ರಾಜ್ಯದ ಸರ್ಕಾರ ಬಜೆಟ್ ಬೆನ್ನಲ್ಲೇ ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ
9 ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ
ಸತತ ಮೂರನೇ ವರ್ಷ ಐಎಎಸ್ ಅಧಿಕಾರಿಗಳಿಂದ ಆಯವ್ಯಯ ಮಂಡನೆ
ಆರ್ಥಿಕ ಸಂಕಷ್ಟದ ನಡುವೆಯೇ ಬೆಂಗಳೂರು ಬಜೆಟ್ ಮಂಡಿಸಲು ತೀರ್ಮಾನ
ಬೆಂಗಳೂರು (ಫೆ.22): ರಾಜ್ಯದ ಅತ್ಯಂದ ದೊಡ್ಡ ಮಹಾನಗರ ಪಾಲಿಕೆ ಆಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2023-24ನೇ ಸಾಲಿನ ಆಯವ್ಯಯ ಮಂಡನೆಯ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಸುಮಾರು 9,000 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲು ಅನುಮೋದನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲು ತೀರ್ಮಾನಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಪೋರೇಟರ್‌ಗಳ ಅಧಿಕಾರ ಇಲ್ಲದೇ ಬಿಬಿಎಂಪಿ ಅನುದಾನಗಳಿಗೆ ಪರದಾಡುತ್ತಿದೆ. ಸರ್ಕಾರ ತನಗೆ ತಿಳಿದಷ್ಟು ಅನುದಾನವನ್ನು ನೀಡಿದರೂ, ಅನುದಾನ ಕೊಡದಿದ್ದರೂ ಸುಮ್ಮನಿರಬೇಕು. ಇನ್ನು ಕಳೆದ ಮೂರು ವರ್ಷಗಳಿಂದ ಒಟ್ಟು 8ಕ್ಕೂ ಅಧಿಕ ಐಎಎಸ್ ಅಧಿಕಾರಿಗಳನ್ನು ಒಳಗೊಂಡ ಆಡಳಿತಾಧಿಕಾರಿಯ ಆಡಳಿತ ನಡೆಯತ್ತಿದೆ. ಆದರೆ, ಸರ್ಕಾರದೊಂದಿಗೆ ಗುದ್ದಾಡಿ ಹಣವನ್ನು ತರಲಾಗದೇ ಪಾಲಿಕೆಗೆ ಬರುವ ತೆರಿಗೆ ಮತ್ತು ತೆರಿಗೆಯೇತರ ಆದಾಯದ ಮೂಲಗಳ ಆಧಾರದಲ್ಲಿಯೇ ಬಜೆಟ್ ಮಂಡನೆ ಮಾಡಲಾಗುತ್ತದೆ. ಯಾವುದೇ ತುರ್ತು ಕಾರ್ಯ ಅಥವಾ ಯೋಜನೆಗಳನ್ನು ಕೈಗೊಳ್ಳಲು ಸರ್ಕಾರದೆಡೆಗೆ ಎದುರು ನೋಡುವುದು ಅನಿವಾರ್ಯ ಆಗಿದೆ.
Bengaluru Karaga Utsav 2023: ಕರಗ ಉತ್ಸವಕ್ಕೆ 50 ಲಕ್ಷ ಅನುದಾನ ಕಡಿತಗೊಳಿಸಿದ ಬಿಬಿಎಂಪಿ!
ಸಂಘ ಸಂಸ್ಥೆಗಳಿಗೆ ನೀಡುವ ಅನುದಾನಕ್ಕೆ ಕತ್ತರಿ: ಇನ್ನು 2023-24ನೇ ಸಾಲಿನಲ್ಲಿ ಬಿಬಿಎಂಪಿ ಅಧಿಕಾರಿಗಳು ವಾಸ್ತವಿಕ ಬಜೆಟ್ (ಆದಾಯಕ್ಕೆ ಸರಿದೂಗಿಸುವ) ಮಂಡಿಸಲು ತೀರ್ಮಾನಿಸಿದ್ದಾರೆ. ಈ ಬಾರಿ ಅಂದಾಜು 9 ಸಾವಿರ ಕೋಟಿ ಗಾತ್ರದ ಆಯವ್ಯಯ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ವರ್ಷದ ಕೆಲ ಯೋಜನೆಗಳ ಪುನರಾವರ್ತನೆಗೆ ಹಾಗೂ ಕಾಮಗಾರಿ ಪೂರ್ಣ ಮಾಡಲು ಹೆಚ್ಚು ಹಣ ಮೀಸಲಿಡಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಲಿಕೆಗೆ ಹೊಸ ಯೋಜನೆ ಘೋಷಿಸದೆ ಇರಲು ತೀರ್ಮಾನಿಸಲಾಗಿದೆ. ಪಾಲಿಕೆಯಿಂದ ಹಲವು ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನಕ್ಕೆ ಕತ್ತರಿ ಬೀಳಲಿದೆ.
