ಬಂಜಾರ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಇತರೆ 99 ಜಾತಿಗಳಿಗೆ ಮರಣ ಶಾಸನದಂತೆ ಮಾರಕವಾಗಿರುವ ನ್ಯಾ.ಎಜೆ. ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೆ ಅಂಗೀಕರಿಸುವ ಪ್ರಯತ್ನ ಮಾಡಬಾರದು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಜಿಲ್ಲಾಧ್ಯಕ್ಷ ಬಾಸುನಾಯ್ಕ್ ಚವ್ಹಾಣ್ ಎಚ್ಚರಿಸಿದ್ದಾರೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಜ.7): ಬಂಜಾರ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಇತರೆ 99 ಜಾತಿಗಳಿಗೆ ಮರಣ ಶಾಸನದಂತೆ ಮಾರಕವಾಗಿರುವ ನ್ಯಾ.ಎಜೆ. ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೆ ಅಂಗೀಕರಿಸುವ ಪ್ರಯತ್ನ ಮಾಡಬಾರದು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಜಿಲ್ಲಾಧ್ಯಕ್ಷ ಬಾಸುನಾಯ್ಕ್ ಚವ್ಹಾಣ್ ಎಚ್ಚರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಾಸುನಾಯಕ ಚವ್ಹಾಣ್, ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಅಧ್ಯಯನ ಮಾಡಲು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ನೇತೃತ್ವ ಸಮಿತಿಯೊಂದನ್ನು ರಚಿಸಿದ್ದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಈ ಸಮಿತಿ ವರದಿಯನ್ನು ಅಧ್ಯಯನ ಮಾಡಲಿದ್ದು ಜಾರಿಗೆ ತರಬೇಕೋ ಅಥವಾ ಬೇಡವೋ ಎನ್ನುವುದನ್ನು ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ವರದಿಯನ್ನು ಜಾರಿಗೊಳಿಸಲು ಗೌಪ್ಯವಾಗಿ ಕೇಂದ್ರಕ್ಕೆ ಕಳುಹಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಇಂತಹ ಪ್ರಯತ್ನದ ವಿರುದ್ದ ಬಂಜಾರ ಸಮುದಾಯ ಸೇರಿದಂತೆ ಭೋವಿ, ಛಲವಾದಿ, ಅಲೆಮಾರಿ ಜಾತಿಗಳಾದ ಕೊರಚ, ಕೊರಮ, ಚನ್ನದಾಸ, ಕುಳುವ, ಬುಡ್ಗಜಂಗಮ, ಸಿಳ್ಳೆಕ್ಯಾತೆ, ದೊಂಬರು ಸೇರಿದಂತೆ ಪರಿಶಿಷ್ಟ ಜನಾಂಗ ಇದೇ ಜನೇವರಿ 10 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ರ್ಯಾಲಿ ಹಮ್ಮಿಕೊಂಡಿವೆ. ಈ ರ್ಯಾಲಿಯಲ್ಲಿ ರಾಜ್ಯದ ವಿವಿಧ ಭಾಗದಿಂದ ಸುಮಾರು ಆರು ಲಕ್ಷ ಜನರು ಭಾಗವಹಿಸಲಿದ್ದಾರೆ. ಯಾದಗಿರಿ ಜಿಲ್ಲೆಯಿಂದ ಕನಿಷ್ಠ 15 ಸಾವಿರ ಜನ ಸಮಾಜದ ಬಾಂಧವರು ಭಾಗವಹಿಸಲಿದ್ದಾರೆ ಎಂದರು.
ನಾಲ್ಕು ಗೋಡೆಗಳ ಮಧ್ಯೆ ಕುಳಿತು ನ್ಯಾ.ಸದಾಶಿವ ವರದಿ ತಯಾರಿಸಿದ್ದಾರೆ: ಬಾಸುನಾಯ್ಕ್
ರಾಜ್ಯದ ಪರಿಶಿಷ್ಟ ಜಾತಿಗಳ ಸ್ಥಿತಿಗತಿ ಅಧ್ಯಯನ ಮಾಡಲು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವನ್ನು 2005 ರಲ್ಲಿ ಅಂದಿನ ಸರ್ಕಾರ ನೇಮಿಸಿತ್ತು. ಆದರೆ ಸದರಿ ಆಯೋಗಕ್ಕೆ ಸರ್ಕಾರ ಯಾವುದೇ ಮೂಲಭೂತ ಸೌಲಭ್ಯ ಕೊಟ್ಟಿರಲಿಲ್ಲ. ಆದರೆ ಸಮಿತಿ ರಾಜ್ಯದಲ್ಲಿ ವಾಸವಾಗಿರುವ ಬಂಜಾರ ಸಮುದಾಯ ಸೇರಿದಂತೆ ಇತರೆ 99 ಜಾತಿಗಳ ಅಧ್ಯಯನ ಮಾಡದೇ ನಾಲ್ಕು ಗೋಡೆಗಳ ಮಧ್ಯೆ ಕುಳಿತು ವರದಿ ತಯಾರಿಸಿದೆ. ಆ ವರದಿಯ ಕೆಲ ಅಂಶಗಳು ಈಗ ಸೋರಿಕೆಯಾಗಿದ್ದು ಅದರ ಪ್ರಕಾರ ಬಂಜಾರ ಹಾಗೂ ಇತರೆ ಸಮುದಾಯಗಳ ಅಸ್ಥಿತ್ವಕ್ಕೆ ಧಕ್ಕೆ ತರುವಂತ ಅಂಶಗಳಿವೆ. ಹಾಗಾಗಿ, ಈ ಸಮುದಾಯಗಳು ವರದಿಯ ಜಾರಿಗೆ ಖಡಾಖಂಡಿತ ವಿರೋಧ ವ್ಯಕ್ತಪಡಿಸುತ್ತಿದ್ದು, ಇಷ್ಟಾದರೂ ಕೂಡಾ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ವರದಿಯ ಅನುಷ್ಠಾನಕ್ಕೆ ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದರು.
