Kannada Sahitya Sammelana: ಹೊಸ ತಂತ್ರಜ್ಞಾನದ ಹೆಚ್ಚು ವೈಭವೀಕರಣ ಬೇಡ: ಡಾ.ಬಿ.ಕೆ.ರವಿ

By Suvarna News  |  First Published Jan 7, 2023, 5:41 PM IST

ಹೊಸ ತಂತ್ರಜ್ಞಾನದ ಹೆಚ್ಚು ವೈಭವೀಕರಣ ಅಗತ್ಯವಿಲ್ಲ. ಮಾಹಿತಿಯ ರವಾನೆಯ ವೇಗ ಹೆಚ್ವಾಗಿದ್ದರೂ ಕೂಡ ಮೂಲಭೂತವಾಗಿ ಸಂವಹನ ಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು  ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ.ಬಿ.ಕೆ.ರವಿ ಹೇಳಿದ್ದಾರೆ.


ಹಾವೇರಿ (ಜ.7): ಹೊಸ ತಂತ್ರಜ್ಞಾನದ ಹೆಚ್ಚು ವೈಭವೀಕರಣ ಅಗತ್ಯವಿಲ್ಲ. ಮಾಹಿತಿಯ ರವಾನೆಯ ವೇಗ ಹೆಚ್ವಾಗಿದ್ದರೂ ಕೂಡ ಮೂಲಭೂತವಾಗಿ ಸಂವಹನ ಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಭಾರತದಲ್ಲಿ ಮಾಧ್ಯಮ ವಾಣಿಜ್ಯ ಕ್ಷೇತ್ರವಾಗಿ ಪರಿಗಣಿಸಿರಲಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಟಿವಿ ವಾಹಿನಿಗಳ ಜೊತೆ ಪೈಪೋಟಿ ಪ್ರಾರಂಭವಾದ ನಂತರ ವಾಣಿಜ್ಯೋದ್ಯಮವಾಗಿ ಮಾಧ್ಯಮ ಪರಿಗಣಿಸಲ್ಪಟ್ಟಿತು ಎಂದು ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ.ಬಿ.ಕೆ.ರವಿ ಹೇಳಿದರು. 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಮಾಧ್ಯಮ ಹೊಸತನ ಮತ್ತು ಆವಿಷ್ಕಾರಗಳು" ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಲಕ್ಕೆ ತಕ್ಕಂತೆ ಆವಿಷ್ಕಾರವಾಗುವ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಆಗುವ ಬದಲಾವಣೆಗಳ ವೈಭವೀಕರಣವಾಗುತ್ತಿದೆ. ಸಂವಹನಶಾಸ್ತ್ರದ ಸಂಶೋಧಕರು ಮೂಲಭೂತ ಸಂವಹನ ಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಡೀ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮಗಳು ,ಸಾಮಾಜಿಕ ಜಾಲತಾಣಗಳು ಒಂದು ದಿನ ರಜೆ ಪಡೆದರೆ ಜನರ ಬದುಕಿನ ಮೇಲಾಗುವ ಪರಿಣಾಮಗಳನ್ನು ಕಲ್ಪಿಸಿಕೊಂಡಾಗ, ಮಾಧ್ಯಮಗಳ ಮಹತ್ವ ಅರಿವಾಗುತ್ತದೆ .ಸಂವಹನ ಕ್ರಿಯೆಯಲ್ಲಿ ಬದಲಾವಣೆಯಾಗದಿದ್ದರೂ ಮಾಹಿತಿಯ ರವಾನೆಯ ವೇಗ ಅಗಾಧ ಪರಿವರ್ತನೆಯಾಗಿದೆ. ತಂತ್ರಜ್ಞಾನದ ಬೆಳವಣಿಗೆಯು ಸಾಮಾಜಿಕ ಜಾಲತಾಣಗಳ ವಿಶ್ವಾಸಾರ್ಹತೆಯನ್ನು ಪ್ರಶ್ನೆಗೆ ಒಳಪಡಿಸಿದೆ. 

