* ನಾಗರಾಜ ಕಲಗುಟಕರ್‌ದಿಂದ ದಿಟ್ಟಹೆಜ್ಜೆ
* ಈಗಾಗಲೇ 1130 ಕಿಮೀ ಕ್ರಮಿಸಿದ್ದು 2300 ಕಿಮೀ ಬಾಕಿ
* ರಾಜ್ಯಾದ್ಯಂತ ಪಾದಯಾತ್ರೆ
- ಆನಂದ ಜಡಿಮಠ
ಬೀಳಗಿ(ಸೆ.27): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು(Anti Farmer Act) ಕೈ ಬಿಡಬೇಕು ಎಂದು ಕಳೆದ ಫೆಬ್ರುವರಿ ತಿಂಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಿಂದ ಏಕಾಂಗಿ ಪಾದಯಾತ್ರೆ ಆರಂಭಿಸಿದ ಬಾಗಲಕೋಟೆ ನಗರದ ಯುವಕ ಸದ್ಯ 3430 ಕಿಮೀ ಕ್ರಮಿಸಿ ಕೇಂದ್ರ ಸರ್ಕಾರದ ವಿರುದ್ಧ ಪಾದಯಾತ್ರೆಯಂತಹ ದಿಟ್ಟ ಹೋರಾಟ ಮಾಡುತ್ತಿದ್ದಾರೆ.
ಎಂಜಿನಿಯರಿಂಗ್ ಎಂಟೆಕ್ ಪದವೀಧರ ಹಾಗೂ ಅವಿವಾಹಿತ ನಾಗರಾಜ ಕಲಗುಟಕರ್ ಈಗಾಗಲೇ ರಾಜ್ಯದ 30 ಜಿಲ್ಲೆಗಳ ಸಂಚಾರ ಮಾಡಿ ಭಾನುವಾರ ಬೀಳಗಿ ನಗರ ಪ್ರವೇಶಸಿ ಕೆಲ ಕಾಲ ವಿಶ್ರಾಂತಿ ಪಡೆದು ರೈತರಿಗೆ ಸಂದೇಶ ರವಾನಿಸುವ ಕೆಲಸ ಮಾಡಿದರು.
ಕೇಂದ್ರ ಸರ್ಕಾರ ರೈತರನ್ನು(Farmers) ಇಕ್ಕಟ್ಟಿಗೆ ಸಿಲುಕಿಸುವ ಕೆಲಸಕ್ಕೆ ಕೈ ಹಾಕಿದ್ದು ತಪ್ಪು ಬಡ ರೈತರಿಗೆ ಸರ್ಕಾರ ರೈತ ಕಾನೂನು ಮಾರಕವಾಗಿದೆ. ಕೂಡಲೇ ಇದನ್ನು ವಾಪಸ ಪಡೆಯಬೇಕು ಎಂದು ಹೇಳಿಕೆ ನೀಡುತ್ತ ಜನರಿಗೆ ಮನವರಿಕೆ ಮಾಡುತ್ತಿರುವುದು ಕಂಡು ಬಂತು. ಅಲ್ಲದೇ ದೇಶದ ರೈತರು ಕಾನೂನು ಕುರಿತಾಗಿ ಅರಿತು ಎಲ್ಲರು ಅದರ ಸಾಧಕ-ಭಾದಕಗಳನ್ನು ಅರಿತ್ತಿದ್ದಾರೆ. ಇಂತಹ ಸುದೀರ್ಘ ಹೋರಾಟ ನಡೆದರು ಕೇಂದ್ರ ಸರ್ಕಾರ ಇನ್ನು ಕ್ರಮ ತೆಗೆದುಕೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ರೈತರು ದೇಶಾದ್ಯಂತ ಹೋರಾಟ ಮಾಡುವ ದಿಶೆಯಲ್ಲಿ ಸಾಗಿದ್ದಾರೆ ಎಂದರು.