ಆಸ್ತಿ ತೆರಿಗೆ ಹೆಚ್ಚಳದ ಹೊರೆ ಇಲ್ಲ: ಈ ಬಾರಿಯ ಬಜೆಟ್ ನಲ್ಲಿ ಸಿಲಿಕಾನ್ ಸಿಟಿ ಜನರಿಗೆ ಆಸ್ತಿ ತೆರಿಗೆ ಹೊರೆ ಇರೋದಿಲ್ಲ ಎಂಬುದು ಸಿಹಿಯಾದ ಮಾಹಿತಿ. ಪಾಲಿಕೆ ಹಾಗೂ ಅಸ್ಸೆಂಬ್ಲಿ ಚುನಾವಣೆ ದೃಷ್ಟಿಯಿಂದ ಆಸ್ತಿ ತೆರಿಗೆ ಏರಿಕೆ ಮಾಡದಂತೆ ಸಿಎಂ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ 03 ರಂದು ಬಜೆಟ್ ಮಂಡನೆಗೆ ಅನುಮತಿ ಕೋರಿ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಸಿಎಂ ಬೊಮ್ಮಾಯಿ ಒಪ್ಪಿಗೆ ಬೆನ್ನಲ್ಲೇ ಅಧಿಕೃತವಾಗಿ ದಿನಾಂಕ ಪ್ರಕಟಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಚುನಾವಣಾ ಆಯುಕ್ತ ತುಷಾರ್ ಗಿರಿನಾಥ್ ಖಚಿತ ಪಡಿಸಿದ್ದಾರೆ.
BBMP: ಬಾಕಿ ಪಾವತಿಗಾಗಿ ಮತ್ತೆ ಬೀದಿಗೆ ಇಳಿದ ಪಾಲಿಕೆ ಗುತ್ತಿಗೆದಾರರು
ಬಜೆಟ್ ನಲ್ಲಿ ಪ್ರಕಟವಾಗಲಿರುವ ಪ್ರಮುಖ ಅಂಶಗಳು
• ಪಾಲಿಕೆ ವ್ಯಾಪ್ತಿಯ 'ಬಿ' ಖಾತೆ ಆಸ್ತಿಗಳಿಗೆ 'ಎ' ಖಾತೆ ಹಂಚಿಕೆ ಮಾಡುವುದು
• ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ್ದ ಇಂದಿರಾ ಕ್ಯಾಂಟೀನ್‌ಗೆ 50 ಕೋಟಿ ರೂ. ಅನುದಾನ ಮೀಸಲು ಸಾಧ್ಯತೆ
• ಕಸ ವಿಲೇವಾರಿಗೆ ರಾಜ್ಯ ಸರ್ಕಾರ ಅನುದಾನ ನೀಡದ ಹಿನ್ನೆಲೆಯಲ್ಲಿ ಕಸ ವಿಲೇವಾರಿ ಸಂಪೂರ್ಣ ಜವಾಬ್ದಾರಿ ಪಾಲಿಕೆಯದ್ದಾಗಿದೆ. (ಅಂದಾಜು 1,500 ಕೋಟಿ ರೂ.)
• ಕೆರೆ, ರಾಜಕಾಲುವೆ, ಪಾರ್ಕ್ ಗಳ ಉನ್ನತ್ತೀಕರಣಕ್ಕೆ ಈ ಬಜೆಟ್‌ನಲ್ಲಿ ಸಾಧಾರಣ ಒತ್ತು
• ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲಾ ಕರೆಗಳಗೆ ಕ್ರಸ್ಟ್ ಗೇಟ್ ಅಳವಡಿಕೆಗೆ ಹೆಚ್ಚಿನ ಗಮನ
• ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರಮುಖ 75 ಜಂಕ್ಷನ್‌ಗಳನ್ನು ಅಭಿವೃದ್ಧಿ
• ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿ ವರೆಗೆ 5km ಎಲಿವೇಟೆಡ್ ರಸ್ತೆ ನಿರ್ಮಾಣ
• ಕೆಂಪೇಗೌಡ ಜಯಂತಿ, ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿಗೆ ಕೋಟಿ ಕೋಟಿ ಅನುದಾನ
• ಪಾಲಿಕೆ ವ್ಯಾಪ್ತಿಯ ಹೊಸ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜಿಗೆ ಹೆಚ್ಚಿನ ಒತ್ತು
• ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ The Safe City ಯೋಜನೆ
• ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರಿಗೆ 250 ಸುಸಜ್ಜಿತ She Toilet ನಿರ್ಮಾಣ.
• ಈ ವರ್ಷ 4,000 ಕೋಟಿ ಆಸ್ತಿ ತೆರಿಗೆಯ ಆದಾಯ ನಿರೀಕ್ಷೆ.
• ಉಳಿದಂತೆ ಜಾಹೀರಾತು, ಖಾತಾ ವರ್ಗಾವಣೆ ಶುಲ್ಕ ಸೇರಿದಂತೆ ಇತರೆ ಮೂಲಗಳಿಂದ 2,000 ಕೋಟಿ ಆದಾಯ ನಿರೀಕ್ಷೆ
• ಒಟ್ಟು ಪಾಲಿಕೆಯಿಂದ ಪ್ರಸಕ್ತ ಸಾಲಿನಲ್ಲಿ 7,000 ಕೋಟಿ ಆದಾಯ ಸಂಗ್ರಹ ಆಗಿದೆ.