರುವ 7 ಸಾವಿರ ಕೋಟಿ ರು.ಅನುದಾನ ಹೊರತುಪಡಿಸಿ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನಕ್ಕೆ 10,668.91 ಕೋಟಿ ರು.ಸ್ವಂತ ಆದಾಯ ಸಂಗ್ರಹಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದರಲ್ಲಿ ತೆರಿಗೆ ಆದಾಯ ಹೊರತುಪಡಿಸಿ 4,952.19 ಕೋಟಿ ರು.ತೆರಿಗೆಯೇತರ ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ಆದರೆ, ಈ ತೆರಿಗೆಯೇತರ ಆದಾಯವು ಪೂರ್ಣಪ್ರಮಾಣದಲ್ಲಿ ಸಂಗ್ರಹವಾಗುವ ಗ್ಯಾರಂಟಿ ಬಿಬಿಎಂಪಿ ಅಧಿಕಾರಿಗಳಿಗೂ ಇಲ್ಲ. 2024-25ನೇ ಸಾಲಿನಲ್ಲಿಯೇ ತೆರಿಗೆಯೇತರ ಆದಾಯದ ಅಡಿ ಪ್ರೀಮಿಯಂ ಎಫ್‌ಎಆರ್ ಮೂಲಕ 1 ಸಾವಿರ ಕೋಟಿ ರು. ಸಂಗ್ರಹಿಸುವುದಾಗಿ ಘೋಷಿಸಲಾಗಿತ್ತು.
ಆದರೆ, ಒಂದು ರು.ಕೂಡ ಪ್ರೀಮಿಯಂ ಎಫ್‌ಎಆರ್‌ನಿಂದ ಸಂಗ್ರಹವಾಗಿಲ್ಲ. 2025-26ನೇ ಸಾಲಿಗೂ ಪ್ರಿಮಿಯಂ ಎಫ್‌ಎಆರ್ ಮೂಲಕ 2 ಸಾವಿರ ಕೋಟಿ ರು.ಆದಾಯ ಗಳಿಸುವುದಾಗಿ ತಿಳಿಸಲಾಗಿದೆ. ಒಂದು ವೇಳೆ, 2024-25ನೇ ಸಾಲಿನದ್ದೇ ಪುನರಾವರ್ತನೆಯಾದರೆ, ಅದು ಬಜೆಟ್ ಅನುಷ್ಠಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗೆಯೇ, ಹೊಸ ಜಾಹೀರಾತು ನೀತಿ ಜಾರಿಯಿಂದಾಗಿ 2025-26ನೇ ಸಾಲಿನಲ್ಲಿ ಜಾಹೀರಾತು ವಿಭಾಗದಿಂದ 750 ಕೋಟಿ ರು. ಆದಾಯದ ನಿರೀಕ್ಷೆ ಹೊಂದಲಾಗಿದೆ. ಆದರೆ, ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾಹೀರಾತು ಪ್ರದರ್ಶನ ಮತ್ತೆ ಆರಂಭವಾದರೂ ಅದಕ್ಕೆ ಬೇಕಾಗುವ ಮೂಲಸೌಕರ್ಯವನ್ನು ಹೊಸದಾಗಿಯೇ ಆರಂಭಿಸಬೇಕಿದೆ. ಹೀಗಾಗಿ, ಜಾಹೀರಾತು ಆದಾಯವನ್ನೂ ಗ್ಯಾರಂಟಿಯಾಗಿ ನೆಚ್ಚಿಕೊಳ್ಳಲಾಗದು.
