Basavaraj Rayareddy: ಇಸ್ಲಾಂ ಪರ ಹೇಳಿಕೆ ಬೆನ್ನಲ್ಲೇ ವೇದಿಕೆಯಲ್ಲಿ ನಿಂತು ರಾಯರೆಡ್ಡಿ ಸಾವಿನ ಕುರಿತು ಮಾರ್ಮಿಕ ಮಾತು

Published : Sep 02, 2026, 04:19 PM IST
Basavaraj Rayareddy

ಸಾರಾಂಶ

ಇಸ್ಲಾಂ ಪರ ಹೇಳಿಕೆ ವಿವಾದದ ನಂತರ, ಸಚಿವ ಬಸವರಾಜ ರಾಯರೆಡ್ಡಿ ಅವರು ವೇದಿಕೆಯೊಂದರಲ್ಲಿ ಸಾವಿನ ಕುರಿತು ಮಾರ್ಮಿಕವಾಗಿ ಮಾತನಾಡಿದ್ದಾರೆ. ಹಾಗಾದರೆ ಅವರು ಸಾವಿನ ಕುರಿತು ಹೇಳಿದ್ದೇನು? ಈ ಕುರಿತು ಕಂಪ್ಲಿಟ್‌ ಸ್ಟೋರಿ ಇಲ್ಲಿದೆ.

ಇತ್ತೀಚೆಗೆ ಕಷ್ಟದ ವಾತಾವರಣ ಮತ್ತು ತಮ್ಮ ವಿರುದ್ಧದ ತೀವ್ರ ವಾಗ್ದಾಳಿಗಳ ಬೆನ್ನಲ್ಲೇ ಸಚಿವ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಸ್ಲಾಂ ಧರ್ಮದ ಪರವಾಗಿ ಅವರು ನೀಡಿದ್ದಾರೆನ್ನಲಾದ ಹೇಳಿಕೆ ರಾಜಕೀಯ ರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಬೆನ್ನಲ್ಲೇ, ರಾಯರೆಡ್ಡಿ ಅವರು ನಾನು ವೇದಿಕೆಯಲ್ಲಿ ನೀಡದ ಆ ಒಂದು ಮಾತು ಈಗ ಮತ್ತೆ ಸಂಚಲನ ಸೃಷ್ಟಿಸಿದೆ.

ಸಾವಿನ ಕುರಿತು ಮಾರ್ಮಿಕ ಮಾತು!

ವೇದಿಕೆಯಲ್ಲಿದ್ದ ಅಮರಯ್ಯ ಎಂಬುವವರನ್ನು ಕರೆಯುತ್ತಾ ಬಸವರಾಜ ರಾಯರೆಡ್ಡಿ ಅವರು ಸಾವಿನ ಕುರಿತು ಸುದೀರ್ಘವಾಗಿ ಮಾತನಾಡಿದರು. ಮನುಷ್ಯನಿಗೆ ಸಾವು ಬರುವುದು ಅತ್ಯಂತ ಸಹಜ. ಸಾವು ಎಂಬುದು ಎಲ್ಲರಿಗೂ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ಅದು ಈಗಲೇ ಬರಬಹುದು ಅಥವಾ ಆಮೇಲೆಯೂ ಬರಬಹುದು. ಆದರೆ ನಾನು ಯಾವುದೇ ಕಾರಣಕ್ಕೂ ಸಾವಿಗೆ ಹೆದರುವವನಲ್ಲ" ಎಂದು ದೃಢವಾಗಿ ಹೇಳಿದರು.

ಪ್ರಚಾರ ಸಿಕ್ಕಿದ್ದಕ್ಕೆ ಧನ್ಯವಾದ ಎಂದ ಸಚಿವ!

