ಬೆಂಗಳೂರು: 3 ತಿಂಗಳಲ್ಲಿ 1,000 ಕೋಟಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಗುರಿ

By Kannadaprabha NewsFirst Published Dec 31, 2022, 7:30 AM IST
Highlights

ಆಸ್ತಿ ತೆರಿಗೆ ಸುಸ್ತಿದಾರರಿಗೆ ನೋಟಿಸ್‌ ನೀಡಿ ತೆರಿಗೆ ವಸೂಲಿ ಮಾಡಿ. ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹಿಸುವ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ 

ಬೆಂಗಳೂರು(ಡಿ.31):  ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ಜಾರಿ ಮಾಡಿ ಮುಂದಿನ ಮೂರು ತಿಂಗಳಲ್ಲಿ ಒಂದು ಸಾವಿರ ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ. ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಆಸ್ತಿ ತೆರಿಗೆ ಸುಸ್ತಿದಾರರಿಗೆ ನೋಟಿಸ್‌ ನೀಡಿ ತೆರಿಗೆ ವಸೂಲಿ ಮಾಡಿ. ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹಿಸುವ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

ನಗರದ ಶಿಕ್ಷಣ ಸಂಸ್ಥೆಗಳು, ಕ್ಲಬ್‌ಗಳು, ಮಾಲ್‌ಗಳಿಂದ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಬೆಸ್ಕಾಂ ದತ್ತಾಂಶದ ಆಧಾರ ಸ್ವತ್ತುಗಳನ್ನು ಪರಿಶೀಲಿಸಲಾಗುತ್ತಿದ್ದು, ಪಾಲಿಕೆಗೆ ಆಸ್ತಿ ತೆರಿಗೆ ದತ್ತಾಂಶದಲ್ಲಿ ವ್ಯತ್ಯಾಸ ಕಂಡು ಬಂದ ಸ್ವತ್ತುಗಳಿಗೆ ನೋಟಿಸ್‌ ಜಾರಿಗೊಳಿಸಿ ದಂಡ ಹಾಗೂ ಬಡ್ಡಿ ಸಮೇತ ತೆರಿಗೆ ವಸೂಲಿ ಮಾಡಬೇಕು ಎಂದು ಹೇಳಿದರು.

ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಭರದ ಸಿದ್ಧತೆ

ಕಂದಾಯ ಅಧಿಕಾರಿಗಳಿಗೆ ವಾರದ ಗುರಿ: 

ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಕಂದಾಯ ಅಧಿಕಾರಿ ಹಾಗೂ ಸಹಾಯ ಕಂದಾಯ ಅಧಿಕಾರಿಗಳಿಗೆ ವಾರದ ಗುರಿ ನೀಡಿ ಆಸ್ತಿ ತೆರಿಗೆ ಸಂಗ್ರಹಿಸಬೇಕು. ಈ ಪೈಕಿ ಪ್ರತಿ ವಾರವೂ ಆಸ್ತಿ ತೆರಿಗೆ ಸಂಗ್ರಹಿಸಿರುವ ಬಗ್ಗೆ ಪರಿಶೀಲನಾ ಸಭೆ ನಡೆಸಬೇಕೆಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ.ಆರ್‌.ಎಲ್‌.ದೀಪಕ್‌, ವಲಯ ಆಯುಕ್ತ ಡಾ.ತ್ರಿಲೋಕ್‌ ಚಂದ್ರ, ಡಾ.ಹರೀಶ್‌ ಕುಮಾರ್‌, ರೆಡ್ಡಿ ಶಂಕರ ಬಾಬು, ಪಿ.ಎನ್‌.ರವೀಂದ್ರ ಉಪಸ್ಥಿತರಿದ್ದರು.

2,718 ಕೋಟಿ ರು.ಆಸ್ತಿ ತೆರಿಗೆ ಸಂಗ್ರಹ

ಪ್ರಸಕ್ತ ಸಾಲಿನಲ್ಲಿ 4,189.78 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಇದುವರೆಗೆ 2,718.22 ಕೋಟಿ ರು. (ಶೇ.64.88ರಷ್ಟು) ಆಸ್ತಿ ತೆರಿಗೆ ಸಂಗ್ರಹವಾಗಿದೆ. ಪ್ರಸಕ್ತ ಸಾಲಿನ ಗುರಿಯಂತೆ ಇನ್ನೂ 1,471.56 ಕೋಟಿ ರು. ಸಂಗ್ರಹಿಸಬೇಕಿದೆ. ಈ ಸಂಬಂಧ ಎಲ್ಲಾ ಕಂದಾಯ ಅಧಿಕಾರಿಗಳು ನಿಗದಿತ ಗುರಿಯನ್ನು ತಲುಪುವ ಸಲುವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

click me!