ಕೊರೋನಾ ವಾರಿಯರ್ಸ್ ಪಟ್ಟಿ ಸಿದ್ಧತಾ ಕಾರ್ಯ ಆರಂಭ| ಲಸಿಕೆ ಪಡೆದುಕೊಂಡವರಲ್ಲಿ 23 ಮಂದಿಗೆ ಜ್ವರ, ತಲೆ ನೋವು, ಸುಸ್ತು ಸೇರಿದಂತೆ ಇನ್ನಿತರೆ ಅಡ್ಡಪರಿಣಾಮ| ಈವರೆಗೆ 1.82 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಡಿದ್ದರು| ಈ ಪೈಕಿ ಸುಮಾರು 22 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ|
ಬೆಂಗಳೂರು(ಜ.22): ನಗರದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಅಭಿಯಾನದ ಬಳಿಕ ಇದೀಗ ಎರಡನೇ ಹಂತದ ಕೋವಿಡ್ ವಾರಿಯರ್ಸ್‌ಗಳಾದ ಶಿಕ್ಷಕರು, ಪೊಲೀಸರು, ಕಂದಾಯ ಇಲಾಖೆ ಹಾಗೂ ಇತರೆ ಇಲಾಖೆಯ ಸಿಬ್ಬಂದಿಗೆ ಕೋವಿಡ್ ಲಸಿಕೆ ಪಡೆಯುವವರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಬಿಬಿಎಂಪಿ ಆರಂಭಿಸಿದೆ.
ಕಳೆದ ಆರು ದಿನಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ಸಿಬ್ಬಂದಿಗೆ ಕೋವಿಡ್ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. ಈವರೆಗೆ 1.82 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಡಿದ್ದರು. ಈ ಪೈಕಿ ಸುಮಾರು 22 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಮೊದಲ ಹಂತದ ಕೋವಿಡ್ ಲಸಿಕೆ ಹಾಕುವ ಕಾರ್ಯ ಮುಂದುವರೆಯುತ್ತಿದೆ. ಈ ನಡುವೆ ಬಿಬಿಎಂಪಿ ಕೇಂದ್ರ ಸರ್ಕಾರದ ಸೂಚನೆಯಂತೆ ಎರಡನೇ ಹಂತದಲ್ಲಿ ಕೋವಿಡ್ ನಿಯಂತ್ರಣಾ ಕಾರ್ಯದಲ್ಲಿ ತೊಡಗಿಸಿಕೊಂಡ ಪೊಲೀಸ್, ಅಬಕಾರಿ, ಸಾರಿಗೆ ಇಲಾಖೆ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಬಿಬಿಎಂಪಿ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಇನ್ನಿತರ ಕೋವಿಡ್ ವಾರಿಯರ್ಸ್‌ಗಳ ಪಟ್ಟಿಸಿದ್ಧಪಡಿಸಲಾಗುತ್ತಿದೆ.
undefined
ಮುಂದಿನ ಹಂತದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಲಸಿಕೆ?
ನಾಡಿದ್ದು ಸ್ಪಷ್ಟಚಿತ್ರಣ:
ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಎರಡನೇ ಹಂತದಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳುವವರ ದಾಖಲಾತಿ ಸಂಗ್ರಹಣೆ ನಡೆಯುತ್ತಿದೆ. ಜ.24ಕ್ಕೆ ನಗರದಲ್ಲಿ ಎರಡನೇ ಹಂತದ ಕೋವಿಡ್ ವಾರಿಯರ್ಸ್ ಸಂಖ್ಯೆ ತಿಳಿಯಲಿದೆ. ಎರಡನೇ ಹಂತದಲ್ಲಿ ಕೋವಿಡ್ ಲಸಿಕೆ ಹಾಕುವುದಕ್ಕೆ ಬೇಕಾದ ವ್ಯವಸ್ಥೆ ಸಿದ್ಧವಾಗಿದೆ. ದಾಸಪ್ಪ ಆಸ್ಪತ್ರೆಯಿಂದ ಬಿಬಿಎಂಪಿಯ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಸರಬರಾಜು ಮಾಡಲಾಗುತ್ತದೆ ಎಂದರು.
ಲಸಿಕೆ ಪಡೆದ 23 ಮಂದಿಗೆ ಅಡ್ಡ ಪರಿಣಾಮ
ನಗರದಲ್ಲಿ ಗುರುವಾರ 23 ಸರ್ಕಾರಿ ಹಾಗೂ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 92 ಖಾಸಗಿ ಆಸ್ಪತ್ರೆಗಳ ಲಸಿಕಾ ಕೇಂದ್ರದಲ್ಲಿ 5,410 ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆ ಪಡೆದಿದ್ದು, ಈ ಪೈಕಿ 23 ಮಂದಿಯಲ್ಲಿ ಲಸಿಕೆಯ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ.
ಗುರುವಾರ ಸರ್ಕಾರಿ ಮತ್ತು ಬಿಬಿಎಂಪಿಯ 2,328 ಮಂದಿ ಹಾಗೂ ಖಾಸಗಿ ಆಸ್ಪತ್ರೆಯ 8,141 ಮಂದಿ ಸೇರಿದಂತೆ ಒಟ್ಟು 10,469 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಪೈಕಿ ಸರ್ಕಾರಿ ಹಾಗೂ ಪಾಲಿಕೆಯ 1,027 ಹಾಗೂ ಖಾಸಗಿ ಆಸ್ಪತ್ರೆಯ 4,383 ಆರೋಗ್ಯ ಕಾರ್ಯಕರ್ತರು ಸೇರಿದಂತೆ ಒಟ್ಟು 5,410 (ಶೇ.52) ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದುಕೊಂಡವರಲ್ಲಿ 23 ಮಂದಿಗೆ ಜ್ವರ, ತಲೆ ನೋವು, ಸುಸ್ತು ಸೇರಿದಂತೆ ಇನ್ನಿತರೆ ಅಡ್ಡಪರಿಣಾಮ ಕಾಣಿಸಿಕೊಂಡಿದೆ ಎಂದು ಬಿಬಿಎಂಪಿ ತಿಳಿಸಿದೆ.
ಕೋವಿಡ್ ಲಸಿಕೆ ಪಡೆದ ಕೆಲವರಲ್ಲಿ ಜ್ವರ ಹಾಗೂ ಮೈಕೈ ನೋವು ಲಕ್ಷಣಗಳು ಕಾಣಿಸಿಕೊಂಡಿವೆ. ಉಳಿದಂತೆ ಯಾರಿಗೂ ಹೆಚ್ಚಿನ ತೊಂದರೆ ಆಗಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.