Tap to resize

Latest Videos

undefined

ಕೋವಿಡ್ ನಂತರ ಭಾರತದ ಮಾಧ್ಯಮಗಳು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿವೆ. ವಿದೇಶಿ ನೇರ ಬಂಡವಾಳ ಹೂಡಿಕೆಯ ನೀತಿಯಿಂದಾಗಿ ಜಗತ್ತಿನ‌ ಹಲವು ರಾಷ್ಟ್ರಗಳು ಭಾರತದ ಮಾಧ್ಯಮದಲ್ಲಿ ಬಂಡವಾಳ ಹೂಡಲು ತುದಿಗಾಲಲ್ಲಿ ನಿಂತಿವೆ ಎಂದರು 

ಮುದ್ರಣ ಮಾಧ್ಯಮದಲ್ಲಿ ಕನ್ನಡದ ಬಳಕೆ ಕುರಿತು ಮಾತನಾಡಿದ ಸುದರ್ಶನ ಚನ್ನಂಗಿಹಳ್ಳಿ,ಪತ್ರಿಕಾ ಭಾಷೆಗೆ ಬಹಳ ಮಹತ್ವ ಇದೆ. ಮುಂದಿನ ಪೀಳಿಗೆಗೆ ಭಾಷಾ ಬಳಕೆ ದಾಟಿಸುವ ಹೊಣೆಗಾರಿಕೆ ಪತ್ರಿಕೆಗಳ ಮೇಲಿದೆ. ಮಾಧ್ಯಮಗಳಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು. ಆಂಗ್ಲಭಾಷಾ ಪದಗಳ ವ್ಯಾಮೋಹ ಬಿಡಬೇಕು‌. ಕೋವಿಡ್ ಕಾಲದಲ್ಲಿ ಲಾಕ್‌ಡೌನ್, ಕ್ವಾರಂಟೈನ್, ಸ್ಯಾನಿಟೈಸರ್ ಮೊದಲಾದ ಪದಗಳು ಈಗ ಮಾಧ್ಯಮಗಳಲ್ಲಿ ಬಳಕೆಯಾದವು‌. ಪರ್ಯಾಯ ಕನ್ನಡ ಪದಗಳನ್ನು ಬಳಕೆಗೆ ತರಲು ಸಾಧ್ಯವಾಗಲಿಲ್ಲ. ಮಾತೃಭಾಷೆ ಉಳಿದರೆ ಕನ್ನಡ ಪತ್ರಿಕೆಗಳು ಉಳಿಯಲು ಸಾಧ್ಯ ಎಂದರು.

ಸಾಮಾಜಿಕ ಜಾಲತಾಣಗಳ ಅರಿವು ಮತ್ತು ಅಪಾಯ ಕುರಿತು ಮಾತನಾಡಿದ ಎಚ್.ಎನ್.ಸುದರ್ಶನ,ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಹುಟ್ಟಿಕೊಂಡ ಸಾಮಾಜಿಕ ಜಾಲತಾಣಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಅವು ಪ್ರತಿಯೊಬ್ಬರ ಐಡೆಂಟಿಟಿ ಕೂಡ ಆಗಿವೆ. ಎಲ್ಲೋ ದೂರದಲ್ಲಿರುವ ವ್ಯಕ್ತಿಗಳನ್ನು ಜಾಲತಾಣಗಳು ಪರಸ್ಪರ ಹತ್ತಿರವಾಗಿಸುತ್ತಿವೆ. ಪ್ರತಿಭೆಗೆ ವೇದಿಕೆಯಾಗಿವೆ. ಪ್ರತಿಭಾವಂತ ಕ್ರಿಯೇಟರ್ಸ್‌ಗಳು ಜಾಲತಾಣಗಳ ವರಮಾನದ ಮೂಲಕವೇ ಜೀವನ‌ ನಿರ್ವಹಣೆ ಮಾಡುತ್ತಿದ್ದಾರೆ. ಜನಸಾಮಾನ್ಯರಿಂದಲೂ ಅನೇಕ ಅದ್ಭುತ ಮಾಹಿತಿಗಳು ಜಾಲತಾಣಗಳಲ್ಲಿ ದಾಖಲಾಗುತ್ತಿವೆ. ವಧು-ವರರನ್ನು ಜೋಡಿಸುವ ಕೊಂಡಿ, ವ್ಯಾಪಾರದ ಕಟ್ಟೆಯೂ ಆಗಿದೆ. 

