
ಬೆಂಗಳೂರು (ಮಾ.30): ಪರಿಸರಸ್ನೇಹಿ ಕಟ್ಟಡ, ಇಂಧನ ದಕ್ಷತೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ಐದು ನಿಲ್ದಾಣಗಳು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಕೊಡ ಮಾಡುವ ‘ಪ್ಲಾಟಿನಂ ರೇಟಿಂಗ್’ ಪ್ರಶಸ್ತಿಗೆ ಭಾಜನವಾಗಿವೆ. ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ರೇಷ್ಮೆಸಂಸ್ಥೆ ನಿಲ್ದಾಣಗಳಿಗೆ ಈ ಪ್ರಶಸ್ತಿ ದೊರೆತಿದೆ. ತ್ವರಿತ ಸಾಮೂಹಿಕ ಸಾರಿಗೆ ವ್ಯವಸ್ಥೆಯಡಿ ( ಎಂಆರ್‌ಟಿಎಸ್) ಎತ್ತರಿಸಿದ ಮೆಟ್ರೋ ನಿಲ್ದಾಣಗಳ ವಿಭಾಗದಲ್ಲಿ ಈ ನಿಲ್ದಾಣಗಳಿಗೆ ಪ್ರಶಸ್ತಿ ದೊರೆತಿದೆ.
ಪರಿಸರ ಸ್ನೇಹಿ ಕಟ್ಟಡ ಮತ್ತು ಮೂಲಸೌಕರ್ಯ ಯೋಜನೆ, ಇಂಧನ ದಕ್ಷತೆ, ನೀರಿನ ಸಂರಕ್ಷಣೆ, ಸುಸ್ಥಿರ ನಿರ್ಮಾಣ ಸಾಮಗ್ರಿ ಬಳಕೆ, ನವೀಕರಿಸಬಹುದಾದ ಶಕ್ತಿಯ ಬಳಕೆ ಮತ್ತು ಒಳಾಂಗಣ ಪರಿಸರ ಗುಣಮಟ್ಟ ಹೊಂದಿರುವ ಅಂಶ ಪರಿಗಣಿಸಿ ಈ ಪ್ರಶಸ್ತಿ ದೊರೆತಿದೆ. ಬಿಎಂಆರ್‌ಸಿಎಲ್ ಈ ನಿಲ್ದಾಣಗಳಲ್ಲಿ ಹಲವಾರು ಸುಸ್ಥಿರ ವ್ಯವಸ್ಥೆಗಳನ್ನು ಅಳವಡಿಸಿದೆ. ಇಂಧನ ದಕ್ಷ ಬಳಕೆ ಮತ್ತು ಹವಾನಿಯಂತ್ರಣ (ಎಚ್‌ವಿಎಸಿ) ವ್ಯವಸ್ಥೆಗಳ ಸ್ಥಾಪನೆ, ನಿಲ್ದಾಣ ಕಾರ್ಯಾಚರಣೆಗಳಿಗೆ ಸೌರಶಕ್ತಿಯ ಬಳಕೆ, ಮಳೆನೀರು ಕೊಯ್ಲು ಮತ್ತು ನೀರಿನ ಮರು ಬಳಕೆ ವ್ಯವಸ್ಥೆ ಸೇರಿ ಇತ್ಯಾದಿ ಒಳಗೊಂಡಿದೆ.