ಇಸ್ಲಾಂ ಧರ್ಮ ಶ್ರೇಷ್ಠ ಎಂಬರ್ಥದಲ್ಲಿ ನೀಡಿದ್ದ ಹೇಳಿಕೆಯ ಬಗ್ಗೆ ಮಾತನಾಡಿದ ರಾಯರೆಡ್ಡಿ, "ಜನರು ನಾನು ಪ್ರಚಾರಕ್ಕಾಗಿಯೇ ಈ ರೀತಿ ಮಾತನಾಡಿದ್ದೇನೆ ಎಂದು ಅಂದುಕೊಂಡಿದ್ದಾರೆ. ಹಾಗಿದ್ದರೆ ನನಗೆ ಎರಡು ದಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಕೊಟ್ಟಿದ್ದಕ್ಕೆ ಮಾಧ್ಯಮಗಳಿಗೆ ಹಾಗೂ ಜನರಿಗೆ ಧನ್ಯವಾದಗಳು. ಇಲ್ಲದಿದ್ದರೆ ಬಸವರಾಜ ರಾಯರೆಡ್ಡಿ ಎಂದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಈಗ ಸೌದಿ ಅರೇಬಿಯಾ, ಇರಾನ್‌ ನಲ್ಲೂ ನನಗೆ ಪ್ರಚಾರ ಸಿಕ್ಕಿದೆ ಎಂದು ಮುಖ್ಯಮಂತ್ರಿಗಳು ಕೂಡ ಹೇಳಿದ್ದಾರೆ. ಅಲ್ ಝಜೀರಾ ನ್ಯೂಸ್‌ ಕೂಡ ತೋರಿಸಿದೆ, ಬಿಹಾರದ ಸಂಸದ ಡ್ಯಾನಿಶ್ ಅಲಿ ಮತ್ತು ಡಿಕೆ ಶಿವಕುಮಾರ್ ನಿನ್ನೆ ಫೋನ್ ಮಾಡಿ ಮಾತನಾಡಿದರು ಎಂದು ವ್ಯಂಗ್ಯವಾಗಿ ಹಾಗೂ ಹಾಸ್ಯಮಯವಾಗಿ ತಮ್ಮ ಪ್ರತಿಕ್ರಿಯೆ ನೀಡಿದರು.

ಧರ್ಮಗಳ ಅಧ್ಯಯನ ಮತ್ತು ದೇವಸ್ಥಾನಗಳ ಕುರಿತು ನಿಲುವು!

ದೇವಸ್ಥಾನಗಳಿಗೆ ಭೇಟಿ ನೀಡುವ ಕುರಿತು ಮಾತನಾಡಿದ ಅವರು, "ನಾನು ನನ್ನ ಸ್ವಾರ್ಥಕ್ಕಾಗಿ ದೇವಸ್ಥಾನಗಳಿಗೆ ಹೋಗಲ್ಲ. 'ನನ್ನನ್ನು ಮಂತ್ರಿ ಮಾಡು' ಎಂದು ದೇವಸ್ಥಾನದಲ್ಲಿ ಬೇಡಿಕೊಳ್ಳಲು ಅಥವಾ ಸ್ವಾಮೀಜಿಗಳ ಕಾಲು ಬೀಳಲು ನಾನು ಹೋಗುವುದಿಲ್ಲ. ದೇವರು ಇರುವುದು ಪ್ರತಿಯೊಬ್ಬರ ಮನಸ್ಸಿನಲ್ಲಿ. ಇಂದು ನಾನು ದೇವಸ್ಥಾನಕ್ಕೆ ಹೋಗಿದ್ದು ನಾಡಿಗೆ ಒಳ್ಳೆಯ ಮಳೆ ಬರಲಿ ಎಂದು ಕೇಳಿಕೊಳ್ಳುವುದಕ್ಕಾಗಿ ಮಾತ್ರ. ನಮಗೆ ಜನರೇ ದೇವರು" ಎಂದರು.

ತಮ್ಮ ಧಾರ್ಮಿಕ ಅಧ್ಯಯನದ ಪಯಣವನ್ನು ವಿವರಿಸಿದ ರಾಯರೆಡ್ಡಿ!

ಶಕ್ತಿ ಪೀಠಗಳು; ಮಾನಸ ಸರೋವರದಲ್ಲಿ ಮುಳುಗಿ ಬಂದಿದ್ದೇನೆ. ಕಾಮಾಕ್ಯ ಶಕ್ತಿ ಪೀಠ ಸೇರಿದಂತೆ ನಾಲ್ಕೈದು ಶಕ್ತಿ ಪೀಠಗಳಿಗೆ ಹೋಗಿ ಅಭ್ಯಾಸ ಮಾಡಿದ್ದೇನೆ.

