ಬೊಮ್ಮಾಯಿ ರಾಜ್ಯ ಕಂಡ ದುರ್ಬಲ, ಕಳಪೆ ಸಿಎಂ: ಸಿದ್ದರಾಮಯ್ಯ

By Anusha KbFirst Published Oct 19, 2022, 6:49 PM IST
Highlights

ಬಸವರಾಜ ಬೊಮ್ಮಾಯಿ ಈ ರಾಜ್ಯ ಕಂಡ ಅತ್ಯಂತ ದುರ್ಬಲ ಹಾಗೂ ಕಳಪೆ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಮಳವಳ್ಳಿಗೆ ತೆರಳಲು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಖಾಸಗಿ ಹೋಟೆಲ್‌ನಲ್ಲಿ ಚಹಾ, ಮದ್ದೂರು ವಡೆ ಸೇವಿಸುತ್ತಾ ಸುದ್ದಿಗಾರರೊಂದಿಗೆ ಮಾತನಾಡಿದರು.

ಮದ್ದೂರು: ಬಸವರಾಜ ಬೊಮ್ಮಾಯಿ ಈ ರಾಜ್ಯ ಕಂಡ ಅತ್ಯಂತ ದುರ್ಬಲ ಹಾಗೂ ಕಳಪೆ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಮಳವಳ್ಳಿಗೆ ತೆರಳಲು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಖಾಸಗಿ ಹೋಟೆಲ್‌ನಲ್ಲಿ ಚಹಾ, ಮದ್ದೂರು ವಡೆ ಸೇವಿಸುತ್ತಾ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವಾಗಲೂ ಆಡಳಿತ ನಡೆಸುವವರ ಮೇಲೆ ಆರೋಪ ಬಂದರೆ ಜನರಿಗೆ ಸತ್ಯವನ್ನು ಹೇಳಬೇಕು. ನಿಮ್ಮ ಸರ್ಕಾರದಲ್ಲೂ ಇತ್ತು ಎಂದರೆ ಏನರ್ಥ. ಸರಿ, ಹಾಗಾದರೆ ನಿಮ್ಮದು-ನಮ್ಮದು ಎರಡನ್ನೂ ಸೇರಿಸಿ ತನಿಖೆ ಮಾಡಿಸಿ ಅಂತ ಹೇಳ್ತಿದ್ದೀವಲ್ಲಾ. ಏಕೆ ಮಾಡಿಸುತ್ತಿಲ್ಲ. ಅದಕ್ಕೆಲ್ಲಾ ಧಮ್ ಮತ್ತು ನೈತಿಕತೆ ಬೇಕು ಎಂದರು.

ನಮ್ಮ ಸರ್ಕಾರವಿದ್ದ ಸಮಯದಲ್ಲಿ ನಡೆದಿರುವ ಭ್ರಷ್ಟಾಚಾರ (corruption) ಪ್ರಕರಣಗಳ ತನಿಖೆ ಮಾಡುವ ಅಧಿಕಾರ ಅವರಿಗೆ ಇದೆ. ಇವರು ಅಧಿಕಾರಕ್ಕೆ ಬಂದು ಮೂರು ವರ್ಷ ಆಯಿತು. ಇಲ್ಲಿಯವರೆಗೆ ಏನು ಮಾಡುತ್ತಿದ್ದರು. ಬಿಜೆಪಿ ಸರ್ಕಾರದ 40 ಪರ್ಸೆಂಟ್ ಭ್ರಷ್ಟಾಚಾರ ಹೊರ ತೆಗೆದ ಮೇಲೆ ಸುಳ್ಳು ಹೇಳೋಕೆ ಶುರು ಮಾಡಿದ್ದಾರೆ ಎಂದು ಮೂದಲಿಸಿದರು. 40 ಪರ್ಸೆಂಟ್ ಸರ್ಕಾರ ಅಂತ ನಾವೇನು ಹೇಳಿದ್ದಲ್ಲ. ಕಂಟ್ರಾಕ್ಟರ್‌ಗಳೇ ಹೇಳಿದ್ದು. ತಾಕತ್ತಿದ್ದರೆ ಅದನ್ನು ಸುಳ್ಳು ಅಂತ ಸಾಬೀತುಪಡಿಸಲಿ. ಬೊಮ್ಮಾಯಿ (Bommai) ಸರ್ಕಾರದ ಅವಧಿಯಲ್ಲಿ ಪಿಎಸ್‌ಐ ಸೇರಿದಂತೆ ಇನ್ನಿತರ ಹಗರಣಗಳಿಂದ (Scam) ಭ್ರಷ್ಟಾಚಾರ ತುಂಬಿ ತುಳುಕುವಾಗ ನಿಮ್ಮ ಸರ್ಕಾರದ ಹಗರಣಗಳನ್ನೂ ತನಿಖೆ ನಡೆಸುತ್ತೇವೆ ಎಂದರೆ ಇವರು ಸುಳ್ಳು ಹೇಳುತ್ತಿದ್ದಾರೆಂದು ಜನರಿಗೆ ಗೊತ್ತಾಗೋದಿಲ್ವಾ ಎಂದು ಕುಟುಕಿದರು.