ದೆಹಲಿಗಿಂತ 10 ಪಟ್ಟು ಕಠಿಣ: ಗಟ್ಟಿ ಕಲ್ಲು, ಮಣ್ಣಿನಿಂದ ಕೂಡಿದ್ದ ರಚನೆಯಿರುವ ಬೆಂಗಳೂರಲ್ಲಿ ಮೆಟ್ರೋ ಸುರಂಗ ಕೊರೆಯುವುದು ದೆಹಲಿ ಮೆಟ್ರೋಗಿಂತ ಹತ್ತು ಪಟ್ಟು ಸವಾಲಿನ ಕೆಲಸವಾಗಿತ್ತು. ಇದು ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕಾಮಗಾರಿ ನೇತೃತ್ವ ವಹಿಸಿದ್ದ ಮುಖ್ಯ ಎಂಜಿನಿಯರ್ ಸುಬ್ರಹ್ಮಣ್ಯ ಗುಡಿಗೆ ಹೇಳಿದ ಮಾತು. ಮೆಟ್ರೋ ಮೊದಲ ಹಂತದಲ್ಲಿ 10ಕಿ.ಮೀ ಸುರಂಗ, 7 ನಿಲ್ದಾಣ ಮಾಡಲಾಗಿತ್ತು. ಆಗ 6 ಸುರಂಗ ಕೊರೆಯುವ ಯಂತ್ರಗಳು (ಟಿಬಿಎಂ) ಕೆಲಸ ಮಾಡಿದ್ದವು. 2ನೇ ಹಂತದ ಗುಲಾಬಿ ಮಾರ್ಗದಲ್ಲಿ 13.75ಕಿಮೀ (ಹೋಗಿ ಬರುವ ಜೋಡಿ ಮಾರ್ಗ ಸೇರಿ 21ಕಿಮೀ) ಸುರಂಗ ಕೊರೆಯಲಾಗಿದೆ. 5.8 ಡಯಾಮೀಟರ್ ಒಳವ್ಯಾಸದ (ಹೊರವ್ಯಾಸ 6.8ಮೀ) ಸುರಂಗ ಇದಾಗಿದ್ದು, ಸುರಂಗ ಮಾರ್ಗಕ್ಕೆ ಸುಮಾರು ₹6000 ಕೋಟಿ ವೆಚ್ಚವಾಗಿದೆ.
ಸೂಜಿ ಚುಚ್ಚದೆ ಶುಗರ್ ಟೆಸ್ಟ್: ಫೋಟೋ ಅಕೂಸ್ಟಿಕ್ಸ್ ಸೆನ್ಸಿಂಗ್ ಮೂಲಕ ಸಕ್ಕರೆ ಪ್ರಮಾಣ ಪರೀಕ್ಷೆ
ಸುರಂಗ ಕಾಮಗಾರಿ ಕುರಿತು ಮಾಹಿತಿ ನೀಡಿದ ಮುಖ್ಯ ಎಂಜಿನಿಯರ್ ಸುಬ್ರಹ್ಮಣ್ಯ ಗುಡಿಗೆ ಅವರು, 2020ರ ಆಗಸ್ಟ್ 20ರಂದು ಆರಂಭವಾಗಿದ್ದ ಸುರಂಗ ಕೊರೆವ ಕಾರ್ಯ 2024ರ ಅಕ್ಟೋಬರ್ 30ಕ್ಕೆ ಮುಗಿದಿದೆ. ಬೆಂಗಳೂರಿನ ಭೂಗರ್ಭ ಅತ್ಯಂತ ಸಂಕಿರ್ಣವಾಗಿದ್ದರಿಂದ ಈ ಮಧ್ಯೆ ಸಾಕಷ್ಟು ಸವಾಲನ್ನು ಎದುರಿಸಿದ್ದೇವೆ. 4 ಹಂತದಲ್ಲಿ ವರದ, ಊರ್ಜಾ, ವಿಂದ್ಯಾ, ಲವಿ, ವಾಮಿಕ, ರುದ್ರ, ತುಂಗಾ, ಭದ್ರಾ ಸೇರಿ 9 ಟಿಬಿಎಂಗಳು ಸುರಂಗ ಕೊರೆದಿವೆ. ಒಂದೊಂದು ಟಿಬಿಎಂಗಳು 400 ಟನ್ ತೂಕ ಹೊಂದಿದ್ದವು. 24ಗಂಟೆ ಕೆಲಸ ಮಾಡುತ್ತಿದ್ದ ಇವು ಪ್ರತಿ ನಿಮಿಷಕ್ಕೆ 10-12 ಮಿಲಿ ಮೀ. ಚಲಿಸುತ್ತಿದ್ದವು. ಗಟ್ಟಿ ಕಲ್ಲುಗಳು ಎದುರಾದರೆ 1-2 ಮಿಲಿ ಮೀ. ಮಾತ್ರ ಮುಂದಕ್ಕೆ ಹೋಗುತ್ತಿದ್ದವು ಎಂದು ವಿವರಿಸಿದರು.