ಸುಮಾರು 45 ಕೋಟಿ ಭಾರತೀಯರು ಯಾವುದಾದರೂ ಒಂದು ಸಾಮಾಜಿಕ ಜಾಲತಾಣಗಳಲ್ಲಿದ್ದಾರೆ. ಅತ್ಯುತ್ತಮ ಸಾಹಿತ್ಯ,ಚರ್ಚೆಗಳ ಕೂಟವೂ ಆಗಿದೆ. ಮನರಂಜನೆಯ ಕಾರಣಕ್ಕೆ  ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಖ್ಯೆಯ ಜನರಿದ್ದಾರೆ. ವಂಚಕರ ಜಾಲವೂ ಅಗಾಧವಾಗಿ ಬೆಳೆಯುತ್ತಿರುವುದರಿಂದ ಸೈಬರ್ ಅಪರಾಧಗಳನ್ನು ದಾಖಲಿಸುವ, ನಿಯಂತ್ರಿಸುವ ಕ್ರಮಗಳನ್ನು ಜನರು ರೂಢಿಸಿಕೊಳ್ಳಬೇಕು. ಮಕ್ಕಳು ಜಾಲತಾಣಗಳ ಅಡಿಕ್ಷನ್‌ಗೆ ಒಳಗಾಗುತ್ತಿದ್ದಾರೆ, ಅದರಿಂದ ಮಕ್ಕಳನ್ನು ಹೊರತರುವುದು ಹಿರಿಯರ ಜವಾಬ್ದಾರಿಯಾಗಿದೆ ಎಂದರು.

ಡಿಜಿಟಲ್ ಮಾಧ್ಯಮದ ಮುಂದಿನ ಸವಾಲುಗಳ ಕುರಿತು ಮಾತನಾಡಿದ ಡಾ.ಸೀಬಂತಿ ಪದ್ಮನಾಭ ಅವರು, ಡಿಜಿಟಲ್ ಮಾಧ್ಯಮದ ದೊಡ್ಡ ಮಾಹಿತಿ ಕ್ರಾಂತಿ ನಡೆಯುತ್ತಿರುವದರಿಂದ ಅದರ ಪರಿಣಾಮಗಳನ್ನು ನಾವೆಲ್ಲ ಅನುಭವಿಸುತ್ತಿದ್ದೇವೆ.ಡಿಜಿಟಲ್ ಮಾಧ್ಯಮಗಳೇ ನಮ್ಮನ್ನು ಆಳುತ್ತಿವೆಯೇ ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ. ಅಗ್ಗದ ಡಾಟಾ ದರವೂ ಇದಕ್ಕೆ ಕಾರಣವಾಗಿದೆ. ಈ ಪ್ರಭಾವಶಾಲಿ ಮಾಧ್ಯಮ ಎದುರಿಸುತ್ತಿರುವ ಸವಾಲುಗಳು ಕೂಡ ಅನೇಕ ಇವೆ. ಸುದ್ದಿ, ಮಾಹಿತಿ, ಮನರಂಜನೆ ನಡುವಿನ ತೆಳುವಾದ ಗೆರೆ ವೇಗವಾಗಿ ಮಾಯವಾಗುತ್ತಿದೆ. ಸುದ್ದಿಯ ಸತ್ಯಾಸತ್ಯತೆ ತಿಳಿಯುವುದು ಸವಾಲಾಗಿದೆ.