Panchamasali Reservation: 2D ಮೀಸಲಾತಿ ನಿರಾಕರಣೆ, ಜ.13ರಂದು ಸಿಎಂ ನಿವಾಸದೆದುರು ಜಯಮೃತ್ಯುಂಜಯ ಶ್ರೀ ಹೋರಾಟ
ನ್ಯಾ.ಸದಾಶಿವ ಆಯೋಗದ ವರದಿ ಸಂವಿಧಾನ ವಿರೋಧಿ, ಅವಾಸ್ತವಿಕ ಹಾಗೂ ಅವೈಜ್ಞಾನಿಕವಾಗಿದೆ: ಗೋರಸೇನಾ
ಬಂಜಾರ ಹಾಗೂ ಇತರೆ 99 ಸ್ಪೃಶ್ಯ ಜಾತಿಗಳ ಸಮಗ್ರ ಸ್ಥಿತಿಗತಿಯನ್ನ ಒಳಗೊಂಡಿರದೇ ತಯಾರಿಸಿಲಾದ ವರದಿ ಸಂಪೂರ್ಣ ಅವಾಸ್ತವಿಕತೆಯಿಂದ ಕೂಡಿದ್ದು ಸಂವಿಧಾನ ವಿರೋಧಿಯಾಗಿದೆ. ಹಾಗಾಗಿ ಸದರಿ ವರದಿಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಇತರೆ ರಾಜಕೀಯ ಪಕ್ಷಗಳ ವಿರುದ್ದ ಬಂಜಾರ ಹಾಗೂ ಇತರೆ ಸಮುದಾಯಗಳು ಜನವರಿ 10 ರಂದು ಭಾರೀ ಪ್ರತಿಭಟನೆಯನ್ನುಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಗೋರಸೇನಾದ ರಾಜ್ಯಾಧ್ಯಕ್ಷ ಬಾಳಾ ಸಾಹೇಬ ರಾಠೋಡ ಅವರ ನೇತೃತ್ವದಲ್ಲಿ ಸುಮಾರು 10 ಲಕ್ಷ ಜನ ಸೇರಲಿದ್ದು, ಜಿಲ್ಲೆಯಿಂದ 15,000 ಜನರು ಭಾಗವಹಿಸಿ ತಮ್ಮ ಪ್ರತಿರೋಧ ತೋರಲಿದ್ದಾರೆ ಎಂದು ಗೋರಸೇನಾ ಜಿಲ್ಲಾಧ್ಯಕ್ಷ ರಾಮು ಮೇಗಾವತ್ ಅಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ಒದಗಿಸಲು ಸಿಎಂ ದೃಢ ಹೆಜ್ಜೆ: ಕೇಂದ್ರ ಸಚಿವ ಜೋಶಿ
ತಾಂಡಾಗಳಲ್ಲಿ ಚುನಾವಣೆ ಬಹಿಷ್ಕಾರ:
ರಾಜ್ಯ ಸರ್ಕಾರ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವ ಪ್ರಯತ್ನ ಕೈ ಬಿಡಬೇಕು ಇಲ್ಲದಿದ್ದರೆ ಮುಂಬರುವ ಚುನಾವಣೆ ಯನ್ನು ಬಹಿಷ್ಕರಿಸಲಾಗುವುದು. ಜೊತೆಗೆ ಈ ಹೋರಾಟವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ವ್ಯಾಪಿಸಿ ಒಂದು ಆಂದೋಲವನ್ನು ರೂಪಿಸಲಾಗುವುದು. ಅಲ್ಲದೇ, ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾಯಿತ ಶಾಸಕರ ಹಾಗೂ ಸಂಸದರ ಮನೆಯ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಬಂಜಾರ ಸಮುದಾಯದ ಮುಖಂಡರು ಎಚ್ಚರಿಸಿದರು.