ಚಿಕ್ಕಬಳ್ಳಾಪುರ: ದಲಿತ ಮಹಿಳೆ ಆಯ್ಕೆ, ಅಂಗನವಾಡಿಗೆ ಬೇಲಿ

By Kannadaprabha NewsFirst Published May 8, 2021, 11:20 AM IST
Highlights

ದಲಿತ ಮಹಿಳೆ ಅಂಗನವಾಡಿ ಕಾರ್ಯಕರ್ತೆಯಾಗಿ ಆಯ್ಕೆಗೊಂಡಿದ್ದಕ್ಕೆ ಸರ್ವರ್ಣೀಯರ ವಿರೋಧ| ಚಿಕ್ಕಬಳ್ಳಾಪುರ ತಾಲೂಕಿನ ನಕ್ಕನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು: ಅರೋಪ| 

ಚಿಕ್ಕಬಳ್ಳಾಪುರ(ಮೇ.08): ತೆರೆವಾದ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ದಲಿತ ಮಹಿಳೆಯೊಬ್ಬಳು ಆಯ್ಕೆಗೊಂಡಿದ್ದನ್ನು ಸಹಿಸದೆ ಗ್ರಾಮದ ಸವರ್ಣೀಯರು ಅಂಗನವಾಡಿ ಕಟ್ಟಡಕ್ಕೆ ಕಾರ್ಯಕರ್ತೆ ಹೋಗದಂತೆ ಮುಳ್ಳಿನ ತಂತಿಬೇಲಿ ಅಳವಡಿಸಿ ಅಸ್ಪೃಶ್ಯತೆ ಆಚರಿಸುವ ಅಮಾನವೀಯ ಘಟನೆ ನಡೆದಿದೆ. 

ಸತತ 40 ವರ್ಷಗಳಿಂದ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಸೀತಾ ಮಹಾಲಕ್ಷ್ಮೀ ಎಂಬುವರು ಇತ್ತೀಚೆಗೆ ನಿವೃತ್ತಿಯಾಗಿದ್ದು, ಬಳಿಕ ನಿಯಮಾನುಸಾರ ಮಮತಾ ಎಂಬುವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಿದ್ದಾರೆ. ಆದರೆ ಮಮತಾ ದಲಿತ ಸಮುದಾಯಕ್ಕೆ ಸೇರಿದ್ದಾರೆಂಬ ಕಾರಣಕ್ಕೆ ಗ್ರಾಮಸ್ಥರು ಆಕೆಯನ್ನು ಅಂಗನವಾಡಿ ಕೇಂದ್ರದ ಕಟ್ಟಡದೊಳಗೆ ಹೋಗದಂತೆ ಮುಳ್ಳಿನ ತಂತಿ ಬೇಲಿ ಹಾಕಿದ್ದಾರೆ. ಕೊರೋನಾ ಸಂಕಷ್ಟ ಇಡೀ ಮಾನವ ಸಮೂಹದ ಅಸ್ತಿತ್ವ ಅಲುಗಾಡಿಸುತ್ತಿದೆ. ಆದರೂ ಮನುಷ್ಯನ ನಡುವೆ ಅಸ್ಪೃಶ್ಯತೆ ಮನೋಭಾವ ಇನ್ನೂ ತೊಲಗಿಲ್ಲ ಎಂಬುದಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ನಕ್ಕನಹಳ್ಳಿ ಗ್ರಾಮ ಜೀವಂತ ಸಾಕ್ಷಿ.

ಮುಂಡರಗಿ: ದಲಿತರು ಚಹಾ ಕುಡಿದ ಕಪ್‌ ತೊಳೆದ ತಹಸೀಲ್ದಾರ್‌

ಬೀದಿಯಲ್ಲಿ ಪೌಷ್ಟಿಕ ಆಹಾರ ವಿತರಣೆ: 

ಇದರಿಂದ ವಿಚಲಿತರಾದ ಮಮತಾ ಅವರು ಘಟನೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜೊತೆಗೆ ಅಂಗನವಾಡಿಗೆ ಸರಬರಾಜು ಆಗಿದ್ದ ಮಕ್ಕಳ ಹಾಗೂ ಗರ್ಭಿಣಿ ಮಹಿಳೆಯರಿಗೆ ವಿತರಿಸುವ ಪೌಷ್ಟಿಕ ಆಹಾರದ ಪೊಟ್ಟಣಗಳನ್ನು ಆಕೆ ಅನಿವಾರ್ಯವಾಗಿ ಬೀದಿಯಲ್ಲಿ ನಿಂತು ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಹಂಚಿಕೆ ಮಾಡಿದ್ದಾರೆ. ಈ ಕುರಿತ ಚಿತ್ರಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿದೆ. ಕೆಲ ಸಮಯದಿಂದೀಚೆಗೆ ಗ್ರಾಮಸ್ಥರು ಅಂಗನವಾಡಿಗೆ ಬೀಗವನ್ನೂ ಜಡಿದು ಸಮಸ್ಯೆ ಸೃಷ್ಟಿಸಿದ್ದಾರೆ. ಈ ಬಗ್ಗೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಸ್ಥಳೀಯ ನಂದಿಠಾಣೆ ಪೊಲೀಸರ ವರೆಗೂ ವಿಷಯ ಹೋಗಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನಕ್ಕನಹಳ್ಳಿಯಲ್ಲಿ ದಲಿತೆ ಎಂಬ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಗೆ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಗ್ರಾಮದ ಕೆಲವರು ಅಡ್ಡಿಪಡಿಸುತ್ತಿದ್ದು ನಮ್ಮ ಗಮನಕ್ಕೆ ಬಂದ ತಕ್ಷಣ ಖುದ್ದು ಗ್ರಾಮಕ್ಕೆ ಹೋಗಿ ಸಮಸ್ಯೆ ಬಗೆಹರಿಸಲಾಗಿದೆ. ಈಗ ಅಂಗನವಾಡಿ ಕೇಂದ್ರಕ್ಕೆ ಹಾಕಲಾಗಿದ್ದ ಬೀಗ ತೆಗೆದಿದ್ದು ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ನಾರಾಯಣಸ್ವಾಮಿ ತಿಳಿಸಿದ್ದಾರೆ. 
 

click me!