ಕನ್ನಡಿಯೊಳಗಿನ ಗಂಟಿನಂತಹ ಬಜೆಟ್: 2025-26ನೇ ಸಾಲಿನ ಬಜೆಟ್ ಗಾತ್ರದಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಸಿಂಹಪಾಲು ನೀಡಲಾಗಿದೆ. ಒಟ್ಟಾರೆ ಶೇ. 65ರಷ್ಟು ಅಂದರೆ 12,952 ಕೋಟಿ ರು.ಗಳನ್ನು ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಾಗಿ ಮೀಸಲಿಡಲಾಗಿದೆ. ಆ ಮೊತ್ತದಲ್ಲಿ 6 ಸಾವಿರ ಕೋಟಿ ರು.ಗಳಷ್ಟು ಹೆಚ್ಚಿನ ಮೊತ್ತವನ್ನು ಸುರಂಗ ರಸ್ತೆ, ಡಬ್ಬಲ್ ಡೆಕ್ಕರ್ ಮೇಲ್ಸೇತುವೆ, 600 ಕಿ.ಮೀ. ರಸ್ತೆ ವೈಟ್‌ಟಾಪಿಂಗ್, ಸ್ಕೈಡೆಕ್, ರಸ್ತೆ ಅಗಲೀಕರಣದಂತಹ ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳ್ಳದ ಯೋಜನೆಗಳಿಗೆ ಮೀಸಲಿಡಲಾಗಿದೆ. ಅದರ ಜತೆಗೆ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಅಡಿಯಲ್ಲಿ ಅನುಷ್ಠಾಗೊಳ್ಳುತ್ತಿರುವ ವಿವಿಧ ಯೋಜನೆಗಳಿಗಾಗಿ ಪ್ರಸಕ್ತ ವರ್ಷದ ಪಾಲಾಗಿ 700 ಕೋಟಿ ರು.ಗಳನ್ನು ಎಸ್ಕ್ರೋ ಖಾತೆ (ಪ್ರತ್ಯೇಕ ಖಾತೆ)ಗೆ ವರ್ಗಾಯಿಸಲಾಗುತ್ತದೆ. ಹೀಗೆ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಯ ಶೇ. 50ರಷ್ಟು ಹಣವನ್ನು 2025-26ರಲ್ಲಿಯೇ ಅನುಷ್ಠಾನವಾಗದ ಅಥವಾ ಆರಂಭವಾಗದ ಯೋಜನೆಗಳಿಗೆ ಮೀಸಲಿಡಲಾಗಿದೆ.
ಉಳಿದಂತೆ ರಾಜ್ಯ ಸರ್ಕಾರ, ಮೆಟ್ರೋ, ಬಿಬಿಎಂಪಿ ಸಹಯೋಗದಲ್ಲಿ 400 ಕೋಟಿ ರು. ವೆಚ್ಚದಲ್ಲಿ 22.7 ಕಿ.ಮೀ. ರಸ್ತೆಯನ್ನು ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸುವುದು, ಕೇಂದ್ರ ರೈಲ್ವೆ ಇಲಾಖೆ ಸಹಯೋಗದೊಂದಿಗೆ ಕೆಂಗೇರಿ ಉಪನಗರದಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ರಾಮೋಹಳ್ಳಿ ಗೇಟ್ ಬಳಿ ಕೆಳಸೇತುವೆ ನಿರ್ಮಾಣ ಯೋಜನೆಗಳನ್ನು ಘೋಷಿಸಲಾಗಿದೆ. ಅದರ ಜತೆಗೆ ಟಿಡಿಆರ್ ಬಳಸಿ ಆರ್.ಟಿ.ನಗರ ಪೊಲೀಸ್ ಠಾಣೆಯಿಂದ ಅಂಬೇಡ್ಕರ್ ಕಾಲೇಜುವರೆಗಿನ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ರಸ್ತೆ, ಪುಲಕೇಶಿನಗರ ಶ್ಯಾಮ್‌ಪುರ ಮುಖ್ಯರಸ್ತೆ, ಯಶವಂತಪುರದ ಕೆಂಚನಹಳ್ಳಿ ಮುಖ್ಯರಸ್ತೆ ಮತ್ತು ಮಹದೇವಪುರ ರಸ್ತೆಗಳನ್ನು ಅಗಲೀಕರಣ ಮಾಡುವುದಾಗಿ ತಿಳಿಸಲಾಗಿದೆ. ಆದರೆ, ಈ ಯೋಜನೆಗಳು ಪ್ರಸಕ್ತ ವರ್ಷದಲ್ಲಿ ಆರಂಭವಾದರೂ, ಅದು ಪೂರ್ಣಗೊಳ್ಳಲು ಹಲವು ವರ್ಷಗಳೇ ಬೇಕಾಗಲಿವೆ
ಸಾಲ ಮಾಡಿ ರಾಜಕಾಲುವೆ ಅಭಿವೃದ್ಧಿ: ರಾಜ್ಯ ಸರ್ಕಾರದ ಅನುದಾನದ ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಸಾಲ ಮಾಡುವುದಾಗಿ ಬಿಬಿಎಂಪಿ ಘೋಷಿಸಿದೆ. ಅದರಲ್ಲೂ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣ ಸೇರಿದಂತೆ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ವಿಶ್ವ ಬ್ಯಾಂಕ್‌ನಿಂದ ಆರ್ಥಿಕ ನೆರವು ಪಡೆಯುವುದಾಗಿ ತಿಳಿಸಿದೆ. ವಿಶ್ವಬ್ಯಾಂಕ್‌ನಿಂದ 500 ಕೋಟಿ ರು.ಸಾಲ ಪಡೆಯಲಾಗುತ್ತಿದೆ.