Latest Videos

ಚುನಾವಣೆಗೆ ಸಿದ್ದರಾಮಯ್ಯ ಕ್ಷೇತ್ರ ಯಾವುದು? ಬಾದಮಿ ಸಾಕಣ್ಣ, ವರುಣಾ ನೋಡೋಣ!

ಕಾಂಗ್ರೆಸ್ ಹೈಕಮಾಂಡ್‌ಗೆ (Congress HighCommand) ಕರ್ನಾಟಕ ಎಟಿಎಂ ಆಗಿತ್ತು ಅಂತ ಹಿಂದೆ ಯಾವಾಗಲಾದರೂ ಹೇಳಿದ್ದರಾ. ವಿಪಕ್ಷದಲ್ಲಿದ್ದಾಗೇನು ಬಾಯಿಗೆ ಕಡುಬು ಸಿಗಿಸಿಕೊಂಡಿದ್ದರೇ. ಆಗಲೇ ಏಕೆ ಹೇಳಲಿಲ್ಲ. ಮೂರು ವರ್ಷ ಅಧಿಕಾರದಲ್ಲಿದ್ದ ಸಮಯದಲ್ಲೂ ಆ ಬಗ್ಗೆ ತನಿಖೆ ಮಾಡಿಸಲಿಲ್ಲವೇಕೆ. ಅದಕ್ಕೂ ಧಮ್ ಬೇಕು ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರ ಹಗರಣಗಳನ್ನು ತನಿಖೆ ನಡೆಸುವುದಾಗಿ ಸುಮ್ಮನೆ ಹೆದರಿಸುತ್ತಾರಷ್ಟೇ. ಅವರ ಕೈಲಿ ಏನೂ ಆಗುವುದಿಲ್ಲ. 40 ಪರ್ಸೆಂಟ್ ಸರ್ಕಾರ ಎಂಬ ಆರೋಪವನ್ನು ಅವರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ ಅದಕ್ಕೆ ಸುಳ್ಳು ಹೇಳಿಕೊಂಡು, ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯವ್ರು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು; ಸಿದ್ದರಾಮಯ್ಯ ಸರಣಿ ಟ್ವೀಟ್

ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ನಾನಿನ್ನೂ ಯೋಚಿಸಿಲ್ಲ. ಡಿಸೆಂಬರ್ ಬಳಿಕ ಅಂತಿಮ ನಿರ್ಧಾರ ಮಾಡುತ್ತೇನೆ. ನನ್ನ ಮಗ ಡಾ.ಯತೀಂದ್ರ ತಂದೆ ಎಂಬ ಅಭಿಮಾನದಿಂದ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿಬರಹುದು. ನಾನು ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನನ್ನು ಕೋಲಾರ (Kolara), ಬಾದಾಮಿ (Badami) ಸೇರಿದಂತೆ ಹಲವು ಕಡೆಗಳಿಂದ ಸ್ಪರ್ಧಿಸುವಂತೆ ಆಹ್ವಾನ ನೀಡುತ್ತಿದ್ದಾರೆ. ಡಿಸೆಂಬರ್ ಕಳೆದ ಬಳಿಕ ನಾನು ಸ್ಪರ್ಧಿಸುವ ಕ್ಷೇತ್ರವನ್ನು ಅಂತಿಮಗೊಳಿಸುವೆ ಎಂದರು.
 

click me!