ಡಿಸೆಂಬರ್ ನಲ್ಲಿ ಮತ್ತೊಂದು ಚುನಾವಣೆ..?

By Web DeskFirst Published Nov 21, 2018, 8:16 AM IST
Highlights

ರಾಜ್ಯದಲ್ಲಿ ಮುಂದಿನ ಡಿಸೆಂಬರ್ ತಿಂಗಳಲ್ಲಿ ಮತ್ತೊಂದು ಚುನಾವಣೆ ನಡೆಯುವ ಸಾಧ್ಯತೆ ಇದೆ. ಡಿಸೆಂಬರ್ ಮೊದಲ ವಾರವೇ ನಡೆವ ಸಾಧ್ಯತೆ ಇದೆ. 

ಬೆಂಗಳೂರು : ಬಿಬಿಎಂಪಿಯಲ್ಲಿ ಖಾಲಿ ಇರುವ ಉಪಮೇಯರ್‌ ಹಾಗೂ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಸ್ಥಾನಕ್ಕೆ ನಡೆಯಬೇಕಿರುವ ಚುನಾವಣೆ ಮತ್ತಷ್ಟು ವಿಳಂಬವಾಗಲಿದ್ದು, ಚುನಾವಣೆ ಡಿಸೆಂಬರ್‌ ಮೊದಲ ವಾರ ನಡೆಯುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿಗಳಿಗೆ ಚುನಾವಣೆಗೆ ಅಗತ್ಯ ಮತದಾರ ಪಟ್ಟಿಸಿದ್ಧಪಡಿಸಿರುವ ಪಾಲಿಕೆ ಅಧಿಕಾರಿಗಳು, ಚುನಾವಣೆಗೆ ದಿನಾಂಕ ನಿಗದಿಗೆ ಕೋರಿ ಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್‌ ಅವರಿಗೆ ಈಗಾಗಲೇ ಪತ್ರ ಬರೆದು ವಾರಗಳೇ ಕಳೆದಿದೆ. ಆದರೆ, ಈವರೆಗೂ ಪ್ರಾದೇಶಿಕ ಆಯುಕ್ತರಿಂದ ದಿನಾಂಕ ನಿಗದಿಪಡಿಸುವ ಕೆಲಸ ಆಗಿಲ್ಲ. ಮೂಲಗಳ ಪ್ರಕಾರ, ಡಿಸೆಂಬರ್‌ ಮೊದಲ ವಾರದಲ್ಲಿ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಸಿದ್ಧತೆ ನಡೆಸಿದ್ದು, ಡಿ.6 ಅಥವಾ 8ರಂದು ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಆಡಳಿತದ ನಾಲ್ಕನೇ ಮೇಯರ್‌ ಆಯ್ಕೆ ಚುನಾವಣೆ ಸಂದರ್ಭದಲ್ಲೇ ಉಪಮೇಯರ್‌ ಚುನಾವಣೆ ನಡೆದಿತ್ತಾದರೂ, ಉಪಮೇಯರ್‌ ಆಗಿ ಆಯ್ಕೆಯಾಗಿದ್ದ ಜೆಡಿಎಸ್‌ ಕಾರ್ಪೊರೇಟರ್‌ ರಮೀಳಾ ಉಮಾಶಂಕರ್‌ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಆ ಸ್ಥಾನ ಖಾಲಿ ಉಳಿದಿದೆ. ಇನ್ನು 12 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರಾವಧಿ ನ.9ಕ್ಕೆ ಮುಕ್ತಾಯಗೊಂಡಿದೆ. ಹಾಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಜೊತೆ ಉಪಮೇಯರ್‌ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಸಬೇಕಾಗಿದೆ.

ಆಕಾಂಕ್ಷಿಗಳು: ಉಪಮೇಯರ್‌ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ನಡುವೆ ಭಾರೀ ಪೈಪೋಟಿಯೇ ನಡೆದಿದೆ. ಪಾಲಿಕೆ ಜೆಡಿಎಸ್‌ ನಾಯಕಿ ನೇತ್ರಾನಾರಾಯಣ್‌, ಸದಸ್ಯರಾದ ಇಮ್ರಾನ್‌ ಪಾಷಾ, ಭದ್ರೇಗೌಡ ಹಾಗೂ ರಾಜಶೇಖರ್‌ ತೀವ್ರ ಪ್ರಯತ್ನ ನಡೆಸಿದ್ದು, ತಮ್ಮ ಬೆಂಬಲಿತ ನಾಯಕರ ಮೂಲಕ ವರಿಷ್ಠರ ಬಳಿ ಲಾಬಿ ನಡೆಸುತ್ತಿದ್ದಾರೆ. ಪಕ್ಷದ ವರಿಷ್ಠರು ಯಾರಿಗೆ ಅವಕಾಶ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಅದೇ ರೀತಿ 12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಹುದ್ದೆಗಳು ಕಳೆದ ವರ್ಷದಂತೆಯೇ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಪಕ್ಷೇತರರ ನಡುವೆ ಹಂಚಿಕೆಯಾಗಲಿವೆ. ಮೇಯರ್‌ ಸ್ಥಾನ ಕಾಂಗ್ರೆಸ್‌ಗೆ ನೀಡಿರುವುದರಿಂದ ಪ್ರಮುಖ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮತ್ತೆ ಜೆಡಿಎಸ್‌ ಪಾಲಾಗಲಿದೆ. ಇದರ ಜೊತೆಗೆ ಇನ್ನಷ್ಟುಪ್ರಮುಖ ಸ್ಥಾಯಿ ಸಮಿತಿಗಳಿಗೆ ಜೆಡಿಎಸ್‌ ಸದಸ್ಯರು ಪಟ್ಟು ಹಿಡಿಯುವ ಸಾಧ್ಯತೆ ಇದೆ.

click me!