ವೈಷ್ಣವಿ ದೇವಿ ದರ್ಶನ ಮತ್ತು ಆರ್. ಅಶೋಕ್ ಗೂಢಚಾರ!; ವೈಷ್ಣವಿ ದೇವಿಗೆ ಸವದಿ, ಅಶೋಕ್ ಮತ್ತು ನಾನು ಸೇರಿ ಹೋಗಿದ್ದೆವು. ವೈಷ್ಣವಿ ದೇವಿಯ ಫೋಟೋ ತೋರಿಸುತ್ತಾ, ಅವತ್ತೇ ದೆಹಲಿಯ ಬಿಜೆಪಿ ನಾಯಕರು ಆರ್. ಅಶೋಕ್ ವಿರೋಧ ಪಕ್ಷದ ನಾಯಕರಾಗುತ್ತಾರೆ ಎಂದು ಹೇಳಿದ್ದರು. ಆ ನ್ಯೂಸ್ ಅನ್ನು ನಾನೇ ಶಕ್ತಿ ಪೀಠದಲ್ಲಿ ಅಶೋಕ್‌ಗೆ ಕೊಟ್ಟಿದ್ದೆ. ಅಶೋಕ್ ನನ್ನ ಪಕ್ಕದಲ್ಲೇ ಇದ್ದಾಗ ಅವತ್ತೇ ಶುಭಾಶಯ ತಿಳಿಸಿದ್ದೆ ಎಂದು ಹಳೆಯ ರಹಸ್ಯವನ್ನು ಹೊರಹಾಕಿದರು.

ಅಧ್ಯಯನ ಯಾನ; ಜುದಾಯಿಸಂ, ಜೈನಿಸಂ, ಸಾರಾನಾಥ್ ಹಾಗೂ ಬುದ್ಧ ತಪಸ್ಸು ಮಾಡಿದ ಮರದ ಕೆಳಗೆ ಕುಳಿತು ಅಧ್ಯಯನ ನಡೆಸಿದ್ದೇನೆ. ಉಪನಿಷತ್ತುಗಳು, ವೇದಗಳನ್ನು ಓದಿದ್ದೇನೆ, ಏಸು ಕ್ರಿಸ್ತನ ಸಮಾಧಿಗೂ ಭೇಟಿ ನೀಡಿದ್ದೇನೆ.

ಮತಾಂತರವಾಗಲ್ಲ, ಶರಣ ತತ್ವವೇ ನನ್ನ ಹಾದಿ!

ಮುಸ್ಲಿಂ ಸಮುದಾಯದ ಸಭೆಯಲ್ಲಿ ಸರ್ವ ಧರ್ಮವೂ ಶ್ರೇಷ್ಠ ಎಂದು ಹೇಳಿದ್ದೇನೆ ಹೊರತು ಯಾರನ್ನೂ ಬೈಯಲು ಸಾಧ್ಯವಿಲ್ಲ. ಹಜ್ ಅಥವಾ ಉಮ್ರಾಗೆ ಹೋಗಲು ನಾನು ಮುಸ್ಲಿಂ ಅಲ್ಲ, ನಾನು ಬೇರೆ ಯಾವುದೇ ಧರ್ಮಕ್ಕೂ ಮತಾಂತರಗೊಳ್ಳುವುದಿಲ್ಲ. ನಾನು ಶರಣ ತತ್ವವನ್ನು ನಂಬುವವನು. ನನಗೆ ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲಾ ಸಮುದಾಯದವರೂ ಒಂದೇ. ಧರ್ಮಗಳ ಸಾರ ಒಂದೇ ಆಗಿದೆ," ಎಂದು ಪುನರುಚ್ಚರಿಸಿದರು. ಕೊನೆಯಲ್ಲಿ, "ನನ್ನ ಹೆಂಡತಿ ಮತ್ತು ಮಗಳು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕರೆದಿದ್ದಾರೆ, ಅವರು ಕರೆದರೆ ಹೋಗಲೇಬೇಕಲ್ಲವೇ? ಹಾಗೆಯೇ ನಾನು ಪ್ರಸ್ತುತ ಸುತ್ತೂರು ಮಠಕ್ಕೂ ಹೋಗುತ್ತಿದ್ದೇನೆ" ಎಂದು ತಿಳಿಸುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.

PREV
Read more Articles on
click me!

Recommended Stories

ಬೆಂಗಳೂರಿನ ಪ್ರಸಿದ್ಧ ಕೆಆರ್‌ ಮಾರುಕಟ್ಟೆಗೆ ಇನ್ನುಂದೆ ಫ್ರೀ ಎಂಟ್ರಿ ಇಲ್ಲ, ಬರಲಿದೆ ಡಿಜಿಟಲ್‌ ಟೋಲ್‌ಗೇಟ್‌
Aero India 2027: ಬೆಂಗಳೂರಿನಲ್ಲಿ 16ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ದಿನಾಂಕ ಘೋಷಣೆ