ಭಾರತ್ ಬಂದ್ ಎಫೆಕ್ಟ್: ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪರದಾಟ
ರಾಜ್ಯಾದ್ಯಂತ ಪಾದಯಾತ್ರೆ:
ನಿತ್ಯ 20 ರಿಂದ 30 ಕಿಮೀ ಪಾದಯಾತ್ರೆ ಮಾಡುವ ಗುರಿಯೊಂದಿಗೆ ಸಾಗುತ್ತಿದ್ದೇನೆ. ಈಗಾಗಲೇ ರಾಜ್ಯ 3 ಜಿಲ್ಲೆ ಕೇಂದ್ರಗಳಲ್ಲಿ ಹಾಯ್ದು ಬೀಳಗಿ ರಾಷ್ಟ್ರೀಯ ಹೆದ್ದಾರಿ ಮುಖಾಂತರ ವಿಜಯಪುರ ಮಾರ್ಗವಾಗಿ ಸೋಲಾಪುರ, ಔರಾಂಗಾಬಾದ್, ಮಾರ್ಗವಾಗಿ ಮಧ್ಯಪ್ರದೇಶದ ಇಂದೋರ ಗ್ವಾಲಿಯರ್ ಉತ್ತರ ಪ್ರದೇಶದ ಆಗ್ರಾ ಮೂಲಕ ಹೊಸದಿಲ್ಲಿಯ ಸಿಂಘ ಬಾರ್ಡರನಲ್ಲಿ ರಾಕೇಶ ಟಿಕಾಯತ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಅದರಲ್ಲಿ ಭಾಗವಹಿಸುವ ಗುರಿ ಇಟ್ಟುಕೊಂಡಿದ್ದೇನೆ. ಇನ್ನು 2300 ಕೀಮಿ ಪಾದಯಾತ್ರೆ ಮಾಡಬೇಕಿದ್ದು ನವೆಂಬರ್ 26 ರಂದು ಸಿಂಗ್ ಬಾರ್ಡರ್ ತಲುಪುತ್ತೇನೆ ಎನ್ನುತ್ತಾರೆ ನಾಗರಾಜ.
ಈಗಾಗಲೇ ಮಾಡಿರುವ ಪಾದಯಾತ್ರೆಯಲ್ಲಿ ಜನರು ರೈತ ಹೋರಾಟವೆಂದು ಗುರುತಿಸಿ ಉತ್ತಮ ಸ್ಪಂದನೆ ನೀಡುವುದಲ್ಲದೆ ನೀರು, ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ನಿತ್ಯ ಕ್ರಮಿಸುವ ದೂರದಂತೆ ವಿಶ್ರಾಂತಿಗಾಗಿ ರಸ್ತೆಯಲ್ಲಿ ಸಿಗುವ ದೇವಸ್ಥಾನ, ಇಲ್ಲವೆ ಯಾರಾದರು ರೈತರು ಕರೆದರೆ ಅವರ ಮನೆಯಲ್ಲಿ ವಾಸ್ತವ್ಯ ಮಾಡುತ್ತ ಸಾಗುತ್ತಿದ್ದೇನೆ. ಎಂತಹ ಸಮಸ್ಯೆಗಳು ಎದುರಾದರು ನನ್ನ ರೈತ ವಿರೋಧಿ ಕಾನೂನು ವಿರುದ್ಧದ ಹೋರಾಟ ನಿಲ್ಲುವುದಿಲ್ಲ ಎನ್ನುತ್ತಾರೆ ನಾಗರಾಜ ಕಲಗುಟಕರ್.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಹಾಗೂ ತಾಲೂಕಿನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸಹಕಾರಿ ರಂಗದಲ್ಲಿಯೇ ಪುನರಾರಂಭಕ್ಕಾಗಿ ಒತ್ತಾಯಿಸಿ ಸೆ.27 ರಂದು ರೈತ ಸಂಘಟನೆಗಳು ಹಮ್ಮಿಕೊಂಡಿರುವ ಭಾರತ ಬಂದ್ ಕರೆಗೆ ಕಾಂಗ್ರೆಸ್ ಪಕ್ಷವು ತಮ್ಮ ಬೆಂಬಲ ಸೂಚಿಸಿದೆ ಕಾರಣ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿ ಬಂದ್‌ಗೆ ಬೆಂಬಲಿಸಬೇಕೆಂದು ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ವಿನಂತಿಸಿದ್ದಾರೆ.
ಬಂದ್‌ಗೆ ಕಾಂಗ್ರೆಸ್ ಬೆಂಬಲ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಹಾಗೂ ತಾಲೂಕಿನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸಹಕಾರಿ ರಂಗದಲ್ಲಿಯೇ ಪುನರಾರಂಭಕ್ಕಾಗಿ ಒತ್ತಾಯಿಸಿ ಸೆ.27 ರಂದು ರೈತ ಸಂಘಟನೆಗಳು ಹಮ್ಮಿಕೊಂಡಿರುವ ಭಾರತ ಬಂದ್ ಕರೆಗೆ ಕಾಂಗ್ರೆಸ್(Congress) ಪಕ್ಷವು ತಮ್ಮ ಬೆಂಬಲ ಸೂಚಿಸಿದೆ. ಕಾರಣ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿ ಬಂದ್‌ಗೆ ಬೆಂಬಲಿಸಬೇಕೆಂದು ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ವಿನಂತಿಸಿದ್ದಾರೆ.