Jana Sahitya Sammelana: ಈಗಿನ ಸಾಹಿತ್ಯ ಪರಿಷತ್ ಅಧ್ಯಕ್ಷರು ಸಾಹಿತಿಯಲ್ಲ: ಚಿಂತಕ ಪುರುಷೋತ್ತಮ ಬಿಳಿಮಲೆ

ಸಾಮಾಜಿಕ ಜಾಲತಾಣಗಳನ್ನು ಸುಳ್ಳು ಸುದ್ದಿಗಳ‌ ಕಾರ್ಖಾನೆ ಎಂದು ಕರೆಯಲಾಗುತ್ತಿದೆ.ಜನಸಾಮಾನ್ಯರನ್ನು ಇದರಿಂದ ಹೇಗೆ ರಕ್ಷಿಸಬೇಕು ಎಂಬ ಶಿಕ್ಷಣ ಕೊಡಬೇಕಾಗಿದೆ. ಬೇರೆ ಮಾಧ್ಯಮಗಳಲ್ಲಿರುವ ಗೇಟ್ ಕೀಪಿಂಗ್, ಎಡಿಟಿಂಗ್, ಜರಡಿ ವ್ಯವಸ್ಥೆ  ದುರ್ಬಲವಾಗಿರುವುದರಿಂದ ಅನೇಕ ಕ್ಷುಲ್ಲಕ‌ ವಿಷಯಗಳು ಈಗ ಹೆಚ್ಚು ಮಹತ್ವ ಪಡೆಯುತ್ತಿವೆ. ಕೃತಕ ತಂತ್ರಜ್ಞಾನದ ಬಳಕೆ ಮನುಷ್ಯನನ್ನು ಮೀರಿ ಹೋಗಬಾರದು ಸ್ವಯಂ ನಿರ್ಬಂಧಗಳನ್ನು ಹಾಕಿಕೊಳ್ಳಬೇಕು ಎಂದರು.

ಸಮ್ಮೇಳನದಲ್ಲಿ ಅತಿಥಿಯನ್ನೇ ಒಳಬಿಡದ ಪೊಲೀಸರು, ಪೊಲೀಸರ ಮೇಲೆ ಮಹೇಶ್ ಜೋಶಿ ಗರಂ

ಹಿರಿಯ ಪತ್ರಕರ್ತ ಮೋಹನ ಹೆಗಡೆ ಆಶಯ ನುಡಿಗಳನ್ನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೇ ಆಗಿರುವ ಅವಾಂತರಗಳನ್ನು ಗಮನಿಸಿದಾಗ ಕೇವಲ ಒಳಿತನ್ನೇ ಆಶಿಸುವುದು ಸೂಕ್ತವೆನಿಸುವುದಿಲ್ಲ. ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯೋತ್ತರ ಕಾಲಘಟಲ್ಲಿ ನಾಡಿನ ಅಭ್ಯುದಯಕ್ಕೆ ಪತ್ರಿಕೆಗಳ ಕೊಡುಗೆ ಗಮನಾರ್ಹವಾದುದು.ಮುದ್ರಣ ಮಾಧ್ಯಮವು ಕಾಲ ಕಾಲಕ್ಕೆ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು, ವಿಶ್ವಾಸಾರ್ಹತೆ ಉಳಿಸಿಕೊಂಡು ಬಂದಿದೆ . ಮುದ್ರಣ ಕಾಗದದ ಬೆಲೆ ಗಗನಕ್ಕೇರಿರುವುದು ಪತ್ರಿಕೆಗಳ ನಿರ್ವಹಣೆಗೆ ಸವಾಲೆನಿಸಿವೆ. ಆಧುನಿಕ ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳ ಪೈಪೋಟಿ ಎದುರಿಸಬೇಕಾಗಿದೆ ಎಂದರು.

click me!