ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಮೂರು ಸರ್ಕಾರಿ ಕಾಲೇಜುಗಳಲ್ಲಿ ಬಿಎ ವಿಭಾಗ ಬಂದ್‌

Published : Jul 01, 2026, 09:09 AM IST
PL Dharma

ಸಾರಾಂಶ

ವಿದ್ಯಾರ್ಥಿಗಳ ಕೊರತೆಯಿಂದಾಗಿ, ಮಂಗಳೂರು ವಿಶ್ವವಿದ್ಯಾಲಯವು ಮೂರು ಸರ್ಕಾರಿ ಕಾಲೇಜುಗಳಲ್ಲಿ 2026-27ನೇ ಸಾಲಿನಿಂದ ಬಿಎ ಕೋರ್ಸ್‌ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ವಾಣಿಜ್ಯ ಮತ್ತು ತಂತ್ರಜ್ಞಾನ ಆಧಾರಿತ ಕೋರ್ಸ್‌ಗಳತ್ತ ವಿದ್ಯಾರ್ಥಿಗಳ ಒಲವು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ.

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಂಗಳೂರು ವಿಶ್ವವಿದ್ಯಾಲಯ ಸಂಯೋಜನೆಗೆ ಒಳಪಟ್ಟಿರುವ ಮೂರು ಪ್ರಮುಖ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಕೋರ್ಸ್‌ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಆನ್‌ಲೈನ್ ಮೂಲಕ ಸೋಮವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಮೊದಲ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಾಣಿಜ್ಯ ಹಾಗೂ ಹೊಸ ತಂತ್ರಜ್ಞಾನ ಆಧಾರಿತ ಕೋರ್ಸ್‌ಗಳತ್ತ ವಿದ್ಯಾರ್ಥಿಗಳು ಹೆಚ್ಚಿನ ಒಲವು ವ್ಯಕ್ತಪಡಿಸಿರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ.

ಕುಲಪತಿ ಪ್ರೊ. ಪಿ. ಎಲ್. ಧರ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಆದೇಶದ ಅನ್ವಯ ಪ್ರವೇಶಾತಿ ಇಲ್ಲದ ಕೋರ್ಸ್‌ಗಳನ್ನು ರದ್ದುಗೊಳಿಸಿ, ಹೊಸ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಆರಂಭಿಸಲು ಒಪ್ಪಿಗೆ ನೀಡಲಾಯಿತು.

ಯಾವ ಕಾಲೇಜುಗಳಲ್ಲಿ ಬಿಎ ಬಂದ್‌?

ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರಸಕ್ತ ಸಾಲಿನಿಂದ ಮಂಗಳೂರಿನ ಕಾವೂರು ಸರ್ಕಾರಿ ಕಾಲೇಜಿನಲ್ಲಿ ಅರ್ಥಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ಹಾಗೂ ಇತಿಹಾಸ, ಪತ್ರಿಕೋದ್ಯಮ, ಕನ್ನಡ ಕಾಂಬಿನೇಷನ್‌ ಕೋರ್ಸ್‌ಗಳು ಬಂದ್ ಆಗಿದೆ. ಪುಂಜಾಲಕಟ್ಟೆ ಸರ್ಕಾರಿ ಕಾಲೇಜಿನ ಅರ್ಥಶಾಸ್ತ್ರ, ಕನ್ನಡ ಮತ್ತು ಸಮಾಜಶಾಸ್ತ್ರ ಕಾಂಬಿನೇಷನ್ ರದ್ದು, ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್, ಇತಿಹಾಸ ಮತ್ತು ರಾಜ್ಯಶಾಸ್ತ್ರ ಕಾಂಬಿನೇಷನ್ ಬಂದ್‌ ಆಗಿದೆ. ಈ ಸರ್ಕಾರಿ ಕಾಲೇಜುಗಳಲ್ಲಿ ಕಲಾ ವಿಭಾಗದ ನಿರ್ದಿಷ್ಟ ಕಾಂಬಿನೇಷನ್‌ಗಳನ್ನು ಮುಚ್ಚಲಾಗುತ್ತಿದೆ.

ಜಗತ್ತಿನಾದ್ಯಂತ ಸಂಭವಿಸುತ್ತಿರುವ ಭೂಕಂಪ, ಭೂಕುಸಿತ, ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿಪತ್ತು ನಿರ್ವಹಣೆ ಕೋರ್ಸ್ ಅನ್ನು ಓಪನ್ ಎಲೆಕ್ಟಿವ್ ಆಗಿ ಸೇರಿಸಲು ಹಾಗೂ ಜಾಗತಿಕ ಆಹಾರದ ಕೊರತೆ ನೀಗಿಸಲು ಕೃಷಿ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಜ್ಞಾನ ವಿಭಾಗದ ಪಠ್ಯಕ್ರಮದಲ್ಲಿ ಆಹಾರ ಬಿಕ್ಕಟ್ಟು ಕುರಿತ ವಿಷಯಗಳನ್ನು ಸೇರಿಸಲು ವಿಭಾಗೀಯ ಮುಖ್ಯಸ್ಥರಿಗೆ ಕುಲಪತಿಗಳು ಸೂಚಿಸಿದರು.

ಬಿ.ಕಾಂ ಮತ್ತು ಬಿಬಿಎ ಸೀಟುಗಳ ಸಂಖ್ಯೆ ಹೆಚ್ಚಳ

ಬಿಎ ಕೋರ್ಸ್‌ಗಳು ಬಂದ್ ಆಗುತ್ತಿದ್ದರೂ, ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಉಪ್ಪಿನಂಗಡಿ, ಪುಂಜಾಲಕಟ್ಟೆ ಹಾಗೂ ಪುತ್ತೂರಿನ ಸರ್ಕಾರಿ ಕಾಲೇಜುಗಳಲ್ಲಿ ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಬಿ.ಕಾಂ ಬ್ಯಾಂಕಿಂಗ್ ಫೈನಾನ್ಷಿಯಲ್ ಸರ್ವಿಸಸ್ ಅಂಡ್ ಇನ್ಶೂರೆನ್ಸ್, ಹ್ಯೂಮನ್ ರಿಸೋರ್ಸ್ ಆಪರೇಷನ್ಸ್, ಲಾಜಿಸ್ಟಿಕ್ಸ್ ಹಾಗೂ ಬಿಎಸ್ಸಿ ಕೋರ್ಸ್‌ಗಳಿಗೆ ಅನುಮೋದನೆ ನೀಡಲಾಗಿದೆ. ಮುಡಿಪು ಮತ್ತು ಹರೇಕಳ ಕಾಲೇಜುಗಳಲ್ಲಿ ಬಿ.ಕಾಂ ಮತ್ತು ಬಿಬಿಎ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಎಲ್. ಧರ್ಮ ಹೇಳಿದ್ದಾರೆ.

PREV
Read more Articles on
click me!

Recommended Stories

Online FIR: ಪೊಲೀಸ್ ಸೇವೆ ಮತ್ತಷ್ಟು ಡಿಜಿಟಲ್! ನೀವಿರುವಲ್ಲಿಂದಲೇ FIR ಮಾಡಿ, ಗೃಹಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಸೂಚನೆ
ಹುಣಸೂರು ಶಾಸಕ ಜಿ.ಡಿ. ಹರೀಶ್‌ ಗೌಡರ ಪತ್ನಿಗೆ ಅಶ್ಲೀಲ ಕಮೆಂಟ್‌; ಮೈಸೂರಿನಲ್ಲಿ ದೂರು ದಾಖಲು