ವಾರ್ಡ್‌ಗಳ ಅಭಿವೃದ್ಧಿಗೆ ನೀಡದ ಒತ್ತು: ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ನೀಡುವಲ್ಲಿ ಬಿಬಿಎಂಪಿ ಬಜೆಟ್ ವಿಫಲವಾಗಿದೆ. ಬೃಹತ್ ಯೋಜನೆಗಳತ್ತ ತೋರಿರುವ ಆಸಕ್ತಿಯನ್ನು ವಾರ್ಡ್ ಅಭಿವೃದ್ಧಿಗೆ ತೋರಿಸಿಲ್ಲ. ಸದ್ಯ ಇರುವ 225 ವಾರ್ಡ್‌ಗಳಲ್ಲಿ ಚರಂಡಿ ಹೂಳು ತೆಗೆಯಲು ತಲಾ 30 ಲಕ್ಷ ರು., ರಸ್ತೆ ಗುಂಡಿ ಮುಚ್ಚಲು 20 ಲಕ್ಷ ರು. ಸೇರಿದಂತೆ 112.50 ಕೋಟಿ ರು. ಮಾತ್ರ ನಿಗದಿ ಮಾಡಲಾಗಿದೆ.
ಕಸಕ್ಕೆ 1,400 ಕೋಟಿ ರು.: ತ್ಯಾಜ್ಯ ನಿರ್ವಹಣೆ ವೆಚ್ಚವನ್ನು ಬಜೆಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. 2024-25ರಲ್ಲಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ಘನತ್ಯಾಜ್ಯಕ್ಕೆ ಸಂಬಂಧಿಸಿದ ವೆಚ್ಚಕ್ಕೆ 1,024.40 ಕೋಟಿ ರು. ನಿಗದಿ ಮಾಡಲಾಗಿತ್ತು. ಅದರೆ, ಈ ವರ್ಷ ಬರೋಬ್ಬರಿ 1,400 ಕೋಟಿ ರು. ನಿಗದಿ ಮಾಡಲಾಗಿದೆ. ಒಂದೇ ವರ್ಷದಲ್ಲಿ 376 ಕೋಟಿ ರು.ಹೆಚ್ಚಿಸಲಾಗಿದೆ.
ಈ ಸಲ ಬಿಬಿಎಂಪಿ ಬಜೆಟ್ ಗಾತ್ರ 19000 ಕೋಟಿ: ಮಾ.28ರಂದು ಮಂಡನೆ!
ಹೊಸ ಪುಸ್ತಕ, ಹಳೇ ಯೋಜನೆಗಳು: ಪ್ರತಿ ಬಾರಿಯಂತೆ ಈ ಬಾರಿಯೂ ಬಿಬಿಎಂಪಿ ಬಜೆಟ್‌ನಲ್ಲಿ ಹಳೇ ಯೋಜನೆಗಳನ್ನೊಳಗೊಂಡ ಹೊಸ ಪುಸ್ತಕ ಮುದ್ರಿಸಲಾಗಿದೆ. ಅದರಲ್ಲೂ ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿನ ಯೋಜನೆಗಳು, ಸುರಂಗ ಮಾರ್ಗ, ವೈಟ್‌ಟ್ಯಾಪಿಂಗ್, ಮೇಲ್ಸೇತುವೆ ನಿರ್ಮಾಣದಂತಹ ಕಳೆದ ವರ್ಷದ ಘೋಷಣೆಯ ಯೋಜನೆಗಳನ್ನೇ 2025-26ರ ಬಜೆಟ್‌ನಲ್ಲಿ ಸೇರಿಸಲಾಗಿದೆ.