ಕೋರ್ಟ್ ತರಾಟೆ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ಅನಧಿಕೃತ ಫ್ಲೆಕ್ಸ್‌ ಮುದ್ರಿಸಿದರೆ ಉದ್ದಿಮೆ ಲೈಸೆನ್ಸ್‌ ರದ್ದು

By Gowthami K  |  First Published Jul 28, 2024, 11:36 AM IST

ಅನಧಿಕೃತವಾಗಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ರಾಜಾರೋಷವಾಗಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಮುದ್ರಣಕಾರರನ್ನು ನಿಯಂತ್ರಿಸಲು ಬಿಬಿಎಂಪಿ ಆಯುಕ್ತರು ಮುಂದಾಗಿದ್ದಾರೆ. 


ಬೆಂಗಳೂರು (ಜು.28):  ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ರಾಜಾರೋಷವಾಗಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಮುದ್ರಣಕಾರರನ್ನು ನಿಯಂತ್ರಿಸಲು ಬಿಬಿಎಂಪಿ ಮುಂದಾಗಿದೆ.

ಅನಧಿಕೃತ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕುವ ಕುರಿತಂತೆ ನ್ಯಾಯಾಲಯದ ಆದೇಶಗಳನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಿದ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ಕುರಿತಂತೆ ಬಿಬಿಎಂಪಿ ವಿಶೇಷ ಆಯುಕ್ತರು ಮುಖ್ಯ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Tap to resize

Latest Videos

ಅನಧಿಕೃತ ಜಾಹೀರಾತು ನಿರ್ಲಕ್ಷ್ಯಕ್ಕೆ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಎಚ್ಚರಿಕೆ ನೀಡಿದ ಹೈಕೋರ್ಟ್‌

ನಗರದಲ್ಲಿ ಪ್ರಸ್ತುತ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶ ಸಾರಲು ಸರ್ಕಾರದ ಜಾಹೀರಾತುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳನ್ನು ಹೊರತುಪಡಿಸಿ ಇತರೆ ಯಾವುದೇ ವಾಣಿಜ್ಯ ಜಾಹೀರಾತುಗಳಿಗೆ ಅನುಮತಿ ಇಲ್ಲ. ಆದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಫಲಕಗಳನ್ನು ಅನಧಿಕೃತವಾಗಿ ಅಳವಡಿಸಲಾಗುತ್ತಿದೆ. ಇದಕ್ಕೆ ನಿಯಂತ್ರಣ ಹೇರಲು ಉದ್ದೇಶಿಸಲಾಗಿದೆ.

ಜಾಹೀರಾತು ಮುದ್ರಿಸುವ ಮುನ್ನ ಮುದ್ರಕರು, ಬೇಡಿಕೆ ಸಲ್ಲಿಸುವವರು ಪಾಲಿಕೆಯಿಂದ ಫ್ಲೆಕ್ಸ್ ಅಳವಡಿಸಲು ಅನುಮತಿ ಪಡೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ದಾಖಲೆ ಪಡೆಯಬೇಕು. ಫ್ಲೆಕ್ಸ್ ಮತ್ತು ಬ್ಯಾನರ್ ಮುದ್ರಿಸಲು ಜಾಹೀರಾತು ವಿಭಾಗದಿಂದ ಅನುಮತಿ ಪತ್ರವನ್ನು ಹಾಜರುಪಡಿಸಿದಲ್ಲಿ ಮಾತ್ರ ಮುದ್ರಣ ಮಾಡಿಕೊಡಬೇಕು. ಪರಿಸರಕ್ಕೆ ಮಾರಕವಾಗುವಂತೆ ಪರಿಸರ ಸ್ನೇಹಿ, ಜೈವಿಕ ವಿಘಟನೀಯ ವಸ್ತುಗಳನ್ನು ಮಾತ್ರ ಬಳಸಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಮುದ್ರಿಸಬೇಕು.

ಉಪನಗರ ಸಂಪಿಗೆ ರೈಲ್ವೆ ಮಾರ್ಗಕ್ಕೆ 1442 ಕೋಟಿ ವೆಚ್ಚ, ಆ.9 ಟೆಂಡರ್‌ ಅರ್ಜಿ ಹಾಕಲು ಕೊನೆ ದಿನ

ಯಾವುದೇ ಕಾರಣಕ್ಕೂ ಪಿವಿಸಿ, ಪ್ಲಾಸ್ಟಿಕ್ ಮಿಶ್ರಿತ ವಸ್ತುಗಳನ್ನು ಬಳಸಿದ್ದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನುಮತಿ ಇಲ್ಲದೆ ಮುದ್ರಣ ಮಾಡಿದಲ್ಲಿ ವ್ಯಾಪಾರ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಮುದ್ರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಬಿಬಿಎಂಪಿ ಜಾಹೀರಾತು ವಿಭಾಗದ ವಿಶೇಷ ಆಯುಕ್ತರು ಸೂಚಿಸಿದ್ದಾರೆ.

ಕೋರ್ಟ್ ತರಾಟೆ:
ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ ಮತ್ತು ಹೋರ್ಡಿಂಗ್‌ಗಳ ಹಾವಳಿ ತಡೆಯಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಮಾಯಿಗೇಗೌಡ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಪ್ರಕರಣದಲ್ಲಿ ಹೈಕೋರ್ಟ್‌ ನೀಡಿರುವ ಹಲವು ಆದೇಶ ಪಾಲಿಸಿರುವ ವಿಫಲವಾಗಿರುವುದು ಏಕೆ? ಕೋರ್ಟ್ ಆದೇಶವನ್ನು ಗಂಭೀರವಾಗಿ ಪರಿಗಣಿಸದಿರುವುದು ಎಷ್ಟು ಸರಿ? ಅನಧಿಕೃತ ಜಾಹೀರಾತು ಅಳವಡಿಕೆ ತಡೆಗೆ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ? ನ್ಯಾಯಾಲಯದ ಆದೇಶ ಪಾಲಿಸದಕ್ಕೆ ಏಕೆ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಬಾರದು? ಎಂದು ಪ್ರಶ್ನಿಸುವ ಮೂಲಕ ರಾಜ್ಯ ಸರ್ಕಾರ, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.

ಅಂತಿಮವಾಗಿ ನಗರದಲ್ಲಿ ಅನಧಿಕೃತ ಜಾಹಿರಾತು ಫಲಕ ಅಳವಡಿಕೆ ತಡೆಯಲು ಕೈಗೊಂಡಿರುವ ಎಲ್ಲ ಕ್ರಮಗಳ ಕುರಿತು ಸಮರ್ಪಕ ಮಾಹಿತಿ ಒಳಗೊಂಡ ವರದಿ ಸಲ್ಲಿಸುವಂತೆ ಸರ್ಕಾರ ಹಾಗೂ ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಆ.12ಕ್ಕೆ ಮುಂದೂಡಿದೆ.

click me!